ETV Bharat / state

ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಸ್ವಯಂಕೃತ ಅಪರಾಧದಿಂದ ನನ್ನ ಕಾಲ ಮೇಲೆ ನಾನೇ ಕಲ್ಲು ಹಾಕಿಕೊಂಡಿದ್ದೇನೆ : ವಿ.ಸೋಮಣ್ಣ

author img

By

Published : Aug 12, 2023, 4:22 PM IST

Updated : Aug 12, 2023, 5:49 PM IST

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮವರೇ ನನಗೆ ಮೋಸ ಮಾಡಿದರು. ಇದು ಎಲ್ಲರಿಗೂ ಗೊತ್ತು ಎಂದು ಸ್ವಪಕ್ಷೀಯರ ವಿರುದ್ಧವೇ ಮಾಜಿ ಸಚಿವ ವಿ. ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

former-minister-v-somanna-statement
ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಸ್ವಯಂಕೃತ ಅಪರಾಧದಿಂದ ನನ್ನ ಕಾಲ ಮೇಲೆ ನಾನೇ ಕಲ್ಲು ಹಾಕಿಕೊಂಡಿದ್ದೇನೆ : ವಿ.ಸೋಮಣ್ಣ

ಮಾಜಿ ಸಚಿವ ವಿ.ಸೋಮಣ್ಣ

ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಸ್ವಯಂಕೃತ ಅಪರಾಧದಿಂದ, ಚುನಾವಣೆಯಲ್ಲಿ ಸೋತು ಗೋವಿಂದರಾಜನಗರ ಜನರಿಗೆ ಅಪಚಾರ ಮಾಡಿದ್ದೇನೆ. ಈ ಮೂಲಕ ನನ್ನ ಕಾಲಿನ ಮೇಲೆ ನಾನೇ ಕಲ್ಲು ಹಾಕಿಕೊಂಡಿದ್ದೇನೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನನಗೆ ವಿಧಾನಸಭಾ ಚುನಾವಣೆಯಲ್ಲಿ ನಮ್ಮವರೇ ಮೋಸ ಮಾಡಿದರು. ಅದು ಎಲ್ಲರಿಗೂ ಗೊತ್ತು. ನಮ್ಮ ನಾಯಕರ ಒತ್ತಾಯಕ್ಕೆ ಮಣಿದು ನಾನು ಎರಡು ಕಡೆ ಸ್ಪರ್ಧೆ ಮಾಡಿದ್ದೆ. ಹೈಕಮಾಂಡ್ ಕೊಟ್ಟ ಟಾಸ್ಕನ್ನು ನಾನೊಬ್ಬನೇ ಸೀರಿಯಸ್ ಆಗಿ ತೆಗೆದುಕೊಂಡು ಕೆಲಸ ಮಾಡಿದೆ. ಇಷ್ಟಾದರೂ ನಾನು ಚುನಾವಣೆಯಲ್ಲಿ ಸೋತೆ ಎಂದು ಪರೋಕ್ಷವಾಗಿ ಸ್ವಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಒಂದು ಕಡೆ ಮೂರು ಸಾವಿರ ವೋಟ್​​ನಲ್ಲಿ ಸೋತೆ, ಇನ್ನೊಂದು ಕಡೆ 70 ಸಾವಿರ ವೋಟ್ ತೆಗೆದುಕೊಂಡೆ. ನಾನು ಹೇಗೆ ಸೋತೆ ಎಂಬುದು ಎಲ್ಲರಿಗೂ ಗೊತ್ತು. ಅದನ್ನು ನನ್ನ ಬಾಯಿಂದ ಬಿಡಿಸಬೇಡಿ ಎಂದರು. ಇನ್ನು ಪಕ್ಷದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ಕೇಳಿದ್ದೇನೆ. ಆಗಲಿಲ್ಲವೆಂದರೆ ಅಂದರೆ ಎರಡು ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿ ಮಾಡಿ. ನನಗೆ ಅಧ್ಯಕ್ಷ ಸ್ಥಾನ ಕೊಟ್ರೆ ಅದರ ಮಜಾನೇ ಬೇರೆ. ನಾನು ಕೆಲಸ ಮಾಡುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದು ಸೋಮಣ್ಣ ಹೇಳಿದ್ರು.

ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ಸೋಮಣ್ಣ : ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಡಿ.ಕೆ ಶಿವಕುಮಾರ್ ಅವರೇ ನೀವು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಡಿಸಿಎಂ ಅಲ್ಲ. ರಾಜ್ಯದ ಆರು ಕೋಟಿ ಜನರ ಉಪಮುಖ್ಯಮಂತ್ರಿ ಆಗಿದ್ದೀರಿ. ಎಷ್ಟೋ ಕುಟುಂಬಗಳು ಒದ್ದಾಟ ನಡೆಸುತ್ತಿವೆ. ಕೊಪ್ಪಳ, ಸೇಡಂ ಸೇರಿದಂತೆ ಅನೇಕ ಭಾಗದ ಕಾರ್ಮಿಕರು ವಾಪಸ್ ಊರಿಗೆ ಹೊರಟು ನಿಂತಿದ್ದಾರೆ. ಕೆಲಸ ಮಾಡಿ ಅವರಿಗೆ ಸಂಬಳ ನೀಡುವುದಕ್ಕೆ ಆಗುತ್ತಿಲ್ಲ. ಎಲ್ಲಾ ಕಾರ್ಮಿಕರು ಒದ್ದಾಟ ನಡೆಸುತ್ತಿದ್ದಾರೆ ಎಂದು ಹೇಳಿದರು.

ನಿಮ್ಮ ದೂರದೃಷ್ಟಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಕ್ಷೇತ್ರದಲ್ಲಿ ನಿಮ್ಮದೇ ಶಾಸಕರು ಇದ್ದಾರೆ. ತನಿಖೆ ನೆಪದಲ್ಲಿ ಯಾರಿಗೂ ತೊಂದರೆ ನೀಡಬೇಡಿ. ಎಲ್ಲರೂ ಕೂಡ ಕೆಟ್ಟವರು ಅಂದರೆ ಹೇಗೆ. ಈಗ ದಾಖಲೆ ಕೊಡಿ ಎಂದರೆ ಹೇಗೆ?. ಆಗ ನೀವು ನಮ್ಮ ಮೇಲೆ ಆರೋಪ ಮಾಡುವಾಗ ಯಾವ ದಾಖಲೆ ನೀಡಿದ್ದೀರಿ ಎಂದು ಸೋಮಣ್ಣ ಪ್ರಶ್ನಿಸಿದರು.

ಡಿ ಕೆ ಶಿವಕುಮಾರ್ ಅವರು ಪಾರದರ್ಶಕವಾಗಿ ತನಿಖೆ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ನನ್ನ ತಕರಾರು ಇಲ್ಲ. ತನಿಖೆ ಅಳತೆಗೋಲು ವೈಯಕ್ತಿಕವಾಗಿ ಇರಬಾರದು. ಗುತ್ತಿಗೆದಾರನ ಜೊತೆ 200-250 ಕುಟುಂಬಗಳು ಬದುಕುತ್ತಿವೆ. ನನ್ನ ಕ್ಷೇತ್ರದಿಂದಲೇ ನೀವು ತನಿಖೆ ಆರಂಭ ಮಾಡಿ ಎಂದು ಹೇಳಿದರು.

ಟಾರ್ಗೆಟ್ ಮಾಡಿ ತನಿಖೆ ಮಾಡುವುದು ಬೇಡ : ಈ ಹಿಂದೆ ಹಲವು ಹಗರಣಗಳು ತನಿಖೆಗೆ ಹೋಗಿವೆ. ಆದರೆ ಯಾವುದೇ ಫಲಿತಾಂಶ ಬಂದಿಲ್ಲ. ಟಾರ್ಗೆಟ್ ಮಾಡಿ ತನಿಖೆ ಮಾಡುವುದು ಬೇಡ. ನಿಮ್ಮ ತನಿಖೆಯನ್ನು ನಾನು ಬಿಟ್ಟು ಹೋದ ಕ್ಷೇತ್ರದಿಂದಲೇ ಮಾಡಿ. ನಮ್ಮ ಕ್ಷೇತ್ರದಿಂದಲೇ ತನಿಖೆ ಶುರು ಮಾಡಿ, ತಪ್ಪಿತಸ್ಥರಾಗಿದ್ರೆ ನಮಗೆ ಶಿಕ್ಷೆ ಕೊಡಿ ಎಂದರು.

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಅವಧಿಯ ಕೊನೆಯ ದಿನಗಳಲ್ಲಿ 400 ಕೋಟಿ ರೂ. ಹಣ ಬಿಡುಗಡೆ ಆಗಿದೆ. ಅಂದು ಪ್ರಮಾಣಿಕರಾಗಿದ್ದ ಗುತ್ತಿಗೆದಾರರು ಇಂದು ಭ್ರಷ್ಟರಾಗಿದ್ದಾರೆ ಅನ್ನೋದು ಸರಿಯಲ್ಲ. ಬಿಡುಗಡೆಗೆ ಸಿದ್ಧತೆ ಆಗಿರುವ ಪಟ್ಟಿ ಅನುಸಾರ ದುಡ್ಡು ಬಿಡುಗಡೆ ಮಾಡಿ, ಕೆಲಸ ಆಗದಿರುವುದರ ಬಗ್ಗೆ ದುಡ್ಡು ಬಿಡುಗಡೆ ಮಾಡಬೇಡಿ ಎಂದು ಒತ್ತಾಯಿಸಿದರು.

ಬೆಂಗಳೂರು ಶಾಸಕರು ಯಾರು ನನ್ನ ಜತೆ ಮಾತನಾಡಿದ್ದಾರೆ ಎಂದು ಹೇಳುವುದಿಲ್ಲ. ಯಾಕೆಂದರೆ ಅವರಿಗೆ ಸಮಸ್ಯೆ ಆಗುತ್ತದೆ. ಆಗ ಯಾರು ಬರಲ್ಲ. ಗುತ್ತಿಗೆದಾರರಿಂದಲೇ ಸರ್ಕಾರ ಬಂದಿದೆ. ಅವರಿಗೆ ಅನ್ಯಾಯ ಮಾಡಬೇಡಿ. ನಿಮ್ಮ ಶಾಸಕರು ಮತ್ತು ನಿಮ್ಮ ಮಂತ್ರಿಗಳು ನಿಮ್ಮ ಬಗ್ಗೆ ಏನು ಮಾತನಾಡ್ತಾರೆ ಅನ್ನೋದು ನಮಗೆ ಗೊತ್ತಿದೆ. ನಿಮ್ಮ ಸ್ನೇಹಿತನಾಗಿ ಒಂದು ಮಾತು ಹೇಳ್ತಿದ್ದೇನೆ. ಗುತ್ತಿಗೆದಾರರು ಹಣ ಬಿಡುಗಡೆ ಮಾಡಿ ಎಂದು ಹೇಳಿದರು.

ಇದನ್ನೂ ಓದಿ : ಗುತ್ತಿಗೆದಾರರ ಬಿಲ್ ಬಾಕಿ - ತನಿಖೆ ಬಳಿಕ ಸತ್ಯಾಂಶ ಗೊತ್ತಾಗಲಿದೆ: ಸಿಎಂ ಸಿದ್ದರಾಮಯ್ಯ

Last Updated :Aug 12, 2023, 5:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.