ETV Bharat / state

15 ಕೆ.ಜಿ ಅಕ್ಕಿ ನೀಡದಿದ್ದರೆ ಸದನದ ಒಳಗೆ ಹೊರಗೆ ಹೋರಾಟ: ಮಾಜಿ ಸಿಎಂ ಬೊಮ್ಮಾಯಿ

author img

By

Published : Jun 20, 2023, 2:36 PM IST

ಪೊಲೀಸ್ ಬಲದಿಂದ ನಮ್ಮ ಹೋರಾಟ ಹತ್ತಿಕ್ಕಲಾಗಲ್ಲ- ಗ್ಯಾರಂಟಿಯಂತೆ 5 ಕೆ.ಜಿ ಜೊತೆ ನಿಮ್ಮ 10 ಕೆ.ಜಿ ಸೇರಿ 15 ಕೆಜಿ ಅಕ್ಕಿ ನೀಡದಿದ್ದರೆ ಸದನದ ಒಳಗೆ ಹೊರಗೆ ಹೋರಾಟ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.

Former CM Bommai
ಮಾಜಿ ಸಿಎಂ ಬೊಮ್ಮಾಯಿ

ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ಕೇಂದ್ರದ 5 ಕೆ.ಜಿ ಅಕ್ಕಿ ಜತೆಗೆ ನೀವು ನೀಡಿದ್ದ ಗ್ಯಾರಂಟಿ ಭರವಸೆಯಂತೆ ಒಟ್ಟು 15 ಕೆ.ಜಿ ಅಕ್ಕಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲು ಹೊರಟ ನಮ್ಮನ್ನು ವಶಕ್ಕೆ ಪಡೆದು ನಮ್ಮ ಹೋರಾಟ ದಮನ ಮಾಡುತ್ತಿದ್ದಾರೆ. ಪೊಲೀಸ್ ರಾಜ್ಯ ಮಾಡಲು ಹೊರಟಿದ್ದೀರಾ?. ನಿಮ್ಮ ಪೊಲೀಸ್ ರಾಜ್ಯ ಎಷ್ಟು ದಿನ ಇರುತ್ತದೆ ನೋಡೋಣ. ಪೊಲೀಸ್ ಬಲವೋ, ನಮ್ಮ ರಟ್ಟೆಯ ಬಲವೋ ನೋಡೋಣ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು. ಅಕ್ಕಿ ಸೇರಿದಂತೆ ಗ್ಯಾರಂಟಿಗಳ ಗೊಂದಲ, ಸರ್ಕಾರದ ವೈಫಲ್ಯದ ವಿರುದ್ಧ ಸದನದ ಒಳಗೆ, ಹೊರಗೆ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಇದು ಸುಳ್ಳ, ಮಳ್ಳ ಸರ್ಕಾರ: ನಗರದ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ವೇಳೆ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ದರು. ನಂತರ ಕಾನೂನಾತ್ಮಕ ಪ್ರಕ್ರಿಯೆ ಮುಗಿಸಿ ವಾಪಸ್ ಕಳುಹಿಸಿದರು. ಈ ವೇಳೆ ಹೈಗ್ರೌಂಡ್ಸ್ ಠಾಣೆಯ ಆವರಣದಲ್ಲೇ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು. ಇದು ಸುಳ್ಳ, ಮಳ್ಳ ಸರ್ಕಾರ. ಸುಳ್ಳು ಹೇಳುವುದು ಮತ್ತು ಮಳ್ಳನಂತೆ ಮಾಡುವುದು ಎಂದು ಟೀಕಿಸಿದರು.

ನಾವು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು. ಇವರ ಕೈಯಲ್ಲಿ ಒಂದು ಕೆ.ಜಿ ಅಕ್ಕಿ ಕೊಡಲು ಆಗಲಿಲ್ಲ. ಈಗ ಬರ್ತಿರೋ‌ 5 ಕೆ.ಜಿ ಅಕ್ಕಿ ಮೋದಿ ಅವರು ಕೊಡುತ್ತಿರುವುದು. ಕೋವಿಡ್ ಸಂದರ್ಭದಲ್ಲಿ 10 ಕೆ.ಜಿ ಅಕ್ಕಿ ಕೊಟ್ಟರು. ಯಾವಾಗ ಸಂಕಷ್ಟ ಇತ್ತೋ ಆಗ ಧಾವಿಸಿ ಬಂದಿದ್ದಾರೆ. ಪ್ರವಾಹ, ಆಪತ್ತು ಕಾಲದಲ್ಲಿ ರಾಜ್ಯದ ನೆರವಿಗೆ ಧಾವಿಸಿ ಬಂದಿದ್ದು ನರೇಂದ್ರ ಮೋದಿ ಅವರು. ಸುಳ್ಳು ಹೇಳುವ ನೆಪ ಇವರದ್ದು. ಮೊದಲು ಎಲ್ಲರಿಗೂ 10 ಕೆ.ಜಿ ಅಕ್ಕಿ ನೀಡಲಿ ಎಂದು ಆಗ್ರಹಿಸಿದರು.

ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಅಕ್ಕಿ ಇಲ್ಲ ಅಂತ ಗೊತ್ತಿತ್ತು. ಆದರೂ ಯಾಕೆ ಅಕ್ಕಿ ಕೊಡುತ್ತೇವೆ ಎಂದರು?. ಆಗ ತಯಾರಿ ಮಾಡಿಕೊಳ್ಳಲಿಲ್ಲ, ಈಗ ಕೇಂದ್ರ ಅಕ್ಕಿ ಕೊಡಲಿಲ್ಲ ಎನ್ನುತ್ತಿದ್ದೀರಿ. ಹೆಚ್ಚುವರಿ ಅಕ್ಕಿ ಬೇಕು ಎಂದರೆ ಮುಕ್ತ ಮಾರುಕಟ್ಟೆಯಲ್ಲಿ ಖರಿದಿ ಮಾಡಬೇಕು. ನಿಮಗೆ ತಾಕತ್ತು, ದಮ್ಮು ಇದ್ದರೆ ಎಲ್ಲಾ ಕಡೆ ಕೇಂದ್ರದ 5 ಕೆ.ಜಿ ಜೊತೆ ನಿಮ್ಮ ಗ್ಯಾರಂಟಿಯ 10 ಕೆ.ಜಿ ಭರವಸೆ ಸೇರಿ 15 ಕೆ.ಜಿ ಅಕ್ಕಿ ಕೊಡಬೇಕು. ಒಂದು ಮನೆಯಲ್ಲಿ 5 ಜನರಿದ್ದರೆ 75 ಕೆ.ಜಿ ಅಕ್ಕಿ ಕೊಡಬೇಕು ಎಂದು ಆಗ್ರಹಿಸಿದರು.

ಇಂದು ಜನರಿಗೆ ಕರೆಂಟ್ ಶಾಕ್ ಕೊಟ್ಟಿದ್ದಾರೆ. ಕೆಇಆರ್​ಸಿ ನಿಮ್ಮ ಕಾಲದಲ್ಲಿ ಬೆಲೆ ಹೆಚ್ಚಳ ಮಾಡಿದ್ದಾರೆ. ನೀವು ಮನಸ್ಸು ಮಾಡಿದರೆ ವಿದ್ಯುತ್ ದರ ಹೆಚ್ಚಳವನ್ನು ರದ್ದು ಪಡಿಸಬಹುದಿತ್ತು. ಆದರೆ ಯಾಕೆ ಮಾಡಲಿಲ್ಲ? ದರ ಹೆಚ್ಚಳ ಮಾಡಿ ಬರೆ ಹಾಕಿದ್ದೀರಿ. ಬಡವರಿಗೆ ಮೋಸ ಮಾಡುತ್ತಿದ್ದೀರಿ. ಬಸ್ ಸ್ವಲ್ಪ ದಿನದಲ್ಲಿ ನಿಂತು ಹೋಗುತ್ತದೆ. ಈಗಲೇ ಶಡ್ಯುಲ್ ಪ್ರಕಾರ ಬಸ್ ಬರುತ್ತಿಲ್ಲ. ವಿದ್ಯಾರ್ಥಿಗಳು ಬಸ್ ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದ ಆಡಳಿತದ ಹಳಿ ತಪ್ಪಿಸಿದ್ದೀರಿ. ಎಲ್ಲಾ‌ ಕಾಮಗಾರಿ ಸ್ಥಗಿತಗೊಳಿಸಿದ್ದೀರಿ. ನಿಮ್ಮ ಕಮಿಷನ್ ಫಿಕ್ಸ್ ಮಾಡಲು ಮುಂದಾಗಿದ್ದೀರಿ. ನಿಮ್ಮ ಮಂತ್ರಿಗಳು ಓಪನ್ ಆಗಿ ಮಂತ್ಲಿ ಫಿಕ್ಸ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪೊಲೀಸ್ ಬಲವೋ, ನಮ್ಮ ರೆಟ್ಟೆಯ ಬಲವೋ?: ಐಎಎಸ್, ಐಪಿಎಸ್ ಸ್ಥಾನ ಮಾರಾಟಕ್ಕಿಟ್ಟಿದ್ದೀರಿ. ಇದಕ್ಕಾಗಿ ಜನ ನಿಮಗೆ ಮತ ಹಾಕಿದ್ರಾ?. ಇದು ಬಡವರ, ರೈತ ವಿರೋಧಿ ಸರ್ಕಾರ. ಈಗಾಗಲೇ ರೈತ ಸಂಘ ಪ್ರತಿಭಟನೆ ಮಾಡುತ್ತಿದೆ. ರೈತರು, ಬಡವರು, ಕೈಗಾರಿಕೋದ್ಯಮಿಗಳು ಈ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ. ಇದರ ವಿರುದ್ಧ ಪ್ರತಿಭಟನೆ ಮಾಡಿದರೆ ನಮ್ಮನ್ನ ಕ್ಷಣದಲ್ಲಿ ಬಂಧನ ಮಾಡಿಸಿದ್ದಾರೆ. ಹಿಂದೆ ನೀವು ವಿಪಕ್ಷದಲ್ಲಿ ಇದ್ದಾಗ ಅನುಮತಿ ಇಲ್ಲದೆ ಪ್ರತಿಭಟನೆ ಮಾಡಿದ್ದಿರಿ. ಈಗ ನಮ್ಮ ಹೋರಾಟ ದಮನ ಮಾಡುತ್ತಿದ್ದೀರಾ?. ಪೊಲೀಸ್ ರಾಜ್ಯ ಮಾಡಲು ಹೊರಟಿದ್ದೀರಾ.?. ನಿಮ್ಮ ಪೊಲೀಸ್ ರಾಜ್ಯ ಎಷ್ಟು ದಿನ ಇರುತ್ತೆ ನೋಡೋಣ. ಪೊಲೀಸ್ ಬಲವೋ, ನಮ್ಮ ರೆಟ್ಟೆಯ ಬಲವೋ ನೋಡೋಣ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಸವಾಲೆಸೆದರು.

ಅಕ್ಕಿ ಬೇಕಿದ್ದರೆ ಹೋಗಿ ಖರೀದಿ ಮಾಡಿ ಸಿದ್ದರಾಮಯ್ಯ ಅದನ್ನು ಬಿಟ್ಟು ಮೋದಿ ಅವರನ್ನ ಬೈದರೆ ಆಕಾಶಕ್ಕೆ ಉಗುಳಿದಂತೆ‌ ಆಗುತ್ತದೆ ಅಷ್ಟೆ, ಇದರ ವಿರುದ್ಧ ನಾವು ಪ್ರತಿಭಟನೆ ಮಾಡುತ್ತೇವೆ. ಈ ಎಲ್ಲ ವಿಚಾರ ಇರಿಸಿಕೊಂಡು ಸದನದ ಒಳಗೆ, ಹೊರಗೆ ಪ್ರತಿಭಟನೆ ಮಾಡುವುದಾಗಿ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗೊಳಗಾದ ನಾಲ್ವರ ಕುಟುಂಬಕ್ಕೆ ಪರಿಹಾರ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ "ಪರಿಹಾರ ಕೊಡುವಾಗ ಕಾನೂನು ಪ್ರಕಾರ ಕೊಡಬೇಕಾಗುತ್ತದೆ. ಎಲ್ಲೆಲ್ಲಿ ಕೋಮು ಗಲಭೆ ಆಗಿತ್ತೋ ಅಲ್ಲಿ ಕೊಟ್ಟಿದ್ದೇವೆ. ವೈಯಕ್ತಿಕ ಕಾರಣದಿಂದ ಆಗಿರುವುದಕ್ಕೆ ಕೊಟ್ಟಿಲ್ಲ. ತನಿಖೆಯ ಆಧಾರದ ಮೇಲೆ ಪರಿಹಾರ ನಿರ್ಧಾರ ಆಗುತ್ತದೆ " ಎಂದು ಸ್ಪಷ್ಟಪಡಿಸಿದರು.

ಗೂಂಡಾಗಿರಿ ಆರಂಭಿಸಿದ್ದಾರೆ: ಮಾಜಿ ಡಿಸಿಎಂ ಆರ್. ಅಶೋಕ್ ಮಾತನಾಡಿ, ಪೊಲೀಸರು ನಮ್ಮ ನ್ಯಾಯಯುತ ಪ್ರತಿಭಟನೆಗೆ ಅವಕಾಶ ಕೊಡದೆ ಕಾಂಗ್ರೆಸ್ ಚಿತಾವಣೆಗೆ ಬಿಜೆಪಿ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದೆ ಅಂತ ಜನರಿಗೆ ಹೇಳುವ ಕೆಲಸವನ್ನು ನಾವು ಮಾಡಬೇಕಿತ್ತು. ಆದರೆ ಅದಕ್ಕೆ ಅವಕಾಶ ಕೊಡಲಿಲ್ಲ. ಅಧಿಕಾರಕ್ಕೆ ಬಂದ ದಿನದಿಂದಲೇ ಗೂಂಡಾಗಿರಿ ಆರಂಭಿಸಿದ್ದಾರೆ ಎಂದು ಕಿಡಿಕಾರಿದರು.

ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಮತ್ತು ಇತರರು ಸರ್ಕಾರ ಬಂದ 24 ಗಂಟೆಯಲ್ಲಿ ಎಲ್ಲಾ ಗ್ಯಾರಂಟಿಗಳ ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದರು. ಆದರೆ ಈಗ 24 ದಿನ ಮುಗಿದು, ಎಲ್ಲಾ ಆಯ್ತು. ವರ್ಷವಿಡೀ ದೂಡುವ ಕೆಲಸ ಮಾಡುತ್ತಿದ್ದಾರೆ. ಮಾತು ತಪ್ಪಿದ‌ ಕಾಂಗ್ರೆಸ್ ಈಗ 5 ಕೆಜಿ ಅಕ್ಕಿಗೆ ಬಂದಿದ್ದಾರೆ. ನಾಳೆ ಅದೂ ಕೊಡಲ್ಲ. ಮೋದಿ ವಿರುದ್ಧ ಯಾಕೆ ಮಾತನಾಡುತ್ತಿದ್ದಾರೆ ಅಂದರೆ ಒಂದು ದಿನ ಮುಂದೂಡಿದರೆ ಕೋಟಿಗಟ್ಟಲೆ ಉಳಿಯುತ್ತದೆ. ತಿಂಗಳು ಮುಂದೂಡಿದರೆ ಸಾವಿರಾರು ಕೋಟಿ ಉಳಿಯುತ್ತದೆ. ಹಾಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮಂತ್ರಿಗಳು ಮಾಡಬಾರದ್ದನ್ನ ಮಾಡುತ್ತಿದ್ದಾರೆ ಅಂತ ಸಂಸದ ಡಿ.ಕೆ ಸುರೇಶ್ ಹೇಳುತ್ತಿದ್ದಾರೆ. ಇದನ್ನ ನಾವಲ್ಲ ಡಿ.ಕೆ ಸುರೇಶ್ ಹೇಳುತ್ತಿದ್ದಾರೆ. ಬಡವರಿಗೆ ಅಕ್ಕಿ ಕೊಡಬೇಕಿತ್ತು. ಆದರೆ ಅವರ ತಟ್ಟೆಯಲ್ಲಿ ಕಲ್ಲು ಹಾಕಲು ಹೊರಟಿದ್ದಾರೆ. ಅಕ್ಕಿ ಕೊಡೋವುದಾಗಿ ಹೇಳುವ ಮುನ್ನ ತಜ್ಞರ ಅಭಿಪ್ರಾಯ ಪಡೆದಿದ್ರಾ?. ಏಕಾಏಕಿ ಸಂಪುಟದ ಅನುಮತಿ ಪಡೆದಿದ್ದಾರೆ. ಮೋದಿ ಅವರದ್ದು 5 ಕೆ.ಜಿ, ನಿಮ್ಮದು 10 ಕೆ.ಜಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕು. ಅದನ್ನ ಇಳಿಸಿದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನಾರ್ಭಟ: ಬಿಜೆಪಿ ಸಾಂಕೇತಿಕ ಪ್ರತಿಭಟನೆ...ಕಾಂಗ್ರೆಸ್ ಪ್ರತಿಭಟನೆಗೆ ಮಳೆ ಅಡ್ಡಿ! ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.