ETV Bharat / state

ಶಿವಕುಮಾರ್ ಅವರೇ ನಿಮ್ಮ ಜೊತೆ ನಾನೂ ಬರ್ತೀನಿ, ನೀವು ಬನ್ನಿ, ಜನರ ಸಮಸ್ಯೆ ಆಲಿಸೋಣ: ಡಿಸಿಎಂಗೆ ಬಿಎಸ್​ವೈ ಆಹ್ವಾನ

author img

By ETV Bharat Karnataka Team

Published : Nov 11, 2023, 6:28 PM IST

ಅಭಿವೃದ್ಧಿ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ.

Former CM BS Yediyurappa
Former CM BS Yediyurappa

ಬೆಂಗಳೂರು: ಜನರ ಸಮಸ್ಯೆಗಳನ್ನು ಆಲಿಸಲು ಜೊತೆಯಾಗಿ ಹೋಗೋಣ; ನೀವೂ ಬನ್ನಿ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಅವರಿಗೆ ಆಹ್ವಾನ ನೀಡಿದರು.

ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮತ್ತು ಬರಗಾಲ ಪರಿಸ್ಥಿತಿ ಅಧ್ಯಯನ ನಡೆಸಿದ ಅವರು, ಕ್ಷೇತ್ರದ ಪರಿಶೀಲನೆ ಮಾಡಿ, ರಸ್ತೆ ಕೆಲಸ ಗಮನಿಸಿದೆ. ಚಿಕ್ಕಬಾಣಾವರ ಕೆರೆ ಯಾವ ಸ್ಥಿತಿಯಲ್ಲಿದೆ ಎಂದು ನೋಡಿದ್ದೇನೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಬೆಂಗಳೂರು ನೋಡುತ್ತಿರುತ್ತಾರೆ. ರಸ್ತೆ ಹಾಳಾಗಿದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಕೆರೆ ಹೂಳು ತುಂಬಿದೆ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ. ಈ ಕುರಿತು ಶಿವಕುಮಾರ್ ಅವರನ್ನು ಪ್ರಶ್ನಿಸುವುದಾಗಿ ತಿಳಿಸಿದರು.

ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಯಲ್ಲಿ ಬಿಎಸ್​ವೈ
ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಯಲ್ಲಿ ಬಿಎಸ್​ವೈ

ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ನಗರೋತ್ಥಾನ ಅಭಿವೃದ್ಧಿ ಅಡಿಯಲ್ಲಿ 110 ಹಳ್ಳಿಗೆ ಬಿಡುಗಡೆ ಆಗಿದ್ದ ಹಣ ವಾಪಸ್ ಪಡೆದಿದ್ದಾರೆ ಎಂದು ಆಕ್ಷೇಪಿಸಿದರು. ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯದಲ್ಲೇ ಅತಿ ಹೆಚ್ಚು ತೆರಿಗೆ ನೀಡುತ್ತದೆ. ಆ ಪ್ರದೇಶವನ್ನೇ ಸರ್ಕಾರ ಕಡೆಗಣನೆ ಮಾಡಿದೆ. ಕಾವೇರಿ ನೀರು ಸರಬರಾಜು ಸರಿಯಾಗಿ ನಡೆದಿಲ್ಲ. ಒಳಚರಂಡಿ ಸಂಪೂರ್ಣ ಹಾಳಾಗಿದೆ. ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿಲ್ಲ. ಚಿಕ್ಕಬಾಣಾವರ ಕೆರೆ ಒಳಚರಂಡಿ, ತಾಜ್ಯದಿಂದ ತುಂಬಿದೆ. ಇದರ ಪುನರುಜ್ಜೀವನ ಮಾಡಲು ತ್ವರಿತ ಕೆಲಸಕ್ಕೆ ಮುಂದಾಗಬೇಕಿದೆ. ಕೆಆರ್​ಐಡಿಎಲ್​ ಮೂಲಕ ಅಭಿವೃದ್ಧಿ ಮಾಡಬೇಕಿದೆ. ಶಿವಕುಮಾರ್ ಅವರು ಉಸ್ತುವಾರಿ ಇದ್ದಾರೆ. ಇದಕ್ಕೆ ಹಣ ಕೊಡಲು ಸಾಧ್ಯವಾಗುವುದಿಲ್ಲವೇ? ಈ ಸರ್ಕಾರ ದಿವಾಳಿ ಆಗಿದೆಯೇ ಎಂದು ಕೇಳಿದರು.

ನೀವೂ ಬನ್ನಿ- ನಾನೂ ಬರ್ತೇನಿ: ಸುಮ್ಮನೆ ದಿನ ದೂಡಲಾಗುತ್ತಿದೆ. ಒಂದೇ ಒಂದು ಕಡೆ ಒಂದು ಕಿ.ಮೀ ರಸ್ತೆ ಮಾಡಿಲ್ಲ. ಸರ್ಕಾರವು ಜನವಿರೋಧಿ ಕೆಲಸ ಮಾಡುತ್ತಿದೆ. ಆರ್ಥಿಕವಾಗಿ ದಿವಾಳಿಯಾಗಿದೆ. ಜನರಿಗೆ ವಾಸ್ತವ ಪರಿಸ್ಥಿತಿ ತಿಳಿಸುವ ಕೆಲಸ ಮಾಡುತ್ತಿಲ್ಲ. ಶಿವಕುಮಾರ್ ಅವರೇ ನಿಮ್ಮ ಜೊತೆ ನಾನು ಬರ್ತೀನಿ, ನೀವು ಬನ್ನಿ, ಈ ಜನರ ಸಮಸ್ಯೆ ಆಲಿಸೋಣ ಎಂದು ಸವಾಲೆಸೆದರು.

ನಮ್ಮ ಶಾಸಕರು ಕೂಡ ಪರಿಶೀಲನೆಗೆ ಬರುತ್ತಾರೆ. ಪ್ರತಿಪಕ್ಷ ಅನ್ನೋ ಕಾರಣಕ್ಕೆ ಕೊಟ್ಟಿರುವ ಅನುದಾನ ವಾಪಸ್ ಪಡೆಯಲಾಗುತ್ತಿದೆ. ಅದನ್ನು ಯಾವುದೇ ಕಾರಣಕ್ಕೂ ಸಹಿಸಲಾಗಲ್ಲ. ಹೋರಾಟ ಮಾಡುವ ಮೊದಲು ಸಮಸ್ಯೆ ಬಗೆಹರಿಸಿ ಎಂದು ಎಚ್ಚರಿಕೆ ನೀಡಿದರು. ನಮ್ಮ ಸರ್ಕಾರ ಇದ್ದಾಗ ಹೇಗೆ ಅಭಿವೃದ್ಧಿ ಆಗಿದೆ ಅಂತ ಇಲ್ಲಿನ ಜನ ಹೇಳುತ್ತಿದ್ದಾರೆ. ಈ ಸರ್ಕಾರ ಬಂದ ಮೇಲೆ ಏನಾಗಿದೆ ಎಂದು ಕೇಳಿದರಲ್ಲದೇ, ನಮ್ಮೆಲ್ಲ ಶಾಸಕರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

ಡಿಸಿಎಂ ಅವರ ಬ್ರಾಂಡ್ ಬೆಂಗಳೂರು ವಿಚಾರದ ಕುರಿತು ಕೇಳಿದಾಗ, ಸುಮ್ಮನೆ ಬೊಗಳೆ ಬಿಡೋದಲ್ಲ. ವಾಸ್ತವ ವಿಚಾರ ಮಾತಾಡಬೇಕು. ಬನ್ನಿ ಜನರ ಮಧ್ಯದಲ್ಲಿ ಕುಳಿತು ಮಾತಾಡೋಣ ಎಂದು ಆಹ್ವಾನಿಸಿದರು. ಬರ ಅಧ್ಯಯನ ವರದಿ ತಯಾರಿ ಮಾಡಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಒಂದು ವರದಿ ಕೊಡುತ್ತೇವೆ ಎಂದು ಅವರು ತಿಳಿಸಿದರು. ಶಾಸಕ ಮುನಿರಾಜು, ಜಿಲ್ಲಾಧ್ಯಕ್ಷ ನಾರಾಯಣ, ಮುಖಂಡ ಮರಿಸ್ವಾಮಿ, ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನಿರೀಕ್ಷಿಸಿರಲಿಲ್ಲ, ಅವಕಾಶ ಕೇಳಿಯೂ ಇರಲಿಲ್ಲ: ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.