ETV Bharat / state

ಚೀನಾ ಕಂಪನಿಯೊಂದಿಗೆ ಒಪ್ಪಂದ ಆರೋಪ: ಮೆ.ಇಂಡಿಟ್ರೇಡ್ ಫಿನ್‌ಕಾರ್ಪ್ ಅರ್ಜಿ ವಜಾ

author img

By

Published : Mar 2, 2023, 9:05 AM IST

ಮೊಬೈಲ್ ಅಪ್ಲಿಕೇಷನ್ ಮೂಲಕ ಸಾಲ‌ ನೀಡಿ ಕಿರುಕುಳ‌ ನೀಡಿದ ಆರೋಪ ಎದುರಿಸುತ್ತಿರುವ ಮೆ. ಇಂಡಿಟ್ರೇಡ್ ಫಿನ್​​ಕಾರ್ಪ್​ ಸಂಸ್ಥೆಯು ಕರ್ನಾಟಕ ಹೈಕೋರ್ಟ್​​ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

high court
ಹೈಕೋರ್ಟ್​

ಬೆಂಗಳೂರು : ಚೀನಾ ದೇಶದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆರೋಪದಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ ಜಾರಿ ನಿರ್ದೇಶನಾಲಯ(ಇಡಿ) ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಮೆ.ಇಂಡಿಟ್ರೇಡ್ ಫಿನ್‌ಕಾರ್ಪ್ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ದೇಶದ ಭದ್ರತೆ ಮತ್ತು ನಾಗರಿಕರ ಸುರಕ್ಷತೆಗೆ ಸಂಬಂಧಿಸಿದ ವಿಚಾರಗಳಲ್ಲಿ ತನಿಖೆ ಅತ್ಯಗತ್ಯ. ದೇಶವನ್ನು ಅಸ್ಥಿರಗೊಳಿಸುವಲ್ಲಿ ನೆರೆ ರಾಷ್ಟ್ರ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಸುಮ್ಮನಿರಲು ಸಾಧ್ಯವಿಲ್ಲ. ತನಿಖೆ ಮುಂದುವರೆಯಲಿ ಎಂದು ಆದೇಶದಲ್ಲಿ ತಿಳಿಸಿದೆ.

ಸಾರ್ವಜನಿಕರಿಗೆ ಮೊಬೈಲ್ ಅಪ್ಲಿಕೇಷನ್ ಮೂಲಕ ಸಾಲ ನೀಡಿ ಸುಲಿಗೆ ಮಾಡುವುದು ಮತ್ತು ಕಿರುಕುಳ ನೀಡುತ್ತಿರುವ ಆರೋಪದಡಿ ಬೆಂಗಳೂರು ನಗರದಲ್ಲಿ 15ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಈ ಸಂಬಂಧಿತ ತನಿಖೆಯಲ್ಲಿ ಅರ್ಜಿದಾರರ ಸಂಸ್ಥೆ ಸಾಲ ನೀಡುತ್ತಿದ್ದ ರೇಜರ್ ಪೇ ಪ್ರೈವೇಟ್ ಲಿಮಿಟೆಡ್ ಮತ್ತು ಕ್ಯಾಶ್‌ಫ್ರೀ ಮೇಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸಹ ತನಿಖೆ ನಡೆಯುತ್ತಿದೆ. ಅಲ್ಲದೆ, ಅರ್ಜಿದಾರ ಸಂಸ್ಥೆ ವಾಟರ್ ಎಲಿಫಂಟ್ ಎಂಬ ಹೆಸರಿನಲ್ಲಿ ಮತ್ತೊಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಕಂಪನಿಯ ನಿರ್ದೇಶಕರು ಚೀನಾದವರು ಎಂದು ಹೇಳಲಾಗುತ್ತಿದೆ. ಹೀಗಾಗಿ, ತನಿಖೆ ಅಗತ್ಯವಿದ್ದು ಅರ್ಜಿ ವಜಾಗೊಳಿಸಲಾಗಿದೆ.

ಪ್ರಕರಣದ ಹಿನ್ನೆಲೆ: 2022ರ ಸೆಪ್ಟೆಂಬರ್2 ರಂದು ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು ಅರ್ಜಿದಾರ ಕಂಪನಿಯ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡುವುದಕ್ಕೆ ನಿರ್ದೇಶನ ನೀಡಿದ್ದರು. 2022 ರ ಅಕ್ಟೋಬರ್ 14 ರಂದು ಈ ಸಂಬಂಧ ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ: ಮೊಬೈಲ್​ ಪ್ಯಾಕ್​ನಲ್ಲಿರುವ ಚಾರ್ಜರ್​ಗೆ ಪ್ರತ್ಯೇಕ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್​

ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, "ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅರ್ಜಿದಾರರ ಕಚೇರಿಯಲ್ಲಿ ಸರ್ಚ್ ಮಾಡಿಲ್ಲ. ಯಾವುದೇ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿಲ್ಲ. ಆದರೆ, ಅರ್ಜಿದಾರರು ಸಾಲಗಾರರಿಗೆ ಸಾಲ ನೀಡುವುದಕ್ಕಾಗಿ ರೆಜೋರ್‌ಪೇ ಮತ್ತು ಕ್ಯಾಶ್‌ಫ್ರೀ ಮಾರ್ಗಗಳನ್ನು ಬಳಕೆ ಮಾಡಿದ್ದಾರೆ. ಈ ಆ್ಯಪ್​ಗಳ ಯಾವುದೇ ಚಟುವಟಿಕೆಗಳಲ್ಲಿ ಅರ್ಜಿದಾರರು ಭಾಗಿಯಾಗಿಲ್ಲ. ಅಲ್ಲದೇ, ಸೂಕ್ತ ಕಾರಣ ನೀಡದೆ ಏಕಾಏಕಿ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿರುವ ಕ್ರಮ ಕಾನೂನುಬಾಹಿರ. ಅರ್ಜಿದಾರರ ಬ್ಯಾಂಕ್ ಖಾತೆ ಸೀಜ್ ಮಾಡಿರುವುದು ಅತ್ಯಂತ ಕಠಿಣ ಕ್ರಮ. ಈ ರೀತಿ ಖಾತೆ ಸೀಜ್ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ಜಾರಿ ನಿರ್ದೇಶನಾಲಯದ ನೋಟಿಸ್ ರದ್ದು ಮಾಡಬೇಕು" ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನೂ ಓದಿ: ಮೈಸೂರು ವಿವಿ ಅತಿಥಿ ಉಪನ್ಯಾಸಕರಿಗೆ ಗೌರವಧನ ಪ್ರಕರಣ: ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್

ಜಾರಿ ನಿರ್ದೇಶನಾಲಯದ ಪರ ವಕೀಲರು ವಾದ ಮಂಡಿಸಿ, "ಅರ್ಜಿದಾರ ಸಂಸ್ಥೆಗೆ ಕೇವಲ ಶೋಕಾಸ್ ನೋಟಿಸ್ ಮಾತ್ರ ಜಾರಿ ಮಾಡಲಾಗಿದೆ. ಜಾರಿ ನಿರ್ದೇಶನಾಲಯದ ಮುಂದೆ ಶೋಕಾಸ್ ನೋಟಿಸ್‌ಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಬಹುದಾಗಿದೆ. ಆದರೂ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜತೆಗೆ, ಕಂಪನಿಯ ವ್ಯವಹಾರಗಳು ತಿಳಿಯ ಬೇಕಾದಲ್ಲಿ ತನಿಖೆ ನಡೆಸುವುದು ಅತ್ಯಗತ್ಯ" ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.