ETV Bharat / state

ಸ್ವಾಮಿಮಲೈ ಬೆಟ್ಟದಲ್ಲಿ ಗಣಿಗಾರಿಕೆ ತಡೆಗೆ ಕೋರಿ ಅರ್ಜಿ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

author img

By

Published : Jan 5, 2023, 10:33 PM IST

ಸಂಡೂರು ತಾಲೂಕಿನ ಸ್ವಾಮಿಮಲೈ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ತಡೆಗೆ ಆದೇಶ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

high-court-notice-to-central-and-state-govt-on-mining-in-wamimalai-hill
ಸ್ವಾಮಿಮಲೈ ಬೆಟ್ಟದಲ್ಲಿ ಗಣಿಗಾರಿಕೆ ತಡೆಗೆ ಕೋರಿ ಅರ್ಜಿ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಪುರಾತನ ಮತ್ತು ಸಂರಕ್ಷಿತ ಸ್ಮಾರಕವಾಗಿರುವ ಕುಮಾರಸ್ವಾಮಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶದ ಸ್ವಾಮಿಮಲೈ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ತಡೆಗೆ ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಂಡೂರಿನ ಶ್ರೀಶೈಲ ಆಳದಹಳ್ಳಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ಹೈಕೋರ್ಟ್​ನಲ್ಲಿ ನಡೆಯಿತು.

ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ಅವರ ನೇತೃತ್ವದ ವಿಭಾಗೀಯ ಪೀಠವು ಕೇಂದ್ರ ಸಂಸ್ಕೃತಿ ಸಚಿವಾಲಯ, ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು, ಭಾರತೀಯ ಸರ್ವೇಕ್ಷಣಾ ಇಲಾಖೆ ಹಾಗೂ ಐದು ಗಣಿ ಕಂಪನಿಗಳಿಗೆ ಸೇರಿದಂತೆ ಒಟ್ಟು 17 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.

ಏಳು ಮತ್ತು ಎಂಟನೇ ಶತಮಾನದ ಬಾದಾಮಿ ಚಾಲುಕ್ಯರ ಅವಧಿಯಲ್ಲಿ ಈ ಕುಮಾರಸ್ವಾಮಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಸುತ್ತಲೂ ಜೀವ ವೈವಿಧ್ಯ ಮತ್ತು ಔಷಧೀಯ ಗುಣವುಳ್ಳ ಸಸಿಗಳನ್ನು ಹೊಂದಿರುವ ಸ್ವಾಮಿಮಲೈ ಕಾಡು ಇದೆ. ಸ್ವಾಮಿಮಲೈ ಬೆಟ್ಟದ 2.5 ಎಕರೆ ಜಾಗದಲ್ಲಿ ಈ ಕುಮಾರಸ್ವಾಮಿ ದೇವಸ್ಥಾನವನ್ನು ರಾಷ್ಟ್ರೀಯ ಸಂರಕ್ಷಿತ ಮತ್ತು ಪುರಾತನ ಸ್ಮಾರಕವಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ದಕ್ಷಿಣ ಪ್ರಸ್ಥಭೂಮಿಯ ಪಶ್ಚಿಮ ಘಟ್ಟವೆಂದೇ ಸ್ವಾಮಿಮಲೈ ಬೆಟ್ಟವು ಖ್ಯಾತಿ ಪಡೆದಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ರೆಡ್ಡಿ ಅಕ್ರಮ ಆಸ್ತಿ ಮುಟ್ಟುಗೋಲು : ಅನುಮೋದನೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಸಿಬಿಐ ಹೈಕೋರ್ಟ್ ಮೊರೆ

ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಸ್ವಾಮಿಮಲೈ ಕಾಡಿನಲ್ಲಿ ಗಣಿಗಾರಿಕೆ ಅವ್ಯಾವಹತವಾಗಿ ನಡೆಯುತ್ತಿದೆ. ಸದ್ಯ ದೇವಸ್ಥಾನದ ಬಾಗಿಲು ಸಮೀಪದವರೆಗೂ ಗಣಿಗಾರಿಕೆ ಬಂದಿದೆ. ನಿರಂತರ ಗಣಿ ಚಟುವಟಿಕೆಯಿಂದಾಗಿ ದೇವಸ್ಥಾನದ ರಚನೆಗಳಿಗೆ ಗಂಭೀರ ಸ್ವರೂಪದ ಹಾನಿ ಉಂಟು ಮಾಡುತ್ತಿದೆ. ದೇವಸ್ಥಾನದ ಹಲವು ಭಾಗಗಳು ದುಸ್ಥಿತಿಗೆ ತಲುಪಿದೆ. ಗಣಿ ಸ್ಫೋಟದಿಂದ ದೇವಸ್ಥಾನದ ಕಲ್ಲಿನ ಕಂಬಗಳಲ್ಲಿ ಬಿರುಕು ಮೂಡಿದ್ದು, ಗೋಪುರ ವಾಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ, ಸ್ಥಳೀಯ ಗ್ರಾಮಗಳ ಕುಡಿಯುವ ನೀರಿನ ಮೂಲ ಕಲುಷಿತವಾಗಿವೆ. ಕಬ್ಬಿಣದ ಅದಿರು ಕಣಗಳಿಂದ ವಾಯು ಮಾಲಿನ್ಯ ಪ್ರಮಾಣ ಹೆಚ್ಚುತಿದೆ. ಗಣಿ ದೂಳಿನಿಂದ ದೇವಸ್ಥಾನ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಸ್ವಾಮಿಮಲೈ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಬೇಕು. ದೇವಸ್ಥಾನವನ್ನು ಸಂರಕ್ಷಣೆ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ: 6 ಕಡೆ ಎನ್​ಐಎ ದಾಳಿ, ಇಬ್ಬರು ಐಸಿಸ್ ಸಕ್ರಿಯ ಸದಸ್ಯರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.