ETV Bharat / state

ಬಿಜೆಪಿಯಿಂದ ಆಪರೇಷನ್ ಮಂಡ್ಯ, ಕೋಲಾರ, ಉಡುಪಿ, ಮೈಸೂರು: ಬಿಜೆಪಿ ಸೇರಿದ ಕಾಂಗ್ರೆಸ್, ಜೆಡಿಎಸ್ ನಾಯಕರು

author img

By

Published : May 7, 2022, 5:15 PM IST

Updated : May 7, 2022, 8:01 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ಮಂಜುನಾಥಗೌಡ, ಮಾಜಿ ಎಂಎಲ್​ಸಿ ಸಂದೇಶ ನಾಗರಾಜ್, ಜೆಡಿಎಸ್ ನಾಯಕರಾದ ಮಾಜಿ ಐಆರ್​​​ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ ಹಾಗೂ ಮಾಜಿ ಸಚಿವ ಎಸ್.ಟಿ ಜಯರಾಮ್ ಪುತ್ರ ಅಶೋಕ್ ಜಯರಾಂ, ಕೆವಿ ಕೃಷ್ಣಮೂರ್ತಿ ಬಿಜೆಪಿ ಸೇರ್ಪಡೆಯಾದರು.

former-mla-pramod-madhwaraj-resigns-for-congress-and-joined-bjp
ಮಾಜಿ ಶಾಸಕ ಕಾಂಗ್ರೆಸ್​ಗೆ​​ ರಾಜೀನಾಮೆ, ಬಿಜೆಪಿಗೆ ಸೇರ್ಪಡೆ

ಬೆಂಗಳೂರು: ರಾಜ್ಯ ಬಿಜೆಪಿಯ ಮಿಷನ್ 150 ಟಾಸ್ಕ್ ಭಾಗವಾಗಿ ಮಂಡ್ಯ, ಮೈಸೂರು, ಕೋಲಾರ, ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಆಪರೇಷನ್ ಕಮಲ ಆರಂಭವಾದಂತಿದೆ. ಈ ಭಾಗಗಳಲ್ಲಿನ ಕಾಂಗ್ರೆಸ್, ಜೆಡಿಎಸ್ ನಾಯಕರು ಇಂದು ಅಧಿಕೃತವಾಗಿ ಕಮಲ ಪಡೆಗೆ ಸೇರ್ಪಡೆಯಾದರು.‌

ರಾಜಭವನದ ರಸ್ತೆಯಲ್ಲಿರುವ ಪರಾಗ್ ಹೋಟೆಲ್​​ನಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಇಂದಷ್ಟೇ ಕಾಂಗ್ರೆಸ್ ತೊರೆದ ಉಡುಪಿ ನಾಯಕ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ಮಂಜುನಾಥಗೌಡ, ಮಾಜಿ ಎಂಎಲ್​ಸಿ ಸಂದೇಶ ನಾಗರಾಜ್, ಜೆಡಿಎಸ್ ನಾಯಕರಾದ ಮಾಜಿ ಐಆರ್​​​ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ ಹಾಗೂ ಮಾಜಿ ಸಚಿವ ಎಸ್.ಟಿ ಜಯರಾಮ್ ಪುತ್ರ ಅಶೋಕ್ ಜಯರಾಂ, ಕೆವಿ ಕೃಷ್ಣಮೂರ್ತಿ ಬಿಜೆಪಿ ಸೇರ್ಪಡೆಯಾದರು.

Former MLA pramod madhwaraj resigns for congress and joined BJP
ಬಿಜೆಪಿ ಸೇರಿದ ಕಾಂಗ್ರೆಸ್, ಜೆಡಿಎಸ್ ನಾಯಕರು

ಬಿಜೆಪಿ ಸೇರ್ಪಡೆಯಾದ ನಂತರ ಮಾತನಾಡಿದ ಮಾಜಿ ಎಂಎಲ್​ಸಿ ಸಂದೇಶ್ ನಾಗರಾಜ್, ನಾನು ಇಷ್ಟು ದಿನ ಬಿಜೆಪಿಯಲ್ಲಿ ಅಕ್ರಮವಾಗಿದ್ದೆ ಇವತ್ತು ಸಕ್ರಮವಾಗಿದ್ದೇನೆ ನನ್ನಿಂದ ಬಿಜೆಪಿಗೂ ಒಳ್ಳೇದಾಗುತ್ತ, ಬಿಜೆಪಿಯಿಂದ ನನಗೂ ಒಳ್ಳೆಯದಾಗುತ್ತದೆ ಎಂದರು. ಮಾಜಿ ಐಆರ್​ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ ಮಾತನಾಡಿ, ನಾನು ಐಆರ್‌ಎಸ್ ಅಧಿಕಾರಿ ಆಗಿದ್ದವಳು, ವೈದ್ಯೆ ಕೂಡ ರಾಜಕೀಯ ವಲಯದಲ್ಲಿ ಸಮಾಜ ಸೇವೆಗೆ ಹೆಚ್ಚಿನ ಅವಕಾಶ ಇದೆ. ಹಾಗಾಗಿ 2018ರಲ್ಲಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಬಂದೆ, ಆದರೆ ಆಗ ನನ್ನ ರಾಜಕೀಯ ಪ್ರವೇಶ ಫಲಪ್ರದ ಆಗಲಿಲ್ಲ. ಮೋದಿಯವರ ಆಡಳಿತ ರೋಮಾಂಚಕವಾಗಿದ್ದು, ಅನೇಕ ದಿಟ್ಟ ನಿರ್ಧಾರಗಳನ್ನು ಮೋದಿ ಕೈಗೊಂಡಿದ್ದಾರೆ. ಹಾಗಾಗಿ ಬಿಜೆಪಿಗೆ ಬಂದಿದ್ದೇನೆ ಎಂದರು.

ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ಸಿಎಂ ಉತ್ತರ ಕರ್ನಾಟಕ ಭಾಗದವರು. 150 ಸ್ಥಾನಗಳ ಗುರಿ ಈಗ 175 ಕೂಡ ಆಗಬಹುದು. ಕಳೆದ 15 ವರ್ಷಗಳಲ್ಲಿ ರಾಜ್ಯದಲ್ಲಿ ಅನೇಕ ಆಸೆಗಳನ್ನು ಹಿಂದುಳಿದ ಸಮಾಜ ಇಟ್ಟುಕೊಂಡಿತ್ತು, ಈಗ ಅದು ಹುಸಿಯಾಗಿದೆ. ಮುಂದಿನ ದಿನಗಳಲ್ಲಿ ಸಿಎಂ ನಾಯಕತ್ವದಲ್ಲಿ ಆ ವರ್ಗಕ್ಕೆ ನ್ಯಾಯ ಒದಗಿಸುವ ಕೆಲಸ ಆಗುತ್ತದೆ. ನಾನು ನಾಯಕರಿಗೆ ಶಕ್ತಿ ನೀಡುವಂತಹ ಕೆಲಸ ಮಾಡುತ್ತೇನೆ.

ಈ ಹಿಂದೆ ಶಾಸಕನಾಗಿದ್ದಾಗ ನಾನು ಕ್ಷೇತ್ರಕ್ಕೆ ಹೋಗಿಲ್ಲ, ಬಿಜೆಪಿ ಅನುದಾನ ನೀಡಿದ್ದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಗಿ ಗೆದ್ದಿದ್ದೆ, ಕೋಲಾರದಲ್ಲಿ ನನ್ನನ್ನು ಸೋಲಿಸೋಕೆ ಯಾರಿಂದಲೂ ಆಗಲ್ಲ. ಆದರೆ, ಕಳೆದ ಬಾರಿ ನನ್ನ ಶ್ರೀಮತಿ ಅಗಲಿಕೆಯ ನೋವಿನಲ್ಲಿ ಮಾನಸಿಕ ಸ್ಥಿತಿ ಸರಿ ಇರದ ಕಾರಣ ಸೋತೆ. ಆದರೆ 2023ರಲ್ಲಿ ಅಲ್ಲಿ ಬಿಜೆಪಿ ಗೆಲುವು ಖಚಿತ ಎಂದರು.

ಬಿಜೆಪಿ ಸೇರಿದ ಕಾಂಗ್ರೆಸ್, ಜೆಡಿಎಸ್ ನಾಯಕರು

ಮಾಜಿ ಶಾಸಕ ಮಂಜುನಾಥ್ ಗೌಡ, ಮೋದಿಯವರ ಕನಸು ಭಾರತ ಕಟ್ಟಲು ನಾನು ಬಿಜೆಪಿ ಸೇರಿದ್ದೇನೆ. ಸರಳ ಸಿಎಂ ಬೊಮ್ಮಾಯಿ ಬೆಂಬಲಿಸಲು ಸೇರಿದ್ದೇವೆ. ನಾವು ಈಗಷ್ಟೇ ಬಿಜೆಪಿ ಸೇರಿದ್ದೇವೆ, ಇಲ್ಲಿನ ಕಾರ್ಯವೈಖರಿ ನಮಗೆ ಗೊತ್ತಿಲ್ಲ. ನಮ್ಮನ್ನ ಅನುಮಾನಿಸುತ್ತಾರೆ, ಎಲ್ಲಿ ಪಕ್ಷ ಬಿಡ್ತಾರೋ ಅಂತ ಅನುಮಾನ ಸಹಜ. ಆದರೆ ನಮ್ಮ ಜೀವ ಇರೋವರೆಗೂ ನಾವು ಬಿಜೆಪಿಯಲ್ಲಿ ಇರುತ್ತೇವೆ. ಇಲ್ಲೇ ರಾಜಕಾರಣ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಸ್ಥಾನದ ಬೆಲೆ ಪ್ರಕಟಿಸಿದ ಯತ್ನಾಳ್​ಗೆ ಸರ್ಕಾರ ನೋಟಿಸ್​ ನೀಡಿ ವಿಚಾರಣೆಗೆ ಕರೆಯುವುದೇ?: ಖಾದರ್ ಪ್ರಶ್ನೆ

Last Updated : May 7, 2022, 8:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.