ETV Bharat / state

ದೀನದಲಿತರಿಗೆ ಮೀಸಲಿಟ್ಟ ಹುದ್ದೆ ಭರ್ತಿ ಮಾಡದಿರುವುದು ಸರ್ಕಾರಿ ಸೇವೆಯಲ್ಲಿ ಆ ಸಮುದಾಯದ ಪ್ರಾತಿನಿಧ್ಯ ಕಸಿದುಕೊಂಡಂತೆ: ಹೈಕೋರ್ಟ್

author img

By ETV Bharat Karnataka Team

Published : Sep 28, 2023, 6:58 AM IST

ಮುಂದಿನ ಆರು ತಿಂಗಳಲ್ಲಿ ಎಲ್ಲ ಇಲಾಖೆಗಳ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್​ ಆದೇಶ ಮಾಡಿದೆ.

ಹೈಕೋರ್ಟ್​
ಹೈಕೋರ್ಟ್​

ಬೆಂಗಳೂರು: ದೀನದಲಿತರಿಗೆ ಮೀಸಲಿಟ್ಟ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸರ್ಕಾರಿ ಸೇವೆಯಲ್ಲಿ ಆ ಸಮುದಾಯದ ಪ್ರಾತಿನಿಧ್ಯ ಕಸಿದುಕೊಂಡಂತೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮುಂದಿನ ಆರು ತಿಂಗಳಲ್ಲಿ ಎಲ್ಲ ಇಲಾಖೆಗಳ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಪೂರ್ಣಗೊಳಿಸಬೇಕು ಎಂದು ಮಹತ್ವದ ಆದೇಶ ನೀಡಿದೆ. ಬೆಂಗಳೂರಿನ ಪಟ್ಟಂದೂರು ಅಗ್ರಹಾರದ ನಿವಾಸಿ ಎಂ. ಮಂಜುನಾಥ್ ಪ್ರಸಾದ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ, ಎಲ್ಲ ಇಲಾಖೆಗಳಲ್ಲಿ ಖಾಲಿಯಿರುವ ಬ್ಯಾಕ್‌ಲಾಕ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದು ಸೇರಿ ಎಲ್ಲ ಪ್ರಕ್ರಿಯೆಗಳನ್ನು ಸಮರೋಪಾದಿಯಲ್ಲಿ ನಡೆಸಿ ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದೆ.

ದಲಿತ ಸಮುದಾಯಗಳಿಗೆ ಮೀಸಲಾಗಿರುವ ಹುದ್ದೆಗಳನ್ನು ಭರ್ತಿ ಮಾಡದೆ ಉಳಿಸಿಕೊಳ್ಳುವುದು ಸಂವಿಧಾನ ಈ ಸಮುದಾಯಗಳಿಗೆ ನೀಡಿದ ಸೌಲಭ್ಯಗಳನ್ನು ನಿರಾಕರಿಸಿದಂತೆ. ಜೊತೆಗೆ, ಸರ್ಕಾರಿ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯ ಕಸಿದು ಕೊಂಡಂತೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ರಾಜ್ಯ ಸರ್ಕಾರ ರಚನೆ ಮಾಡಿದ್ದ ಸಂಪುಟ ಉಪ ಸಮಿತಿಯು ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಈ ಹಿಂದೆ ಹೈಕೋರ್ಟ್ ನೀಡಿದ್ದ ಆದೇಶದಂತೆ ಎಲ್ಲ ಇಲಾಖೆಗಳಿಗೆ ಪತ್ರ ಬರೆದು ಹುದ್ದೆಗಳ ಭರ್ತಿಗೆ ನಿರ್ದೇಶನ ನೀಡಿದ್ದು, ಎಲ್ಲ ಹುದ್ದೆಗಳ ಭರ್ತಿ ಮಾಡಬೇಕು ಎಂದು ಸೂಚನೆ ನೀಡಿದೆ.

ಅಷ್ಟೇ ಅಲ್ಲದೆ, ಖಾಲಿ ಹುದ್ದೆಗಳನ್ನು ಮುಂದುವರೆಸುವ ಸಂಬಂಧ ಅಂಕಿ ಅಂಶಗಳನ್ನು ನೋಡಿದ ಬಳಿಕವೂ ಅರ್ಜಿ ವಜಾಗೊಳಿಸುವಂತೆ ಸರ್ಕಾರದ ಪರ ವಕೀಲರ ವಾದ ಮಂಡಿಸಿರುವುದು ಅತ್ಯಂತ ವಿಚಿತ್ರವಾಗಿದೆ. ನೊಂದ ಸಾರ್ವಜನಿಕ ವ್ಯಕ್ತಿಯೊಬ್ಬರು ನ್ಯಾಯಲಯದಲ್ಲಿ ಕಾನೂನು ಹೋರಾಟ ನಡೆಸಿ ಗೆಲವು ಸಾಧಿಸಿದಲ್ಲಿ ಸರ್ಕಾರ ಸಂತೋಷ ಪಡಬೇಕು ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಬೆಂಗಳೂರಿನ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ, ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸೂಕ್ತ ಮನವಿ ಸಲ್ಲಿಸುವಂತೆ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿತ್ತು. ಆದರೆ, ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬ್ಯಾಕ್ ಲಾಗ್ ಹುದ್ದೆಗಳ ಮೀಸಲಾತಿ ನೇಮಕಾತಿಗಳಾಗಿವೆ. ಈ ಹುದ್ದೆಗಳನ್ನ ಭರ್ತಿ ಮಾಡದೆ ಖಾಲಿ ಉಳಿಸಿದಲ್ಲಿ ದೀನದಲಿತರ ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯ ಸರ್ಕಾರದ ಉದ್ದೇಶವೇ ವಿಫಲವಾದಂತಾಗಲಿದೆ. ಅಲ್ಲದೆ, ಸಂವಿಧಾನದ ಪರಿಚ್ಛೇದ 14 ಮತ್ತು 16 ಗಳ ಉಲ್ಲಂಘನೆಯಾಗಲಿದೆ ಎಂದು ವಾದ ಮಂಡಿಸಿದ್ದರು. ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಏಕ ಸದಸ್ಯ ಪೀಠ ನೀಡಿರುವ ಆದೇಶ ಸಮಂಜಸವಾಗಿದ್ದು, ಮೇಲ್ಮನವಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ: ಕೆವಿಜೆ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರ ಕೊಲೆ ಪ್ರಕರಣ: 6 ಮಂದಿ ದೋಷಿಗಳೆಂದು ಘೋಷಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.