ETV Bharat / state

ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪ: ಅಭಯ್​ ಕುಮಾರ್​ ಪಾಟೀಲ್​ ವಿರುದ್ಧ ದೂರು ರದ್ದುಪಡಿಸಿದ ಹೈಕೋರ್ಟ್

author img

By

Published : May 19, 2023, 8:28 PM IST

ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಮಾಜಿ ಶಾಸಕ ಅಭಯ್ ಕುಮಾರ್ ಪಾಟೀಲ್ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.

high-court-dismissed-the-complaint-against-abhay-kumar-patil
ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪ: ಅಭಯ್​ ಕುಮಾರ್​ ಪಾಟೀಲ್​ ವಿರುದ್ಧ ದೂರು ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲೆ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಭಯ್ ಕುಮಾರ್ ಪಾಟೀಲ್ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ತನಿಖೆಗೆ ಶಿಫಾರಸು ಮಾಡಿದ್ದ ಬೆಳಗಾವಿ ಜಿಲ್ಲೆಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಮತ್ತು ಈ ಸಂಬಂಧ ಬೆಳಗಾವಿ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದು ಪಡಿಸುವಂತೆ ಕೋರಿ ಅಭಯ್ ಕುಮಾರ್ ಪಾಟೀಲ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.

ಅಲ್ಲದೆ, ಪ್ರಕರಣವನ್ನು ತನಿಖೆಗೆ ಶಿಫಾರಸು ಮಾಡಿದ ಸಂದರ್ಭದಲ್ಲಿ ಅರ್ಜಿದಾರರು ಶಾಸಕರಾಗಿರಲಿಲ್ಲ ಎಂಬುದಾಗಿ ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ. ಆದರೆ, 2012ರಲ್ಲೇ ಖಾಸಗಿ ದೂರು ದಾಖಲಾಗಿದೆ. ಆ ವೇಳೆ, ಅವರು ಶಾಸಕರಾಗಿದ್ದರು. ಆ ಪ್ರಕರಣವನ್ನು ತನಿಖೆಗೆ ಮೂರು ಬಾರಿಗೆ ಶಿಫಾರಸುಗೊಂಡಿತ್ತು.

ಆ ವೇಳೆ ಅವರು ಶಾಸಕರು ಆಗಿರದೇ ಇರಬಹುದು. ಆದರೆ, ಪ್ರಿಯಾಂಕ ಶ್ರೀವಾತ್ಸವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 154 ಪ್ರಕಾರ ಪೊಲೀಸರಿಗೆ ದೂರು ನೀಡದೇ, ನೇರವಾಗಿ ಖಾಸಗಿ ದೂರು ದಾಖಲಿಸಿದರೆ, ಆ ದೂರು ಪೊಲೀಸರಿಗೆ ಶಿಫಾರಸು ಮಾಡುವುದು ಊರ್ಜಿತವಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದಲ್ಲಿ ಖಾಸಗಿ ದೂರುದಾರ ದಾಖಲಿಸಿದ ಖಾಸಗಿ ದೂರನ್ನು ಪೊಲೀಸರಿಗೆ ತನಿಖೆಗೆ ಶಿಫಾರಸು ಮಾಡಿರುವುದೇ ಉರ್ಜಿತವಾಗಿಲ್ಲ. ಇದೇ ಹೈಕೋರ್ಟ್‌ನ ಮತ್ತೊಂದು ಪೀಠ, ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ಖಾಸಗಿ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಎರಡು ಬಾರಿ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಪಡಿಸಿದೆ. ಹೀಗಿದ್ದರೂ ಕೂಡ ಮೂರನೇ ಬಾರಿ ಎಫ್‌ಐಆರ್ ಹಾಕಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 19 ಹೇಳುವಂತೆ ಪೂರ್ವಾನುಮತಿ ಪಡೆದಿಲ್ಲ.

ಇದರಿಂದ ಪೂರ್ವಾನುಮತಿ ಇಲ್ಲದೆ ದಾಖಲಿಸಿದ ಖಾಸಗಿ ದೂರು ಮತ್ತು ಎಫ್‌ಐಆರ್ ಕಾನೂನಿನ ಅಡಿ ಊರ್ಜಿತವಾಗುವಾಗುದಿಲ್ಲ. ಪೊಲೀಸರಿಂದ ಸೋರ್ಸ್ ರಿಪೋರ್ಟ್ ಇಲ್ಲದೆಯೇ ಖಾಸಗಿ ದೂರು ದಾಖಲಿಸಿರುವುದು ಮತ್ತು ಆ ಕುರಿತು ತನಿಖೆ ಮುಂದುವರಿಯುವುದು ಕಾನೂನಿನ ದುರ್ಬಳಕೆಯಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಅಭಿಪ್ರಾಯ ಪಟ್ಟು ಅರ್ಜಿದಾರರ ವಿರುದ್ಧದ ಖಾಸಗಿ ದೂರು ಮತ್ತು ಎಸಿಬಿ ಪೊಲೀಸರು ಅಥವಾ ಲೋಕಾಯುಕ್ತ ಪೊಲೀಸರು 2017ರಲ್ಲಿ ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?: 2004ರಿಂದ 2008ರ ಅವಧಿಯವರೆಗೆ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅಭಯ್ ಕುಮಾರ್ ಪಾಟೀಲ್ ಅವರು ಆದಾಯ ಮೀರಿ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಬೆಳಗಾವಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಆ ದೂರನ್ನು ನ್ಯಾಯಾಲಯವು ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶಿಸಿತ್ತು. ಲೋಕಾಯುಕ್ತ ಪೊಲೀಸರು 2012ರಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಇದನ್ನು ಪ್ರಶ್ನಿಸಿ ಅಭಯ್ ಕುಮಾರ್ ಪಾಟೀಲ್ 2013ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಎಫ್‌ಐಆರ್ ರದ್ದುಪಡಿಸಿದ್ದ ಹೈಕೋರ್ಟ್, ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿತ್ತು. ಮತ್ತೊಮ್ಮೆ ಅದೇ ಖಾಸಗಿ ದೂರನ್ನು ಲೋಕಾಯುಕ್ತ ಪೊಲೀಸರ ತನಿಖೆಗೆ ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಈ ವೇಳೆ ಎಸಿಬಿ ಅಸ್ವಿತ್ವದಲ್ಲಿತ್ತು. ಎಸಿಬಿ ಪೊಲೀಸರು 2017ರಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಮತ್ತೆ ಅಭಯ್ ಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಎರಡನೇ ಬಾರಿ ಕೂಡ ಹೈಕೋರ್ಟ್, ತನಿಖೆಗೆ ದೂರನ್ನು ಶಿಫಾರಸು ಮಾಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ 2017ರ ಆ.8 ರಂದು ಆದೇಶಿಸಿತ್ತು. ಇದಾದ ಬಳಿಕ ಮೂರನೇ ಬಾರಿ ಖಾಸಗಿ ದೂರನ್ನು ಪೊಲೀಸರಿಗೆ ವಿಚಾರಣಾ ನ್ಯಾಯಾಲಯ ಶಿಫಾರಸು ಮಾಡಿತ್ತು. ಎಸಿಬಿಯು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿತ್ತು. ಈ ಮಧ್ಯೆ ಎಸಿಬಿ ರಚನೆಯನ್ನು ಹೈಕೋರ್ಟ್ ಅಂಸಿಧುಪಡಿಸಿದ ಹಿನ್ನೆಲೆಯಲ್ಲಿ ತನಿಖೆ ಲೋಕಾಯುಕ್ತ ಪೊಲೀಸರ ಬಳಿ ಬಾಕಿಯಿತ್ತು. ಇದರಿಂದ ಮೂರನೇ ಬಾರಿ ಹೈಕೋರ್ಟ್‌ಗೆ ಅಭಯ್ ಕುಮಾರ್ ಪಾಟೀಲ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಸಾವಿಗೂ ಮುನ್ನ 2 ತಿಂಗಳು ಕರ್ತವ್ಯಕ್ಕೆ ಅನಧಿಕೃತ ಗೈರು: ಬಿಎಂಟಿಸಿ ಚಾಲಕನ ಕುಟುಂಬಕ್ಕೆ ಪರಿಹಾರ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.