ETV Bharat / state

ಅಧಿಕಾರಿಗಳ ವರ್ಗ, ಹುದ್ದೆಗಳಿಗೆ ನಿಯೋಜನೆ ಸರ್ಕಾರದ ವಿವೇಚನೆಗೆ ಬಿಟ್ಟದ್ದು: ಹೈಕೋರ್ಟ್

author img

By ETV Bharat Karnataka Team

Published : Dec 21, 2023, 3:40 PM IST

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಪ್ರಕರಣದ ತನಿಖಾಧಿಕಾರಿಯ ವರ್ಗಾವಣೆ ರದ್ದು ಕೋರಿ ಗೂಳಿಹಟ್ಟಿ ಶೇಖರ್ ಅವರು ಹೈಕೋರ್ಟ್​ದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

high court
ಹೈಕೋರ್ಟ್

ಬೆಂಗಳೂರು: ಅಧಿಕಾರಿಗಳನ್ನು ಯಾವ ಸ್ಥಳಕ್ಕೆ ವರ್ಗಾಯಿಸಬೇಕು, ಯಾವ ಹುದ್ದೆಯಲ್ಲಿ ಉಳಿಸಿಕೊಳ್ಳಬೇಕು ಎನ್ನುವುದು ಸರ್ಕಾರ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಎ.ಡಿ.ನಾಗರಾಜು ಅವರ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿತು.

ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಲೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಸಾರ್ವಜನಿಕ ಹಿತಾಸಕ್ತಿ ರಕ್ಷಕರಾಗಿರುವ ಸರ್ಕಾರಕ್ಕೆ ಯಾವ ಅಧಿಕಾರಿಗೆ ಯಾವ ಸ್ಥಳ ನಿಯೋಜನೆ ಮಾಡಬೇಕು ಎಂಬುದು ತಿಳಿದಿದೆ. ಅಧಿಕಾರಿಗಳು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ, ಸರ್ಕಾರದ ಯಾವುದೇ ಪ್ರಕ್ರಿಯೆಯು ಅಡೆತಡೆಯಿಲ್ಲದೆ ಮುಂದುವರಿಯಲಿದೆ. ಅಲ್ಲದೇ ಅಧಿಕಾರಿಗಳ ವಗಾವಣೆಗೆ ಮಾರ್ಗಸೂಚಿಗಳಿದ್ದು, ಅದರಂತೆ ನಡೆಯಬೇಕಾಗುತ್ತದೆ. ಸರ್ಕಾರದ ಅಧಿಕಾರಿಗಳಿಗೆ ವರ್ಗಾವಣೆಗೆ ನಿರ್ದಿಷ್ಟ ಅವಧಿ ಇರಲಿದ್ದು, ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವರ್ಗಾವಣೆ ನಡೆದರೆ, ಕಾನೂನಿನ ಪ್ರಕಾರ ಪರಿಹಾರ ಕಂಡುಕೊಳ್ಳುವುದು ತೊಂದರೆಗೊಳಗಾದ ಅಧಿಕಾರಿಗೆ ಬಿಟ್ಟ ವಿಚಾರ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಮೂರನೇ ವ್ಯಕ್ತಿಯಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿತು.

ಅಲ್ಲದೇ ತನಿಖಾಧಿಕಾರಿ ವರ್ಗಾವಣೆಯಿಂದ ತನಿಖೆಯ ಮೇಲೆ ಪ್ರಭಾವ ಭೀರಲಿದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಸಲ್ಲಿಸಿಲ್ಲ. ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳನ್ನು ನಿಯತಕಾಲಿಕವಾಗಿ ವರ್ಗಾವಣೆ ಮಾಡುವುದರಿಂದ ಉಂಟಾಗುವ ಪರಿಣಾಮಗಳನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳುತ್ತದೆ. ಕೆಲ ಹುದ್ದೆಗಳಲ್ಲಿ ಅಧಿಕಾರಿಗಳ ಸೇವೆ ಗಮನಾರ್ಹವಿದ್ದರೂ ಕೆಲವೊಮ್ಮೆ ಕೆಲವು ಅಧಿಕಾರಿಗಳನ್ನು ಉಳಿಸಿಕೊಳ್ಳುವುದರಿಂದ ತನಿಖಾ ಪ್ರಕ್ರಿಯೆಗೆ ಅಡ್ಡಿಯಾಗಬಹುದು. ಅಧಿಕಾರಿಗಳನ್ನು ಅಮಾನತುಗೊಳಿಸುವುದು ಅಸ್ತಿತ್ವದಲ್ಲಿರುವ ನಡವಳಿಕೆ ಮತ್ತು ಶಿಸ್ತು ನಿಯಮಗಳಿಂದ ನಿಯಂತ್ರಿಸಲ್ಪಡುವ ವಿಷಯವಾಗಿದೆ. ಇದು ಉದ್ಯೋಗದಾತರ ವ್ಯಾಪ್ತಿಗೆ ಬಿಟ್ಟದ್ದು. ಇದರಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಲು ಅವಕಾಶವಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖಾ ಹಂತದಲ್ಲಿರುವಾಗ ತನಿಖಾಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡಿದೆ. ಸರ್ಕಾರದ ಈ ಬೆಳವಣಿಗೆ ರಾಜಕೀಯ ಪ್ರೇರಿತವಾಗಿದ್ದು, ಅನೇಕ ರಾಜಕೀಯ ಪ್ರಭಾವಿ ವ್ಯಕ್ತಿಗಳನ್ನು ರಕ್ಷಣೆ ಮಾಡುವುದಾಗಿದೆ ಎಂದು ಗೂಳಿಹಟ್ಟಿ ಶೇಖರ್ ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿಯನ್ನು ಮುಂದುವರಿಸಬೇಕು ಮತ್ತು ಕಳಂಕಿತರನ್ನು ಅಮಾನತುಗೊಳಿಸಬೇಕು. ತನಿಖೆ ಪೂರ್ಣಗೊಂಡು ಅಂತಿಮ ವರದಿ ಸಲ್ಲಿಸುವವರೆಗೂ ಹುದ್ದೆಯಲ್ಲಿರುವ ವ್ಯವಸ್ಥಾಪಕ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಮತ್ತು ಇತರ ಸಿಬ್ಬಂದಿಯನ್ನು ನಿಗಮದಲ್ಲಿಯೇ ಉಳಿಸಿಕೊಳ್ಳಲು ನಿರ್ದೇಶನ ನೀಡುವಂತೆ ಅವರು ಕೋರಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ಅರ್ಜಿದಾರರ ಆರೋಪಗಳನ್ನು ಸಾಬೀತುಪಡಿಸುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಯಾವ ಅಧಿಕಾರಿಯನ್ನು ಯಾವ ಹುದ್ದೆಯಲ್ಲಿ ಮುಂದುವರಿಸಬೇಕು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಈ ವಿಚಾರದಲ್ಲಿ ಇತರರು ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ ಎಂದು ವಾದ ಮಂಡಿಸಿದ್ದರು.

ಇದನ್ನೂ ಓದಿ: ಸುಳ್ಳು ಜಾತಿ ಪ್ರಮಾಣ ಪತ್ರ ಮಾಡಿಸಿ ಕಾನ್ಸ್​​ಟೇಬಲ್ ಹುದ್ದೆ: ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.