ETV Bharat / state

Twitter: ಖಾತೆಗಳ ರದ್ದು ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್... ಟ್ವಿಟರ್ ಸಂಸ್ಥೆಗೆ 50 ಲಕ್ಷ ರೂ ದಂಡ

author img

By

Published : Jun 30, 2023, 12:12 PM IST

Updated : Jun 30, 2023, 12:50 PM IST

ತನ್ನ ಗ್ರಾಹಕರ ಖಾತೆಗಳ ನಿರ್ಬಂಧಿಸಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿದ್ದ ಟ್ವಿಟರ್​.

High Court and Twitter
ಹೈಕೋರ್ಟ್​ ಮತ್ತು ಟ್ವಿಟರ್​

ಬೆಂಗಳೂರು: ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಲವು ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಅಲ್ಲದೆ, ಟ್ವಿಟರ್ ಸಂಸ್ಥೆಗೆ 50 ಲಕ್ಷ ದಂಡ ವಿಧಿಸಿದ್ದು, ಮುಂದಿನ 45 ದಿನಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ತಪ್ಪಿದಲ್ಲಿ ಪ್ರತಿ ದಿನಕ್ಕೆ 5 ಸಾವಿರ ದಂತೆ ಹೆಚ್ಚುವರಿ ಪಾವತಿ ಮಾಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.

ತನ್ನ ಗ್ರಾಹಕರ ಖಾತೆಗಳ ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಟ್ವಿಟರ್ ಐಎನ್‌ಸಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ಕಾಯ್ದಿರಿಸಿದ್ದ ಆದೇಶವನ್ನು ಇಂದು (ಶುಕ್ರವಾರ) ಪ್ರಕಟ ಮಾಡಿದೆ. ಇದೇ ಸಂದರ್ಭದಲ್ಲಿ ಆದೇಶಕ್ಕೆ ತಡೆ ನೀಡುವಂತೆ ಟ್ವಿಟರ್ ಪರ ವಕೀಲರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.

ಅಲ್ಲದೆ, ಟ್ವಿಟರ್ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಎಂಟು ಪ್ರಶ್ನೆಗಳನ್ನು ರೂಪಿಸಿದ್ದು, ಅದರಲ್ಲಿ ವಿದೇಶಿ ಕಂಪೆನಿ ಭಾರತದಲ್ಲಿ ಅರ್ಜಿ ಸಲ್ಲಿಸಬಹುದೇ ಎಂಬ ಒಂದು ಪ್ರಶ್ನೆ ಮಾತ್ರ ಅರ್ಜಿದಾರರ ಪರವಾಗಿದೆ. ಇನ್ನುಳಿದಂತೆ ಎಲ್ಲ ಪ್ರಶ್ನೆಗಳು ಟ್ವಿಟರ್‌ಗೆ ವಿರುದ್ಧವಾಗಿದೆ. ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರದ ಹತ್ತು ನಿರ್ಬಂಧ ಆದೇಶ ಮತ್ತು 2021ರ ಫೆಬ್ರವರಿಯಿಂದ 2022ರ ಫೆಬ್ರವರಿಯ ನಡುವೆ 39 ಯುಆರ್‌ಎಲ್‌ಗಳನ್ನು ತೆಗೆದು ಹಾಕುವಂತೆ ಟ್ವಿಟರ್‌ಗೆ ನಿರ್ದೇಶಿಸಿತ್ತು. ಒಟ್ಟು 1,474 ಖಾತೆಗಳು ಮತ್ತು 175 ಟ್ವಿಟರ್​ ಯುಆರ್​ಎಲ್​ಗಳ ಪೈಕಿ 39 ಯುಆರ್‌ಎಲ್‌ಗಳನ್ನು ಮಾತ್ರ ನಿರ್ಬಂಧಿಸಿರುವ ಆದೇಶವನ್ನು ಮಾತ್ರ ಟ್ವಿಟರ್ ಅರ್ಜಿಯಲ್ಲಿ ಪ್ರಶ್ನಿಸಿತ್ತು. ಕೇಂದ್ರದ ಆದೇಶ ಪಾಲಿಸದೇ ಇದ್ದಕ್ಕಿದ್ದಂತೇ ಟ್ವಿಟರ್ ನ್ಯಾಯಾಲಯದ ಕದ ತಟ್ಟಿದೆ. ಟ್ವಿಟರ್ ಬಿಲಿಯನ್ ಡಾಲರ್ ಕಂಪೆನಿಯಾಗಿದ್ದು, ರೈತರು, ಕಾರ್ಮಿಕರಂತಲ್ಲ. ಹೀಗಾಗಿ ದಂಡ ವಿಧಿಸಿರುವುದಾಗಿ ಪೀಠ ತಿಳಿಸಿದೆ.

ಪ್ರಕರಣದ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಮನು ಕುಲಕರ್ಣಿ, ಸಂವಿಧಾನದ 226ನೇ ವಿಧಿಯು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಗೆ ಯಾವುದೇ ಸೀಮಿತವಿಲ್ಲ. ಹೈಕೋರ್ಟ್‌ನಲ್ಲಿ ತನ್ನ ಹಕ್ಕುಗಳ ಸ್ಥಾಪನೆಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಸಂವಿಧಾನದ ಅಡಿ ದೊರೆತಿರುವ 14ನೇ ವಿಧಿಯ ಅಡಿ ಹಕ್ಕು ಕೇಳಬಹುದಾಗಿದೆ. ಹೀಗಾಗಿ, 226ನೇ ವಿಧಿಯಡಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಬಂಧ ವಿಧಿಸಲಾಗಿಲ್ಲ.

ಅಲ್ಲದೆ, ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸುವ ಆದೇಶಕ್ಕೆ ಸರ್ಕಾರ ಸೂಕ್ತ ಕಾರಣಗಳನ್ನು ನೀಡಿದರೆ ನಿರ್ದಿಷ್ಟ ವ್ಯಕ್ತಿಗಳಿಗೆ ಹೈಕೋರ್ಟ್ ಮುಂದೆ ಹೇಗೆ ಅದನ್ನು ಪ್ರಶ್ನಿಸಬೇಕು ಎಂಬುದರ ಜ್ಞಾನ ದೊರೆಯುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಸಕಾರಣ ನೀಡದೆ ಸ್ವೇಚ್ಛೆಯ ನಿರ್ಧಾರ ಕೈಗೊಂಡಿದ್ದು, ವೈಯಕ್ತಿಕವಾಗಿ ಕಾರಣ ನೀಡದೆ ಖಾತೆ ರದ್ದು ಪಡಿಸಿದ್ದಾರೆ. ಹೀಗಾಗಿ ಟ್ವಿಟರ್ ಸಂಸ್ಥೆ ಅರ್ಜಿ ಸಲ್ಲಿಸಿದೆ. ಅದನ್ನು ಪರಿಗಣಿಸಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ್ದ ಸಹಾಯಕ ಸಾಲಿಸಿಟರ್ ಜನರಲ್ ಆರ್. ಶಂಕರನಾರಾಯಣ್, ಟ್ವಿಟರ್ ವಿದೇಶಿ ಕಾರ್ಪೊರೇಟ್ ಸಂಸ್ಥೆಯಾಗಿರುವುದರಿಂದ ಸಂವಿಧಾನದ 19ನೇ ವಿಧಿಯಡಿ ಪರಿಹಾರ ಪಡೆಯಲು ಅರ್ಹವಾಗಿಲ್ಲ. 14ನೇ ವಿಧಿಯಡಿ ಯಾವುದೇ ಸ್ವೇಚ್ಛಾಚಾರ ನಡೆದಿಲ್ಲ ಮತ್ತು ಐಟಿ ನಿಯಮ 69 (ಎ) ಅನ್ನು ಸೂಕ್ತವಾದ ರೀತಿಯಲ್ಲಿ ಪಾಲಿಸಲಾಗಿದೆ. ಟ್ವಿಟರ್ ಖಾತೆ ಹೊಂದಿರುವವರಿಗೆ ನೋಟಿಸ್ ನೀಡದಿರುವುದು ಇಡೀ ಪ್ರಕ್ರಿಯೆಯನ್ನು ದುರ್ಬಲಗೊಳಿಸುವುದಿಲ್ಲ. ಹೀಗಾಗಿ, ಯಾವುದೇ ರೀತಿಯ ಪರಿಹಾರ ಪಡೆಯಲು ಟ್ವಿಟರ್ ಅರ್ಹವಾಗಿಲ್ಲ.

ಮಾಹಿತಿ ತಂತ್ರಜ್ಞಾನ ನಿಯಮ 2021ರ ಅಡಿ ಟ್ವಿಟರ್ ಪ್ರಮುಖ ಸಾಮಾಜಿಕ ಮಧ್ಯಸ್ಥಿಕೆ ಮಾಧ್ಯಮವಾಗಿದ್ದು, ನಿಯಮ 4ರ ಪ್ರಕಾರ ಹೆಚ್ಚುವರಿ ಕಾರ್ಯತತ್ಪರತೆ ತೋರಬೇಕಿದೆ. ಖಾತೆದಾರರ ಮಾಹಿತಿ ಒದಗಿಸುವುದು ಮಧ್ಯಸ್ಥಿಕೆದಾರರ ಕರ್ತವ್ಯವಾಗಿದೆ. ಸರ್ಕಾರದ ನೋಟಿಸ್‌ಗಳಿಗೆ ಟ್ವಿಟರ್ ಪ್ರತಿಕ್ರಿಯಿಸಿಲ್ಲ. ಈ ಮಧ್ಯೆ, ದುಷ್ಕರ್ಮಿಗಳು ಪ್ರಚೋದನಾಕಾರಿ ಮಾಹಿತಿ ಹಾಕುವುದನ್ನು ಮುಂದುವರಿಸಿದ್ದಾರೆ.

ಅಲ್ಲದೆ, ಭಾರತ ಆಕ್ರಮಿತ ಕಾಶ್ಮೀರದ ಕುರಿತು ಯಾರೋ ಒಬ್ಬರು ಊಹಾತ್ಮಕವಾದ ಪಾಕಿಸ್ತಾನ ಸರ್ಕಾರದ ಹೆಸರಿನಲ್ಲಿ ಟ್ವೀಟ್ ಮಾಡುತ್ತಾರೆ. ಮತ್ತಾರೋ ಪ್ರಭಾಕರನ್ ಹೀರೊ (ಹತರಾದ ಎಲ್‌ಟಿಟಿಇ ಮುಖಂಡ), ಅವರು ಮರಳಿ ಬರುತ್ತಿದ್ದಾರೆ ಎನ್ನುತ್ತಾರೆ. ಇದೆಲ್ಲವೂ ಅಪಾಯಕಾರಿಯಾಗಿದ್ದು, ಗಲಭೆ ಸೃಷ್ಟಿಸಬಹುದು. ಇದರ ಮೇಲೆ ನಿಗಾ ಇಡುವುದು ಸರ್ಕಾರಕ್ಕೆ ಕಷ್ಟವಾಗಿರಲಿದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

ಇದನ್ನೂ ಓದಿ: Twitter ವಿರುದ್ಧ FIR ದಾಖಲಿಸಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

Last Updated : Jun 30, 2023, 12:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.