ETV Bharat / state

ತೆನೆ ಇಳಿಸಿ ಕೇಸರಿ ಪಡೆ ಸೇರಿದ ಮಾಜಿ ಸಂಸದ ಶಿವರಾಮೇಗೌಡ: ಮಂಡ್ಯದಲ್ಲಿ ಕಮಲ ಅರಳಿಸುವ ಭರವಸೆ

author img

By

Published : Apr 5, 2023, 12:52 PM IST

ಮಾಜಿ ಸಂಸದ ಶಿವರಾಮೇಗೌಡ ಅವರು ಜೆಡಿಎಸ್​ ತೊರೆದು ಬಿಜೆಪಿ ಸೇರ್ಪಡೆಯಾದರು. ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಅವರು ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.

ಮಾಜಿ ಸಂಸದ ಶಿವರಾಮೇಗೌಡ
ಮಾಜಿ ಸಂಸದ ಶಿವರಾಮೇಗೌಡ

ಬೆಂಗಳೂರು: ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿ ನಡೆಯುತ್ತಿದ್ದು, ಈ ಬಾರಿ ಅಲ್ಲಿ ಕಮಲ ಅರಳಿಸುತ್ತೇವೆ. ಮಂಡ್ಯದಲ್ಲಿ ಬಿಜೆಪಿ ಕಟ್ಟಲು ಸಿದ್ಧನಿದ್ದೇನೆ ಎಂದು ಮಂಡ್ಯದ ಮಾಜಿ ಸಂಸದ ಹಾಗು ಹಿರಿಯ ನಾಯಕ ಎಲ್.ಆರ್. ಶಿವರಾಮೇಗೌಡ ತಿಳಿಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಶಿವರಾಮೇಗೌಡ, ಪುತ್ರ ಚೇತನ್, ಯೂಥ್​ ಕಾಂಗ್ರೆಸ್​ನಲ್ಲಿ ಸಕ್ರಿಯರಾಗಿದ್ದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಲೋಕೇಶ್ ನಾಯಕ್, ಕಲ್ಯಾಣ ಕರ್ನಾಟಕ ಭಾಗದ ವೈದ್ಯ ಹಾಗು ಕೋಲಿ ಸಮಾಜದ ಮುಖಂಡ ಯೋಗೇಶ್ ಬೆಸ್ತರ್, ರಾಮದುರ್ಗದ ಕಾಂಗ್ರೆಸ್ ಮುಖಂಡ ಕುರುಬ ಸಮುದಾಯದ ಚಿಕ್ಕರೇವಣ್ಣ ಬಿಜೆಪಿ ಸೇರ್ಪಡೆಯಾದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಸಚಿವರಾದ ಡಾ. ಕೆ. ಸುಧಾಕರ್‌, ಕೆ. ಗೋಪಾಲಯ್ಯ, ಬಿ. ಶ್ರೀರಾಮುಲು ಅವರು ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.

  • ಬಿಜೆಪಿಯೇ ಭರವಸೆ !

    ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರ ಸಮ್ಮುಖದಲ್ಲಿ ಇಂದು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಂಡ್ಯದ ಮಾಜಿ ಸಂಸದರಾದ ಶ್ರೀ ಎಲ್.‌ ಆರ್. ಶಿವರಾಮೇ ಗೌಡ, ಪ್ರಮುಖರಾದ ಶ್ರೀ ಯೋಗೇಶ್ ಬೆಸ್ತದ್, ಶ್ರೀ ರಾಮಪ್ಪ, ಶ್ರೀ ಮಂಜು ಹಾಗೂ ಅವರ ಬೆಂಬಲಿಗರು ಬಿಜೆಪಿ‌ಗೆ ಸೇರ್ಪಡೆಗೊಂಡರು. #BJPYeBharavase #JoinBJP
    1/2 pic.twitter.com/UgdOtox0sk

    — BJP Karnataka (@BJP4Karnataka) April 5, 2023 " class="align-text-top noRightClick twitterSection" data=" ">

ಮಂಡ್ಯದಲ್ಲಿ ಕಮಲ ಅರಳಿಸುವೆ: ಬಿಜೆಪಿ ಸೇರಿದ ಬಳಿಕ ಮಾತನಾಡಿದ ಶಿವರಾಮೇಗೌಡ ಅವರು, ಬಿಜೆಪಿ ಶಿಸ್ತಿನ ಪಕ್ಷ. ಬೇರೆ ಪಕ್ಷಗಳ ಬಗ್ಗೆ ನಾನು ಮಾತಾಡಲ್ಲ. ನಾನು ಇದುವರೆಗೆ ಕಾಂಗ್ರೆಸ್- ಜೆಡಿಎಸ್​ನಲ್ಲಿ ಪ್ರಬಲ ಹೋರಾಟ ಮಾಡಿ ಬೆಳೆದವನು. ಇವೆರಡೂ ಪಕ್ಷಗಳಲ್ಲಿ ಮಂಡ್ಯ ಭಾಗದಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲೆಡೆ ಅಭಿವೃದ್ಧಿ ಮಾಡುತ್ತಿದ್ದಾರೆ. ಮಂಡ್ಯದ ನೆಲದಲ್ಲಿ ಮೋದಿ ಬಂದು ಬೃಹತ್ ಸಮಾವೇಶದಲ್ಲಿ ಪಕ್ಷ ಕಟ್ಟಲು ಕರೆ ಕೊಟ್ಟರು. ಮಂಡ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಲು ನಾನು ಸಿದ್ಧ ಎಂದು ಪ್ರಕಟಿಸಿದರು.

ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಜಿಲ್ಲೆಯಲ್ಲಿ ಪರಸ್ಪರ ಕಿತ್ತಾಟ ನಡೆಸಿದ್ದಾರೆ. ಆದ್ರೆ ಈ ಬಾರಿ ಕಮಲ ಅರಳಿಸುತ್ತೇವೆ. ಇದುವರೆಗೆ ಮೂರನೇ ಶಕ್ತಿಯಾಗಿದ್ದ ಬಿಜೆಪಿ ಈ ಬಾರಿ ಪ್ರಥಮ ಶಕ್ತಿಯಾಗಿ ಹೊರಹೊಮ್ಮುತ್ತದೆ. ಬಿಜೆಪಿಯ ಕಟ್ಟುಪಾಡುಗಳು ನನಗೆ ಗೊತ್ತಿದೆ. ಅದನ್ನೆಲ್ಲಾ ಒಪ್ಪಿಯೇ ಕೇಸರಿ ಪಡೆಗೆ ಬಂದಿದ್ದೇನೆ ಎಂದು ಶಿವರಾಮೇಗೌಡ ಸ್ಪಷ್ಟಪಡಿಸಿದರು.

ಇನ್ನಷ್ಟು ಜನ ಬಿಜೆಪಿಗೆ ಬರ್ತಾರೆ; ಇನ್ನು 10 ದಿನಗಳಲ್ಲಿ ಇನ್ನಷ್ಟು ಮಂದಿ ಬಿಜೆಪಿ ಸೇರಲಿದ್ದಾರೆ. ರಾಜ್ಯದ ಜನರು ಡಬಲ್ ಇಂಜಿನ್ ಸರ್ಕಾರವನ್ನು ಬಯಸುತ್ತಾರೆ. ಬಿಜೆಪಿ ಸ್ಪಷ್ಟ ಬಹುಮತದ ಮೂಲಕ ಸರ್ಕಾರ ರಚಿಸಲಿದೆ ಎಂದು ಎಲ್ ಆರ್ ಶಿವರಾಮೇಗೌಡ ಭವಿಷ್ಯ ನುಡಿದರು.

ಸಚಿವ ಬಿ.ಶ್ರೀರಾಮುಲು ಮಾತನಾಡಿ, ಲೋಕೇಶ್ ನಾಯಕ್ ಅವರು ಯೂಥ್​ ಕಾಂಗ್ರೆಸ್​ನಲ್ಲಿ ಸಕ್ರಿಯರಾಗಿದ್ದರು. ಹಿಂದೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಈಗ ಅವರು ಬಿಜೆಪಿ ಸೇರ್ಪಡೆ ಆಗಿರುವುದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದರು.

ಇದೇ ವೇಳೆ ಮಾತನಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ರಾಜ್ಯದ ಜನರು ಬಿಜೆಪಿಯ ಪರವಾಗಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಪಕ್ಷ ಗಳಿಸಿ, ಏಕಾಂಗಿಯಾಗಿ ಸರ್ಕಾರ ರಚನೆ ಮಾಡಲಿದೆ. ಅಲ್ಲದೇ, ಮತಗಳ ಹಂಚಿಕೆಯಲ್ಲಿಯೂ ಪಕ್ಷ ಹೆಚ್ಚಿನ ಸಾಧನೆ ಮಾಡಲಿದೆ ಎಂದು ಹೇಳಿದರು.

ಇದನ್ನೂ ಓದಿ: ಕಿಚ್ಚ ಇಂದು ರಾಜಕೀಯ ಎಂಟ್ರಿ ವಿಚಾರ: ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಘೋಷಣೆ ಸಾಧ್ಯತೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.