ETV Bharat / state

ಡಕಾಯಿತಿ ಆರೋಪ ಪ್ರಕರಣ: ಮೂವರು ನೇಪಾಳಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

author img

By

Published : Jun 22, 2021, 7:59 PM IST

Updated : Jun 22, 2021, 8:56 PM IST

ಆರೋಪಿತರು ಡಕಾಯಿತಿಯಂತಹ ಗಂಭೀರ ಸ್ವರೂಪದ ಪ್ರಕರಣದಲ್ಲಿ ಬಂಧಿತರಾಗಿದ್ದು, ನೇಪಾಳ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಶಾಶ್ವತವಾಗಿ ನೆಲೆಸಿರುವುದಾಗಿ ಹೇಳಿದ್ದಾರೆ. ಆದರೆ ಅವರು ಇಲ್ಲಿನ ಶಾಶ್ವತ ನಿವಾಸಿಗಳು ಎಂಬುದಕ್ಕೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ಹೀಗಾಗಿ ಒಂದು ವೇಳೆ ಅರ್ಜಿ ಪುರಸ್ಕರಿಸಿ ಜಾಮೀನು ನೀಡಿದರೆ ಅವರು ಸಾಕ್ಷ್ಯಗಳನ್ನು ನಾಶಪಡಿಸಬಹುದು ಮತ್ತು ನೇಪಾಳಕ್ಕೆ ತಲೆಮರೆಸಿಕೊಂಡು ಹೋಗಬಹುದು ಎಂದು ಹೇಳಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.

hc
hc

ಬೆಂಗಳೂರು: ನಗರದ ಕೋರಮಂಗಲದಲ್ಲಿ ಡಕಾಯಿತಿ ಮಾಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮೂವರು ನೇಪಾಳ ಮೂಲದ ವ್ಯಕ್ತಿಗಳಿಗೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಪ್ರಕರಣದಲ್ಲಿ ಜಾಮೀನು ಕೋರಿ ಕಮಲ್ ಜಾಜೋ ವಿಶ್ವಕರ್ಮ, ಜಾನಕಿ ಜೈಶಿ ಮತ್ತು ಸುನಿಲ್ ಬಹದ್ದೂರ್ ಶಶಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಆರೋಪಿತರು ಡಕಾಯಿತಿಯಂತಹ ಗಂಭೀರ ಸ್ವರೂಪದ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ನೇಪಾಳ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಶಾಶ್ವತವಾಗಿ ನೆಲೆಸಿರುವುದಾಗಿ ಹೇಳಿದ್ದಾರೆ. ಆದರೆ, ಅವರು ಇಲ್ಲಿನ ಶಾಶ್ವತ ನಿವಾಸಿಗಳು ಎಂಬುದಕ್ಕೆ ಯಾವುದೇ ದಾಖಲೆಗಳನ್ನು ನೀಡಿಲ್ಲ.

ಹೀಗಾಗಿ ಒಂದು ವೇಳೆ ಅರ್ಜಿ ಪುರಸ್ಕರಿಸಿ ಜಾಮೀನು ನೀಡಿದರೆ ಅವರು ಸಾಕ್ಷ್ಯಗಳನ್ನು ನಾಶಪಡಿಸಬಹುದು ಮತ್ತು ನೇಪಾಳಕ್ಕೆ ತಲೆಮರೆಸಿಕೊಂಡು ಹೋಗಬಹುದು. ಆದ್ದರಿಂದ ಪ್ರಕರಣದಲ್ಲಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಎಂಬ ಕಾರಣಕ್ಕೆ ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿದೆ.

ಪ್ರಕರಣದ ಹಿನ್ನೆಲೆ:

ಕೋರಮಂಗಲದಲ್ಲಿ ವಾಸವಿರುವ ವಿದ್ಯಾರ್ಥಿನಿ ಸಾಗರಿಕಾ ಎಂಬುವವರು, 2020ರ ಡಿಸೆಂಬರ್ 26ರ ತಡ ರಾತ್ರಿ 2.30ರ ಸುಮಾರಿಗೆ ಮನೆಯಲ್ಲಿ ತಾನು ಒಬ್ಬಳೇ ಇದ್ದಾಗ ಕೆಲ ದುಷ್ಕರ್ಮಿಗಳು ಒಳ ನುಗ್ಗಿ ಬಂದು 5 ಲಕ್ಷ ಹಣ, ಒಡವೆ ಹಾಗೂ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾದರು ಎಂದು ಪೊಲೀಸರಿಗೆ ದೂರು ನೀಡಿದ್ದರು.

ಈ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಆ ಬಳಿಕ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿತ್ತು. ನಂತರ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿತರು, ತಾವು ಪ್ರಕರಣದಲ್ಲಿ ಸಂಪೂರ್ಣ ಅಮಾಯಕರಾಗಿದ್ದೇವೆ. ಬೆಂಗಳೂರಿನ ಶಾಶ್ವತ ನಿವಾಸಿಗಳಾಗಿದ್ದೇವೆ. ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ನ್ಯಾಯಾಲಯ ವಿಧಿಸುವ ಎಲ್ಲ ಷರತ್ತುಗಳಿಗೆ ಬದ್ಧರಿದ್ದೇವೆ. ಹೀಗಾಗಿ ಜಾಮೀನು ನೀಡಬೇಕು ಎಂದು ಕೋರಿದ್ದರು.

Last Updated : Jun 22, 2021, 8:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.