ಕಾಂಗ್ರೆಸ್, ಜೆಡಿಎಸ್ ಧರಣಿ ನಡುವೆ ನಾಲ್ಕು ವಿಧೇಯಕಗಳ ಅಂಗೀಕಾರ: ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

author img

By

Published : Sep 23, 2022, 3:41 PM IST

ಪರಿಷತ್

ಮಾಣಿಪ್ಪಾಡಿ ವರದಿ ಸ್ಥಾಯಿ ಸಮಿತಿ ನೀಡಿದ ವರದಿಯಲ್ಲ. ಅಲ್ಪಸಂಖ್ಯಾತ ಆಯೋಗದ‌ ಕಾಯ್ದೆಯಂತೆ ಮಂಡಿಸಿದ್ದಾರೆ. ಇದು ಇತ್ತೀಚೆಗೆ ನಡೆದ ಘಟನೆಯಲ್ಲ. ಹಾಗಾಗಿ ನಿಯಮ‌ 59 ರ ನಿಲುವಳಿ ಸೂಚನೆ ತಿರಸ್ಕಾರ ಮಾಡುತ್ತೇನೆ ಎಂದು ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ರೂಲಿಂಗ್ ನೀಡಿದರು.

ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ನಾಲ್ಕು ವಿಧೇಯಕಗಳನ್ನು ಪ್ರತಿಪಕ್ಷಗಳ ಧರಣಿ ನಡುವೆ ವಿಧಾನ ಪರಿಷತ್​ನಲ್ಲಿ ಅಂಗೀಕಾರ ಮಾಡಲಾಗಿದ್ದು, ಕಲಾಪವನ್ನು ಅನಿರ್ದಿಷ್ಟಾವದಿಗೆ ಮುಂದೂಡಿಕೆ ಮಾಡಲಾಯಿತು.

ವಿಧಾನ ಪರಿಷತ್ ಶೂನ್ಯವೇಳೆ ಕಲಾಪ ಮುಗಿಯುತ್ತಿದ್ದಂತೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ನಿನ್ನೆ ಗದ್ದಲದ ನಡುವೆ ಮಾಣಿಪ್ಪಾಡಿ ವರದಿ ಮಂಡಿಸಿದ್ದಾರೆ. ನಮಗೆ ಅದರ ಪ್ರತಿ ಕೊಡಿ ಎಂದು ಮಾಣಿಪ್ಪಾಡಿ ವರದಿ ಕುರಿತು ನಿಯಮ 59 ರ ಅಡಿ ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದರು. ಚರ್ಚೆಗೆ ಅವಕಾಶ ಕಲ್ಪಿಸಲು ಆಗ್ರಹಿಸಿದರು. ಈ ವೇಳೆ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.

ನಾಲ್ಕು ವಿಧೇಯಕ ಅಂಗೀಕಾರ ಮಾಡಲಾಯಿತು

ಈ ವೇಳೆ ಮಾತನಾಡಿದ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ, ಕಾಂಗ್ರೆಸ್ ನಿಲುವಳಿ ಸೂಚನೆ ಪರಿಶೀಲಿಸಿದ್ದೇನೆ. ಮಾಣಿಪ್ಪಾಡಿ ವರದಿ ಸ್ಥಾಯಿ ಸಮಿತಿ ನೀಡಿದ ವರದಿಯಲ್ಲ. ಅಲ್ಪಸಂಖ್ಯಾತ ಆಯೋಗದ‌ ಕಾಯ್ದೆಯಂತೆ ಮಂಡಿಸಿದ್ದಾರೆ. ಇದು ಇತ್ತೀಚೆಗೆ ನಡೆದ ಘಟನೆಯಲ್ಲ. ಹಾಗಾಗಿ ನಿಯಮ‌ 59 ರ ನಿಲುವಳಿ ಸೂಚನೆ ತಿರಸ್ಕಾರ ಮಾಡುತ್ತೇನೆ ಎಂದು ರೂಲಿಂಗ್ ನೀಡಿದರು. ವರದಿಯನ್ನು ಸದಸ್ಯರಿಗೆ ನೀಡುವಂತೆ ಸೂಚಿಸಿದರು. ಸಭಾಪತಿಗಳ ನಿರ್ಧಾರಕ್ಕೆ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಬಿಎಂಎಸ್ ಟ್ರಸ್ಟ್ ಅನ್ನು ಖಾಸಗಿಗೆ ಕೊಡಲಾಗಿದೆ ಎನ್ನುವ ವಿಷಯದ ಮೇಲೆ ಚರ್ಚೆಗೆ ಜೆಡಿಎಸ್ ಆಗ್ರಹಿಸಿತು. ನಿಯಮ 72 ರ ಅಡಿ ಚರ್ಚೆಗೆ ಅವಕಾಶ ಕೋರಿ ಜೆಡಿಎಸ್ ನಾಯಕ ಬೋಜೇಗೌಡ ಮನವಿ ಮಾಡಿದರು. ಆದರೆ, ಇದಕ್ಕೆ ಅವಕಾಶ ನೀಡದ ಕಾರಣ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಗದ್ದಲದ ನಡುವೆ ಶಾಸನ ರಚನೆ ಕಲಾಪ ಆರಂಭಿಸಲಾಯಿತು.

ಸರ್ಕಾರದ ವಿರುದ್ಧ ಘೋಷಣೆ: ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತಮ್ಮ ಬೇಡಿಕೆಗಳ ಚರ್ಚೆಗೆ ಅವಕಾಶ ನೀಡದೇ ಶಾಸನರಚನೆ ಕಲಾಪ ಕೈಗೆತ್ತಿಕೊಂಡಿದ್ದನ್ನು ವಿರೋಧಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಭಿತ್ತಿ ಪತ್ರ ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್ ಜೆಡಿಎಸ್ ಸದಸ್ಯರ ಧರಣಿ

ಮೇಜುಕುಟ್ಟಿ ಸ್ವಾಗತ: ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ, ಕರ್ನಾಟಕ ಸ್ಟಾಂಪು ಮೂರನೇ ತಿದ್ದುಪಡಿ ವಿಧೇಯಕ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕಗಳನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್ ಅಂಗೀಕರಿಸಿದ್ದು, ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತ ಮಾಡಿದರು.

ಭಿತ್ತಿಪತ್ರ ಪ್ರದರ್ಶನ: ವಿಧೇಯಕಗಳು ಅಂಗೀಕಾರದ ವೇಳೆ ಸಭಾಪತಿಪೀಠದ ಮುಂದೆ ಸದಸ್ಯರು ಜಮಾವಣೆಗೊಂಡು ಹಗರಣಗಳ ಆರೋಪದ ಭಿತ್ತಿಪತ್ರ ಪ್ರದರ್ಶನ ಮಾಡಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರೂ ಭಿತ್ತಿಪತ್ರ ಪ್ರದರ್ಶನ ಮಾಡಿದರು. ಈ ವೇಳೆ, ಪ್ರತಿಭಟನಾ ನಿರತ ಸದಸ್ಯರು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಘೋಷಣೆ ಪೈಪೋಟಿ ನಡೆಯಿತು.

ಸದನದಲ್ಲಿ ಗದ್ದಲ ಹೆಚ್ಚಾದ ನಡುವೆಯೇ ಸಭಾಪತಿಗಳು 10 ದಿನಗಳ ಕಲಾಪದ ಸಾರಾಂಶವನ್ನು ಸದನದಲ್ಲಿ ಮಂಡಿಸಿದರು. ನಂತರ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ನಂತರ ಕಲಾಪವನ್ನು ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅನಿರ್ಧಿಷ್ಟಾವದಿಗೆ ಮುಂದೂಡಿಕೆ ಮಾಡಿದರು.

ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯಗೊಂಡ ನಂತರ ಸದನದಲ್ಲಿ ಭಾರತ್ ಮಾತಾಕಿ ಜೈ, ಒಂದೇ ಮಾತರಂ ಘೋಷಣೆಗಳು ಮೊಳಗಿದವು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪೈಪೋಟಿಯಲ್ಲಿ ಘೋಷಣೆ ಮೊಳಗಿಸಿದರು.

ಓದಿ: ಮಾಣಿಪ್ಪಾಡಿ ವರದಿ ಮಂಡನೆ: ಕಾಂಗ್ರೆಸ್​​ನ ಪಾಯಿಂಟ್ ಆಫ್ ಆರ್ಡರ್ ತಿರಸ್ಕರಿಸಿದ ಸಭಾಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.