ಮಹಾಮಳೆಯಿಂದ ಬೋಟ್​ನಲ್ಲಿ ಓಡಾಡೋ ಪರಿಸ್ಥಿತಿ ನಿರ್ಮಾಣ ಆಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ

author img

By

Published : Sep 8, 2022, 6:25 PM IST

ಮಾಜಿ ಸಿಎಂ ಸಿದ್ದರಾಮಯ್ಯ ಬೋಟ್​ನಲ್ಲಿ ಸಂಚರಿಸಿರುವುದು

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಳೆಯಿಂದಾಗಿ ಉಂಟಾದ ಸಮಸ್ಯೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪರಿಶೀಲನೆ ನಡೆಸಿದರು.

ಬೆಂಗಳೂರು: ಮಹಾನಗರದಲ್ಲಿ ಮಳೆ ಹಾನಿಯಿಂದ ಉಂಟಾಗಿರುವ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಳೆಯಿಂದಾಗಿ ಉಂಟಾದ ಸಮಸ್ಯೆಯ ಪರಿಶೀಲನೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಮವಾರ ಮತ್ತು ಮಂಗಳವಾರ ಮಳೆ ಜೋರಾಗಿತ್ತು. ಯಾವತ್ತೂ ಬೀಳದೆ ಇರೋ ಮಳೆ ಬಂದಿದೆ. ಹೀಗಾಗಿ, ಅನೇಕ ಮನೆಗಳಿಗೆ ನೀರು ತುಂಬಿ ಬೋಟ್​ನಲ್ಲಿ ಓಡಾಡೋ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗ ನಾಲ್ಕೈದು ಅಡಿ ನೀರು ಇತ್ತಂತೆ. ಮನೆಯನ್ನು ಖಾಲಿ ಮಾಡಿದ್ದಾರೆ.

ಜನರ ಸಮಸ್ಯೆಗಳನ್ನು ಆಲಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ಜನರ ಸಮಸ್ಯೆಗಳನ್ನು ಆಲಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ನಮ್ಮ ಕಾಲದಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡುವ ಕ್ರಮ ವಹಿಸಿದ್ವಿ. 1953 ಒತ್ತುವರಿಗಳನ್ನು ಗುರುತು ಮಾಡಿದ್ದೇವೆ. ಅದರಲ್ಲಿ 1300 ಒತ್ತುವರಿ ತೆರವುಗೊಳಿಸಿದ್ವಿ. 600 ಒತ್ತುವರಿ ಹಾಗೆ ಇತ್ತು. ಅದನ್ನು ತೆರವು ಮಾಡಿದ್ದರೆ ಹೀಗೆ ಆಗ್ತಾ ಇರಲಿಲ್ಲ. ಅಕ್ರಮವಾಗಿ ಮನೆ ಕಟ್ಟಿರುವವರ ವಿರುದ್ಧ ಕ್ರಮ ಆಗಿದ್ದರೆ ಹೀಗೆ ಆಗ್ತಾ ಇರಲಿಲ್ಲ ಎಂದರು.

ಮಳೆ ಹಾನಿ ಪ್ರದೇಶಗಳನ್ನು ಪರಿಶೀಲನೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಮಳೆ ಹಾನಿ ಪ್ರದೇಶಗಳನ್ನು ಪರಿಶೀಲನೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಸಿಎಂ ಹೇಳ್ತಾರೆ ಹಿಂದಿನ ಸರ್ಕಾರ ಇದಕ್ಕೆ ಕಾರಣ ಅಂತ. ಅವರೇನು ಮಾಡಿದ್ದಾರೆ ಅಂತ ಹೇಳಬೇಕಲ್ಲಾ? ಅದನ್ನು ಹೇಳೊಲ್ಲ ಅವರು. ಹಿಂದಿನ ಸರ್ಕಾರ ಕಾರಣ ಅಂತ ಹೇಳ್ತಾರೆ. ಬಹಳ ಸುಲಭ ಜವಾಬ್ದಾರಿಯಿಂದ ನುಣುಚಿಕೊಳ್ಳೋದು. ಇದು ಉತ್ತರ ಅಲ್ಲ. ನಾವೇನು ಮಾಡಿದ್ದೇವೆ ಅಂತ ಜನರಿಗೆ ಹೇಳಬೇಕಲ್ವಾ. ಬೆಂಗಳೂರು ನಗರವನ್ನು ಅನಗತ್ಯವಾಗಿ ಹೆಚ್ಚು ಮಾಡಿದ್ರು. 800 ಚದರ್​ ಕಿಲೋ ಮೀಟರ್ ಹೆಚ್ಚು ಮಾಡಿದ್ರು.

ಇದು ಕೂಡ ಒಂದು ಸಮಸ್ಯೆಯಾಗಿದೆ. ಇದಕ್ಕೆ ಒಬ್ಬ ಕಮಿಷನರ್ ಮಾತ್ರ ಇರೋದು. ಒತ್ತುವರಿ ತೆರವಿಗೂ ಕೂಡ ವಿರೋಧ ಮಾಡಿದ್ದರು ಇವರು. ನಿಮ್ಮ ಕೆಲಸ ಮಾಡದೇ ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ನಮ್ಮ ಸರ್ಕಾರದ ಮೇಲೆ ಹೇಳೋದು. ಇಲ್ಲಿನ ಎಂಎಲ್​ಎ ಎಷ್ಟು ವರ್ಷದಿಂದ ಇದಾರೆ. ಅವರು ಏನು ಮಾಡ್ತಾ ಇದ್ದಾರೆ. ಇದಕ್ಕೆ ಜವಾಬ್ದಾರಿ ಬಿಜೆಪಿ ಅಲ್ವಾ? ಅವರು ಮೂರು ವರ್ಷದಿಂದ ಏನೂ ಮಾಡಿಲ್ಲ. ಅದಕ್ಕೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡ್ತಾ ಇದ್ದಾರೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ಬೆಂಗಳೂರಲ್ಲಿ ನೆರೆಹಾನಿ ವೀಕ್ಷಿಸಿದ ಸಿದ್ದರಾಮಯ್ಯ

ಒತ್ತುವರಿ ಮಾಡಲು ಯಾರು ಕಾರಣ. ನಾನು ಅಧಿವೇಶನದಲ್ಲಿ ಇದನ್ನು ಪ್ರಸ್ತಾಪ ಮಾಡ್ತೀನಿ. ಯಾರ ಕಾಲದಲ್ಲಿ ಏನು ಆಗಿತ್ತು ಅಂತ ಹೇಳ್ತೀನಿ. ಇದರಿಂದ ಬ್ರಾಂಡ್ ಬೆಂಗಳೂರಿಗೆ ಎಫೆಕ್ಟ್ ಆಗಿದೆ. ಇದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಐಟಿ, ಬಿಟಿ, ಸಿಟಿ ಅಂತ ಹೇಳ್ತೀವಿ. ಇದೇ ತರ ಮುಂದುವರೆದರೆ ನಾವು ಬಿಡ್ತೀವಿ ಅಂತ ಹೇಳಿದ್ದಾರೆ ಐಟಿ ಬಿಟಿಯವರು. ನಷ್ಟ ಮಾಡಿಕೊಂಡು ಅವರು ಯಾಕೆ ಇರ್ತಾರೆ. ನಾನು ಸರ್ಕಾರಕ್ಕೆ ಹೇಳ್ತೀನಿ. ಒತ್ತುವರಿ ತೆರವು ಮಾಡೋದಿಕ್ಕೆ ಹಾಗೂ ರಾಜಕಾಲುವೆ ಒತ್ತುವರಿ ಮಾಡಿಕೊಂಡವರ ಮೇಲೆ ಕ್ರಮ ವಹಿಸಿ ಎಂದು ಒತ್ತಾಯಿಸಿದರು.

ಗ್ಲೋರಿಟಾ ಅಪಾರ್ಟ್​ಮೆಂಟ್ ವೀಕ್ಷಣೆ : ಶಾಸಕ ಅರವಿಂದ ಲಿಂಬಾವಳಿ ಅವರು ರೂಥ್ ಸಗಾಯ್ ಮೇರಿಗೆ ಬೈದ ಸ್ಥಳಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಪರಿಶೀಲನೆ ಮಾಡಿದರು. ಸಗಾಯ್ ಮೇರಿಯಿಂದಲೂ ಮಾಹಿತಿ ಪಡೆದರು. ರೂಥ್ ಮೇರಿ ಕಾಂಪ್ಲೆಕ್ಸ್ ಹಾಗೂ ಸಮಸ್ಯೆ ಇರುವ ಜಾಗ ವೀಕ್ಷಣೆ ಮಾಡಿದರು. ಇದಾದ ಬಳಿಕ ನಲ್ಲೂರ್ ಹಳ್ಳಿ ವೈಟ್ ಫೀಲ್ಡ್ ರೋಡ್​ನಲ್ಲಿ ಮಳೆ ನೀರು ನುಗ್ಗಿದ್ದ ಬಿಎಂ ಗ್ಲೋರಿಟಾ ಅಪಾರ್ಟ್​ಮೆಂಟ್ ವೀಕ್ಷಣೆ ಮಾಡಿದರು.

ರಾಜಕಾಲುವೆಗಳ ತೆರವು ಮಾಡಿಲ್ಲ: ಇದಾದ ಬಳಿಕ ಮಾತನಾಡಿ, ನಾನು, ರಾಮಲಿಂಗಾ ರೆಡ್ಡಿ ಎಲ್ಲರೂ ಮಹದೇವಪುರ ಕ್ಷೇತ್ರದಲ್ಲಿ ವೀಕ್ಷಣೆ ಮಾಡಿದೆವು. ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಅಲ್ಲಿನ ಜನರ ಸಮಸ್ಯೆ ಆಲಿಸಲು ಹಲವು ಪ್ರದೇಶಗಳn್ನು ವೀಕ್ಷಣೆ ಮಾಡಿದೆ. ಕೆರೆಗಳು ಒಡೆದು ಹೋಗಿವೆ. ರಾಜಕಾಲುವೆಗಳ ತೆರವು ಮಾಡಿಲ್ಲ. ಈ ಸರ್ಕಾರ ಬಂದು ಮೂರು ವರ್ಷಗಳಾಯಿತು. ಪ್ರವಾಹ ಬಂದರೆ ಹಾನಿ ತಡೆಯಲು ಸರ್ಕಾರ ಯಾವ ಕಾರ್ಯಕ್ರಮ ಮಾಡಲಿಲ್ಲ. ದುಡ್ಡು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅದ್ಯಾವುದೂ ಸರಿಯಾಗಿ ಮಾಡುತ್ತಿಲ್ಲ.

ರಾಜಕಾಲುವೆಗಳ ಒತ್ತುವರಿಯ ಸರ್ವೆ: ಶ್ರೀಮಂತ ಬಡಾವಣೆಗಳಲ್ಲಿ ರಸ್ತೆಯಲ್ಲಿ ನಾಲ್ಕೈದು ಅಡಿ ನೀರು ನಿಂತಿತ್ತು. ಕಳೆದ ಸೋಮವಾರ ಮಳೆಯಾದಾಗ ಹತ್ತು ಅಡಿ ನೀರು ನಿಂತಿತ್ತು. ಯಾವಾಗಲೂ ಹೀಗೆ ಆಗಿರಲಿಲ್ಲ. ಬೋಟ್​ನಲ್ಲಿ ಓಡಾಡಬೇಕಾದ ಪರಿಸ್ಥಿತಿ ಬಂದಿರಲಿಲ್ಲ. ಆದರೆ, ಬಸವರಾಜ್ ಬೊಮ್ಮಾಯಿ ಇದಕ್ಕೆಲ್ಲಾ ಹಿಂದಿನ ಸರ್ಕಾರ ಕಾರಣ ಎನ್ನುತ್ತಾರೆ. ನಾವು ಐದು ವರ್ಷ ಸರ್ಕಾರ ನಡೆಸಿದ್ದೆವು. ನಮ್ಮ ಕಾಲದಲ್ಲಿ ರಾಜಕಾಲುವೆಗಳ ಒತ್ತುವರಿಯ ಸರ್ವೆ ಮಾಡಿಸಿದ್ದೆವು. ಈ ಮೂಲಕ ಒತ್ತುವರಿ ತೆರವುಗೊಳಿಸಿದ್ದೆವು. ನಾವು ಹೇಳೋದಲ್ಲ ದಾಖಲೆಗಳೇ ಹೇಳುತ್ತವೆ. ನಮ್ಮ ಸರ್ಕಾರದ ಬಳಿಕ ಈಗಿನ ಸರ್ಕಾರ ಏನೂ ಮಾಡಲಿಲ್ಲ ಎಂದು ಆರೋಪಿಸಿದರು.

ಸರ್ಕಾರದ ವಿರುದ್ಧ ಆಕ್ರೋಶ: ಕೆರೆ ಹೂಳು ಎತ್ತುವುದನ್ನು ಮಾಡಲಿಲ್ಲ. ಒತ್ತುವರಿ ತೆರವುಗೊಳಿಸಲಿಲ್ಲ. ಇದರಿಂದಾಗಿ ಜನರು ಸಂಕಷ್ಟ ಎದುರಿಸುವಂತಾಗಿದೆ. ಈ ಹಿಂದಿನ ಸರ್ಕಾರ ಅಂತಾ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಹಾಗಾದರೆ ಮಹಾದೇವಪುರ ಕ್ಷೇತ್ರದ ಶಾಸಕರು ಯಾರು ? ಅವರದೇ ಪಕ್ಷದ ಅರವಿಂದ ಲಿಂಬಾವಳಿ ಮೂರು ಬಾರಿ ಶಾಸಕರಾಗಿದ್ದಾರೆ. ಅವರೇ ಅಕ್ರಮವಾಗಿ ಅಪಾರ್ಟ್ ಮೆಂಟ್​ಗೆ ಪರವಾನಗಿ ಕೊಡಿಸಿದ್ದಾರಾ ? ಅಕ್ರಮವಾಗಿ ಕಟ್ಟಡಗಳ ನಿರ್ಮಾಣ ಅವರಿಗೆ ಗೊತ್ತಿಲ್ಲವಾ? ಗೊತ್ತಿದ್ದರೂ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ಕಟ್ಟಲು ಅವಕಾಶ: ಅಹವಾಲು ಹೇಳಲು ಬಂದ ಮಹಿಳೆ ವಿರುದ್ಧ ಕೂಗಾಡುವುದು ಶೋಭೆ ತರುವುದಿಲ್ಲ. ಜನಪ್ರತಿನಿಧಿಯಾಗಿರುವ ಅರವಿಂದ ಲಿಂಬಾವಳಿ ನಡೆ ಸರಿಯಲ್ಲ. ಕೆಟ್ಟದಾಗಿ ನಡೆದುಕೊಂಡಿರೋದನ್ನ ಖಂಡಿಸುತ್ತೇನೆ. ನಲ್ಲೂರಳ್ಳಿಯಲ್ಲಿ ರಾಜಕಾಲುವೆ ಪಕ್ಕದಲ್ಲೇ ಕಟ್ಟಡ ಕಟ್ಟಲು ಅವಕಾಶ ನೀಡಿದ್ದಾರೆ. ಯಾರಿಗೋ ಸಹಾಯ ಮಾಡಲು ರಾಜಕಾಲುವೆ ಚಿಕ್ಕದು ಮಾಡಿ ರಸ್ತೆ ಮಾಡಿದ್ದಾರೆ. ಪ್ರತಿಫಲ ಇಲ್ಲದೆ ರಸ್ತೆ ಮಾಡಿರುತ್ತಾರಾ ? ಐಟಿಬಿಟಿ ಕಂಪನಿಗಳು ಹೆಚ್ಚಾಗಿ ಬಂದವು. ಹಾಗಾಗಿ ಅಪಾರ್ಟ್​ಮೆಂಟ್​ಗಳು ಹೆಚ್ಚಾಗಿವೆ.

ಈ ಕ್ಷೇತ್ರ ಬಹಳ ಹುಲ್ಲುಗಾವಲು ಕ್ಷೇತ್ರ. ರೆವಿನ್ಯು ಜಾಗ ಈಗ ಹೆಚ್ಚು ಬೆಲೆ ಬಾಳುತ್ತೆ. ಅವರು ಯಾವುದೇ ಭಾಗದಿಂದ ಬಂದಿರಲಿ. ಆದರೆ, ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಬೇಕು. ರಸ್ತೆಗುಂಡಿಗಳನ್ನ ಮುಚ್ಚೇ ಇಲ್ಲ. ಅಖಿಲಾ ಮೃತಪಟ್ಟು ಮೂರು ದಿನವಾದರೂ ಪರಿಹಾರ ಕೊಟ್ಟಿಲ್ಲ. ಬಿಬಿಎಂಪಿಗೆ ಪರಿಹಾರ ಕೊಡಿ ಅಂದ್ರೆ ನಮ್ಮ ವ್ಯಾಪ್ತಿಗೆ ಬರೋದಿಲ್ಲ ಅಂತಾರೆ. ಬೆಸ್ಕಾಂ ವ್ಯಾಪ್ತಿಗೆ ಬರುತ್ತೆ ಅಂತಾ ಹೇಳುತ್ತಾರೆ. ಯುವತಿ ಅವರ ಕುಟುಂಬಕ್ಕೆ ಆಸರೆಯಾಗಿದ್ದಳು ಎಂದರು.

ಬೆಂಗಳೂರಿಗೆ ಕಾಂಗ್ರೆಸ್ ನಾಯಕತ್ವ ಗೊಂದಲವಿಲ್ಲ. ಬೆಂಗಳೂರಿಗೆ ರಾಮಲಿಂಗಾ ರೆಡ್ಡಿ ನಾಯಕತ್ವ. ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಹೇಳಲಿ. ನಮ್ಮ ಕಾಲದಲ್ಲಿ ಬರೆದ ಪತ್ರನೂ ಇಡಲಿ, ಅವರಿಗೆ ಬರೆದ ಪತ್ರಾನು ಇಟ್ಟು ಏನು ಮಾಡಿದ್ದಾರೆ ಹೇಳಲಿ. ನಾವು ಏನು ಕೆಲಸ ಮಾಡಿದ್ದೇವೆ ಎಂದು ಹೇಳುತ್ತೇವೆ ಎಂದರು.

ಭೇಟಿ ಸಾಂತ್ವನ.. ಜಲಾವೃತಗೊಂಡಿದ್ದ ರಸ್ತೆಯಲ್ಲಿ ಪ್ರಯಾಣಿಸುವಾಗ ವಿದ್ಯುತ್ ಸ್ಪರ್ಶವಾಗಿ ಮೃತರಾದ ಮಹದೇವಪುರದ ಸಿದ್ದಾಪುರ ಬಡಾವಣೆಯ ಯುವತಿ ಅಖಿಲಾ ಅವರ ನಿವಾಸಕ್ಕೆ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಹಾಜರಿದ್ದರು.

ಓದಿ: ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹದಿಂದ ಈರುಳ್ಳಿ ಬೆಳೆ ನೀರುಪಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.