ETV Bharat / state

ನಾಡಗೀತೆ ಹಾಡುವ ಕುರಿತು ಸಮಗ್ರ ಮಾಹಿತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

author img

By

Published : Jul 14, 2023, 6:47 AM IST

ನಾಡಗೀತೆ ಹಾಡುವುದಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ.

ಹೈಕೋರ್ಟ್ high court
ಹೈಕೋರ್ಟ್

ಬೆಂಗಳೂರು: ನಾಡಗೀತೆ ಹಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಸಂಬಂಧ ಸಮಗ್ರ ಮಾಹಿತಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರವು 2022ರ ಸೆ.25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ಧೀಕ್ಷಿತ್ ಅವರಿದ್ದ ಪೀಠ, ಈ ಸಂಬಂಧ ವಿವರಾಗಿ ಅಧ್ಯಯನ ನಡೆಸಿ ಸಮರ್ಪಕ ಮಾಹಿತಿ ನೀಡುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ ಸರ್ಕಾರಿ ವಕೀಲರು, ಕುವೆಂಪು ಅವರು ಕೆಲವೊಂದು ಷರತ್ತು ವಿಧಿಸಿ ಸಿನಿಮಾದಲ್ಲಿ ನಾಡಗೀತೆ ಬಳಸಲು ಮತ್ತು ರಾಗ ಸಂಯೋಜಿಸಲು ಅನುಮತಿ ನೀಡಿದ್ದಾರೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕುವೆಂಪು ಅವರು ಅನುಮತಿ ನೀಡಿರುವುದು ನಿಜವೇ? ಎಂದು ಅರ್ಜಿದಾರ ಕಿಕ್ಕೇರಿ ಪರ ವಕೀಲರನ್ನು ಪ್ರಶ್ನಿಸಿದರು. ಕಿಕ್ಕೇರಿ ಪರ ವಕೀಲರು, ಕುವೆಂಪು ಸಾಹಿತ್ಯ ಬಳಕೆಗೆ ಮಾತ್ರ ಅನುಮತಿ ನೀಡಿದ್ದಾರೆ ಹೊರತು ಸಂಗೀತ ಸಂಯೋಜನೆಗೆ ಅಲ್ಲ ಎಂದು ವಿವರಿಸಿದರು.

ಈ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನ್ಯಾಯಾಲಯ ತಿಳಿಯಬೇಕಿದೆ. ನಿಮ್ಮ ಕಕ್ಷಿದಾರರು ಲಭ್ಯವಿದ್ದರೆ ಅವರನ್ನು ಕರೆಯಿಸಿ ಎಂದು ಸೂಚಿಸಿದರು. ಇದೇ ವೇಳೆ ಕೋರ್ಟ್ ಹಾಲ್‌ನಲ್ಲಿ ಕಿಕ್ಕೇರಿ ಕೃಷ್ಣ ಮೂರ್ತಿ ಹಾಜರಿದ್ದನ್ನು ತಿಳಿದು, ಅವರಿಂದಲೇ ಹೆಚ್ಚಿನ ಮಾಹಿತಿ ಪಡೆದುಕೊಂಡಿತು. ನ್ಯಾಯಪೀಠಕ್ಕೆ ವಿವರ ನೀಡಿದ ಕಿಕ್ಕೇರಿ, ಕುವೆಂಪು ಅವರು ವಾಸ್ತವವಾಗಿ ಸಿನಿಮಾಕ್ಕೆ ನಾಡಗೀತೆಯ ಸಾಲು ಬಳಸಲು ಅನುಮತಿ ನೀಡಿದ್ದರು. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು ಕಲ್ಯಾಣಿ ರಾಗದಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಅಶ್ವತ್ಥ್ ಅವರು ಉದಯ ರವಿಚಂದ್ರಿಕೆ ರಾಗ ಮತ್ತು ಅನಂತಸ್ವಾಮಿ ಅವರು ಮಾಯಾ ಮಾಳವ ಗೋಳ ಸಂಗೀತದಲ್ಲಿ ರಾಗ ಸಂಯೋಜಿಸಿದ್ದಾರೆ. ಇದಲ್ಲದೆ, ಇನ್ನು ಹಲವು ರಾಗದಲ್ಲಿ ನಾಡಗೀತೆಯನ್ನು ಹಾಡಬಹುದಾಗಿದೆ ಎಂದರು.

ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ರಾಗಗಳ ಹೆಸರು ಹೇಳಿದರೆ ಸಾಕಾಗುವುದಿಲ್ಲ. ಹಾಡಿನ ಸೌಂದರ್ಯ ಹಾಗೂ ಪ್ರಾಮುಖ್ಯತೆ, ವಿವಿಧ ರಾಗಗಳಲ್ಲಿನ ವ್ಯತ್ಯಾಸವನ್ನು ಪ್ರಸ್ತುತ ಪಡಿಸುವುದು ಉತ್ತಮ. ವಿವಿಧ ರಾಗದಲ್ಲಿ ಹಾಡಲು ಸಾಧ್ಯವಿದೆ ಎಂದಾದರೆ ನೀವು ಹಾಡಿ ತೋರಿಸಬಹುದೇ? ಎಂದು ಕಿಕ್ಕೇರಿ ಅವರನ್ನು ಪ್ರಶ್ನಿಸಿದರು.

ಕೋರ್ಟ್ ಹಾಲ್‌ನಲ್ಲಿ ನಾಡಗೀತೆ: ನ್ಯಾಯಮೂರ್ತಿಗಳ ಸೂಚನೆಗೆ ಒಪ್ಪಿದ ಕಿಕ್ಕೇರಿ, ಉದಯ ರವಿಚಂದ್ರಿಕೆ, ಜಂಜೂಟಿ, ಹಿಂಧೋಳ, ಕಲ್ಯಾಣಿ ಮತ್ತು ಮಾಯಾ ಮಾಳವ ಗೋಳ ರಾಗದಲ್ಲಿ ನಾಡಗೀತೆಯ ಸಾಲು ಹಾಡಿದರು. ಅಲ್ಲದೆ, ಅನಂತಸ್ವಾಮಿ ಅವರು ನಾಡಗೀತೆಯ ಕೇವಲ ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಒಂದು ವೇಳೆ ಅನಂತ ಸ್ವಾಮಿಯವರೇ ಸಂಯೋಜಿಸಿದ ಧಾಟಿಯಲ್ಲೇ ಹಾಡುವುದಾದರೆ, ಅವರು ಪೂರ್ಣ ಪ್ರಮಾಣದಲ್ಲಿ ಸಂಯೋಜಿಸಿದ ಧಾಟಿಯನ್ನು ನಮ್ಮ ಮುಂದೆ ಸರ್ಕಾರ ಪ್ರಸ್ತುತಪಡಿಸಲಿ. ಆಗ ನಾವು ಒಪ್ಪುತ್ತೇವೆ. ಎರಡು ಚರಣಗಳನ್ನು ಸಂಯೋಜಿಸಿರುವಾಗ ಪೂರ್ತಿ ಹಾಡನ್ನು ಅದೇ ಧಾಟಿಯಲ್ಲಿ ಹಾಡುವುದನ್ನು ಹೇಗೆ ಕಡ್ಡಾಯ ಮಾಡಲಾಗುತ್ತದೆ. ಇನ್ನೂ ಸಿ. ಅಶ್ವತ್ಥ್ ಅವರು, ನಾಡಗೀತೆ ಎಲ್ಲಾ ಚರಣಗಳಿಗೂ ರಾಗದಲ್ಲಿ ಸಂಯೋಜಿಸಿದ್ದಾರೆ. ಹಾಗಾಗಿ, ಅದೇ ರಾಗದಲ್ಲಿ ನಾಡಗೀತೆ ಹಾಡುವುದು ಸಮಂಜಸ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಗೆ ಅರ್ಹವಾಗಿದೆ ಎಂದು ತಿಳಿಸಿತು. ಜತೆಗೆ, ಇದರಿಂದ ಪ್ರಕರಣದಲ್ಲಿ ಅಡಗಿರುವ ವಿಚಾರಗಳು ಗಂಭೀರವಾಗಿದೆ.ಮ ಈ ಬಗ್ಗೆ ಸಮಗ್ರ ಮಾಹಿರಿ ನೀಡಬೇಕು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿದರು.

ಇದನ್ನೂ ಓದಿ: ಡಿಕೆಶಿ ವಿರುದ್ಧದ ತನಿಖೆ ವಿಳಂಬವಾಗಿಲ್ಲ, 596 ದಾಖಲೆ ಸಂಗ್ರಹ, 84 ಸಾಕ್ಷ್ಯಗಳ ವಿಚಾರಣೆ : ಹೈಕೋರ್ಟ್‌ಗೆ ಸಿಬಿಐ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.