ETV Bharat / state

ರಾಜ್ಯದಲ್ಲಿ ಗೋಶಾಲೆ ಆರಂಭಿಸದ ಸರ್ಕಾರ : ಹೈಕೋರ್ಟ್ ತೀವ್ರ ಅಸಮಾಧಾನ

author img

By

Published : Apr 9, 2022, 9:22 PM IST

ಗೋಶಾಲೆ ಸ್ಥಾಪನೆಗೆ ಪ್ರತಿ ಜಿಲ್ಲೆಯಲ್ಲೂ ಸ್ಥಳ ಗುರುತಿಸಲಾಗಿದೆ. ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ಮಾಹಿತಿ ನೀಡುತ್ತೀರಿ. ಆದರೆ, ಯಾವ್ಯಾವ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಲಾಗಿದೆ ಎಂಬ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ ಎಂದು ಹೈಕೋರ್ಟ್​ ಅಸಮಾಧಾನ ವ್ಯಕ್ತಪಿಡಿಸಿತು..

high-court-not-happy-with-karnataka-government-report-on-goshalas
ರಾಜ್ಯದಲ್ಲಿ ಗೋಶಾಲೆ ಆರಂಭಿಸದ ಸರ್ಕಾರ: ಹೈಕೋರ್ಟ್ ತೀವ್ರ ಅಸಮಾಧಾನ

ಬೆಂಗಳೂರು : ರಾಜ್ಯದಲ್ಲಿ ಗೋಶಾಲೆ ಸ್ಥಾಪನೆ ಕುರಿತು ಸಮರ್ಪಕ ಮಾಹಿತಿ ನೀಡದ ರಾಜ್ಯ ಸರ್ಕಾರದ ಕಾರ್ಯ ವೈಖರಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಮತ್ತು ಈಗಿರುವ ಗೋಶಾಲೆಗಳಿಗೆ ಸೂಕ್ತ ಪ್ರಮಾಣದಲ್ಲಿ ಮೇವು, ನೀರು ಮತ್ತು ಜಾಗ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೊರ್ಟ್ ಕಾನೂನು ಸೇವೆಗಳ ಸಮಿತಿ ಮತ್ತು ತುಮಕೂರಿನ ಎ.ಮಲ್ಲಿಕಾರ್ಜುನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಅನುಪಾಲನಾ ವರದಿ ಸಲ್ಲಿಸಿದರು. ಬಳಿಕ, ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ಆರಂಭಿಸಲು ಸರ್ಕಾರ ಈಗಾಗಲೇ ಜಮೀನು ಗುರುತಿಸಿದೆ. ಗುರುತಿಸಲಾದ ಜಮೀನುಗಳಲ್ಲಿ ಗೋಶಾಲೆ ನಿರ್ಮಾಣಕ್ಕಾಗಿ ಹಣವನ್ನೂ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು. ಆದರೆ, ಯಾವ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲಿಲ್ಲ.

ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಪೀಠ, ಗೋಶಾಲೆ ಸ್ಥಾಪನೆಗೆ ಪ್ರತಿ ಜಿಲ್ಲೆಯಲ್ಲೂ ಸ್ಥಳ ಗುರುತಿಸಲಾಗಿದೆ. ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ಮಾಹಿತಿ ನೀಡುತ್ತೀರಿ. ಆದರೆ, ಯಾವ್ಯಾವ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆ ಕುರಿತ ದಾಖಲೆಗಳನ್ನು ಕೋರ್ಟ್‌ಗೆ ಒದಗಿಸಿಲ್ಲ. ಕಡೇ ಪಕ್ಷ ಗೋಶಾಲೆ ಆರಂಭಿಸಲು ಮಾಡಿರುವ ಪ್ರಯತ್ನದ ಕುರಿತು ವಿವರಣೆ ಇಲ್ಲ. ಮಾಹಿತಿ ಕೇಳಿದರೆ ಕೇವಲ ಕಾಗದ ತೋರಿಸುತ್ತೀರಿ ಎಂದು ಸರ್ಕಾರದ ವಿರುದ್ಧ ಕಟು ಟೀಕೆ ವ್ಯಕ್ತಪಡಿಸಿತು.

ಬಳಿಕ, ಸದ್ಯ ಸರ್ಕಾರ ಒದಗಿಸಿರುವ ವಿವರಗಳು ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಮುಂದಿನ ವಿಚಾರಣೆ ವೇಳೆ ಈಗಾಗಲೇ ಗುರುತಿಸಿರುವ ಜಮೀನಿನಲ್ಲಿ ಎಷ್ಟು ಗೋಶಾಲೆಗಳನ್ನು ಆರಂಭಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿ, ವಸ್ತು ಸ್ಥಿತಿ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜೂನ್ ಮೊದಲ ವಾರಕ್ಕೆ ಮುಂದೂಡಿತು.

ಇದನ್ನೂ ಓದಿ: ಸೂರಜ್ ರೇವಣ್ಣ ಆಯ್ಕೆ ಅಸಿಂಧು ಕೋರಿ ಅರ್ಜಿ : ಸಮನ್ಸ್ ಜಾರಿಗೆ ಹೈಕೋರ್ಟ್ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.