ETV Bharat / state

ರಾಜ್ಯ ಸರ್ಕಾರ ಉದ್ಯೋಗ ಬದಲು, ನಿರುದ್ಯೋಗ ಸೃಷ್ಟಿಸಿದೆ: ಸಿದ್ದರಾಮಯ್ಯ

author img

By

Published : Mar 23, 2023, 7:00 PM IST

ಜನರ ತೆರಿಗೆ ಹಣವನ್ನು ಬಳಸಿ ಜಾಹಿರಾತುಗಳ ಮೂಲಕ ಸುಳ್ಳುಗಳನ್ನು ಮಾರಾಟ ಮಾಡುವ ಹೀನಾತಿಹೀನ ರಾಜಕೀಯವನ್ನು ಬಿಜೆಪಿ ಸರ್ಕಾರಗಳು ಮಾಡುತ್ತಿವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

government-has-created-unemployment-instead-of-employment-siddaramaiah
ರಾಜ್ಯ ಸರ್ಕಾರ ಉದ್ಯೋಗ ಬದಲು, ನಿರುದ್ಯೋಗ ಸೃಷ್ಟಿಸಿದೆ: ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ. ಜಾಹೀರಾತುಗಳ ಮೂಲಕ ಸುಳ್ಳು ಪ್ರಕಟಣೆಗಳನ್ನು ನಿರುದ್ಯೋಗಿ ಯುವಜನರಿಗೆ ಅವಮಾನ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳಿಗೆ ಒಂದು ಗುಲಗಂಜಿಯಷ್ಟಾದರೂ ನಾಚಿಕೆ ಇದೆಯೆ ಎಂದು ನನಗೆ ಅನುಮಾನವಾಗಿದೆ. ಜನರ ತೆರಿಗೆ ಹಣವನ್ನು ಬಳಸಿ ಜಾಹಿರಾತುಗಳ ಮೂಲಕ ಸುಳ್ಳುಗಳನ್ನು ಮಾರಾಟ ಮಾಡುವ ಹೀನಾತಿಹೀನ ರಾಜಕೀಯವನ್ನು ಬಿಜೆಪಿ ಸರ್ಕಾರಗಳು ಮಾಡುತ್ತಿವೆ. ಕೋಟಿಗಟ್ಟಲೆ ವೆಚ್ಚದ ಜಾಹಿರಾತುಗಳನ್ನು ಪ್ರತಿನಿತ್ಯ ಬಿಡುಗಡೆ ಮಾಡಲಾಗುತ್ತಿದೆ. ನಾನು ಜಾಹಿರಾತುಗಳನ್ನು ಕೊಡಬೇಡಿ ಎಂದು ಹೇಳುತ್ತಿಲ್ಲ. ಆದರೆ ಸತ್ಯಸಂಗತಿಗಳನ್ನು ಮಾತ್ರ ಜನರಿಗೆ ಹೇಳಿ ಎಂದಷ್ಟೆ ಆಗ್ರಹ ಮಾಡುತ್ತಿದ್ದೇನೆ ಎಂದಿದ್ದಾರೆ.

ರಾಜ್ಯ ಸರ್ಕಾರ ಮಾ.22 ರಂದು ಯುಗಾದಿಯ ದಿನ ಬಿಡುಗಡೆ ಮಾಡಿರುವ ಜಾಹಿರಾತಿನಲ್ಲಿ 68.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿಕೊಂಡಿದೆ. ಹಾಗಿದ್ದರೆ ವಾಸ್ತವದಲ್ಲಿ ನಿರುದ್ಯೋಗ ಕಡಿಮೆಯಾಗಬೇಕಿತ್ತಲ್ಲ? ಆಗಿದೆಯಾ? ಎಲ್ಲಿ ಹುಡುಕಿದರೂ ಉದ್ಯೋಗ ಸಿಗುತ್ತಿಲ್ಲವೆಂದು ಲಕ್ಷಾಂತರ ಯುವಜನರು ಉದ್ಯೋಗ ಹುಡುಕುವುದನ್ನೆ ನಿಲ್ಲಿಸಿದ್ದಾರೆ. ನಿರುದ್ಯೋಗದ ಬಗ್ಗೆ ಅಧಿಕೃತವಾಗಿ ಹಲವು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಅದರಲ್ಲಿ ಮುಖ್ಯವಾಗಿ ಸಿಎಂಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ಕೂಡ ಒಂದು. ಈ ಸಂಸ್ಥೆಯು ಬಿಡುಗಡೆ ಮಾಡಿರುವ ದಾಖಲೆಗಳನ್ನು ನೋಡಿದರೆ ರಾಜ್ಯದ ನಿರುದ್ಯೋಗದ ಪ್ರಮಾಣ ಭಯ ಹುಟ್ಟಿಸುತ್ತದೆ ಎಂದು ಹೇಳಿದ್ದಾರೆ.

30 ಲಕ್ಷ ಜನರಿಗೆ ಯಾವ ಉದ್ಯೋಗವೂ ಇಲ್ಲ: ಸಿಎಂಐಇ ಸಂಸ್ಥೆ ಪ್ರತಿ ದಿನದ ನಿರುದ್ಯೋಗದ ಪ್ರಮಾಣವನ್ನು ಬಿಡುಗಡೆ ಮಾಡುವ ಜತೆಗೆ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಸಮಗ್ರವಾದ ಉದ್ಯೋಗ ಮತ್ತು ನಿರುದ್ಯೋಗದ ಚಿತ್ರಣಗಳನ್ನು ನೀಡುತ್ತದೆ. ಸಿಎಂಐಇ ಸಂಸ್ಥೆಯ ಪ್ರಕಾರ 2022 ರಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯ ಒಟ್ಟಾರೆ ಪ್ರಮಾಣವು ಶೇ.37.88 ರಷ್ಟಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಒಟ್ಟು ದುಡಿಮೆ ಮಾಡಲು ಬಯಸುವವರ ಸಂಖ್ಯೆ 2.49 ಕೋಟಿ ಎಂದು ಅಂದಾಜು ಮಾಡಿದ್ದಾರೆ. ಆದರೆ, ಯಾವುದೊ ಒಂದು ಉದ್ಯೋಗ ಲಭಿಸಿರುವುದು ಕೇವಲ 2.1 ಕೋಟಿ ಜನರಿಗೆ ಮಾತ್ರ. ಸುಮಾರು 30 ಲಕ್ಷ ಜನರಿಗೆ ಯಾವ ಉದ್ಯೋಗವೂ ಇಲ್ಲದೆ ಪರದಾಡುತ್ತಿದ್ದಾರೆ ಎಂದಿದ್ದಾರೆ.

ಗ್ರೇಟರ್ ಅನ್‍ ಎಂಪ್ಲಾಯ್‍ಮೆಂಟ್: ಉದ್ಯೋಗಕ್ಕಾಗಿ ಹುಡುಕಾಟ ಮಾಡುತ್ತಿರುವವರು ಮತ್ತು ಉದ್ಯೋಗವನ್ನು ಹುಡುಕಿ ಹುಡುಕಿ ಬೇಸತ್ತು ಹುಡುಕಾಟ ನಿಲ್ಲಿಸಿರುವವರನ್ನು ಒಟ್ಟಾಗಿ ಸೇರಿಸಿದರೆ ಅದನ್ನು ಗ್ರೇಟರ್ ಅನ್‍ ಎಂಪ್ಲಾಯ್‍ಮೆಂಟ್ ರೇಟ್ ಎಂದು ಕರೆಯುತ್ತಾರೆ. ಈ ಗ್ರೇಟರ್ ಅನ್‍ಎಂಪ್ಲಾಯ್‍ಮೆಂಟ್ ದರವು 2022 ರ ಏಪ್ರಿಲ್‍ನಿಂದ ಡಿಸೆಂಬರ್‍ವರೆಗೆ ಶೇ. 11.73 ರಷ್ಟಿದೆ. ನಗರ ಪ್ರದೇಶದಲ್ಲಿ ಇದರ ಪ್ರಮಾಣ 15.12 ರಷ್ಟು ಇದೆ. ಇದೇ ಅವಧಿಯಲ್ಲಿ ಮಹಿಳೆಯರಲ್ಲಿ ಗ್ರೇಟರ್ ಅನ್‍ಎಂಪ್ಲಾಯ್‍ಮೆಂಟ್ ದರವು ಶೇ.58.55 ರಷ್ಟಿದೆ ಎಂದು ವಿವರಿಸಿದ್ದಾರೆ.

ಮಹಿಳೆಯರ ನಿರುದ್ಯೋಗದ ವಿಚಾರದಲ್ಲಿ ನೋಡುವುದಾದರೆ 2018ರಲ್ಲಿ ಗ್ರೇಟರ್ ಅನ್ ಎಂಪ್ಲಾಯಿಂಟ್ ದರವು ಶೇ.16.46 ರಷ್ಟಿದ್ದರೆ, 2022ರ ಸೆಪ್ಟೆಂಬರ್​ನಿಂದ ಡಿಸೆಂಬರ್​ವರೆಗೂ ಶೇ.58.55ಕ್ಕೆ ಏರಿಕೆಯಾಗಿದೆ. ಅಂದರೆ ಶೇ.42 ರಷ್ಟು ಹೆಚ್ಚಳ ಕಂಡಿದೆ. ದೇಶದ ಮಹಿಳೆಯರ ಸರಾಸರಿ ನಿರುದ್ಯೋಗ ಪ್ರಮಾಣವು ಶೇ.28 ರಷ್ಟಿದೆ. ಆದರೆ ಕರ್ನಾಟಕದಲ್ಲಿ ಶೇ.58.55ರಷ್ಟಿದೆ. ಇದನ್ನು ಪ್ರಗತಿ, ಬೆಳವಣಿಗೆ ಎಂದು ಕರೆಯಲು ಸಾಧ್ಯವೆ?

ಮಹಾಪತನವನ್ನು ಮಹಾ ಬೆಳವಣಿಗೆ ಎಂದು ಹೇಳುವ ಆತ್ಮವಂಚಕತನ ಬೊಮ್ಮಾಯಿಯವರ ಸರ್ಕಾರಕ್ಕೆ ಯಾಕೆ ಬಂದಿದೆ? ಈ ಮಟ್ಟದ ಭಯಾನಕ ಸ್ಥಿತಿ ರಾಜ್ಯದಲ್ಲಿದ್ದರೂ ಸಹ ರಾಜ್ಯ ಸರ್ಕಾರವು ವಾಸ್ತವ ಸಂಗತಿಗಳ ಮೇಲೆ ಜಾಹಿರಾತುಗಳ ಹೊದಿಕೆ ಹಾಕಿ ಸತ್ಯವನ್ನು ಮರೆಮಾಚಿ ನಿರುದ್ಯೋಗವನ್ನು ಕಡಿಮೆ ಮಾಡಿದ್ದೇವೆ, 67.9 ಲಕ್ಷ ಯುವಕರಿಗೆ ಉದ್ಯೋಗ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿ ಜನರನ್ನು ವಂಚಿಸಿದೆ. ಈ ಕುರಿತು ಬೊಮ್ಮಾಯಿಯವರ ಸರ್ಕಾರ ಸ್ಪಷ್ಟವಾದ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಮತ್ತು ಈ ಮಹಾ ಸುಳ್ಳಿನ ಕುರಿತು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು.

ಇದನ್ನೂ ಓದಿ: ಪುಣ್ಯಕೋಟಿಗೆ ಸಹಾಯ ಮಾಡುವವರಿಗೆ ಪುಣ್ಯಪ್ರಾಪ್ತಿ: ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.