ETV Bharat / state

ರಿಯಲ್ ಎಸ್ಟೇಟ್ ಉದ್ಯಮಿಗೆ ಕೊಲೆ ಸುಪಾರಿ ಆರೋಪ: ರವಿ ಪೂಜಾರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

author img

By

Published : Jul 27, 2023, 8:40 PM IST

High Court: ಕೊಲೆಗೆ ಸುಪಾರಿ ನೀಡಿದ ಆರೋಪ ಪ್ರಕರಣದಲ್ಲಿ ಭೂಗತ ಪಾತಕಿ ರವಿ ಪೂಜಾರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

high-court-denied-bail-to-ravi-pujari-in-businessman-murder-supari-case
ರಿಯಲ್ ಎಸ್ಟೇಟ್ ಉದ್ಯಮಿಗೆ ಕೊಲೆ ಸುಫಾರಿ ಆರೋಪ: ರವಿ ಪೂಜಾರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು: ನಗರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕೊಲೆಗೆ ಸುಪಾರಿ ನೀಡಿದ ಆರೋಪದಲ್ಲಿ ಭೂಗತ ಪಾತಕಿ ರವಿ ಪೂಜಾರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಬೆಂಗಳೂರಿನ ತಿಲಕ್ ನಗರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ರವಿ ಪೂಜಾರಿ ಅಲಿಯಾಸ್ ರವಿಪ್ರಕಾಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

ವಿಚಾರಣಾಧೀನ ನ್ಯಾಯಾಲಯವು ಬಹು ಹಿಂದೆಯೇ ಆರೋಪ ನಿಗದಿ ಮಾಡಿದ್ದರೂ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲು ಸರ್ಕಾರಿ ಅಭಿಯೋಜಕರು ವಿಫಲರಾಗಿದ್ದಾರೆ. ಸಾಕ್ಷಿಗಳನ್ನು ಕರೆಸಿ, ಅವರನ್ನು ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿತ್ತು. ವಿಚಾರಣಾಧೀನ ನ್ಯಾಯಾಲಯವು ಒಂದು ವರ್ಷದಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು. ವರ್ಷದೊಳಗೆ ವಿಚಾರಣೆ ಮುಗಿಯದಿದ್ದರೆ ಸರ್ಕಾರಿ ಅಭಿಯೋಜಕರು ಜವಾಬ್ದಾರರಾಗುತ್ತಾರೆ ಎಂದು ನ್ಯಾಯಪೀಠ ತಿಳಿಸಿ ಅರ್ಜಿ ವಜಾ ಮಾಡಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಇರುವವರಲ್ಲಿ ಭಯ ಹುಟ್ಟಿಸಿ, ಉದ್ಯಮದ ಮೇಲೆ ಹಿಡಿತ ಸಾಧಿಸುವ ಮೂಲಕ ಹಣ ಸುಲಿಗೆ ಮಾಡುವ ಉದ್ದೇಶದಿಂದ ಶಬ್ನಂ ಡೆವಲಪರ್ಸ್​​ನ ಕೆ ಎಸ್ ಸಮೀವುಲ್ಲಾ ಮತ್ತು ಅವರ ಸ್ನೇಹಿತರ ಕೊಲೆಗೆ ಬೆಂಗಳೂರಿನ ನಾಲ್ಕು ಕಡೆ 2007ರ ಜನವರಿ ಮತ್ತು ಫೆಬ್ರವರಿ 15ರ ನಡುವೆ ರವಿ ಪೂಜಾರಿ ಸೂಚನೆ ಮೇರೆಗೆ 17 ಮಂದಿ ಆತನ ಬಂಟರು ಪ್ರಯತ್ನ ನಡೆಸಿದ್ದರು.

ಮೊದಲಿಗೆ ಗ್ರೀನ್ ಪಾರ್ಕ್, ಆನಂತರ ವೈಸ್ರಾಯ್ ಬಾರ್ ಅಂಡ್ ರೆಸ್ಟೋರೆಂಟ್, ಹಲಸೂರು ಬಳಿಯ ಆಕ್ಟೀವ್ ಎಸ್ಟೇಟ್ಸ್, ಸುದ್ದೆಗುಂಟೆ ಪಾಳ್ಯದ ನೇತ್ರಾವತಿ ಎಂಟರ್ಪ್ರೈಸಸ್ ಬಳಿ ಯತ್ನ ನಡೆಸಲಾಗಿತ್ತು. 2007ರ ಫೆಬ್ರವರಿ 15ರಂದು ಆನಂದ್ ಮತ್ತು ವಿಜಿ ಎಂಬುವರು ಶಬ್ನಂ ಡೆವಲಪರ್ಸ್ ಬಳಿ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಅಲ್ಲಿನ ಉದ್ಯೋಗಿಗಳಾದ ರವಿ ಮತ್ತು ಶೈಲಜಾ ಎಂಬುವರು ಸಾವನ್ನಪ್ಪಿದ್ದರು. ಈ ಆರೋಪ ಆಧರಿಸಿ ಅಕ್ರಂ ಪಾಷಾ ಎಂಬುವರು ನೀಡಿದ ದೂರಿನ ಮೇರೆಗೆ ರವಿ ಪೂಜಾರಿ ಸೇರಿದಂತೆ 18 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.

ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ದಿಲ್ ರಾಜ್ ಜೂಡ್ ರೋಹಿತ್ ಸೀಕ್ವೈರಾ, ಹೈಕೋರ್ಟ್ ಆದೇಶದ ಹೊರತಾಗಿಯೂ ವಿಚಾರಣೆ ಆರಂಭವಾಗಿಲ್ಲ. ನ್ಯಾಯಾಲಯವು ಆದೇಶ ಮಾಡಿ ಎರಡೂವರೆ ವರ್ಷವಾಗಿದ್ದರೂ ಒಂದೇ ಒಂದು ಸಾಕ್ಷಿಯ ವಿಚಾರಣೆ ನಡೆಸಲಾಗಿಲ್ಲ. ವಿಚಾರಣೆ ಈ ಪರಿಯಲ್ಲಿ ವಿಳಂಬವಾದರೆ ಸಾರ್ವಜನಿಕರು ನ್ಯಾಯಾಂಗದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ವಿವರಿಸಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರಿ ಅಭಿಯೋಜಕರು ಆರೋಪಿ ರವಿ ಪೂಜಾರಿಯನ್ನು ಸೆನೆಗಲ್​ನಿಂದ ಹಸ್ತಾಂತರ ಮಾಡಲಾಗಿದ್ದು, ಕರ್ನಾಟಕದಲ್ಲಿ ಆತನ ವಿರುದ್ಧ 107 ಪ್ರಕರಣ ಬಾಕಿ ಇದ್ದು, ಮಹಾರಾಷ್ಟ್ರದಲ್ಲಿ 20, ಕೇರಳ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿವೆ. ತನಿಖೆಗಾಗಿ ಆರೋಪಿಯನ್ನು ಬೇರೆ ಬೇರೆ ರಾಜ್ಯಗಳಿಗೆ ಕರೆದೊಯ್ಯುತ್ತಿರುವುದರಿಂದ ಹಾಲಿ ಪ್ರಕರಣದ ವಿಚಾರಣೆಯಲ್ಲಿ ತಡವಾಗಿದೆ ಎಂದು ವಿವರಿಸಿದರು. ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ಜಾಮೀನು ನಿರಾಕರಿಸಿ ಆದೇಶಿಸಿದೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೇ ತನಿಖೆ ನಡೆಸುವಂತಿಲ್ಲ: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.