ETV Bharat / state

ಕನ್ನಡ ಭಾಷಾ ವಿಷಯ ಹೊರತುಪಡಿಸಿ ವಿದ್ಯಾರ್ಥಿಯೊಬ್ಬರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅವಕಾಶ ಕೊಟ್ಟ ಹೈಕೋರ್ಟ್

author img

By

Published : Mar 30, 2023, 8:21 PM IST

ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ಪೀಠ ಅರ್ಜಿಯನ್ನು ವಜಾಗೊಳಿಸಿದೆ.

high-court-allowed-a-student-to-take-sslc-exam-except-kannada-language-subject
ಕನ್ನಡ ಭಾಷಾ ವಿಷಯ ಹೊರತುಪಡಿಸಿ ಓರ್ವ ವಿದ್ಯಾರ್ಥಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅವಕಾಶ ಕೊಟ್ಟ ಹೈಕೋರ್ಟ್

ಬೆಂಗಳೂರು: ನಗರದ ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬರಿಗೆ ಕನ್ನಡ ಭಾಷಾ ವಿಷಯ ಹೊರತು ಪಡಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿದೆ.
ಕನ್ನಡ ಭಾಷಾ ವಿಷಯವನ್ನು ಹೊರತುಪಡಿಸಿ ಹಿಂದಿ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷಾ ವಿಷಯಗಳಲ್ಲಿ ಎಸ್‌ಎಸ್‌ಎಲ್​ಸಿ ಪರೀಕ್ಷೆ ಬರೆಯಲು ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ನ್ಯಾಯಪೀಠ, ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ವಿದ್ಯಾರ್ಥಿಗೆ ನಾಳೆಯಿಂದ (ಮಾ.31 ರಿಂದ) ನಡೆಯುವ ಪರೀಕ್ಷೆಗೆ ಪ್ರವೇಶ ಪತ್ರ ಮತ್ತು ಇತರೆ ಅಗತ್ಯತೆಗಳನ್ನು ಒದಗಿಸಲು ನಿರ್ದೇಶಿಸಿದೆ. ಜತೆಗೆ, ಈ ಸಂಬಂಧ ವಿವರವಾದ ಪ್ರತ್ಯೇಕ ಆದೇಶ ನೀಡುವುದಾಗಿ ನ್ಯಾಯಪೀಠ ತಿಳಿಸಿದೆ.

ವಿಚಾರಣೆ ವೇಳೆ ಮೇಲ್ಮನವಿದಾರರ ಪರ ವಕೀಲರು ವಾದ ಮಂಡಿಸಿ, ರಾಜ್ಯ ಸರ್ಕಾರವು ಕನ್ನಡ ಭಾಷೆ ಕಲಿಕೆಯ ನಿಯಮಗಳು 2017ರಲ್ಲಿ ಪರಿಚಯಿಸಿದ್ದು, ಎಲ್ಲಾ ಶಾಲೆಗಳಲ್ಲಿ ಸಿಬಿಎಸ್​ಸಿ ಮತ್ತು ಐಸಿಎಸ್​ಸಿ ಪಠ್ಯಕ್ರಮಗಳಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಕಡ್ಡಾಯವಾಗಿ ಕಲಿಸಬೇಕು ಎಂಬ ಆದೇಶವಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದನ್ನು ತಿರಸ್ಕರಿಸಿದ ನ್ಯಾಯಪೀಠ ವಿದ್ಯಾರ್ಥಿಯ ನೆರವಿಗೆ ಧಾವಿಸಿದೆ.

ವಿದ್ಯಾರ್ಥಿಯು ಒಂದನೇ ತರಗತಿಯಿಂದ ಈವರೆಗೂ ಕನ್ನಡ ಭಾಷಾ ವಿಷಯವನ್ನು ಅಧ್ಯಯನ ಮಾಡಿಲ್ಲಾ. ಹೀಗಿರುವಾಗಿ ಕನ್ನಡ ಭಾಷಾ ವಿಷಯದಲ್ಲಿ ಪರೀಕ್ಷೆ ಬರೆಯಬೇಕು ಎಂದು ನಿರೀಕ್ಷಿಸುವುದು ಕೆಟ್ಟ ವರ್ತನೆಯಾಗಿದೆ. ಅಲ್ಲದೆ, ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಪರೀಕ್ಷೆಗೆ ಅವಕಾಶ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ ಏನು?: ರವಿಶಂಕರ್ ಎಂಬುವರು ತನ್ನ ಮಗನ ಪ್ರಾಥಮಿಕ ಶಿಕ್ಷಣ ಕರ್ನಾಟಕದ ಹೊರ ಭಾಗಗಳಲ್ಲಿ ನಡೆದಿದೆ. ಹೀಗಾಗಿ ಅವರಿಗೆ ಕನ್ನಡ ಭಾಷಾ ಜ್ಞಾನವಿಲ್ಲ. ಆದ್ದರಿಂದ ಕನ್ನಡ ಹೊರತುಪಡಿಸಿ ಇತರೆ ಭಾಷಾ ವಿಷಯಗಳಲ್ಲಿ (ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್)ಲ್ಲಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ಅಲ್ಲದೆ, ಮಗ ಅಧ್ಯಯನ ಮಾಡಿರುವ ವಿದ್ಯಾಭಾರತಿ ಇಂಗ್ಲಿಷ್ ಸ್ಕೂಲ್ ಪ್ರಾರಂಭದಲ್ಲಿ ಕನ್ನಡ ಹೊರತುಪಡಿಸಿ ಇತರೆ ಭಾಷಾ ವಿಷಯಗಳನ್ನು ಬೋಧನೆ ಮಾಡಿದೆ. ಇದೀಗ ಕನ್ನಡ ಪರೀಕ್ಷೆ ಬರೆಯಲೇಬೇಕು ಎಂದು ತಿಳಿಸಿದೆ. ಆದರೆ, ನಮ್ಮ ಪುತ್ರನಿಗೆ ಕನ್ನಡ ಭಾಷಾ ಜ್ಞಾನ ಇಲ್ಲ. ಹೀಗಾಗಿ ಕನ್ನಡ ಹೊರತುಪಡಿಸಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ಈ ಆರ್ಜಿಯನ್ನು ಪುರಸ್ಕರಿಸಿದ್ದ ಏಕಸದಸ್ಯ ಪೀಠ, ರಾಜ್ಯ ಸರ್ಕಾರವೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಅರ್ಜಿದಾರರ ಮಗ ವಿದ್ಯಾಭ್ಯಾಸ ಮಾಡಿರುವ ಶಾಲೆಯ (ವಿದ್ಯಾಭಾರತಿ ಇಂಗ್ಲೀಷ್ ಸ್ಕೂಲ್) ವಿರುದ್ಧ ಕ್ರಮ ಕೈಗೊಳ್ಳಲು ಸ್ವಾತಂತ್ರ್ಯರು ಎಂದು ತಿಳಿಸಿತ್ತು.

ಇದನ್ನೂ ಓದಿ: 2ಸಿಗೆ ಒಕ್ಕಲಿಗ, 2ಡಿಗೆ ಲಿಂಗಾಯತ, ಇಡ್ಲ್ಯೂಎಸ್​ಗೆ ಮುಸ್ಲಿಂ: ಒಬಿಸಿ ಮೀಸಲಾತಿ ಮರು ವರ್ಗೀಕರಿಸಿ ಸರ್ಕಾರದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.