ETV Bharat / state

ಟಿಕೆಟ್​ ಕೊಡಿಸುವುದಾಗಿ ಉದ್ಯಮಿಗೆ ವಂಚನೆ ಪ್ರಕರಣ: ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಗೆ ಜಾಮೀನು

author img

By ETV Bharat Karnataka Team

Published : Nov 8, 2023, 10:55 PM IST

ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಪ್ರಕರಣದ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

fraud-case-accused-abhinav-halashree-swamiji-get-bail-in-high-court
ಟಿಕೆಟ್​ ಕೊಡಿಸುವುದಾಗಿ ಉದ್ಯಮಿಗೆ ವಂಚನೆ ಪ್ರಕರಣ: ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಗೆ ಜಾಮೀನು

ಬೆಂಗಳೂರು: ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಪ್ರಕರಣದ ಆರೋಪಿ, ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜಾಮೀನು ಕೋರಿ ಹಾಲಶ್ರೀ ಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಅರ್ಜಿ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು ಹಾಜರಾಗಿ, ಅರ್ಜಿದಾರರ ವಿರುದ್ಧದ ತನಿಖಾಧಿಕಾರಿಗಳು ಇಂದು (ಬುಧವಾರ) ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು, ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವುದರಿಂದ ತನಿಖೆ ಪೂರ್ಣಗೊಂಡಂತಾಗಿದೆ. ಇದರಿಂದ ಅರ್ಜಿದಾರರು ತನಿಖೆ ಎದುರಿಸುವ ಅಗತ್ಯ ಇಲ್ಲ ಎಂದು ವಾದ ಮಂಡಿಸಿದರು. ಅಷ್ಟೇ ಅಲ್ಲ ಅರ್ಜಿದಾರರು ಪಡೆದಿದ್ದಾರೆ ಎನ್ನಲಾದ ಹಣವನ್ನು ಈಗಾಗಲೇ ತನಿಖಾಧಿಕಾರಿಗಳು ಜಪ್ತಿ ಮಾಡಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಶಕ್ಕೆ ನೀಡಿದ್ದಾರೆ. ಏಳಕ್ಕಿಂತ ಕಡಿಮೆ ವರ್ಷ ಶಿಕ್ಷೆ ವಿಧಿಸಬಹುದಾದ ಆರೋಪಗಳು ಅರ್ಜಿದಾರರ ಮೇಲಿದೆ. ಇನ್ನೂ ಅವರ ಮೇಲಿನ ಆರೋಪಗಳ ಸತ್ಯಾಸತ್ಯತೆಯು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಚಾರಣೆಯಲ್ಲಿ ಬಯಲಾಗಬೇಕಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಲು ಇದು ಅರ್ಹ ಪ್ರಕರಣವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ವಾದವನ್ನು ಪರಿಗಣಿಸಿದ ನ್ಯಾಯಪೀಠ, ಹಾಲಶ್ರೀ ಸ್ವಾಮೀಜಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ತನ್ನಿಂದ ಐದು ಕೋಟಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಉದ್ಯಮಿ ಗೋವಿಂದಬಾಬು ಪೂಜಾರಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಆರೋಪಿಗಳಾದ ಚೈತ್ರಾ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ದೂರುದಾರರಿಂದ 1.5 ಕೋಟಿ ಹಣ ಪಡೆದ ಆರೋಪ ಮೇಲೆ ಹಾಲಶ್ರೀ ಸ್ವಾಮೀಜಿಯನ್ನು 2023ರ ಸೆ.19ರಂದು ಸಿಸಿಬಿ ಪೊಲೀಸರು ಒಡಿಶಾದ ಕಟಕ್‌ನಲ್ಲಿ ಬಂಧಿಸಿದ್ದರು. ಜಾಮೀನು ನೀಡಲು ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯ ನಿರಾಕರಿಸಿತ್ತು. ಇದರಿಂದ ಸ್ವಾಮೀಜಿ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ: ಅತ್ಯಾಚಾರ ಆರೋಪ : ಮುರುಘಾ ಶರಣರಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.