ETV Bharat / state

ಇಂದಿನಿಂದ ಗೃಹಜ್ಯೋತಿ ಜಾರಿ... 200 ಯೂನಿಟ್ ಮೀರಿದರೆ ಪೂರ್ಣ ಬಿಲ್ ಪಾವತಿಸಬೇಕಾಗುತ್ತೆ: ಜಾರ್ಜ್

author img

By

Published : Aug 1, 2023, 1:29 PM IST

Updated : Aug 1, 2023, 2:17 PM IST

ಇಂದಿನಿಂದ ಗೃಹ ಜ್ಯೋತಿ ಯೋಜನೆ ಜಾರಿಯಾಗುತ್ತಿರುವುದಾಗಿ ಇಂಧನ ಸಚಿವ ಕೆ ಜೆ ಜಾರ್ಜ್​ ಹೇಳಿದ್ದಾರೆ.

ಗೃಹ ಜ್ಯೋತಿ ಯೋಜನೆ
ಗೃಹ ಜ್ಯೋತಿ ಯೋಜನೆ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿಗಳ ಯೋಜನೆ ಪೈಕಿ ಒಂದಾದ ಗೃಹಜ್ಯೋತಿ ಯೋಜನೆ ಇಂದಿನಿಂದ ಜಾರಿಗೆ ಬರುತ್ತಿದ್ದು, ಜುಲೈನಲ್ಲಿ ಬಳಸಿದ ವಿದ್ಯುತ್ ಬಿಲ್ ಇಂದಿನಿಂದ ಬರಲಿದ್ದು, ಈ ಬಿಲ್ ಶೂನ್ಯ ಬಿಲ್ ಆಗಿರಲಿದೆ. ನಿಗದಿತ ಬಳಕೆ ಮೀರಿದ ಯೂನಿಟ್​ಗೆ ಮಾತ್ರ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದಿನಿಂದ ಗೃಹ ಜ್ಯೋತಿ ಯೋಜನೆ ಜಾರಿ ಮಾಡಲಾಗುತ್ತಿದೆ. ಈವರೆಗೂ 1.42 ಕೋಟಿ ಜನರಿಂದ ನೋಂದಣಿ ಮಾಡಿಕೊಳ್ಳಲಾಗಿದೆ. ಅರ್ಹತೆ ಅನುಸಾರ ಉಚಿತ ಬಿಲ್ ಅನ್ವಯ ನಿಗದಿತ ಬಳಕೆಯೊಳಗೆ ಯೂನಿಟ್ ಬಳಕೆದಾರರಿಗೆ ಉಚಿತ ಬಿಲ್ ನೀಡಲಾಗುತ್ತದೆ. 200 ಯೂನಿಟ್ ಮೀರಿದರೆ ಪೂರ್ಣ ಪ್ರಮಾಣದ ಬಿಲ್ ಪಾವತಿ ಮಾಡಬೇಕು ಎಂದು ತಿಳಿಸಿದರು.

ಬಾಡಿಗೆದಾರರಿಗೂ ಯೋಜನೆ ಜಾರಿಯಾಗಿದೆ, ಬಾಡಿಗೆದಾರರಿಗೆ 53 ಯೂನಿಟ್ ಪ್ಲಸ್ 10 ಪರ್ಸೆಂಟ್ ಯೂನಿಟ್ ನಿಗದಿ ಮಾಡಲಾಗಿದೆ. ಇದನ್ನು ಮೀರಿದರೆ ಮಾತ್ರ ಹೆಚ್ಚುವರಿ ಯೂನಿಟ್​ಗೆ ಬಿಲ್ ಪಾವತಿ ಮಾಡಬೇಕು. ಮನೆ ಮಾಲೀಕರು ಎಷ್ಟೇ ಆರ್.ಆರ್ ಸಂಖ್ಯೆ ಹೊಂದಿದ್ದರೂ ಒಂದಕ್ಕೆ ಮಾತ್ರ ಯೋಜನೆಯ ಲಾಭ ಸಿಗಲಿದೆ, ಆದರೆ ಮನೆ ಮಾಡಿಗೆ ನೀಡಿದ್ದರೆ ಮಾತ್ರ ಬಾಡಿಗೆದಾರರಿಗೂ ಯೋಜನೆಯ ಲಾಭ ಸಿಗಲಿದೆ. ಆದರೆ, ಯೋಜನೆಯಡಿ ಇದ್ದೂ 200 ಯೂನಿಟ್ ಬಳಕೆ ಮೀರಿದರೆ ಪೂರ್ಣ ಯೂನಿಟ್​ಗೂ ಬಿಲ್ ಪಾವತಿಸಬೇಕು ಎಂದರು‌

ಯೋಜನೆಗೆ ನೋಂದಾಯಿಸಿಕೊಳ್ಳಲು ಕಾಲಮಿತಿ ಇಲ್ಲ: ಹೊಸದಾಗಿ ನೋಂದಾಯಿಸಿಕೊಳ್ಳಲು ಇನ್ನು ಅವಕಾಶವಿದೆ.
ಜುಲೈ 22 ರೊಳಗೆ ನೋಂದಾಯಿಸಿಕೊಂಡವರಿಗೆ ಆಗಸ್ಟ್ ಮೊದಲ ವಾರದಲ್ಲಿ ಬರುವ ಬಿಲ್ ಶೂನ್ಯ ಬಿಲ್ ಆಗಿರಲಿದೆ. ಆಗಸ್ಟ್ 22 ರೊಳಗೆ ನೋಂದಾಯಿಸಿಕೊಂಡರೆ ಸೆಪ್ಟೆಂಬರ್​ನಲ್ಲಿ ಬರುವ ಬಿಲ್ ಶೂನ್ಯ ಬಿಲ್ ಆಗಿರಲಿದೆ ಎಂದರು. 200 ಯೂನಿಟ್ ಮೀರಿದ ಬಳಕೆದಾರ ಬಳಕೆ ಮತ್ತೊಂದು ವರ್ಷದ ಸರಾಸರಿ ಪರಿಗಣಿಸಿ ಮುಂದಿನ ವರ್ಷ 200 ಯೂನಿಟ್ ಬಳಕೆ ಒಳಗಿನ ಪ್ರಮಾಣ ಬಂದರೆ ಅವರಿಗೂ ಮತ್ತೆ ಅವಕಾಶ ನೀಡಲಿದ್ದೇವೆ ಎಂದರು.

ಬಿಲ್ ವಾಪಸ್ ಸೌಲಭ್ಯ: ತಡವಾಗಿ ಬಿಲ್ ಜನರೇಟ್ ಆಗಿ ಬಿಲ್ ಕಟ್ಟಿಸಿಕೊಂಡರೆ ಮುಂದೆ ವಾಪಸ್ ಮಾಡಲಾಗುತ್ತದೆ. ಅಂದರೆ ಗ್ಯಾರಂಟಿ ಕಾರಣಕ್ಕಾಗಿ ಬಿಲ್ ದಿನಾಂಕದಲ್ಲಿ ಕೆಲವೆಡೆ ವ್ಯತ್ಯಾಸವಾಗಿದೆ. ಜೂನ್ 15 ರಿಂದ ಜುಲೈ 15 ರವರೆಗೆ ಬಿಲ್ ಕಟ್ಟಿಸಿಕೊಳ್ಳಲಾಗಿದೆ, ಜುಲೈ 1ರ ಬದಲು 15 ರಿಂದ ಬಿಲ್ ಜನರೇಟ್ ಆಗಿದ್ದಲ್ಲಿ 1 ರಿಂದ 15 ರವರೆಗೆ ಕಟ್ಟಿಸಿಕೊಂಡ ಬಿಲ್ ಮರುಪಾವತಿ ಮಾಡಲಾಗುತ್ತದೆ ಎಂದು ಜಾರ್ಜ್ ಸ್ಪಷ್ಟಪಡಿಸಿದರು.

ಯೋಜನೆಗಳ ವಿಲೀನ: ಈಗಾಗಲೇ ಜಾರಿಯಲ್ಲಿದ್ದ ಭಾಗ್ಯ ಜೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಯನ್ನು ಗೃಹ ಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಲಾಗಿದೆ. ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಕುಟುಂಬದವರಿಗೆ 40 ಯೂನಿಟ್ ನಿಂದ 53 ಯೂನಿಟ್ ಹಾಗೂ ಶೇ.10 ರಷ್ಟು ಹೆಚ್ಚುವರಿ ಉಚಿತ ವಿದ್ಯುತ್, ಅಮೃತ ಜ್ಯೋತಿಗೆ 75 ಯೂನಿಟ್ ಜತೆಗೆ ಶೇ 10 ರಷ್ಟು ಹೆಚ್ಚಿಸುವುದರ ಮೂಲಕ ಎಲ್ಲರನ್ನು ಗೃಹ ಜ್ಯೋತಿ ವ್ಯಾಪ್ತಿಗೆ ತರಲಾಗಿದೆ ಎಂದು ಸಚಿವ ಜಾರ್ಜ್ ಮಾಹಿತಿ ನೀಡಿದರು.

ಸಿಎಂ ಚಾಲನೆ: ಅಧಿಕೃತವಾಗಿ ಕಲಬುರಗಿಯಲ್ಲಿ ಆಗಸ್ಟ್ 5 ರಂದು ಬೃಹತ್ ಸಮಾರಂಭ ನಡೆಸಿ ಯೋಜನೆಗೆ ಚಾಲನೆ ನೀಡಲಾಗುತ್ತದೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು ಉಪಸ್ಥಿತರಿರಲಿದ್ದಾರೆ ಎಂದರು.

ವಿದ್ಯುತ್ ಪಾಲಿಸಿ: ಸೋಲಾರ್ ಮತ್ತು ಪವನ ಶಕ್ತಿ ವಿದ್ಯುತ್ ಉತ್ಪಾದನಾ ವೆಚ್ಚ ಕಡಿಮೆ ಇದೆ. ಹಗಲು ವೇಳೆ ಇವುಗಳಿಂದ ಹೆಚ್ಚು ಉತ್ಪಾದನೆ ಇದೆ ಹಾಗಾಗಿ ಹಗಲು ವೇಳೆ ಸೌರ ಮತ್ತು ಪವನ ವಿದ್ಯುತ್ ಬಳಸಿ ರಾತ್ರಿ ವೇಳೆ ಜಲ ವಿದ್ಯುತ್ ಬಳಕೆಗೆ ಚಿಂತನೆ ನಡೆಸಲಾಗಿದೆ. ನಮ್ಮ ಸಬ್ ಸ್ಟೇಷನ್ ಪಕ್ಕ ಸೋಲಾರ್, ವಿಂಡ್ ಮಿಲ್ ಮಾಡಿದರೆ ಪ್ರಸರಣ ವೆಚ್ಚ ಕಡಿಮೆಯಾಗಲಿದೆ ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದೇವೆ, ಕಡಿಮೆ ದರಕ್ಕೆ ವಿದ್ಯುತ್ ಪೂರೈಕೆ ಮಾಡುವ ಗುರಿ ಇರಿಸಿಕೊಂಡಿದ್ದೇವೆ ಎಂದರು.

ಪಾವಗಡದಲ್ಲಿ ಒಂದೇ ಒಂದು ಇಂಚು ಭೂಮಿ ಖರೀದಿ ಮಾಡಿಲ್ಲ, ಎಲ್ಲವನ್ನೂ ಲೀಸ್​ಗೆ ಪಡೆದಿದ್ದೇವೆ, ಇನ್ನೂ ಹತ್ತು ಸಾವಿರ ಎಕರೆ ಲೀಸ್ ಕೊಡಲು ರೈತರು ಮುಂದೆ ಬಂದಿದ್ದಾರೆ, ಪಾವಗಡ ಮಾದರಿಯಲ್ಲಿ ಸಬ್ ಸ್ಟೇಷನ್ ಇರುವ ಕಡೆ ಜಮೀನು ಲೀಸ್​ಗೆ ಪಡೆಯುತ್ತೇವೆ, ಅಲ್ಲೆಲ್ಲಾ ಸೋಲಾರ್ ಪಾರ್ಕ್ ನಿರ್ಮಿಸಿ ಸೌರಶಕ್ತಿ ಉತ್ಪಾದನೆಗೆ ಆದ್ಯತೆ ಕೊಡುತ್ತೇವೆ. ಯಾರೇ ಉದ್ಯಮಿಗಳು ಬಂದರೂ ಸೋಲಾರ್ ವಿದ್ಯುತ್​ಗೆ ಕೈಜೋಡಿಸಿ ಎನ್ನುವ ಮನವಿ ಮಾಡಲಿದ್ದೇವೆ ರಾಜ್ಯದಲ್ಲಿ ಹೊಸದಾಗಿ ಎಲೆಕ್ಟ್ರಿಸಿಟಿ ಪಾಲಿಸಿ ತರಲಿದ್ದೇವೆ ಎಂದು ಮಾಹಿತಿ ನೀಡಿದರು. ‌

ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಸ್ಥಾಪನೆ ಮಾಡಲಿದ್ದೇವೆ, ಇಲ್ಲಿ ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚಳವಾದರೂ ನಮಗೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮುಖ್ಯವಾಗಿದೆ ಹಾಗಾಗಿ ವೆಚ್ಚ ಹೆಚ್ಚಾದರೆ ಘಟಕ ಸ್ಥಾಪನೆಗೆ ಮುಂದಾಗಿದ್ದೇವೆ ಎಂದರು.

ಇದನ್ನೂ ಓದಿ: ರಾಜ್ಯ ಸ್ಟಾರ್ಟ್ ಅಪ್ ಸಂಸ್ಥೆಗಳ ಸಮಸ್ಯೆ, ಬೇಡಿಕೆ ಅರಿಯಲು ಸರ್ವೆಗೆ ಮುಂದಾದ ಐಟಿಬಿಟಿ...ಪ್ರಿಯಾಂಕ್ ಖರ್ಗೆಯಿಂದ ಟ್ವೀಟ್​

Last Updated : Aug 1, 2023, 2:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.