ETV Bharat / state

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ.. ಶೇ.17ರಷ್ಟು ವೇತನ ಹೆಚ್ಚಳ, ನಿವೃತ್ತ ನೌಕರರಿಗೂ ವೇತನ ಪರಿಷ್ಕರಣೆ ಅನ್ವಯ

author img

By

Published : Mar 1, 2023, 11:26 AM IST

Updated : Mar 1, 2023, 1:45 PM IST

ಏಳನೇ ವೇತನ ಆಯೋಗ ವಿಚಾರದಲ್ಲಿ ಸರ್ಕಾರಕ್ಕೆ ನೀಡಿದ್ದ ಡೆಡ್ ಲೈನ್ ಮುಗಿದ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ ಹೊರಬಿದ್ದಿದೆ.

government-decided-to-increase-salary-of-government-employees-by-17-percent
Etv Bharat

ಬೆಂಗಳೂರು: 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನದ ಶೇಕಡಾ 17ರಷ್ಟು ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರಿ ಆದೇಶ ಹೊರಡಿಸಿದೆ. ಶೇ. 20ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದ ಸರ್ಕಾರಿ ನೌಕರರು ಕಡೆಗೂ ಹೋರಾಟದ ಮೂಲಕ ಶೇ.17ರಷ್ಟು ವೇತನ ಹೆಚ್ಚಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

19.11.2022ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು 7ನೇ ರಾಜ್ಯವೇತನ ಆಯೋಗವನ್ನು ರಚಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಹಿನ್ನೆಲೆಯಲ್ಲಿ ಸರ್ಕಾರದ ನೀತಿ ನಿರ್ಣಯದಂತೆ 7ನೇ ರಾಜ್ಯವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಲಾಗಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗೆ ಮಧ್ಯಂತರ ಪರಿಹಾರ ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 2023ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಮೂಲವೇತನದ ಶೇಕಡಾ 17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಆದೇಶ ಹೊರಡಿಸಿದೆ.

ಮಧ್ಯಂತರ ಪರಿಹಾರದ ಉದ್ದೇಶಕ್ಕಾಗಿ 'ಮೂಲ ವೇತನ' ಎಂದರೆ ಸರ್ಕಾರಿ ನೌಕರರು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ ಮತ್ತು ಅದರಲ್ಲಿ, ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಸ್ಥಗಿತವೇ ನೀಡಲಾಗಿದ್ದರೆ ಆ ಸ್ಥಗಿತ ವೇತನ ಬಡ್ತಿ, 2018ರ ಕರ್ನಾಟಕ ನಾಗರಿಕ ಸೇವಾ ಪರಿಷ್ಕೃತ ವೇತನ ನಿಯಮಗಳ ನಿಯಮ 3(ಸಿ) ಓದಿಕೊಂಡು ಏಳನೇ ನಿಯಮದ (3) ನೇ ಉಪನಿಯಮದ ಅವನಿಗೆ ನೀಡಲಾದ ವೈಯಕ್ತಿಕ ವೇತನ ಇದ್ದರೆ, ವೈಯಕ್ತಿಕ ವೇತನ ಹಾಗೂ ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಮಂಜೂರು ಮಾಡಲಾಗಿರುವ ಹೆಚ್ಚುವರಿ ವೇತನ ಭರ್ತಿ ಯಾವುದಾದರೂ ಇದ್ದಲ್ಲಿ ಅವುಗಳು ಸೇರುತ್ತವೆ. ಅಲ್ಲದೆ, ಮೂಲ ವೇತನಕ್ಕೆ ಮೇಲೆ ಸೂಚಿಸುವುದನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ದಗಳು ಸೇರಿಸತಕ್ಕದ್ದಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು / ಕುಟುಂಬ ನಿವೃತ್ತಿ ವೇತನದವರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು / ಕುಟುಂಬ ನಿವೃತ್ತಿ ವೇತನದಾರರಿಗೂ ಸಹ 2023ರ ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಮೂಲ ನಿವೃತ್ತಿ ವೇತನ / ಕುಟುಂಬ ನಿವೃತ್ತಿ ವೇತನದ ಶೇಕಡ 17ರಷ್ಟು ಮಧ್ಯಂತರ ಪರಿಹಾರ ಮಂಜೂರು ಮಾಡಲು ಸಹ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯ ಅನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಲಿಕಾ ವೇತನ ಶ್ರೇಣಿಯಲ್ಲಿರುವ ಪೂರ್ಣಾವಧಿ ನೌಕರರುಗಳಿಗೆ ಈ ಆದೇಶ ಅನ್ವಯಿಸುತ್ತದೆ. ಸ್ಥಳೀಯ ಸಂಸ್ಥೆಗಳ ನಗರ ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯ ನೌಕರರಿಗೆ ಸೌಲಭ್ಯವನ್ನು ಮಂಜೂರು ಮಾಡುವುದರಿಂದ ಉಂಟಾಗುವ ವೆಚ್ಚವನ್ನು ಅನ್ವಯಿಸುವ ಸ್ಥಳೀಯ ಸಂಸ್ಥೆಗಳೇ ಭರಿಸತಕ್ಕದ್ದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಯುಜಿಸಿ / ಎಐಸಿಟಿಇ / ಐಸಿಎಆರ್ / ಎನ್​ಜೆಪಿಸಿ ವೇತನ ಶ್ರೇಣಿಗಳಲ್ಲಿ ಹಾಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್​ಜೆಪಿಸಿಧರರಿಗೆ ಈ ಆದೇಶ ಅನ್ವಯಿಸುವುದಿಲ್ಲ. ತಾತ್ಕಾಲಿಕ ಪರಿಹಾರದ ಕಾರಣದಿಂದ ಸಂದಾಯ ಮಾಡುವ 50 ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನ ಅಂಶಗಳನ್ನು ಮುಂದಿನ ರೂಪಾಯಿಗೆ ಪೂರ್ಣಾಂಕಗಳು ತಕ್ಕದ್ದು, ಮತ್ತು 50 ಪೈಸೆಗಿಂತ ಕಡಿಮೆ ಇರುವ ದಿನಾಂಕಗಳನ್ನು ಕಡೆಗಣಿಸತಕ್ಕದ್ದು ಎಂದು ತಿಳಿಸಲಾಗಿದೆ.

ಈ ಆದೇಶದ ಮೂಲಕ ಮಂಜೂರಾದ ತಾತ್ಕಾಲಿಕ ಪರಿಹಾರದ ಮೊತ್ತವು ವಿಶಿಷ್ಟ ಸಂಭಾವನೆಯಾಗಿದ್ದು, ನಿವೃತ್ತಿ ಸೌಲಭ್ಯ/ತುಟ್ಟಿ ಭತ್ಯೆಯನ್ನು ಅಥವಾ ಬೇರೆ ಉದ್ದೇಶಗಳಿಗೆ ಪರಿಗಣಿಸತಕ್ಕದ್ದಲ್ಲ. ಈ ತಾತ್ಕಾಲಿಕ ಪರಿಹಾರದ ವೆಚ್ಚವನ್ನು ಭರಿಸುವ ಲೆಕ್ಕಶೀರ್ಷಿಕೆಯಿಂದಲೇ ಭರಿಸತಕ್ಕದ್ದು ಎಂದು ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಜಯಶ್ರೀ ಎಂ. ಅವರು ಆದೇಶ ಹೊರಡಿಸಿದ್ದಾರೆ.

ಇಪಿಎಸ್ ಮರು ಜಾರಿ ಕುರಿತು ಅಧ್ಯಯನ ನಡೆಸಲು ಸಮಿತಿ ರಚನೆ: ರಾಜ್ಯದಲ್ಲಿ ಸರ್ಕಾರಿ ನೌಕರರು ಬೇಡಿಕೆ ಇರಿಸಿರುವಂತೆ ರಾಷ್ಟ್ರೀಯ ಪಿಂಚಣಿ ಯೋಜನೆ ಸ್ಥಗಿತಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ ಮರುಜಾರಿಗೆ ತರಲು ಪೂರಕವಾಗಿ ಅಧ್ಯಯನ ನಡೆಸಿ ವರದಿ ನೀಡಲು ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಸರ್ಕಾರಿ ನೌಕರರ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಹಳೆಯ ಪಿಂಚಣಿ ಯೋಜನೆ, ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶಿಸಿದೆ. ಈ ಸಮಿತಿಯು ರಾಷ್ಟ್ರೀಯ ಪಿಂಚಣಿ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಪುನರ್ ಸ್ಥಾಪಿಸುವ ನಿರ್ಧಾರಗಳನ್ನು ಕೈಗೊಂಡಿರುವ ರಾಜ್ಯಗಳಿಗೆ ಭೇಟಿ ನೀಡಿ ಸೂಕ್ತ ಅಧ್ಯಯನ ನಡೆಸಿ ಎರಡು ತಿಂಗಳೊಳಗೆ ವರದಿಯನ್ನು ನೀಡಬೇಕು ಎಂದು ಆರ್ಥಿಕ ಇಲಾಖೆ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಸನಾತನ ಧರ್ಮ, ರಾಷ್ಟ್ರೀಯತೆಗೆ ನಾನು ಬದ್ಧನಾಗಿ ಬಿಜೆಪಿಗೆ ಸೇರಿದ್ದೇನೆ: ಭಾಸ್ಕರ್​ ರಾವ್​

Last Updated : Mar 1, 2023, 1:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.