ETV Bharat / state

ಪರಿಷತ್ ಕಲಾಪದಲ್ಲಿ ಗುಜರಾತ್ ಗಲಭೆ ಪ್ರಸ್ತಾಪ, ಬಿಜೆಪಿ-ಜೆಡಿಎಸ್ ಜಟಾಪಟಿ

author img

By

Published : Feb 16, 2023, 7:31 PM IST

ವಿಧಾನ ಪರಿಷತ್​ ಕಲಾಪದಲ್ಲಿಂದು ಗುಜರಾತ್​ ಗಲಭೆ ವಿಷಯ ಪ್ರಸ್ತಾಪವಾಗಿದ್ದು, ಆಡಳಿತ-ಪ್ರತಿಪಕ್ಷ ನಾಯಕರ ಜಟಾಪಟಿಗೆ ಕಾರಣವಾಯಿತು.

the-issue-of-gujarat-genocide-was-raised-in-legislative-council
ಪರಿಷತ್ ಕಲಾಪದಲ್ಲಿ ಗುಜರಾತ್ ನರಮೇಧ ವಿಷಯ ಪ್ರಸ್ತಾಪ: ಬಿಜೆಪಿ ಜೆಡಿಎಸ್ ಜಟಾಪಟಿ

ವಿಧಾನ ಪರಿಷತ್ ಕಲಾಪ

ಬೆಂಗಳೂರು: ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಚರ್ಚೆಯಲ್ಲಿಂದು ಗುಜರಾತ್ ಗಲಭೆ ವಿಷಯ ಚರ್ಚೆಗೆ ಬಂತು. ಆಡಳಿತ ಪಕ್ಷದ ಆಕ್ಷೇಪದ ನಡುವೆಯೂ ಜೆಡಿಎಸ್ ಸದಸ್ಯರು ಪಟ್ಟು ಬಿಡದೆ ವಿಷಯ ಪ್ರಸ್ತಾಪಿಸಿ ಕೆಲಕಾಲ ಮಾತಿನ ಚಕಮಕಿಗೆ ವೇದಿಕೆ ಸೃಷ್ಟಿಸಿದರು. ಅಂತಿಮವಾಗಿ ಉಪ ಸಭಾಪತಿ ಪ್ರಾಣೇಶ್ ಮಧ್ಯಪ್ರವೇಶಿಸಿ ವಿಷಯಕ್ಕೆ ತೆರೆ ಎಳೆದರು.

ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಜೆಡಿಎಸ್ ಸದಸ್ಯ ಮಂಜೇಗೌಡ, ಸರ್ಕಾರವನ್ನು ಟೀಕಿಸಿದರು. ಜನೋಪಯೋಗಿ ಯೋಜನೆಗಳಿಲ್ಲ, ಶಿಕ್ಷಣ, ಆರೋಗ್ಯ ಉಚಿತ ಮಾಡುವ ಪ್ರಸ್ತಾಪ ಇಲ್ಲ, ನಾವು ಪಂಚರತ್ನ ಮಾಡುತ್ತಿದ್ದೇವೆ. ಇಂತಹ ಯಾವುದೇ ಅಂಶ ರಾಜ್ಯಪಾಲರ ಭಾಷಣದಲ್ಲಿ ಇಲ್ಲ ಎಂದರು. ಈ ವೇಳೆ ಮಧ್ಯಪ್ರದೇಶ ಮಾಡಿದ ಸರ್ಕಾರಿ ಮುಖ್ಯ ಸಚೇತಕ ನಾರಾಯಣಸ್ವಾಮಿ, ಶಿಕ್ಷಣ, ಆರೋಗ್ಯ ಉಚಿತ ಯೋಜನೆಗಳನ್ನು ನಿಮ್ಮ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಯಾಕೆ ತರಲಿಲ್ಲ. ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ಒಮ್ಮೆ ಬಿಜೆಪಿ ಸಹಕಾರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸಹಕಾರದಲ್ಲಿ ಮುಖ್ಯಮಂತ್ರಿ ಆಗಿದ್ದರಲ್ಲ, ಆಗ ಯಾಕೆ ಇದೆಲ್ಲಾ ಮಾಡಲಿಲ್ಲ? ಎಂದು ಕಾಲೆಳೆದರು.

ನಂತರ ಮಾತು ಮುಂದುವರೆಸಿದ ಮಂಜೇಗೌಡ, ಗುಜರಾತ್ ನರಮೇಧ ಪ್ರಸ್ತಾಪಿಸಿದರು. ಇದಕ್ಕೆ ಸಚಿವ ಗೋಪಾಲಯ್ಯ ಆಕ್ಷೇಪ ವ್ಯಕ್ತಪಡಿಸಿ, ಪ್ರಧಾನಿ ಬಗ್ಗೆ ಇಲ್ಲಿ ಮಾತನಾಡಬಹುದಾ ಎಂದು ಪ್ರಶ್ನಿಸಿದರು. ಈ ವೇಳೆ ಗೋಪಾಲಯ್ಯ ಮತ್ತು ಜೆಡಿಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಮತ್ತೆ ಗುಜರಾತ್ ನರಮೇಧ ವಿಷಯ ಪ್ರಸ್ತಾಪಿಸಿದ ಮಂಜೇಗೌಡ ಘಟನೆ ನಡೆದ ನಂತರ ದೆಹಲಿಯಲ್ಲಿ ಸಭೆಯಾಯಿತು. ಈ ವೇಳೆ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರಧಾನಿ ಬಗ್ಗೆ ಆಧಾರವಿದ್ದರೆ ಮಾತನಾಡಿ, ವಿನಾಕಾರಣ ಪ್ರಧಾನಿ ಬಗ್ಗೆ ಮಾತು ಬೇಡ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಂಜೇಗೌಡ, ನಾನು ಆಡಿರುವ ಮಾತು ಸುಳ್ಳಾದರೆ ಸದನಕ್ಕೆ ಶರಣಾಗುತ್ತೇವೆ ಎನ್ನುತ್ತಾ ಮತ್ತೆ ಗುಜರಾತ್ ವಿಷಯ ಪ್ರಸ್ತಾಪಿಸಿದರು. ನರಮೇಧದ ಬಳಿಕ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಸಭೆಯಾಯಿತು, ಸಭೆಯಲ್ಲಿ ಮೋದಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ನಿರ್ಧಾರ ಮಾಡಲಾಯಿತು. ಆದರೆ ಅದಕ್ಕೆ ಅಡ್ವಾಣಿ ವಿರೋಧ ವ್ಯಕ್ತಪಡಿಸಿ, ಮೋದಿ ಬೆಂಬಲಕ್ಕೆ ಬಂದರು. ಹಾಗಾಗಿ ಅಂದು ಮುಖ್ಯಮಂತ್ರಿ ಸ್ಥಾನದಲ್ಲಿ ಮೋದಿ ಮುಂದುವರೆದರು. ಆದರೆ ಈಗ ಅಡ್ವಾಣಿ ಎಲ್ಲಿದ್ದಾರೆ, ಇವರು ಹೇಳುವ ಸಾಮಾಜಿಕ ನ್ಯಾಯ ಎಲ್ಲಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋಟಾ ಶ್ರೀನಿವಾಸ ಪೂಜಾರಿ, ಅಡ್ವಾಣಿ ಹಿರಿಯರು, ಅವರಿಗೆ ಏನು ಗೌರವ ಕೊಡಬೇಕೋ ಆ ಗೌರವವನ್ನು ನಮ್ಮ ಪಕ್ಷ ಕೊಡಲಿದೆ, ಅವರು ಈಗ ಎಲ್ಲಿದ್ದಾರೆ ಎಂದು ಈಗ ನೀವು ಹೇಳುವುದು ಬೇಡ. ಅವರಿಗೆ ಗೌರವ ಕೊಡುತ್ತಿಲ್ಲ ಎಂದು ನೀವೇಗೆ ಹೇಳುತ್ತಿದ್ದೀರಿ ಎಂದರು. ಇದಕ್ಕೆ ಹಾರಿಕೆ ಉತ್ತರ ನೀಡಿದ ಮಂಜೇಗೌಡ, ಹೊರಗಡೆ ಜನ ಮಾತನಾಡುತ್ತಾರೆ ಅದನ್ನೇ ನಾನು ಹೇಳಿದ್ದೇನೆ ಎಂದು ಜಾರಿಕೊಂಡರು.

ನಂತರ ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಪ್ರಾಣೇಶ್, ವಿಷಯಾಂತರ ಬೇಡ, ರಾಜ್ಯಪಾಲ ಭಾಷಣಕ್ಕೆ ಸೀಮಿತವಾಗಿ ಮಾತನಾಡಿ ಎಂದು ಸೂಚಿಸಿ ಗುಜರಾತ್ ಚರ್ಚೆಗೆ ತೆರೆ ಎಳೆದರು.

ಇದನ್ನೂ ಓದಿ: ಸದನ-ಕದನ: ಹೊರ ಹಾಕುವ ಎಚ್ಚರಿಕೆ ನೀಡಿದ ಸ್ಪೀಕರ್‌; ಬಾವಿಗಿಳಿದು ಕಾಂಗ್ರೆಸ್ ಸದಸ್ಯರ ಧರಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.