ETV Bharat / state

ಭ್ರಷ್ಟಾಚಾರ ಆರೋಪ ಮಾಡಿ ಪ್ರಚಾರದಲ್ಲಿರಲು ಬಯಸಿದರೆ ಏನು ಮಾಡೋಕಾಗುತ್ತೆ: ಸಂಸದ ಡಿ.ಕೆ.ಸುರೇಶ್

author img

By

Published : Aug 16, 2023, 2:10 PM IST

ಯಾವುದೇ ಅಧಿಕಾರ ಇಲ್ಲದೇ ಇರುವಾಗಲೇ ಬದುಕಿದ್ದೇವೆ ಎಂದು ತೋರಿಸೋದಕ್ಕೆ ಇದನ್ನು ಮಾಡಬೇಕಷ್ಟೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್​ಡಿಕೆ ಆರೋಪಕ್ಕೆ ಸಂಸದ ಡಿ ಕೆ ಸುರೇಶ್ ತಿರುಗೇಟು ನೀಡಿದ್ದಾರೆ.

MP D K Suresh
ಸಂಸದ ಡಿ.ಕೆ.ಸುರೇಶ್

ಬೆಂಗಳೂರು: ಭ್ರಷ್ಟಾಚಾರ ಆರೋಪ ಮಾಡಿ ಪ್ರಚಾರದಲ್ಲಿ ಇರಬೇಕು ಅಂತ ಕೆಲವರು ಬಯಸಿದರೆ ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಸಂಸದ ಡಿ ಕೆ ಸುರೇಶ್ ಅವರು ಹೆಚ್​ ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಕೆಲಸ ಮಾಡಿದವರಿಗೆ ಹಣ ಸಿಗುತ್ತದೆ. ಎರಡೂವರೆ ವರ್ಷದಿಂದ ಬಿಲ್ ಬಾಕಿ ಇದೆ. ಶೇ 40ರಷ್ಟು ಕಮಿಷನ್, ಕಳಪೆ ಕಾಮಗಾರಿ ಆರೋಪ ಇದೆ. ತನಿಖೆ ಮಾಡಿ ಹಣ ಬಿಡುಗಡೆ ಮಾಡ್ತೀವಿ ಎಂದು ಸಿಎಂ, ಡಿಸಿಎಂ ಹೇಳಿದ್ದಾರೆ. ಆರೋಪ ಮಾಡಿದರೆ ಪ್ರಚಾರದಲ್ಲಿ ಇರ್ತೀವಿ ಅಂದುಕೊಂಡ್ರೆ ನಾವೇನು ಮಾಡೋಕೆ ಆಗಲ್ಲ. ಕೇವಲ ಪ್ರಚಾರಕ್ಕಾಗಿ ಆರೋಪ ಮಾಡೋದಲ್ಲ. ಈಗಾಗಲೇ ನಾಲ್ಕು ತಂಡ ರಚನೆ ಮಾಡಲಾಗಿದೆ. ಸಣ್ಣ ಕಾಂಟ್ರಾಕ್ಟರ್​ಗಳಿಗೆ ತೊಂದರೆ ಆಗೋದು ಬೇಡ ಅಂತಾ ಹಣ ಬಿಡುಗಡೆ ಮಾಡಲಾಗ್ತಿದೆ ಎಂದು ತಿಳಿಸಿದರು.

ರಾಜಕಾರಣದಲ್ಲಿ ಕೆಲಸ ಇಲ್ಲದೇ ಇದ್ದಾಗ ಮಾತಾಡ್ತಾರೆ. ಮಾಧ್ಯಮದವರ ಗಮನ ಸೆಳೆಯಲು ಆರೋಪ ಮಾಡ್ತಾರೆ. ನಾವು ಬದುಕಿದ್ದೇವೆ ಅಂತಾ ತೋರಿಸಿಕೊಳ್ಳಬೇಕಲ್ವಾ ಅದಕ್ಕೆ. ಚೆಲುವರಾಯಸ್ವಾಮಿ ದೂರು ಕೊಟ್ಟು ತನಿಖೆಗೆ ಹೇಳಿದ್ದಾರೆ. ಸರ್ಕಾರದ ಗಮನ ಡೈವರ್ಷನ್ ಮಾಡಲು ಮಾಡ್ತಿದ್ದಾರೆ‌. ಅಕ್ಕಿ ವಿಚಾರದಲ್ಲಿ ಬಾಯಿಬಾಯಿ ಬಡ್ಕೊಂಡ್ರು. ಬಸ್, ಕರೆಂಟ್ ಎಲ್ಲ ಕೊಟ್ಟೆವು, ಪಾಪ ಇನ್ನೇನು ಮಾಡ್ಬೇಕು ಅವರು. ಆರೋಪ ಮಾಡಿ ಓಡಿ ಹೋಗುವವರನ್ನು ಬಹಳ ಮಂದಿಯನ್ನು ನೋಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪಗಳಿಗೆ ಡಿ ಕೆ ಸುರೇಶ್ ತಿರುಗೇಟು ನೀಡಿದರು.

ನೀರಾವರಿ, ಪಿಡಬ್ಲ್ಯೂಡಿ ಸೇರಿ ಯಾವ ಇಲಾಖೆಯಲ್ಲೂ ಹಣ ಕೊಟ್ಟಿಲ್ಲ. ಗುತ್ತಿಗೆದಾರರನ್ನು ರಾಜಕೀಯಕ್ಕೆ ಬಳಸಿಕೊಂಡರೂ ತಪ್ಪೇನಿಲ್ಲ. ಅವರು ರಾಜಕಾರಣಕ್ಕೇ ಇರುವಾಗ ಬಳಸಿಕೊಳ್ಳುತ್ತಿದ್ದಾರೆ. ಈಗ ಕ್ಷೇತ್ರಕ್ಕೆ ಹೋಗಲು ಆಗುವುದಿಲ್ಲ, ಅವರು ಇನ್ನು ನಾಲ್ಕು ವರ್ಷ ಬಿಟ್ಟೇ ಕ್ಷೇತ್ರಕ್ಕೆ ಹೋಗುವುದು. ಇಲ್ಲಿಯೇ ಇದ್ದು ಏನಾದರೂ ಮಾಡಬೇಕಲ್ಲ ಅವರು?. ಕೆಲಸ ಇಲ್ಲದಾಗ ರಾಜಕೀಯ ಮಾಡಲೇಬೇಕಲ್ಲ. ಹೀಗೇ ಬದುಕಬೇಕಲ್ಲ ಅವರು ಅದಕ್ಕಾಗಿಯೇ ಆರೋಪ ಮಾಡ್ತಿದ್ದಾರೆ ಎಂದು ತಿಳಿಸಿದರು.

ಯಾರೇ ಬಂದರೂ ಸ್ವಾಗತ: ಅನ್ಯ ಪಕ್ಷದವರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ. ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ ಅಥಾವ ಬೇಡವಾ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪ್ರಾಥಮಿಕವಾಗಿ ನನಗೆ ಯಾವ ವಿಚಾರವೂ ಗೊತ್ತಿಲ್ಲ. ನಾನು ಕ್ಷೇತ್ರದ ಕಡೆ ಹೆಚ್ಚು ಒತ್ತು ಕೊಡುತ್ತಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.

ಸುಧಾಮ್ ದಾಸ್ ಹೆಸರು ನಾಮನಿರ್ದೇಶನಕ್ಕೆ ವಿರೋಧದ ವಿಚಾರವಾಗಿ ಮಾತನಾಡಿದ ಅವರು, ನನ್ನ ಹೆಸರಿಗೂ ವಿರೋಧವಿದೆ‌, ಏನು ಮಾಡಲು ಆಗುತ್ತೆ. ಪಕ್ಷ ತೀರ್ಮಾನ ಮಾಡಿದೆ ಎಂದು ಸುಧಾಮ್ ದಾಸ್ ಪರ ಡಿಕೆ ಸುರೇಶ್ ಬ್ಯಾಟಿಂಗ್ ಮಾಡಿದರು.

ಲೋಕಸಭೆ ಎಲೆಕ್ಷನ್ ಬಗ್ಗೆ ವರಿಷ್ಠರು ಸಭೆ ನಡೆಸಿದ್ದಾರೆ. ರಾಜ್ಯದ ಎಲ್ಲ ಮಂತ್ರಿ, ನಾಯಕರಿಗೆ ತಯಾರಿ ಮಾಡಿಕೊಳ್ಳಲು ಸೂಚನೆ ಕೊಟ್ಟಿದ್ದಾರೆ. ಮುಂದೆ ಸರ್ಕಾರ ಯಾವ ರೀತಿ ನಡೆದುಕೊಂಡು ಹೋಗಬೇಕು. ಅಭ್ಯರ್ಥಿ ಆಯ್ಕೆ ಮಾನದಂಡ ಹೇಗಿರಬೇಕು ಎಂದು ಹೇಳಿದ್ದಾರೆ. ಅಭ್ಯರ್ಥಿ ಆಯ್ಕೆ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ ಎಂದರು.

ಇದನ್ನೂ ಓದಿ: ಚಲುವರಾಯಸ್ವಾಮಿ ಬ್ರೈನ್ ಮ್ಯಾಪಿಂಗ್​ ಮಾಡಿದರೆ ಭ್ರಷ್ಟಾಚಾರದ ಸತ್ಯ ಬಯಲಾಗುತ್ತದೆ: ಮಾಜಿ ಶಾಸಕ ಸುರೇಶ್ ಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.