ETV Bharat / state

ದಿ. ಮಾದೇಗೌಡರ ಬಗ್ಗೆ ಅವಹೇಳನ : ಜೆಡಿಎಸ್​ನಿಂದ ಶಿವರಾಮೇಗೌಡ ಉಚ್ಚಾಟನೆ

author img

By

Published : Jan 31, 2022, 5:09 PM IST

Updated : Jan 31, 2022, 5:22 PM IST

ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ ದಿ. ಜಿ. ಮಾದೇಗೌಡರ ಬಗ್ಗೆ ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿದ್ದಾರೆ. ನಮಗೆ, ಅವರಿಗೆ ರಾಜಕೀಯ ಬೇರೆ, ಮಾದೇಗೌಡರು ಈಗ ಇಲ್ಲ. ಆದರೆ, ಅವರ ಹೆಸರು ಯಾಕೆ ಎಳೆದು ತಂದಿದ್ದಾರೋ ಗೊತ್ತಿಲ್ಲ. ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ ಎಂದು ಹೆಚ್​ ಡಿ ಕುಮಾರಸ್ವಾಮಿ ಗುಡುಗಿದ್ದರು. ಇದರ ಬೆನ್ನಲ್ಲೇ ಶಿವರಾಮೇಗೌಡರನ್ನು ಜೆಡಿಎಸ್​ನಿಂದ ಉಚ್ಚಾಟನೆ ಮಾಡಲಾಗಿದೆ.

ಶಿವರಾಮೇಗೌಡ ರನ್ನು ಪಕ್ಷದಿಂದ ಉಚ್ಚಾಟಿಸಿದ ಹೆಚ್ ಕೆ ಕುಮಾರಸ್ವಾಮಿ
ಶಿವರಾಮೇಗೌಡ ರನ್ನು ಪಕ್ಷದಿಂದ ಉಚ್ಚಾಟಿಸಿದ ಹೆಚ್ ಕೆ ಕುಮಾರಸ್ವಾಮಿ

ಬೆಂಗಳೂರು : ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ, ಹೋರಾಟಗಾರರಾಗಿದ್ದ ದಿವಂಗತ ಜಿ.ಮಾದೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಲೋಕಸಭೆಯ ಮಾಜಿ ಸದಸ್ಯ ಎಲ್.ಆರ್. ಶಿವರಾಮೇಗೌಡ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಈ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ಅನುಮತಿ ಪಡೆಯಲಾಗಿದ್ದು, ಶಿವರಾಮೇಗೌಡರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರಿಗೆ ಮಾಜಿ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಇಂದು ಮಧ್ಯಾಹ್ನ ಸೂಚನೆ ನೀಡಿದ್ದರು.

ಪಕ್ಷದ ವರಿಷ್ಠರ ಆದೇಶದ ಮೇರೆಗೆ ಎಲ್.ಆರ್. ಶಿವರಾಮೇಗೌಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಜೆಡಿಎಸ್‍ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಒಕ್ಕಲಿಗ ಸಮುದಾಯದ ಹಿರಿಯ ನಾಯಕರು ಹಾಗೂ ಇಡೀ ರಾಜ್ಯವೇ ಗೌರವಿಸುತ್ತಿದ್ದ ಜಿ. ಮಾದೇಗೌಡರಂಥ ಹಿರಿಯರ ಬಗ್ಗೆ ಶಿವರಾಮೇಗೌಡರು ಅಸಭ್ಯವಾಗಿ ಆಡಿಯೋದಲ್ಲಿ ಮಾತನಾಡಿರುವುದು ವೈರಲ್ ಆಗಿತ್ತು. ಇದೇ ವಿಚಾರವಾಗಿ ಮಾಧ್ಯಮಗಳ ಜೊತೆ ಹೆಚ್.ಡಿ. ಕುಮಾರಸ್ವಾಮಿ ಅವರು 'ಮಂಡ್ಯದ ರಾಜಕೀಯದ ಬಗ್ಗೆ ಮಾತನಾಡುತ್ತಾ, ಶಿವರಾಮೇಗೌಡರು ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅಸಭ್ಯವಾಗಿ ಅವರು ಮಾತನಾಡಿರುವ ಮೊಬೈಲ್ ಕರೆಯ ಆಡಿಯೋ ಈಗ ವೈರಲ್ ಆಗಿದೆ. ತಮಗೆ ಸಂಬಂಧವೇ ಇಲ್ಲದ ವಿಷಯಗಳನ್ನು ಅವರು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ, ಮಾದೇಗೌಡರ ಬಗ್ಗೆ ಅಂತಹ ಕೆಳಮಟ್ಟದ ಭಾಷೆ ಬಳಸುವ ಅಗತ್ಯ ಇರಲಿಲ್ಲ 'ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ರು.

ಜೆಡಿಎಸ್​ನಿಂದ ಶಿವರಾಮೇಗೌಡ ಉಚ್ಚಾಟನೆ
ಜೆಡಿಎಸ್​ನಿಂದ ಶಿವರಾಮೇಗೌಡ ಉಚ್ಚಾಟನೆ

ಮಾದೇಗೌಡರಿಗೂ ಹಾಗೂ ನಮ್ಮ ಪಕ್ಷಕ್ಕೂ ರಾಜಕೀಯವಾಗಿ ವಿಭಿನ್ನತೆ ಇತ್ತು ನಿಜ. ಹಾಗೆಂದು ಅವರ ಬಗ್ಗೆ ಅಗೌರವದಿಂದ ನಡೆದುಕೊಳ್ಳುವುದನ್ನು ಒಪ್ಪಲಾಗದು. ಅಲ್ಲದೆ, ಮಾದೇಗೌಡರು ಇಂದು ನಮ್ಮ ನಡುವೆ ಬದುಕಿಲ್ಲ. ದಿವಂಗತ ನಾಯಕರ ಹೆಸರನ್ನು ಶಿವರಾಮೇಗೌಡರು ಯಾಕೆ ತಂದರೋ ಗೊತ್ತಿಲ್ಲ. ಇಂತಹ ಮಾತುಗಳು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೆಚ್​​ಡಿಕೆ ಕಿಡಿಕಾರಿದ್ದರು.

ಪದೇ ಪದೆ ಶಿವರಾಮೇಗೌಡರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇಲ್ಲಿಯವರೆಗೆ ಇಂಥ ಚಾಳಿಯನ್ನು ತಿದ್ದಿಕೊಳ್ಳುತ್ತಾರೆ ಅಂದುಕೊಂಡು ಸುಮ್ಮನಿದ್ದೆವು. ಆದರೆ, ಅದು ಆಗಲಿಲ್ಲ. ಎಲ್ಲಕ್ಕೂ ಒಂದು ಇತಿಮಿತಿ ಇದೆ ಎಂದ ಅವರು, ತಕ್ಷಣವೇ ಅವರ ವಿರುದ್ಧ ಕ್ರಮ ಜರುಗಿಸುವಂತೆ ನಮ್ಮ ಪಕ್ಷದ ಅಧ್ಯಕ್ಷರಿಗೆ ಸೂಚನೆ ಕೊಟ್ಟಿದ್ದೇನೆ. ಅಂತವರು ಪಕ್ಷದಲ್ಲಿ ಇದ್ದರೆ ಶೋಭೆ ತರುವುದಿಲ್ಲ ಎಂದಿದ್ದರು.

ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 31, 2022, 5:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.