ETV Bharat / state

ರಸ್ತೆ ಅಪಘಾತ ಪ್ರಕರಣ ವಿಲೇವಾರಿಗೆ ಪೊಲೀಸ್, ಐಟಿ ಜೊತೆ ವಿವಿಧ ಇಲಾಖೆ ಸಂಯೋಜನೆಗೆ ಹೈಕೋರ್ಟ್ ನಿರ್ದೇಶನ

author img

By

Published : Aug 10, 2023, 7:21 AM IST

ರಸ್ತೆ ಅಪಘಾತ ಪರಿಹಾರದ ಅರ್ಜಿಗಳ ತ್ವರಿತ ವಿಲೇವಾರಿ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನಗಳನ್ನು ನೀಡಿದೆ.

high-court-directed-to-combine-various-departments-with-police-it-for-disposal-of-road-accident-cases
ರಸ್ತೆ ಅಪಘಾತ ಪ್ರಕರಣ ವಿಲೇವಾರಿಗೆ ಪೊಲೀಸ್, ಐಟಿ ಜೊತೆ ವಿವಿಧ ಇಲಾಖೆ ಸಂಯೋಜನೆಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು : ರಸ್ತೆ ಅಪಘಾತ ಪ್ರಕರಣಗಳಲ್ಲಿ ಪರಿಹಾರದ ಅರ್ಜಿಗಳ ಶೀಘ್ರ ವಿಲೇವಾರಿಗೆ ಪೊಲೀಸ್ ಹಾಗೂ ಐಟಿ ವ್ಯವಸ್ಥೆ ಜೊತೆ ರಸ್ತೆ ಅಪಘಾತ ದತ್ತಾಂಶ, ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ವಿಮಾ ಇಲಾಖೆಯನ್ನು ಸಂಯೋಜಿಸಬೇಕು ಎಂಬುದು ಸೇರಿದಂತೆ ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿದೆ.

ಪರಿಹಾರ ಕೋರಿ ಅರ್ಜಿ ಸಲ್ಲಿಕೆ ವಿಳಂಬವಾಗಿದೆ ಎಂದು ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಮೋಟಾರು ವಾಹನ ಅಪಘಾತ ಕಾಯಿದೆ ಇರುವುದೇ ಸಂತ್ರಸ್ತರ ಅನುಕೂಲಕ್ಕಾಗಿ ಆಗಿದೆ. ಹಾಗಾಗಿ ಅದರಲ್ಲಿನ ತಾಂತ್ರಿಕ ಅಂಶಗಳೂ ಸೇರಿದಂತೆ ಎಲ್ಲ ಅಂಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದೆ.

ಅಲ್ಲದೆ, ಮೋಟಾರು ವಾಹನ ಅಪಘಾತ ಕಾಯಿದೆಗೆ 2019ರಲ್ಲಿ ತಿದ್ದುಪಡಿ ಮಾಡಲಾಗಿದ್ದು, 2022ರಲ್ಲಿ ನಿಯಮಗಳನ್ನು ರೂಪಿಸಲಾಗಿದೆ. ಅದರಂತೆ ಅಪಘಾತ ನಡೆದ ಸಮಯದಲ್ಲಿ ತನಿಖಾಧಿಕಾರಿ ದಾಖಲಿಸುವ ಮೊದಲ ಅಪಘಾತ ವರದಿ (ಎಫ್​ಐಆರ್) ಅನ್ನೇ ಪರಿಹಾರದ ಅರ್ಜಿ ಎಂದು ಪರಿಗಣಿಸಬಹುದಾಗಿದೆ. ಹಾಗಾಗಿ ಅರ್ಜಿದಾರರು ತಡವಾಗಿ ಪರಿಹಾರ ಅರ್ಜಿ ಸಲ್ಲಿಸಿದ್ದಾರೆ ಎಂಬ ವಿಮಾ ಕಂಪನಿಯ ವಾದವನ್ನು ಪರಿಗಣಿಸಲಾಗದು ಎಂದು ನ್ಯಾಯಪೀಠ ಹೇಳಿದೆ.

ಜೊತೆಗೆ, ತನಿಖಾಧಿಕಾರಿ ಎಫ್​ಐಆರ್​​ನ್ನು ಕೋರ್ಟ್​ಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ, ಹಾಗಾಗಿ ಪರಿಹಾರ ಅರ್ಜಿ ಸಲ್ಲಿಸುವಲ್ಲಿ ವಿಳಂಬವಾಗಿದೆ ಎನ್ನುವ ವಾದದಲ್ಲಿ ಅರ್ಥವಿಲ್ಲ. ಹಾಗಾಗಿ ಎಲ್ಲ ಪೊಲೀಸ್ ಅಧಿಕಾರಿಗಳು ಎಫ್​ಐಆರ್ ದಾಖಲಿಸಿದ ನಂತರ ಮೋಟಾರು ವಾಹನ ಕಾಯಿದೆ ಸೆಕ್ಷನ್ 159ನ್ನು ಪಾಲಿಸಬೇಕು. ಆಗ ನ್ಯಾಯಾಲಯವು ಎಫ್​ಐಆರ್​​ನ್ನು ಪರಿಹಾರದ ಅರ್ಜಿ ಎಂದು ಪರಿಗಣಿಸಿ ವಿಚಾರಣಾ ಪ್ರಕ್ರಿಯೆಯನ್ನು ಆರಂಭಿಸಬಹುದು ಎಂದು ಪೀಠ ತಿಳಿಸಿದೆ.

ಹೈಕೋರ್ಟ್ ನಿರ್ದೇಶನಗಳು :

  • ಕೇಂದ್ರ ಮೋಟಾರು ವಾಹನ ತಿದ್ದುಪಡಿ ನಿಯಮ 2022 ಪರಿಣಾಮಕಾರಿ ಜಾರಿಗೆ ಡಿಜಿಪಿ, ಸಾರಿಗೆ ಆಯುಕ್ತರು, ಆರೋಗ್ಯ ಇಲಾಖೆ ಕಾರ್ಯದರ್ಶಿ ಮತ್ತು ಇ-ಆಡಳಿತ ಇಲಾಖೆ ಕಾರ್ಯದರ್ಶಿ ಕ್ರಮ ಕೈಗೊಳ್ಳಬೇಕು.
  • ರಾಜ್ಯ ಪೊಲೀಸ್ ಇಲಾಖೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂಪಿಸಿರುವ ಪರಿವಾಹನ್ ವೆಬ್​​ಸೈಟ್ ಜೊತೆ ರಸ್ತೆ ಅಪಘಾತ ದತ್ತಾಂಶ/ಇ-ಡಿಟೈಲ್ ಆಕ್ಸಿಡೆಂಟ್ ರಿಪೋರ್ಟ್ (ಇ-ಡಿಎಆರ್) ಅನ್ನು ಸಂಯೋಜಿಸಬೇಕು.
  • ಪೊಲೀಸ್ ಇಲಾಖೆ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ರೂಪಿಸಿರುವ ಯೂನಿಕ್ ಡಿಸೇಬಿಲಿಟಿ ಐಡಿ ವೆಬ್​ಸೈಟ್ ಜೊತೆ ದತ್ತಾಂಶವನ್ನು ಸಂಯೋಜಿಸಬೇಕು.
  • ಜೊತೆಗೆ ಕರ್ನಾಟಕ ಸರ್ಕಾರದಡಿ ಬರುವ ಎಫ್‌ಎಸ್‌ಎಲ್‌ಗಳು ನೀಡಿರುವ ವರದಿಗಳನ್ನು ವಾಹನ್ ವೆಬ್​​ಸೈಟ್‌ನಲ್ಲಿ ಹಾಕಬೇಕು.
  • ದೇಶಾದ್ಯಂತ ವಿಮಾ ಸೇವೆ ಒದಗಿಸುತ್ತಿರುವ ವಿಮಾ ಕಂಪನಿಗಳು ಅಪಘಾತಕ್ಕೊಳಗಾದ ವಾಹನಗಳಿಗೆ ಮಾಡಿಸಿರುವ ವಿಮೆಯ ವಿವರಗಳನ್ನು ಪೊಲೀಸ್ ಇಲಾಖೆ ಇಂಟಿಗ್ರೇಟ್ ಮಾಡಬೇಕು.
  • ರಸ್ತೆ ಅಪಘಾತದಲ್ಲಿ ತೊಡಗಿರುವ ವಾಹನ, ಅದರ ಮಾಲೀಕರು, ಚಾಲಕರು ಮತ್ತಿತರ ವಿವರಗಳನ್ನು ಸಾರಿಗೆ ಇಲಾಖೆಯಿಂದ ಪಡೆದು ಅದನ್ನು ವೆಬ್​ಸೈಟ್​​ನಲ್ಲಿ ಅಪ್​ಲೋಡ್ ಮಾಡಬೇಕು.
  • ಮೇಲಿನ ಎಲ್ಲಾ ದಾಖಲೆಗಳು ನ್ಯಾಯಾಲಯ ಕೇಸ್ ಇನ್ಫಾರ್ಮೆಶನ್ ವ್ಯವಸ್ಥೆಯಲ್ಲಿ ಲಭ್ಯವಾಗುವಂತೆ ಮಾಡಬೇಕು.
  • ಈ ಎಲ್ಲ ನಿರ್ದೇಶನಗಳನ್ನು ಪಾಲಿಸಲು ನಾಲ್ಕು ವಾರಗಳಲ್ಲಿ ಈ ಕುರಿತು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು-ಕನಕಪುರ ರಸ್ತೆ ಸುರಕ್ಷತೆ ಕಲ್ಪಿಸದ NHAI ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.