ಬೆಂಗಳೂರಿನಲ್ಲಿ ಅಕ್ರಮ ಜಾಹೀರಾತು: ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

author img

By ETV Bharat Karnataka Desk

Published : Jan 19, 2024, 7:15 AM IST

Updated : Jan 19, 2024, 7:20 AM IST

High Court instructs BBMP  illegal advertisement in Bengaluru  ಬೆಂಗಳೂರಿನಲ್ಲಿ ಅಕ್ರಮ ಜಾಹೀರಾತು  ಬಿಬಿಎಂಪಿಗೆ ನಿರ್ದೇಶನ ನೀಡಿದ ಹೈಕೋರ್ಟ್

ಬೆಂಗಳೂರು ನಗರಗಳಲ್ಲಿ ಅಕ್ರಮ ಜಾಹೀರಾತು ಕುರಿತಂತೆ ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್​ ನಿರ್ದೇಶನ ನೀಡಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಅಕ್ರಮವಾಗಿ ಹಾಕಿರುವ ಜಾಹೀರಾತು ಫಲಕ ಅಥವಾ ಹೋರ್ಡಿಂಗ್​ಗಳ ತೆರವು ಮಾಡುವುದು ಮತ್ತು ಹೊಸದಾಗಿ ಜಾಹೀರಾತು ಅಳವಡಿಸಿರುವುದಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಹೈಕೋರ್ಟ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶನ ನೀಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆಯನ್ನು ಆಕ್ಷೇಪಿಸಿ ಬೆಂಗಳೂರಿನ ಮಾಯಿಗೇ ಗೌಡ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿತು.

ವಿಚಾರಣೆಯಲ್ಲಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ ಅಥವಾ ಆ ಸಂಬಂಧ ಪ್ರಸ್ತಾವ ಇದೆಯೇ ಎಂದು ಬಿಬಿಎಂಪಿ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು. ಅರ್ಜಿದಾರರು ಜಾಹೀರಾತು ಫಲಕ ಮತ್ತು ಹೋರ್ಡಿಂಗ್ ಅಳವಡಿಸಿರುವುದಕ್ಕೆ ಸಂಬಂಧಿಸಿದಂತೆ ಮೆಮೊ ಸಲ್ಲಿಸಿದ್ದಾರೆ. ಈ ಸಂಬಂಧ ಪೂರ್ವಾನುಮತಿ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದೂ ಸೇರಿ ಹಿಂದಿನ ನಮ್ಮ ಆದೇಶಗಳಿಗೆ ಪ್ರತಿಕ್ರಿಯೆ ಸಲ್ಲಿಸಬೇಕು. ಈ ಸಂಬಂಧ ಬಿಬಿಎಂಪಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಜಾಹೀರಾತು ಅಳವಡಿಸಿರುವ ಮಾಹಿತಿಯನ್ನು ವ್ಯಾಪ್ತಿ ಹೊಂದಿದ ಪೊಲೀಸರಿಗೆ ತಿಳಿಸಿರುವುದಕ್ಕೆ ಅವರು ಕೈಗೊಂಡಿರುವ ಕ್ರಮದ ಬಗ್ಗೆ ತಿಳಿಸಬೇಕು ಎಂದು ಪೀಠ ಹೇಳಿತು.

ಬಿಬಿಎಂಪಿಯ ಅನುಮತಿ ಪಡೆಯದೆ ಮತ್ತು ಶುಲ್ಕ ಪಾವತಿಸದೇ ಅಕ್ರಮ ಜಾಹೀರಾತು/ಹೋರ್ಡಿಂಗ್‌ಗಳನ್ನು ಅಳವಡಿಸಿದ್ದರೆ ತಪ್ಪಿತಸ್ಥ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಸೂಕ್ತ ಆದೇಶ ಹೊರಡಿಸಲಾಗುವುದು. ಇದರಲ್ಲಿ ದುಬಾರಿ ದಂಡ/ವ್ಯಾಪ್ತಿ ಹೊಂದಿದ ಪೊಲೀಸರಿಗೆ ಪ್ರಕರಣದ ದಾಖಲಿಸಲು ಸೂಚಿಸಲಾಗುವುದು ಎಂದು ನ್ಯಾಯಪೀಠ ತನ್ನ ಅದೇಶದಲ್ಲಿ ತಿಳಿಸಿದೆ.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ನ್ಯಾಯಾಲಯ ಹಲವು ಆದೇಶ ಮಾಡಿರುವ ಹೊರತಾಗಿಯೂ ಅಕ್ರಮ ಜಾಹೀರಾತು ಹಾವಳಿ ತಪ್ಪಿಲ್ಲ. ಅಕ್ರಮ ಜಾಹೀರಾತು ಮತ್ತು ಹೋರ್ಡಿಂಗ್​ಗಳನ್ನು ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದು, ಇದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಪೀಠದ ಗಮನಕ್ಕೆ ತಂದರು.

ಇದನ್ನೂ ಓದಿ: ಜಸ್ಟ್ ಡಯಲ್‌ಗೆ ಮಂಜೂರಾಗಿದ್ದ ಜಮೀನು ಹಿಂಪಡೆದ ಕೆಐಡಿಬಿ ಕ್ರಮ ಎತ್ತಿಹಿಡಿದ ಹೈಕೋರ್ಟ್

Last Updated :Jan 19, 2024, 7:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.