ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ಹೇರಿಕೆ ಹೇಳಿಕೆಯನ್ನು ಸಮರ್ಥನೆ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ರಾಜ್ಯದ ಆರೋಗ್ಯ ಖಾತೆ ಮಂತ್ರಿ ಡಾ.ಕೆ.ಸುಧಾಕರ್ ಅವರು ಕನ್ನಡ ದ್ರೋಹಿಗಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಹಿಂದಿ ಹೇರಿಕೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ಪರ ಹೇಳಿಕೆ ವಿರೋಧಿಸಿ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಆರ್ಎಸ್ಎಸ್ನ ಹಿಡನ್ ಅಜೆಂಡಾಗಳನ್ನು ಬಲವಂತವಾಗಿ ಹೇರಲು ಮುಂದಾಗಿದೆ. ಅದರಲ್ಲಿ ಈ ಹಿಂದಿ ಹೇರಿಕೆ ಕೂಡ ಒಂದು. ಅದನ್ನು ಬಿಜೆಪಿ ನಾಯಕರು, ಸಚಿವರು ಸಮರ್ಥನೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಇಂದು ಕನ್ನಡದ ಹಾಗೂ ಕನ್ನಡಿಗರ ಅನೇಕ ಸಮಸ್ಯೆಗಳು ನಮ್ಮ ಮುಂದಿವೆ. ಇತ್ತೀಚೆಗೆ ಭಾಷೆ ಸಮಸ್ಯೆ ಶುರುವಾಗಿದೆ. ಅಲ್ಲದೆ, ನಮ್ಮ ನದಿಗಳ ನೀರು ಉಪಯೋಗಿಸುವ ವಿಚಾರದಲ್ಲಿ ನಮ್ಮನ್ನು ಕೇಂದ್ರ ಸರ್ಕಾರ ಲಘುವಾಗಿ ಪರಿಗಣಿಸುತ್ತಿದೆ. ಈಗಾಗಲೇ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದೇ ಹೋದರೆ ನಮ್ಮತನ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಲ್ಲಿನ ಮಂತ್ರಿಗಳು ಕೇಂದ್ರದ ಮಂತ್ರಿಗಳು ಕೇಂದ್ರದ ನೀತಿಯ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಹಾಗಾದರೆ, ಕನ್ನಡದ ಬಗ್ಗೆ ಅವರ ನಿಲುವೇನು?. ಯಾಕೆ ಹಿಂದಿ ಮೇಲೆ ಮೋಹ?. ಕನ್ನಡದ ಮೇಲೆ ಯಾಕೆ ನಿರ್ಲಕ್ಷ್ಯ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು. ಇಂಥ ನಾಯಕರನ್ನು ಕನ್ನಡದ ದ್ರೋಹಿಗಳು ಎನ್ನದೆ ಇನ್ನೇನೆಂದು ಕರೆಯಬೇಕು? ಎಂದು ಅವರು ಕೇಳಿದರು.
ನಮ್ಮ ನಾಡಗೀತೆಯಂತಹ ಗೀತೆಯನ್ನು ಬೇರೆ ಯಾವ ರಾಜ್ಯದಲ್ಲಿ ಕೂಡಾ ಕಾಣಲು ಸಾಧ್ಯವಿಲ್ಲ. ಹಲವಾರು ಪ್ರದೇಶ, ಬಾಷೆಗಳು ಸೇರಿ ಒಕ್ಕೂಟ ರಾಷ್ಟ್ರವಾಗಿದೆ. ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಭಾರತದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಆಗಿರಲಿಲ್ಲ. ಈಗ ಅದನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ ಎಂದು ಹೆಚ್ಡಿಕೆ ಕಿಡಿಕಾರಿದರು.
ಇದನ್ನೂ ಓದಿ: ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ಕನ್ನಡ ಕಡ್ಡಾಯ ತೀರ್ಪು ಪಡೆಯುತ್ತೇವೆ : ಸಚಿವ ಅಶ್ವತ್ಥ್ ನಾರಾಯಣ