ETV Bharat / state

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಡಿಕೆ ಶಿವಕುಮಾರ್​ ವಿರುದ್ಧದ ತನಿಖೆಗೆ ನೀಡಿದ್ದ ತಡೆ ವಿಸ್ತರಣೆ

author img

By

Published : Jun 2, 2023, 8:26 PM IST

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಿಸಿದೆ.

hc-extends-stay-on-cbi-inquiry-against-dk-shivakumar-in-disproportionate-assets-case
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ

ಬೆಂಗಳೂರು : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಣೆ ಮಾಡಿ ಆದೇಶಿದೆ. ಸಿಬಿಐ ತನಿಖೆ ರದ್ದು ಕೋರಿ ಪ್ರಶ್ನಿಸಿ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಶುಕ್ರವಾರ ಈ ಆದೇಶ ಮಾಡಿದೆ.

ಈ ನಡುವೆ ಅರ್ಜಿಯನ್ನು ತಮ್ಮ ಪೀಠ ವಿಚಾರಣೆ ನಡೆಸಬೇಕೇ? ಅಥವಾ ಮತ್ತೊಂದು ನ್ಯಾಯಪೀಠ ವಿಚಾರಣೆ ನಡೆಸಬೇಕೇ? ಎಂಬ ಬಗ್ಗೆ ಸೂಕ್ತ ಸೂಚನೆ ನೀಡುವ ಸಲುವಾಗಿ ಅರ್ಜಿ ಕಡತವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದಿಡುವಂತೆ ರಿಜಿಸ್ಟ್ರಾರ್​​ ಜನರಲ್​ಗೆ ನ್ಯಾಯಪೀಠ ಸೂಚನೆ ನೀಡಿದೆ.

ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್ ಅವರು ಹಾಜರಾಗಿ, ರಜಾಕಾಲದ ಮುನ್ನ ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರ ಪೀಠ ವಿಚಾರಣೆ ನಡೆಸಿತ್ತು. ರಾಜಾಕಾಲದ ಮುಗಿದ ನಂತರ ಮೇ 27ರಂದು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಅದೇ ಪೀಠದ ಮುಂದೆ ಮೆಮೋ ಸಲ್ಲಿಸಿ ಕೋರಲಾಗಿದೆ.

ಆದರೆ, ರಜಾಕಾಲದ ನಂತರ ಪ್ರಕರಣಗಳ ವಿಚಾರಣಾ ಪಟ್ಟಿಯ ರೋಸ್ಟರ್ (ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಪೀಠ) ಬದಲಾಗಿದೆ. ರೋಸ್ಟರ್ ಪ್ರಕಾರ ಅರ್ಜಿ ತಮ್ಮ ಮುಂದೆ ವಿಚಾರಣೆಗೆ ಬರುವುದಿಲ್ಲ. ಅರ್ಜಿ ವಿಚಾರಣೆಗಾಗಿ ಸಂಬಂಧಪಟ್ಟ ನ್ಯಾಯಪೀಠವನ್ನು ಕೋರಬಹುದು ಎಂಬುದಾಗಿ ನ್ಯಾ. ನಟರಾಜನ್ ತಿಳಿಸಿದ್ದಾರೆ. ರೋಸ್ಟರ್ ಪ್ರಕಾರ ಅರ್ಜಿ ನಿಮ್ಮ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು, ಹಾಗಾಗಿ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ನ್ಯಾ. ನಾಗಪ್ರಸನ್ನ ಅವರನ್ನು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಮತ್ತೊಂದು ನ್ಯಾಯಪೀಠ (ನ್ಯಾ.ಕೆ. ನಟರಾಜನ್ ಅವರ) ಅರ್ಜಿಯನ್ನು ಭಾಗಶಃ ವಿಚಾರಣೆ ನಡೆಸಿದೆ. ಇಂತಹ ಸಂದಭದಲ್ಲಿ ಅರ್ಜಿಯನ್ನು ತಮ್ಮ ಪೀಠ ವಿಚಾರಣೆ ನಡೆಸಬೇಕೇ ಅಥವಾ ಮತ್ತೊಂದು ನ್ಯಾಯಪೀಠ ವಿಚಾರಣೆ ನಡೆಸುವುದು ಸೂಕ್ತವೇ ಎಂಬ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಅಗತ್ಯ ಸೂಚನೆ ನೀಡಲಿ ಎಂದು ತಿಳಿಸಿತು. ನಂತರ ಅರ್ಜಿಯ ಕಡತವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದಿಟ್ಟು, ಯಾವ ಪೀಠ ವಿಚಾರಣೆ ನಡೆಸಬೇಕು ಎಂಬ ಬಗ್ಗೆ ಸೂಚನೆ ಪಡೆದು ತಿಳಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ ಏನು? : ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ವಿವಿಧ ಸೆಕ್ಷನ್‌ಗಳ ಅಡಿ ಸಿಬಿಐ 2020ರ ಅಕ್ಟೋಬರ್​ 3ರಂದು ಡಿ.ಕೆ. ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಸಿಬಿಐ ದಾಖಲಿಸಿರುವ ಈ ಎಫ್‌ಐಆರ್ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕು ಎಂದು ಕೋರಿ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಿಬಿಐ ತನಿಖೆಗೆ 2023ರ ಫೆಬ್ರವರಿ 10ರಂದು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದೇ ವೇಳೆ ಸಿಬಿಐ ತನಿಖೆಗೆ ಅನುಮತಿ ನೀಡಿರುವ ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಶಿವಕುಮಾರ್ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿಗಳ ವಿಚಾರಣೆಯನ್ನು ಏಪ್ರಿಲ್​ 13ಕ್ಕೆ ಹೈಕೋರ್ಟ್ ನಿಗದಿಪಡಿಸಿದೆ.

ಇದನ್ನೂ ಓದಿ: ಫೆಮಾ ಕಾಯಿದೆ ಸೆಕ್ಷನ್ 37ಎ ಸಿಂಧುತ್ವ ಪ್ರಶ್ನಿಸಿದ್ದ ಶಿಯೋಮಿ ಅರ್ಜಿ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.