ಸಿಇಟಿ ಸೀಟು ಹಂಚಿಕೆ: ರಿಪಿಟರ್ಸ್​ಗಳ ಪಿಯುಸಿ ಅಂಕ ಪರಿಗಣಿಸಲು ಹೈಕೋರ್ಟ್ ತೀರ್ಪು, ರ‍್ಯಾಂಕ್​ ಲಿಸ್ಟ್​ನಲ್ಲಿ ಏರುಪೇರು..?

author img

By

Published : Sep 3, 2022, 9:17 PM IST

ಸಿಇಟಿ ಸೀಟು ಹಂಚಿಕೆ
ಸಿಇಟಿ ಸೀಟು ಹಂಚಿಕೆ ()

ರಿಪಿಟರ್ಸ್​ಗಳಿಗೆ ಸಿಹಿ ಸುದ್ದಿ:ಸಿಇಟಿ ಪರೀಕ್ಷೆಗೆ ಪುನರಾವರ್ತಿತರಾಗಿರುವ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್​ಗಳ ಸೀಟು ಹಂಚಿಕೆ ಮಾಡುವಾಗ ದ್ವಿತೀಯ ಪಿಯುಸಿಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಸಹ ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಬೆಂಗಳೂರು: 2020-21ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿದ್ದು, ಸಿಇಟಿ ಪರೀಕ್ಷೆಗೆ ಪುನರಾವರ್ತಿತರಾಗಿರುವ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್​ಗಳ ಸೀಟು ಹಂಚಿಕೆ ಮಾಡುವಾಗ ದ್ವಿತೀಯ ಪಿಯುಸಿಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಸಹ ಪರಿಗಣಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್​ ಆದೇಶ ನೀಡಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ (2020-21ನೇ) ದ್ವಿತೀಯ ಪಿಯುಸಿಯಲ್ಲಿ ತಾವು ಗಳಿಸಿದ ಅಂಕಗಳನ್ನು ವತ್ತಿಪರ ಕೋರ್ಸ್​ಗಳ ಸಿಟಿ ಹಂಚಿಕೆಯ ರ‍್ಯಾಂಕಿಂಗ್​ಗೆ ಪರಿಗಣಿಸಬೇಕು ಎಂದು ಕೋರಿ ಹಲವು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್ ಈ ತೀರ್ಪು ನೀಡಿದೆ.

ರಿಪಿಟರ್ಸ್​ಗಳಿಗೆ ಸಿಹಿ ಸುದ್ದಿ: ರಿಪಿಟರ್ಸ್​ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಪಡೆದ ಶೇ.50 ರಷ್ಟು ಅಂಕ ಮತ್ತು ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಶೇ.50 ರಷ್ಟು ಅಂಕಗಳನ್ನು ಪರಿಗಣಿಸಿ ಸಿಇಟಿ ರ‍್ಯಾಂಕಿಂಗ್​ ಪಟ್ಟಿಯನ್ನು ಪ್ರಕಟಿಸುವಂತೆ ಕೆಇಎಗೆ ಹೈಕೋರ್ಟ್​ ಈ ತೀರ್ಪಿನಲ್ಲಿ ತಿಳಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ ಈಗಾಗಲೇ ಸಿಇಟಿ ಪ್ರಕಟಿಸಿದ ರ‍್ಯಾಂಕಿಂಗ್​​​ ಪಟ್ಟಿಯಲ್ಲಿ ಏರುಪೇರಾಗುವ ಎಲ್ಲ ಸಾಧ್ಯತೆಗಳಿವೆ.

ಪಿಯುಸಿ ರಿಪಿಟರ್ಸ್​ ವಿದ್ಯಾರ್ಥಿಗಳ ಅರ್ಜಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಹೈಕೋರ್ಟ್, ಪಿಯು ವಿದ್ಯಾರ್ಥಿಗಳ ಶೇ.25 ರಷ್ಟು ಅಂಕ ಮತ್ತು ಸಿಇಟಿಯ ಶೇ.75 ರಷ್ಟು ಅಂಕಗಳ ಸೂತ್ರವನ್ನು ಪರಿಗಣಿಸಲು ಸಾಧ್ಯವೇ ಎಂದು ಕೆಇಎಯ ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೆಇಎ, ಹೈಕೋರ್ಟ್​ ಸಲಹೆ ಕಷ್ಟಕರ. ಪುನರಾವರ್ತಿತ ಅಭ್ಯರ್ಥಿಗಳ ಅಂಕಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಪಿಯುಸಿ ರಿಪಿಟರ್ ವಿದ್ಯಾರ್ಥಿಗಳ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿಟ್ಟಿದ್ದ ತೀರ್ಪನ್ನು ಹೈಕೋರ್ಟ್ ಶನಿವಾರ ಪ್ರಕಟಿಸಿದೆ.

ಕೆಇಎ 2022 ಜುಲೈ 30ರಂದು ಹೊರಡಿಸಿದ್ದ ಟಿಪ್ಪಣಿಯನ್ನು ಪ್ರಶ್ನಿಸಿ ಚಿಕ್ಕಮಗಳೂರಿನ ಆರ್ ಈಶ್ವರ್ ಸೇರಿದಂತೆ ಮತ್ತಿತರರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ನೇತೃತ್ವದ ಏಕಸದಸ್ಯ ಈ ಆದೇಶ ನೀಡಿದೆ.

ವತ್ತಿಪರ ಕೋರ್ಸ್​ಗಳಿಗೆ ನೇಮಕ ಮಾಡುವುದಕ್ಕಾಗಿ 2020-21ನೇ ಸಾಲಿನಲ್ಲಿ ಕೆಇಎ ಸಿಇಟಿ ಪರೀಕ್ಷೆಯನ್ನು ನಡೆಸಲಾಗಿತ್ತು. ಆದರೆ, ಅದೇ ಸಾಲಿನಲ್ಲಿ ಈ ರೀತಿಯ ಟಿಪ್ಪಣಿಯನ್ನು ಹೊರಡಿಸಿಲ್ಲ. ಆದರೆ, 2022-23ನೇ ಸಾಲಿಗೆ ಮಾತ್ರ ಈ ರೀತಿಯ ಟಿಪ್ಪಣಿ ಹೊರಡಿಸಲಾಗಿದೆ. ಈ ಅಂಶವನ್ನು ಗಮನಿಸಿದಲ್ಲಿ ಈ ರೀತಿ ಟಿಪ್ಪಣಿ ಹೊರಡಿಸಲು ಸಿಇಟಿಗೆ ಅಧಿಕಾರವಿಲ್ಲ ಎಂಬುದಾಗಿ ಹೈಕೋರ್ಟ್​ ತನ್ನ ಆದೇಶದಲ್ಲಿ ತಿಳಿಸಿದೆ.

ಈ ರೀತಿಯ ಟಿಪ್ಪಣಿಯನ್ನು ಈ ಹಿಂದೆ ಹೊರಡಿಸಿಲ್ಲ. ಮುಂದಿನ ದಿನಗಳಲ್ಲಿಯೂ ಹೊರಡಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಆದರೆ, 2022-23ನೇ ಸಾಲಿನ ವತ್ತಿಪರ ಕೋರ್ಸ್​ ನೇಮಕಕ್ಕೆ ಮಾತ್ರ ಹೊರಡಿಸಲಾಗಿದೆ. ಇದು ವತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳಿಗೆ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ ನಿಯಮ 2006ಕ್ಕೆ ವಿರುದ್ಧವಾಗಿದೆ.

ಇದೊಂದು ಅಸಂಬಂಧವಾದ್ದಾಗಿದೆ. ಅಲ್ಲದೆ, ವತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳಿಗೆ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ ನಿಯಮ 2006 ನಿಯಮ 4ಕ್ಕೆ ಯಾವುದೇ ತಿದ್ದುಪಡಿ ತರದೆ ಈ ರೀತಿಯ ನಿಯಮವನ್ನು ಅನುಸರಿಸಲಾಗಿದೆ. ಸಿಇಟಿಯ ಈ ನಿಯಮ ಕಾನೂನು ಬಾಹಿರವಾಗಿದೆ. ಆದ್ದರಿಂದ ಕೆಇಎ ಹೊರಡಿಸಿರುವ ಟಿಪ್ಪಣಿಯನ್ನು ರದ್ದು ಮಾಡುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಸಿಇಟಿ ಹೊರಡಿಸಿರುವ ಟಿಪ್ಪಣಿ ಕೇವಲ 2020-21ನೇ ಸಾಲಿನ ವಿದ್ಯಾರ್ಥಿಗಳಿಗೆ ಮಾತ್ರ ಅನನ್ಯವಾಗಲಿದೆ. ಆದರೆ, 2018-19, 2019-18, 2019-20 ಸೇರಿದಂತೆ ಇತರೆ ಯಾವುದೇ ಸಾಲಿಗೂ ಅನ್ವಯವಾಗುವುದಿಲ್ಲ ಎಂಬುದಾಗಿ ಹೇಳಲಾಗಿದೆ. ಇದು ನೈಸರ್ಗಿಕ ನ್ಯಾಯದ ಉಲ್ಲಂಘನೆಯಾಗಿದೆ ಮತ್ತು ತಾರತಮ್ಯದಿಂದ ಕೂಡಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಅಭಿಪ್ರಾಯ ಪಟ್ಟಿದೆ.

(ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ ಬೆನ್ನಲ್ಲೇ ಪುನರಾವರ್ತಿತ ವಿದ್ಯಾರ್ಥಿಗಳಿಂದ ಪ್ರತಿಭಟನೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.