ಅಧಿಕಾರಕ್ಕಾಗಿ ಹಾತೊರೆಯುವ ವ್ಯವಸ್ಥೆಗೆ ಬಂದು ನಿಂತಿದ್ದೇವೆ : ಹೆಚ್. ಡಿ ದೇವೇಗೌಡ

author img

By

Published : Oct 11, 2021, 4:21 PM IST

Updated : Oct 11, 2021, 5:01 PM IST

h-d-devegowda

ಅಧಿಕಾರಕ್ಕೆ ಹಾತೊರೆಯುವ ಈ ವ್ಯವಸ್ಥೆಯಲ್ಲಿ ನಾನು ಜೆಪಿ ಹೆಸರು ತಮ್ಮ ಕಚೇರಿಗೆ ಇಟ್ಟಿದ್ದೇನೆ. ಇನ್ನು ಮುಂದಾದರೂ ನಾವೆಲ್ಲ ಯುವ ಪೀಳಿಗೆಗೆ ಜೆಪಿ ಅವರ ನಾಯಕತ್ವದ ಬಗ್ಗೆ ತಿಳಿಸಿ ಅವರ ಹಾದಿಯಲ್ಲಿ ನಡೆಯುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಕರೆ ನೀಡಿದ್ದಾರೆ.

ಬೆಂಗಳೂರು: ಮಹಾತ್ಮ ಗಾಂಧಿ ಅವರು ದೇಶಕ್ಕೆ ಮೊದಲ ಸ್ವಾತಂತ್ರ್ಯ ತಂದು ಕೊಟ್ಟರೆ, ಜಯಪ್ರಕಾಶ್ ನಾರಾಯಣ್ ( ಜೆಪಿ) ಅವರು ಮತ್ತೊಂದು ಹಂತದ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಜೆಪಿ ಅವರು ತಂದುಕೊಟ್ಟ ಮತ್ತೊಂದು ಸ್ವಾತಂತ್ರ್ಯ ಕೂಡ ನಶಿಸಿ ಹೋಗುತ್ತಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡ

ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಏರ್ಪಡಿಸಿದ್ದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗಾಂಧಿಯ ಕಾಂಗ್ರೆಸ್ ಈಗ ಏನಾಗುತ್ತಿದೆ. ಯಾರನ್ನು ನೋಡಿದರೂ ಅಧಿಕಾರ, ಅಧಿಕಾರಕ್ಕಾಗಿ ಹಾತೊರೆಯುವ ವ್ಯವಸ್ಥೆಗೆ ಬಂದು ನಿಂತಿದೆ ಎಂದರು.

ಅಧಿಕಾರಕ್ಕೆ ಹಾತೊರೆಯುವ ಈ ವ್ಯವಸ್ಥೆಯಲ್ಲಿ ನಾನು ಜೆಪಿ ಹೆಸರು ತಮ್ಮ ಕಚೇರಿಗೆ ಇಟ್ಟಿದ್ದೇನೆ. ಇನ್ನು ಮುಂದಾದರೂ ನಾವೆಲ್ಲ ಯುವ ಪೀಳಿಗೆಗೆ ಜೆಪಿ ಅವರ ನಾಯಕತ್ವದ ಬಗ್ಗೆ ತಿಳಿಸಿ ಅವರ ಹಾದಿಯಲ್ಲಿ ನಡೆಯುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.

ಬಿಜೆಪಿ ಸರ್ಕಾರಕ್ಕೆ ಪರೋಕ್ಷ ಟಾಂಗ್ : ಮಹಾತ್ಮ ಗಾಂಧಿ ಅವರು ಅದ್ದೂರಿ ಜೀವನ ಮಾಡಲಿಲ್ಲ. ಕುಟೀರ ಕಟ್ಟಿ ಬಂದವರಿಗೆ ವ್ಯವಸ್ಥೆ ಮಾಡಿದ್ದರು. ತುಂಡು ಪಂಚೆ ಉಟ್ಟು ಸ್ವಾತಂತ್ರ್ಯ ತಂದುಕೊಟ್ಟರು. ನಾನು ಈಗಿನ ರಾಜಕೀಯ ಹಾಗೂ ಆಗ ಇದ್ದ ರಾಜಕೀಯದ ಬಗ್ಗೆ ಕಂಪೇರ್ ಮಾಡುತ್ತೇನೆ. ಅಮೆರಿಕದ ಅಧ್ಯಕ್ಷರಾಗಿದ್ದ ಟ್ರಂಪ್ ಅವರನ್ನು ಕರೆಸಿ ಭಾಷಣ ಮಾಡಿಸಿದ್ದರು ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಅವರಿಗೆ ಕುಟುಕಿದರು.

ನಾನು ಬಿಜೆಪಿ, ಆರ್​ಎಸ್​ಎಸ್​ ಸೇರಿದವನಲ್ಲ. ಅನೇಕರು ತುರ್ತು ಪರಿಸ್ಥಿತಿಗೆ ಒಪ್ಪಿಕೊಂಡಿದ್ದೇವೆ ಅಂತಾ ಆಗ ಬರೆದುಕೊಟ್ಟರು‌. ನಾನು ಆರ್​ಎಸ್​ಎಸ್​ ಬಗ್ಗೆ ಟೀಕೆ ಮಾಡಲ್ಲ. ವಾಸ್ತವಾಂಶ ಹೇಳುತ್ತೇನೆ ಅಷ್ಟೇ ಎಂದು ಪರೋಕ್ಷವಾಗಿ ಟೀಕಿಸಿದರು. 1957 ರಲ್ಲಿ ಜೆಪಿಯವರನ್ನು ಮೊದಲ ಬಾರಿಗೆ ನೋಡಿದೆ. ಅವರು ಸಕ್ರಿಯ ರಾಜಕಾರಣದಲ್ಲಿ ಇದ್ದರು.

ಆಗ ಅವರು ವೈ. ವೀರಪ್ಪ ಎಂಬುವರ ಪರವಾಗಿ ಭಾಷಣ ಮಾಡಲು ನಮ್ಮ ಊರಿಗೆ ಬಂದಿದ್ದರು. ಒಂದು ಸುತ್ತು ಇಡೀ ದೇಶ ನೋಡಬೇಕು ಅಂದುಕೊಂಡು ಕರ್ನಾಟಕಕ್ಕೆ ಬಂದರು. ನಮ್ಮ ಹಳ್ಳಿಗಾಡಿನ ಪ್ರದೇಶ ನೋಡಿ ನೊಂದುಕೊಂಡರು. ಆಗ ಹಲವಾರು ವಿಚಾರ ಚರ್ಚೆ ಮಾಡಿದ್ದೆವು ಎಂದರು.

ಕೆಆರ್​ಎಸ್ ಡ್ಯಾಂ ಕಟ್ಟಿರೋ ಬಗ್ಗೆಯೂ ಕೇಳಿದ್ರು. ಅವರ ಮನಸ್ಸಲ್ಲಿ ಆಳವಾದ ಭಾವನೆ ಇತ್ತು. ಇರುವ ಸಂಪನ್ಮೂಲ ಬಳಸಿಕೊಳ್ಳುವ ಬಗ್ಗೆ ಆಲೋಚನೆ ಇತ್ತು. ಅನಾರೋಗ್ಯ ತುಂಬಾ ಕಾಡಿತ್ತು. ನಾನು ಅವರನ್ನು ನೋಡಲು ಆಸ್ಪತ್ರೆಗೆ ಹೋದೆ. ಅವರ ಸ್ಥಿತಿ ನೋಡಿ ನನಗೆ ಕಣ್ಣೀರು ಬಂತು. ಮಗುವಿನ ಆಕಾರದಂತೆ ಆಗಿದ್ದರು. ಎಮರ್ಜೆನ್ಸಿ ವೇಳೆ ಅವರಿಗೆ ಸರಿಯಾದ ವೈದ್ಯಕೀಯ ಸೌಲಭ್ಯ ಸಿಗಲಿಲ್ಲ ಎಂಬ ಆಪಾದನೆ ಇದೆ ಎಂದು ಹೇಳಿದರು.

ಮತ್ತೊಬ್ಬ ಜಯಪ್ರಕಾಶ್ ನಾರಾಯಣ್ ನೋಡಲು ಸಾಧ್ಯವೇ ಇಲ್ಲ. ಇಂತಹ ವ್ಯಕ್ತಿತ್ವವನ್ನು ಕಾಂಗ್ರೆಸ್ ವಿರೋಧಿಸಿತ್ತು. ಅವರು ಮತ್ತೊಮ್ಮೆ ಬೆಳಕು ಕೊಟ್ಟ ಮಹಾನಾಯಕ ಎಂದು ಹೆಚ್​ಡಿಡಿ ಬಣ್ಣಿಸಿದರು. ಜನಸಂಘ ಅವತ್ತಿನ ಸನ್ನಿವೇಶಕ್ಕೆ ನಮ್ಮ ಜೊತೆ ಸೇರಿಕೊಂಡರು ಅಷ್ಟೆ. ಈಗ ದೇಶ ಆಳುತ್ತಿದ್ದಾರೆ. ಅವರ ಮಾತು ಕಥೆ, ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಹೋಗಲ್ಲ ಎಂದು ಹೇಳಿದರು.

ಟೀಕೆ ಮಾಡಿ ಪಕ್ಷ ಕಟ್ಟಬೇಕಿಲ್ಲ. ಪಕ್ಷ ಕಟ್ಟಲು ಜೆಪಿ ಹಾಕಿರುವ ಅನೇಕ ಕಾರ್ಯಕ್ರಮಗಳು ಇವೆ. ಪಕ್ಷ ಉಳಿಸುವ ಕೆಲಸ ನಾವು ಮಾಡೋಣ. ಬೇರೆಯವರ ಬಗ್ಗೆ ಟೀಕೆ ಮಾಡಿ ಏನು ಪ್ರಯೋಜನ. ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಹೋಗಬೇಕು ಅಂದರೆ ಹೋಗಲಿ. ನಾನೇನು ಮಾಡುವುದಕ್ಕೆ ಆಗುವುದಿಲ್ಲ ಎಂದು ಪಕ್ಷ ಬಿಡಲು ಸಜ್ಜಾಗಿರುವ ಶಾಸಕರಿಗೆ ತಿರುಗೇಟು ನೀಡಿದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್, ಮುಖಂಡರಾದ ಜಫ್ರುಲ್ಲಾ ಖಾನ್, ದಯಾನಂದ್, ಗಂಗಾಧರಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಓದಿ: ಸ್ಮಶಾನಗಳಿಗೆ ಜಾಗ ನೀಡದ ಕಂದಾಯ ಇಲಾಖೆ ವಿರುದ್ಧ ಹೈಕೋರ್ಟ್ ಗರಂ

Last Updated :Oct 11, 2021, 5:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.