ETV Bharat / state

ಕಾವೇರಿ ವಿಚಾರ : ರಾಜ್ಯ ಸರ್ಕಾರ ತನ್ನ ತಲೆ ಮೇಲೆ ತಾನೇ ಚಪ್ಪಡಿ ಎಳೆದುಕೊಂಡು, ಅದೇ ಚಪ್ಪಡಿಯನ್ನು ಕನ್ನಡಿಗರ ಮೇಲೆಯೂ ಎಳೆದಿದೆ- ಕುಮಾರಸ್ವಾಮಿ

author img

By ETV Bharat Karnataka Team

Published : Sep 21, 2023, 5:09 PM IST

ರಾಜ್ಯ ಸರ್ಕಾರಕ್ಕೆ ಜನಹಿತಕ್ಕಿಂತ ರಾಜಕೀಯ ಹಿತವೇ ಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ

ಬೆಂಗಳೂರು : ನೀರಾವರಿ ಬಗ್ಗೆ ಕನಿಷ್ಠ ಜ್ಞಾನ, ತಿಳುವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ. ಸುಪ್ರೀಂಕೋರ್ಟ್ ಆದೇಶ ನಿಜಕ್ಕೂ ದುರದೃಷ್ಟಕರ. ಆದರೆ, ಇಲ್ಲಿ ನ್ಯಾಯಾಲಯವನ್ನು ದೂರುವಂತಿಲ್ಲ. ಹೆಜ್ಜೆಹೆಜ್ಜೆಗೂ ತಪ್ಪು ಮಾಡಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರ. ಈ ಮಾತನ್ನು ನಾನು ಸರ್ವಪಕ್ಷ ಸಭೆಯಲ್ಲೇ ಒತ್ತಿ ಹೇಳಿದ್ದೆ. ಕಾವೇರಿ ಜಲ ನಿಯಂತ್ರಣ ಸಮಿತಿ & ಪ್ರಾಧಿಕಾರದ ನಿರ್ದೇಶನ ಬರುವುದಕ್ಕೂ ಮೊದಲೂ ಹೇಳಿದ್ದೆ. ಹೇಳಿದ ಮಾತನ್ನು ಕೇಳಿಸಿಕೊಳ್ಳುವ ಸೌಜನ್ಯ, ಜನಪರ ಕಾಳಜಿ ಸರ್ಕಾರಕ್ಕೆ ಇರಲೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರಕ್ಕೆ ಜನಹಿತಕ್ಕಿಂತ ರಾಜಕೀಯ ಹಿತವೇ ಮುಖ್ಯವಾಗಿದೆ. ತಮಿಳುನಾಡಿನ ಜೊತೆ ಆ ಪಕ್ಷದ ರಾಜಕೀಯ ಹಿತಾಸಕ್ತಿ ತಳುಕು ಹಾಕಿಕೊಂಡ ಕಾರಣಕ್ಕೆ ಕಾವೇರಿ ಹಿತವನ್ನು ವ್ಯವಸ್ಥಿತವಾಗಿ ಬಲಿ ಕೊಡಲಾಗಿದೆ ಎಂದು ಕಿಡಿಕಾರಿದ್ದಾರೆ.

  • ನೀರಾವರಿ ಬಗ್ಗೆ ಕನಿಷ್ಠ ಜ್ಞಾನ, ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ. ಸುಪ್ರೀಂಕೋರ್ಟ್ ಆದೇಶ ನಿಜಕ್ಕೂ ದುರದೃಷ್ಟಕರ. ಆದರೆ, ಇಲ್ಲಿ ನ್ಯಾಯಾಲಯವನ್ನು ದೂರುವಂತಿಲ್ಲ.

    ಹೆಜ್ಜೆಹೆಜ್ಜೆಗೂ ತಪ್ಪು ಮಾಡಿದ್ದು @INCKarnataka ಸರಕಾರ. ಈ ಮಾತನ್ನು ನಾನು ಸರ್ವಪಕ್ಷ…

    — ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 21, 2023 " class="align-text-top noRightClick twitterSection" data=" ">

ಆ.10ರಂದು ಕಾವೇರಿ ಜಲ ನಿಯಂತ್ರಣ ಸಮಿತಿ ಸಭೆ ನಡೆಯಿತು. ಮರುದಿನ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಸಭೆ ಆಯಿತು. ಮುಂದಿನ 15 ದಿನ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಿ ಎಂದು ಪ್ರಾಧಿಕಾರ ರಾಜ್ಯಕ್ಕೆ ಸೂಚನೆ ನೀಡಿತು. ತಕ್ಷಣವೇ ಸುಪ್ರೀಂಕೋರ್ಟಿಗೆ ತುರ್ತು ಅರ್ಜಿ ಸಲ್ಲಿಸಿ, ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ಸರ್ಕಾರ ಹಾಗೆ ಮಾಡಲೇ ಇಲ್ಲ. ಸುಪ್ರೀಂಕೋರ್ಟ್ ಕಡೆ ಮುಖ ಮಾಡದೆ I.N.D.I.A ಮೈತ್ರಿಕೂಟಕ್ಕೆ ಶಕ್ತಿ ತುಂಬಲು ಪ್ರಾಧಿಕಾರದ ಆದೇಶವನ್ನೇ ನೆಪ ಮಾಡಿಕೊಂಡು ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿತು ಎಂದಿದ್ದಾರೆ.

ತನ್ನ ತಲೆ ಮೇಲೆ ತಾನೇ ಚಪ್ಪಡಿ ಎಳೆದುಕೊಂಡು, ಅದೇ ಚಪ್ಪಡಿಯನ್ನು ಕನ್ನಡಿಗರ ಮೇಲೆಯೂ ಸರ್ಕಾರ ಎಳೆದುಬಿಟ್ಟಿತು. ಸರ್ಕಾರ ಎಸಗಿದ ತಪ್ಪು ಇಷ್ಟೇ ಅಲ್ಲ, ನಿಯಂತ್ರಣ ಸಮಿತಿ & ಪ್ರಾಧಿಕಾರದ ಸಭೆಗಳನ್ನು ಬಹಳ ಲಘುವಾಗಿ ಪರಿಗಣಿಸಿತು. ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಕೊಟ್ಟ ಸಲಹೆಗಳನ್ನೂ ಗಾಳಿಗೆ ತೂರಿತು. ನಮ್ಮ ಸಲಹೆಗೆ ಕವಡೆಕಾಸಿನ ಕಿಮ್ಮತ್ತೂ ಕೊಡದೆ ಕನ್ನಡಿಗರ ಹಿತವನ್ನು ತನ್ನ ರಾಜಕೀಯ ಸ್ವಾರ್ಥಕ್ಕೆ ಬಲಿ ಕೊಟ್ಟಿತು ಎಂದು ಟೀಕಿಸಿದ್ದಾರೆ.

ಕಾವೇರಿ ವಿಷಯ ಕೋರ್ಟಿನಲ್ಲಿ ಬಗೆಹರಿಯುವುದಿಲ್ಲ ಎಂದು ನಾನು ಹೇಳಿದ್ದೆ. ಈಗ ತಮಿಳುನಾಡಿಗೆ ಅನುಕೂಲವಾಗಿದೆ. ನಮಗೆ ಅನ್ಯಾಯವಾಗಿದೆ. ಈ ತಿಕ್ಕಾಟ ಸಾಗುತ್ತಿರುವ ದಿಕ್ಕು ನೋಡಿದರೆ ಒಕ್ಕೂಟ ವ್ಯವಸ್ಥೆಗೆ ಗೌರವ ಸಿಗುವಂತಿಲ್ಲ. ಬಹಳ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ. ರಾಜ್ಯಸಭೆಯಲ್ಲಿ ಹೆಚ್. ಡಿ ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲಿಯೂ ಕಾವೇರಿ ಬಗ್ಗೆ ದನಿ ಎತ್ತಿದರು. ಸಭಾಪತಿಗಳು ಕುಳಿತೇ ಮಾತನಾಡಿ ಎಂದರೂ ಅವರು ಎದ್ದುನಿಂತು ರಾಜ್ಯದ ಪರ ಹಕ್ಕು ಮಂಡಿಸಿದರು. ಆದರೆ, ರಾಜ್ಯದ ಇತರೆ ಸದಸ್ಯರು, ಅದರಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಅವರು ಮೌನವಾಗಿದ್ದರು!. ಈ ಮೌನ ನನಗೆ ಅಚ್ಚರಿ ಉಂಟು ಮಾಡಿದೆ. ಅವರು ಎಐಸಿಸಿ ಅಧ್ಯಕ್ಷರು ಹೌದು. ಆದರೆ, ಕರ್ನಾಟಕದ ಹಿತದ ಬಗ್ಗೆ ಅವರ ನಿಲುವೇನು? ಎಂದು ಹೆಚ್​ಡಿಕೆ ಪ್ರಶ್ನಿಸಿದ್ದಾರೆ.

ಸೆ. 13ರಿಂದ ನಿತ್ಯವೂ 5,000 ಕ್ಯೂಸೆಕ್ ನೀರು ಬಿಡಬೇಕು ಎಂದು ಪ್ರಾಧಿಕಾರ ಆದೇಶ ನೀಡಿದೆ. ಅದನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಕೋರ್ಟ್ ಆದೇಶಕ್ಕೂ ಮೊದಲು ಪ್ರಾಧಿಕಾರ ಹೇಳಿತು ಎಂದು ವಿದ್ಯುತ್ ವೇಗದಲ್ಲಿ ನೀರು ಬಿಟ್ಟ ಸರ್ಕಾರವು; ಈಗ ಸುಪ್ರೀಂಕೋರ್ಟ್ ಹೇಳಿದೆ, ಇನ್ನೇನು ಮಾಡುವುದು ಎಂದು ಕೈ ಚೆಲ್ಲಿದೆ. ಮರು ಪರಿಶೀಲನಾ ಅರ್ಜಿಯನ್ನು ಕೋರ್ಟಿಗೆ ತುರ್ತಾಗಿ ಸಲ್ಲಿಸಬೇಕು ಎಂದು ಹೆಚ್​ಡಿಕೆ ಒತ್ತಾಯಿಸಿದ್ದಾರೆ.

ಪ್ರಾಧಿಕಾರ ಆದೇಶ ಕೊಟ್ಟಷ್ಟು ನೀರನ್ನು ಬಿಡುವಂತೆ ಕಾನೂನು ತಜ್ಞರು ಸಲಹೆ ಮಾಡಿದ್ದರು. ಅಲ್ಲಿಗೆ ಸುಪ್ರೀಂನಲ್ಲಿ ನ್ಯಾಯ ಸಿಗಲಾರದು ಎಂದು ಅವರು ಮೊದಲೇ ಕೈ ಚೆಲ್ಲಿದಂತೆ ಕಾಣುತ್ತದೆ. ಕೋರ್ಟ್ ಆದೇಶ ಬರುವ ತನಕ ನೀರು ಬಿಡಲು ಸಾಧ್ಯ ಇಲ್ಲ ಎಂದು ಸರ್ಕಾರವು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರಕ್ಕೆ ನೇರವಾಗಿ ಹೇಳಬೇಕಿತ್ತು. ಹಾಗೆ ಹೇಳಲಿಲ್ಲ. ಪರಿಣಾಮ, ಈವರೆಗೆ ನಾವು ಸಾಕಷ್ಟು ನೀರು ಹರಿಸಬೇಕಾಯಿತು. ಮುಂದೆಯೂ ಹರಿಸಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ. ಸರ್ಕಾರದ ವಕೀಲರು ಹೇಳಿದಂತೆ ಕೇಳಿ ಜನರ ಹಿತ ಕಡೆಗಣಿಸಿದೆ. ಯಾವ ಕಾರಣಕ್ಕೂ ನೀರು ಬಿಡಬಾರದಿತ್ತು. ಕೋರ್ಟ್ ಆದೇಶಕ್ಕೆ ಕಾದು ಕ್ರಮ ಜರುಗಿಸಬೇಕಿತ್ತು. ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ ವರ್ತಿಸಿದೆ ರಾಜ್ಯ ಸರ್ಕಾರ ಎಂದು ಟೀಕಿಸಿದ್ದಾರೆ.

ವಕೀಲರ ಮಾತುಗಳನ್ನು ಕೇಳಿಕೊಂಡು ನೀರು ಬಿಡುತ್ತಾ ಹೋದರೆ ಅದಕ್ಕೆ ಕೊನೆ ಮೊದಲು ಇರುವುದಿಲ್ಲ. ಹಾಗಾದರೆ ಸರ್ಕಾರ ಅನ್ನೊದು ಯಾಕೆ? ವಿಷಯ ಎಲ್ಲಿ ಶುರುವಾಯಿತೋ ಮತ್ತೆ ಅಲ್ಲಿಗೆ ಬಂದು ನಿಂತಿರುವುದಕ್ಕೆ ಯಾರು ಹೊಣೆ?. ಸರ್ಕಾರ ಅನುಸರಿಸಿದ ವಿಳಂಬ ರಾಜಕಾರಣ ರಾಜ್ಯದ ಹಿತಕ್ಕೆ ಪೆಟ್ಟು ನೀಡಿದೆ. ತಮಿಳುನಾಡು ಸುಪ್ರೀಂ ಕೋರ್ಟ್​ಗೆ ಹೋದ ಕೂಡಲೇ ರಾಜ್ಯವೂ ಮೊರೆ ಹೋಗಬೇಕಿತ್ತು. ಮೀನಾಮೇಷ ಎಣಿಸುತ್ತಾ ತಡ ಮಾಡಿತು. ತಡ ಮಾಡಿದ್ದಕ್ಕೆ ತಕ್ಕ ಶಾಸ್ತಿ ಆಗಿದೆ. ವಿನಾಕಾರಣ ಕನ್ನಡಿಗರಿಗೆ ಶಿಕ್ಷೆ ಆಗಿದೆ.

ಪ್ರಾಧಿಕಾರದ ಆದೇಶ ಬಂದೊಡನೆ ಮಧ್ಯರಾತ್ರಿಯೇ ಸುಪ್ರೀಂ ಕೋರ್ಟ್​ಗೆ ಹೋಗಿ, ನಮ್ಮ ಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ರಾತ್ರೋರಾತ್ರಿ ಪಿಟಿಷನ್ ಹಾಕಬೇಕಿತ್ತು. ಅದನ್ನು ಮಾಡದೇ ನೀರು ಬಿಡುತ್ತಾ ಕೂತಿತು ಸರಕಾರ. ನೀರು ಇಲ್ಲ ಎನ್ನುತ್ತಿದ್ದವರೂ ಈವರೆಗೆ ಹೇಗೆ ಬಿಟ್ಟಿರಿ ಎಂದು ಕೋರ್ಟ್ ಪ್ರಶ್ನೆ ಮಾಡುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಸರ್ಕಾರಕ್ಕೆ ಇರಲಿಲ್ಲ. ಕೆಆರ್​ಎಸ್​ನಲ್ಲಿ ಈಗ ಇರುವುದೇ 20 ಟಿಎಂಸಿಗೂ ಕಡಿಮೆ ನೀರು. 3 ದಿನಕ್ಕೆ ಒಂದು ಟಿಎಂಸಿ ಹರಿದು ಹೋಗುತ್ತದೆ. ದಿನಕ್ಕೆ 5,000 ಕ್ಯೂಸೆಕ್ ಹರಿದರೆ 15 ದಿನಕ್ಕೆ 7 ಟಿಎಂಸಿ ಖಾಲಿ! ಆಗ ಉಳಿಯುವುದು 13 ಟಿಎಂಸಿ!! ಇದರಲ್ಲಿ ಡೆಡ್ ಸ್ಟೋರೇಜ್ 7 ಟಿಎಂಸಿ ಇರಬೇಕು. ಇನ್ನು ಉಳಿಯೋದು ಎಷ್ಟು?. ಬೆಂಗಳೂರಿಗೆ ಇನ್ನೂ 9 ತಿಂಗಳಿಗೆ ಕುಡಿಯಲಿಕ್ಕೆ ಕನಿಷ್ಠ 13 ಟಿಎಂಸಿ ಬೇಕು. ಎಲ್ಲಿಂದ ಬರುತ್ತೆ ಆ ನೀರು?. ಆದೇಶ ಪಾಲಿಸಲು ಕರ್ನಾಟಕ, ಅನುಭವಿಸಲು ತಮಿಳುನಾಡು ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಹೆಚ್​ಡಿಕೆ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸುಪ್ರೀಂನಲ್ಲಿ ಕರ್ನಾಟಕಕ್ಕೆ ಹಿನ್ನಡೆ, ಕಾವೇರಿ ಪ್ರಾಧಿಕಾರದ ಮುಂದೆ ರಾಜ್ಯ ಸರ್ಕಾರ ವಾಸ್ತವ ಸ್ಥಿತಿಯನ್ನು ತಿಳಿಸುವಲ್ಲಿ ವಿಫಲ: ರೈತ ಮುಖಂಡ ನಂಜುಂಡೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.