ಸಂತ್ರಸ್ತರು, ಚಾಲಕರ ವಿರುದ್ಧ ಕ್ರಮಕೈಗೊಳ್ಳುವಾಗ ವ್ಯತಿರಿಕ್ತ ನಿರ್ಧಾರ ಕೈಗೊಳ್ಳದಂತೆ ಹೈಕೋರ್ಟ್​ ಸೂಚನೆ

author img

By

Published : Oct 4, 2022, 8:43 PM IST

high-court-instructs-ksrtc-not-to-take-adverse-decision

ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರು ಮತ್ತು ಚಾಲಕರ ವಿರುದ್ಧ ಕ್ರಮಕೈಗೊಳ್ಳುವಾಗ ವ್ಯತಿರಿಕ್ತ ನಿರ್ಧಾರಗಳನ್ನು ಕೈಗೊಳ್ಳದಂತೆ ಕೆಎಸ್​ಆರ್​ಟಿಸಿಗೆ ಹೈಕೋರ್ಟ್​ ಸೂಚನೆ ನೀಡಿದೆ.

ಬೆಂಗಳೂರು : ಅಪಘಾತ ಪ್ರಕರಣಗಳಲ್ಲಿ ತಪ್ಪಿತಸ್ಥ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಶಿಸ್ತು ಪ್ರಾಧಿಕಾರಗಳ ಮುಂದೆ ವ್ಯತಿರಿಕ್ತ ಹೇಳಿಕೆ ನೀಡದಂತೆ, ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಮಾರ್ಗಸೂಚಿಗಳನ್ನು ರಚಿಸುವಂತೆ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಹೈಕೋರ್ಟ್​ ಸೂಚನೆ ನೀಡಿದೆ.

ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರ ಸಾವಿಗೆ ಕಾರಣರಾಗಿದ್ದ ಆರೋಪದಲ್ಲಿ ಬಸ್​ ಚಾಲಕರನ್ನು ಮರು ನೇಮಕಗೊಳಿಸುವಂತೆ ತುಮಕೂರಿನ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೆಎಸ್​ಆರ್​ಟಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾ. ಸೂರಜ್​ ಗೋವಿಂದರಾಜ್​ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.

ರಸ್ತೆ ಅಪಘಾತಕ್ಕೆ ಚಾಲಕರೇ ಜವಾಬ್ದಾರಿಯಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಕೆಎಸ್​ಆರ್​ಟಿಸಿ ತನ್ನ ವಾದದಲ್ಲಿ ತಿಳಿಸಿದೆ. ಆದರೆ, ಮೋಟಾರ್​ ಅಪಘಾತ ಪರಿಹಾರ ನ್ಯಾಯ ಮಂಡಳಿಯಲ್ಲಿ ರಸ್ತೆ ಅಪಘಾತಕ್ಕೆ ಚಾಲಕ ಕಾರಣವಲ್ಲ. ದ್ವಿಚಕ್ರವಾಹನ ಸವಾರನ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ವಾದಿಸಲಾಗಿದೆ.

ಈ ಬೆಳವಣಿಗೆ ಸಂತ್ರಸ್ತರಿಗೆ ಪರಿಹಾರ ನೀಡುವುದರಿಂದ ಕೆಎಸ್​ಆರ್​ಟಿಸಿ ನುಣುಚಿಕೊಳ್ಳುವ ತಂತ್ರಗಾರಿಕೆಯಾಗಿದೆ. ಅಲ್ಲದೇ, ನ್ಯಾಯ ಮಂಡಳಿಯ ಅಮೂಲ್ಯ ಸಮಯದೊಂದಿಗೆ ಸಂತ್ರಸ್ತರಿಗೆ ತಕ್ಷಣ ಸಿಗಬೇಕಾದ ಪರಿಹಾರವನ್ನು ವಿಳಂಬ ಮಾಡುವ ತಂತ್ರಗಾರಿಕೆಯಾಗಿದೆ. ಸತ್ಯಕ್ಕೆ ಬದ್ಧವಾಗಿರುವ ಬದಲು ಅನುಕೂಲಕ್ಕೆ ತಕ್ಕಂತೆ ತನ್ನ ನಿಲುವುಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಈ ಅಂಶ ಗಂಭೀರ ಲೋಪವಾಗಿದ್ದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಎಸ್​ಆರ್​ಟಿಸಿ ವ್ಯವಸ್ಥಾಪಕರಿಗೆ ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ : 2015ರ ಜುಲೈ 26ರಂದು ನೆಲಮಂಗಲದಲ್ಲಿ ಕೆಎಸ್​ಆರ್​ಟಿಸಿ ಬಸ್​ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಇಬ್ಬರು ದ್ವಿಚಕ್ರವಾಹನ ಸವಾರರು ಮೃತಪಟ್ಟಿದ್ದರು. ಘಟನೆಗೆ ಕಾರಣವಾಗಿದ್ದ ಆರೋಪದಲ್ಲಿ ಚಾಲಕ ಗಂಗಣ್ಣ ಎಂಬುವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಇದನ್ನು ಪ್ರಶ್ನಿಸಿದ್ದ ಗಂಗಣ್ಣ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಗಂಗಣ್ಣನವರಿಗೆ ಉದ್ಯೋಗ ನೀಡುವಂತೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಕೆಎಸ್​ಆರ್​ಟಿಸಿ ಹೈಕೋರ್ಟ್​ ಮೆಟ್ಟಿಲೇರಿತ್ತು. ಪ್ರಕರಣ ವಿಚಾರಣೆ ನಡೆಸಿದ್ದ ನ್ಯಾಯಪೀಠ ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿದ್ದು, ಕೆಎಸ್​ಆರ್​ಟಿಸಿ ಅರ್ಜಿಯನ್ನು ವಜಾಗೊಳಿಸಿದೆ.

ಇದನ್ನೂ ಓದಿ : ಅರ್ಧ ವರ್ಷ ಕಳೆದರೂ ವಿಶೇಷ ಅಭಿವೃದ್ಧಿ ಯೋಜನೆಯತ್ತ ಬೊಮ್ಮಾಯಿ‌ ಸರ್ಕಾರಕ್ಕಿಲ್ಲ ಕಾಳಜಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.