ETV Bharat / state

ಬೆಂಗಳೂರು, ದ.ಕನ್ನಡ ಜಿಲ್ಲೆಗಳಲ್ಲಿ ಸಿಎನ್​​ಜಿ & ಪಿಎನ್​ಜಿ ಬೆಲೆ ಕಡಿತ

author img

By

Published : Apr 9, 2023, 8:00 PM IST

ಗೇಲ್ ಗ್ಯಾಸ್ ಲಿಮಿಟೆಡ್​ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಹಕರಿಗೆ ಸಿಎನ್​ಜಿ ಮತ್ತು ಪಿಎನ್​ಜಿ ಬೆಲೆಯನ್ನು ಪ್ರತಿ ಯೂನಿಟ್​ಗೆ 7 ರೂ ಕಡಿತಗೊಳಿಸಿದೆ.

ಗೇಲ್ ಲಿಮಿಟೆಡ್
ಗೇಲ್ ಲಿಮಿಟೆಡ್

ಬೆಂಗಳೂರು : ಗೇಲ್ ಲಿಮಿಟೆಡ್ ತನ್ನ ಗ್ರಾಹಕರಿಗೆ ಗ್ಯಾಸ್ ಬೆಲೆ ನಿಗದಿಪಡಿಸಲು ಭಾರತ ಸರ್ಕಾರದ ಹೊಸ ಮಾರ್ಗಸೂಚಿ ಪಾಲಿಸಿ ತನ್ನ ಪಿ.ಎನ್.ಜಿ ಮತ್ತು ಸಿ.ಎನ್.ಜಿ ಬೆಲೆಗಳಲ್ಲಿ ಕಡಿತ ಘೋಷಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತಿ ಯುನಿಟ್​ಗೆ 7 ರೂ ಕಡಿತಗೊಳಿಸಿದೆ. ಇದರಿಂದ ಪಿ.ಎನ್.ಜಿ ಬೆಲೆಗಳು ಯುನಿಟ್​ಗೆ 51.50 ರೂ ಮತ್ತು ಸಿ.ಎನ್.ಜಿ ಬೆಲೆ ಪ್ರತಿ ಕೆಜಿಗೆ ರೂ 82.50 ಆಗಲಿದೆ. ಏಪ್ರಿಲ್ 9 ರಿಂದಲೇ ಹೊಸ ದರಗಳು ಜಾರಿಗೆ ಬಂದಿವೆ ಎಂದು ಸಂಸ್ಥೆ ಇಂದು (ಭಾನುವಾರ) ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ದರಗಳು ಗ್ರಾಹಕರಿಗೆ ಸ್ಥಿರವಾದ ಬೆಲೆ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಿವೆ. ಆದ್ಯತೆಯ ಇಂಧನವಾಗಿ ಸಿ.ಎನ್.ಜಿ ಮತ್ತು ಪಿ.ಎನ್.ಜಿ ಬಳಸುವುದರಿಂದ ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡಬಹುದು. ಮನುಷ್ಯನ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಗೇಲ್ ಹೇಳಿದೆ.

ಅದಾನಿಯಿಂದಲೂ ಬೆಲೆ ಕಡಿತ: ಇನ್ನೊಂದೆಡೆ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ATGL) ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಬೆಲೆಯನ್ನು ಕೆಜಿಗೆ ರೂ. 8.13 ಮತ್ತು ಪೈಪ್ಡ್ ಅಡುಗೆ ಅನಿಲ (ಪಿಎನ್‌ಜಿ) ರೂ 5.06 ವರೆಗೆ ಬೆಲೆಯನ್ನು ಕಡಿತಗೊಳಿಸಿರುವುದಾಗಿ ನಿನ್ನೆ (ಏಪ್ರಿಲ್ 8-2023) ಪ್ರಕಟಣೆಯಲ್ಲಿ ತಿಳಿಸಿತ್ತು.

ನೈಸರ್ಗಿಕ ಅನಿಲದ ದರ ನಿಗದಿಗೆ ಹೊಸ ಮಾನದಂಡ ನಿಗದಿಪಡಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ATGL) ಭಾರತ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ಸ್ವಾಗತಿಸಿದೆ. ಈ ಬೆಳವಣಿಗೆಯಿಂದ ಮನೆಗಳಲ್ಲಿ ಬಳಕೆಯಾಗುವ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಕೆಯಾಗುವ ಸಿಎನ್‌ಜಿ ಬೆಲೆ ಕಡಿಮೆ ಮಾಡಲಾಗಿದೆ ಎಂದು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ATGL) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

ಗ್ರಾಹಕರಿಗೆ ಆದ್ಯತೆ ನೀಡುವ ನಮ್ಮ ನೀತಿಗೆ ಅನುಗುಣವಾಗಿ ಭಾರತ ಸರ್ಕಾರವು ಘೋಷಿಸಿದ ಹೊಸ ಗ್ಯಾಸ್ ಬೆಲೆ ಮಾರ್ಗಸೂಚಿಗಳ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯ ಪಿಎನ್‌ಜಿ ಮತ್ತು ಸಿಎನ್‌ಜಿ ಗ್ರಾಹಕರಿಗೆ ನೀಡಲು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ನಿರ್ಧರಿಸಿದೆ. ಪೆಟ್ರೋಲ್ ಬೆಲೆಗಳಿಗೆ ಹೋಲಿಸಿದರೆ ಸಿಎನ್‌ಜಿ ಗ್ರಾಹಕರಿಗೆ ಶೇ 40 ಕ್ಕಿಂತ ಹೆಚ್ಚು ಉಳಿತಾಯ ಮತ್ತು ಎಲ್‌ಪಿಜಿ ಬೆಲೆಗಳಿಗೆ ಹೋಲಿಸಿದರೆ ಪಿಎನ್‌ಜಿ ಗ್ರಾಹಕರಿಗೆ ಸುಮಾರು ಶೇ 15 ರಷ್ಟು ಉಳಿತಾಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಎಟಿಜಿಎಲ್​ ಪ್ರತಿ ಕೆಜಿಗೆ ಸಿಎನ್‌ಜಿ ಬೆಲೆಯಲ್ಲಿ 8.13 ರೂ ವರೆಗೆ ಮತ್ತು ಪಿಎನ್‌ಜಿಯ ಬೆಲೆ ಪ್ರತಿ ಎಸ್‌ಸಿಎಂಗೆ ರೂ. 5.06 ವರೆಗೆ ಇಳಿಕೆ ಮಾಡಿದೆ. ನಮ್ಮ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ (ಜಿಎಗಳು) ಸಿಎನ್‌ಜಿ ಮತ್ತು ಪಿಎನ್‌ಜಿಯಲ್ಲಿ ಗ್ಯಾಸ್ ಬೆಲೆಗಳ ಕಡಿತ ಲಗತ್ತಿಸಲಾದ ಕೋಷ್ಟಕದಲ್ಲಿ ಒದಗಿಸಲಾಗಿದೆ ಎಂದು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ತಿಳಿಸಿದೆ.

ಇದನ್ನೂ ಓದಿ : ಸರ್ಕಾರದ ಹಸ್ತಕ್ಷೇಪ.. ಅದಾನಿ ಟೋಟಲ್ ಗ್ಯಾಸ್ ಸಿಎನ್‌ಜಿ, ಪಿಎನ್‌ಜಿ ಬೆಲೆ ಕಡಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.