ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ರಾಸಾಯನಿಕಗಳ ಪೂರೈಕೆಗೆ ಗುತ್ತಿಗೆ ಪಡೆದವರಿಗೆ ಕಾರ್ಯಾದೇಶ ನೀಡಲು ಲಂಚ ಸ್ವೀಕರಿಸಿದ ಗಂಭೀರ ಆರೋಪದಲ್ಲಿ ಸಿಲುಕಿದ್ದ ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳ್ ವಿರುಪಾಕ್ಷಪ್ಪಗೆ ಇಂದು ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.
ನ್ಯಾಯಮೂರ್ತಿ ಕೆ.ನಟರಾಜನ್ ವಿರುಪಾಕ್ಷಪ್ಪ ಅವರು ಅರ್ಜಿ ವಿಚಾರಣೆ ನಡೆಸಿದರು. ಆದೇಶದ ಪ್ರತಿ ಸಿಕ್ಕ 48 ಗಂಟೆಗಳಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. 5 ಲಕ್ಷ ರೂ. ಗಳ ಬಾಂಡ್ ನೀಡಬೇಕು. ಸಾಕ್ಷ್ಯಾಧಾರಗಳ ನಾಶಕ್ಕೆ ಮುಂದಾಗಬಾರದು ಎಂದು ನ್ಯಾಯಪೀಠ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.
ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಏನಿದೆ?: ಕೆಎಸ್‌ಡಿಎಲ್‌ನ ಗುತ್ತಿಗೆಗೆ ಲಂಚ ಸ್ವೀಕರಿಸಿರುವವರಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಆದರೂ ನನ್ನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಲೋಕಾಯುಕ್ತ ಪೊಲೀಸರು ನನ್ನನ್ನು ಬಂಧಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಅರ್ಜಿಯಲ್ಲಿ ಮಾಡಾಳ್ ವಿರುಪಾಕ್ಷಪ್ಪ ಕೋರಿದ್ದರು.
ಇದನ್ನು ಓದಿ:‘ವಿಶೇಷ ತುರ್ತು ಪ್ರತಿಕ್ರಿಯೆ ಮೇಜಿನ ಸೇವೆ’ ಆರಂಭಿಸಿದ್ದೇವೆ: ಹೈಕೋರ್ಟ್ಗೆ ಸರ್ಕಾರದ ಪ್ರಮಾಣಪತ್ರ
ಷರತ್ತುಗಳೇನು: ನಿರೀಕ್ಷಣಾ ಜಾಮೀನು ನೀಡಿದ ಕೋರ್ಟ್ ಷರತ್ತುಗಳನ್ನು ವಿಧಿಸಿದೆ. ಅದರಂತೆ, ಅಧಿಕಾರಿಗಳ ತನಿಖೆಗೆ ಸಹಕರಿಸ ಬೇಕು. 5 ಲಕ್ಷ ಬೆಲೆಯ ಎರಡು ಬಾಂಡ್ಗಳನ್ನು ನೀಡಬೇಕು. 48 ಗಂಟೆ ಒಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗ ಬೇಕು ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಚನ್ನಗಿರಿ ಕ್ಷೇತ್ರದ ಶಾಸಕರೂ ಆಗಿರುವ ಮಾಡಾಳ್ ವಿರುಪಾಕ್ಷಪ್ಪ ಕೆಎಸ್‌ಡಿಎಲ್‌ನ ಅಧ್ಯಕ್ಷರಾಗಿದ್ದರು. ಇದಕ್ಕೆ ಕಚ್ಚಾವಸ್ತು ಪೂರೈಕೆಗಾಗಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪವನ್ನು ಶಾಸಕರು ಎದುರಿಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಲೋಕಾಯುಕ್ತ ಪೊಲೀಸರು ಶಾಸಕರ ಪುತ್ರ ಮಾಡಾಳ್ ಪ್ರಶಾಂತ್ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ವಶಕ್ಕೆ ಪಡೆದು, ನಂತರ ಬಂಧನಕ್ಕೆ ಒಳಪಡಿಸಿದ್ದರು .
ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಕೋರಿ ಮತ್ತು ತಮ್ಮ ವಿರುದ್ಧದ ಎಫ್ಐಆರ್ ರದ್ದತಿಗೆ ಹೈಕೋರ್ಟ್ ಮೆಟ್ಟಿಲೇರಿದ ಮಾಡಾಳ್ ವಿರುಪಾಕ್ಷಪ್ಪ
ಇದಾದ ಬಳಿಕ ವಿರುಪಾಕ್ಷಪ್ಪ ಮತ್ತವರ ಮಗನ ಬೆಂಗಳೂರಿನ ಕಚೇರಿಗಳು ಹಾಗೂ ಮನೆ ಮತ್ತು ಚನ್ನಗಿರಿಯ ನಿವಾಸದ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ಬೆಳವಣಿಗೆಗಳ ನಂತರ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರುಪಾಕ್ಷಪ್ಪ ರಾಜೀನಾಮೆ ಪತ್ರ ರವಾನಿಸಿದ್ದರು.
ತನಿಖಾಧಿಕಾರಿಗಳು ಬದಲು: ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಲಂಚ ಸ್ವೀಕಾರ ಪ್ರಕರಣದಲ್ಲಿನ ತನಿಖಾಧಿಕಾರಿಗಳನ್ನು ಸರ್ಕಾರ ಬದಲಿಸಿದೆ. ಪ್ರಕರಣ ದಾಖಲಾದಾಗಿನಿಂದ ತನಿಖೆ ಕೈಗೊಂಡಿದ್ದ ಡಿವೈಎಸ್ಪಿ ಪ್ರಮೋದ್ ಕುಮಾರ್ ಹಾಗೂ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅವರ ಸ್ಥಾನಕ್ಕೆ ಡಿವೈಎಸ್ಪಿ ಆಂಥೋನಿ ಜಾನ್ ಹಾಗೂ ಇನ್ಸ್ಪೆಕ್ಟರ್ ಬಾಲಾಜಿ ಬಾಬು ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ: ಇಬ್ಬರು ತನಿಖಾಧಿಕಾರಿಗಳ ಬದಲಾವಣೆ