ETV Bharat / state

ಕೆರೆಗಳ ಬಫರ್ ಝೋನ್ ಸರ್ವೆ ನಡೆಸಿ ಒತ್ತುವರಿ ತೆರವು ಮಾಡಿ: ಪಾಲಿಕೆ, ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

author img

By

Published : Mar 6, 2021, 3:32 PM IST

ಕೆರೆಗಳ ಸುತ್ತ 30 ಮೀಟರ್ ಬಫರ್ ಝೋನ್ ಕಾಯ್ದುಕೊಳ್ಳಬೇಕು ಎಂಬ ನಿಯಮವಿದೆ. ಕೆರೆಗಳನ್ನು ಸರ್ವೆ ಮಾಡಿರುವ ಅಧಿಕಾರಿಗಳು ಇದನ್ನು ಸರಿಯಾಗಿ ಸರ್ವೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿತು. ಅಲ್ಲದೇ ಕೆರೆ ಸುತ್ತಲಿನ ಬಫರ್ ಝೋನ್ ಅನ್ನು ಕಟ್ಟುನಿಟ್ಟಾಗಿ ಸರ್ವೆ ಮಾಡಿ ಗುರುತಿಸುವಂತೆ ನಿರ್ದೇಶಿಸಿದೆ.

High court
ಹೈಕೋರ್ಟ್

ಬೆಂಗಳೂರು: ನಗರದ ಸುಬ್ರಹ್ಮಣ್ಯಪುರ, ಬೇಗೂರು ಮತ್ತು ಕಗ್ಗದಾಸಪುರ ಕೆರೆಗಳ ಜಾಗವನ್ನು ಜಂಟಿಯಾಗಿ ಸರ್ವೆ ನಡೆಸಿ ಬಫರ್ ಝೋನ್ ಗುರುತಿಸಿ, ಬಳಿಕ ಈ ಜಾಗದಲ್ಲಿ ನಡೆದಿರುವ ಎಲ್ಲಾ ರೀತಿಯ ಒತ್ತುವರಿ ತೆರವುಗೊಳಿಸಲು ಕ್ರಮ ಜರುಗಿಸಿ ಎಂದು ರಾಜ್ಯ ಸರ್ಕಾರ ಹಾಗೂ ಬಿಬಿಎಂಗೆ ಹೈಕೋರ್ಟ್ ನಿರ್ದೇಶಿಸಿದೆ.

ನಗರದಲ್ಲಿರುವ ಕೆರೆಗಳ ಸಂರಕ್ಷಣೆ ವಿಚಾರವಾಗಿ ಸಿಟಿಜನ್ ಆ್ಯಕ್ಷನ್ ಫೋರಂ ಮತ್ತಿತರ ಸಂಘಟನೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ನಗರದ ಬೇಗೂರು, ಕಗ್ಗದಾಸಪುರ ಮತ್ತು ಸುಬ್ರಹ್ಮಣ್ಯಪುರ ಕೆರೆ ಪ್ರದೇಶಗಳ ಸರ್ವೆ ನಡೆಸಿರುವ ಹಾಗೂ ಒತ್ತುವರಿಗೆ ಮಾಡಿರುವ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ಈ ವರದಿಗೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು ಸರಿಯಾಗಿ ಸರ್ವೆ ನಡೆಸಿಲ್ಲ ಹಾಗೂ ಒತ್ತುವರಿ ತೆರವು ಮಾಡಿಲ್ಲ ಎಂದರು.

ಇದನ್ನು ಪರಿಗಣಿಸಿದ ಪೀಠ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತರು ಜಂಟಿಯಾಗಿ ಈ ಮೂರು ಕೆರೆಗಳ ಜಾಗವನ್ನು ಸರ್ವೆ ನಡೆಸಿ ಬಫರ್ ಝೋನ್ ಗುರುತಿಸಬೇಕು. ನಂತರ ಬಫರ್ ವಲಯದಲ್ಲಿ ಒತ್ತುವರಿ ಮಾಡಿ ನಿರ್ಮಿಸಿರುವ ರಸ್ತೆ ಹಾಗೂ ಎಲ್ಲ ರೀತಿಯ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಜರುಗಿಸಬೇಕು. ಈ ಕುರಿತ ವರದಿಯನ್ನು 4 ವಾರಗಳಲ್ಲಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.

ಇದೇ ವೇಳೆ, ರಾಜ್ಯದ ಎಲ್ಲ ಕೆರೆಗಳ ಸುತ್ತ 30 ಮೀಟರ್ ಬಫರ್ ಝೋನ್ ಕಾಯ್ದುಕೊಳ್ಳಬೇಕು ಎಂಬ ನಿಯಮವಿದೆ. ಕೆರೆಗಳನ್ನು ಸರ್ವೆ ಮಾಡಿರುವ ಅಧಿಕಾರಿಗಳು ಇದನ್ನು ಸರಿಯಾಗಿ ಸರ್ವೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿತು. ಅಲ್ಲದೇ ಕೆರೆ ಸುತ್ತಲಿನ ಬಫರ್ ಝೋನ್ ಅನ್ನು ಕಟ್ಟುನಿಟ್ಟಾಗಿ ಸರ್ವೆ ಮಾಡಿ ಗುರುತಿಸಿ, ಅದನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿತು.

ಇದೇ ವೇಳೆ, ಸರ್ಕಾರದ ಪರ ವಕೀಲರು ರಾಜ್ಯದ 30 ಜಿಲ್ಲೆಗಳಲ್ಲಿರುವ 37,126 ಕೆರೆಗಳನ್ನು ಸರ್ವೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಪ್ರಸ್ತುತ 14,839 ಕೆರೆಗಳ ಸರ್ವೆ ಮಾಡಲಾಗಿದೆ ಎಂದು ಉತ್ತರಿಸಿದರು.

ಇದನ್ನೂ ಓದಿ: ಪ್ರತಿಭಟನೆ, ರ‍್ಯಾಲಿಗಳಿಂದ ಟ್ರಾಫಿಕ್ ಜಾಮ್​: ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.