ETV Bharat / state

ಎಸ್ಇಪಿ ಎಂದರೆ ಸೋನಿಯಾ ಗಾಂಧಿ ಎಜುಕೇಶನ್ ಪಾಲಿಸಿ: ಎನ್ಇಪಿ ಟೀಕಿಸಿದ್ದ ಕಾಂಗ್ರೆಸ್​ಗೆ ಬೊಮ್ಮಾಯಿ ತಿರುಗೇಟು

author img

By ETV Bharat Karnataka Team

Published : Aug 22, 2023, 10:03 PM IST

ಕಾಂಗ್ರೆಸ್ ಸರ್ಕಾರ ಎನ್ಇಪಿ ವಿರೋಧಿ. ವಿರೋಧಕ್ಕಾಗಿ ವಿರೋಧ ಮಾಡುವ ರಾಜಕೀಯ ಚಿಂತನೆ ಕಾಂಗ್ರೆಸ್​ನದ್ದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

former-cm-basavaraj-bommai-slams-congress-govt-on-nep
ಎಸ್ಇಪಿ ಎಂದರೆ ಸೋನಿಯಾ ಗಾಂಧಿ ಎಜುಕೇಶನ್ ಪಾಲಿಸಿ: ಎನ್ಇಪಿ ಟೀಕಿಸಿದ್ದ ಕಾಂಗ್ರೆಸ್​ಗೆ ಬೊಮ್ಮಾಯಿ ತಿರುಗೇಟು

ಬೆಂಗಳೂರು: ಎನ್ಇಪಿ ಎಂದರೆ ನಾಗಪುರ ಶಿಕ್ಷಣ ನೀತಿ ಎನ್ನುತ್ತಾರಲ್ಲ, ಎಸ್ಇಪಿ ಎಂದರೆ ಸೋನಿಯಾ ಗಾಂಧಿ ಎಜುಕೇಶನ್ ಪಾಲಿಸಿ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಸೋನಿಯಾ ಎಂದರೆ ಇಟಲಿ, ಇಟಲಿ ಎಂದರೆ ಯೂರೋಪ್, ಯೂರೋಪ್ ಎಂದರೆ ಮೆಕಾಲೆ, ಮತ್ತೆ ಗುಲಾಮಗಿರಿಯ ಶಿಕ್ಷಣ ಪದ್ದತಿ ಜಾರಿಗೆ ತರಲು ಹೊರಟಿದ್ದೀರಾ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ಪೀಪಲ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ವತಿಯಿಂದ ಆಯೋಜನೆ ಮಾಡಿದ್ದ ಶಿಕ್ಷಣ ತಜ್ಞರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಎನ್ಇಪಿ ವಿರೋಧ ನಿರೀಕ್ಷಿತ. ಇದು ಕಾಂಗ್ರೆಸ್​ನ ಮನಸ್ಥಿತಿ. ಇಂತಹ ಪೂರ್ವಾಗ್ರಹ ಪೀಡಿತ ಚಿಂತನೆ ಇರಿಸಿಕೊಂಡು ಚರ್ಚಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇದಕ್ಕಿಂತ ಶಿಕ್ಷಣ ಕ್ಷೇತ್ರಕ್ಕೆ ಅವಮಾನ ಮತ್ತೊಂದಿಲ್ಲ ಎಂದು ಹೇಳಿದರು.

ಎಲ್ಲ ರಂಗದಲ್ಲಿ ಜಗತ್ತು ಮುಂದೆ ಹೋಗುತ್ತಿದೆ. ನಾನು ಮಾತ್ರ ಇಲ್ಲೇ ಕುಳಿತಿರುತ್ತೇನೆ ಎಂದರೆ ಜಗತ್ತು ಕಾಯುವುದಿಲ್ಲ, ಮುಂದೆ ಹೋಗುತ್ತದೆ. ಆಗ ನಮ್ಮ ಮಕ್ಕಳ ಭವಿಷ್ಯ ಏನು? ನಾವು ಕೂಪ ಮಂಡೂಕಗಳಾಗಬೇಕಾ?. ಪ್ರಗತಿಪರರು ಎಂದು ಹೇಳಿಕೊಂಡು ಪ್ರಗತಿಗೆ ವಿರುದ್ಧ ಹೋಗುತ್ತಿದ್ದಾರೆ. ರಾಜ್ಯವನ್ನು ಮುನ್ನಡೆಸಲು ರಾಜ್ಯದ ಜನ ಅಧಿಕಾರ ಕೊಟ್ಟಿದ್ದಾರೆ ಎಂದರು.

ನೀವು ಇಂದು ನಮ್ಮ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದ್ದೀರಿ, ನೀವು ಬಿಜೆಪಿಯನ್ನು ವಿರೋಧಿಸಿ, ಆದರೆ ಮಕ್ಕಳ ಭವಿಷ್ಯ ಯಾಕೆ ಹಾಳು ಮಾಡುತ್ತಿದ್ದೀರಿ, ಮತ ಹಾಕಿದವರಿಗಷ್ಟೇ ಆಡಳಿತ ನಡೆಸುವುದಲ್ಲ, ಮತ ಹಾಕದ ಮಕ್ಕಳು, ಮೂಕ ಪ್ರಾಣಿಗಳು, ಸಸ್ಯಗಳ ಪೋಷಣೆ ಜವಾಬ್ದಾರಿ ಕೂಡ ನಿಮ್ಮ ಮೇಲಿದೆ.

ಸಿದ್ದರಾಮಯ್ಯ ಅವರೇ ಸಿಎಂ ಆದಾಗ 2017ರಲ್ಲಿ ಏನಾಗಿದೆ ಎಂದು ಅವರಿಗೇ ಗೊತ್ತಿಲ್ಲ, ಅಂದು ಡ್ರಾಫ್ಟ್ ಒಪ್ಪಿಕೊಂಡು ಈಗೇಕೆ ವಿರೋಧಿಸುತ್ತಿದ್ದಾರೆ?, ಬಿಜೆಪಿ ವಿರುದ್ಧವಿದ್ದೇವೆ ಎಂದು ಹೈಕಮಾಂಡ್ ಮೆಚ್ಚಿಸಲು ಹೊರಟಿದ್ದೀರಾ? ಶಿಕ್ಷಣ ರಾಜಕಾರಣ ಮಾಡಬಾರದು ಎಂದವರೇ ಇಂದು ಹೆಚ್ಚು ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಒನ್ ಸಿದ್ದರಾಮಯ್ಯಗೆ ಟೂ ನಡುವೆ ಬಹಳ ವ್ಯತ್ಯಾಸ ಇದೆ, ಅವರು ಯೋಜಿಸುವ ರೀತಿ ಬದಲಾಗಿದೆಯೋ ಸುತ್ತಲಿನವರು ಇದನ್ನೆಲ್ಲಾ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

ಶಿಕ್ಷಣದಲ್ಲಿ ಬದಲಾವಣೆ ಆದರೆ ನಾವು ಸುಮ್ಮನಿರಲ್ಲ, ನಮಗೂ ಜವಾಬ್ದಾರಿ ಇದೆ. ಚುನಾವಣೆಯಲ್ಲಿ ಕೇವಲ ಆಡಳಿತ ಪಕ್ಷ ಮಾತ್ರವಲ್ಲ ಪ್ರತಿಪಕ್ಷ ಕೂಡ ಆಯ್ಕೆ ಮಾಡುತ್ತಾರೆ. ನಮ್ಮನ್ನು ಪ್ರಶ್ನೆ ಕೇಳುವ ಜಾಗದಲ್ಲಿ ಕೂರಿಸಿದ್ದಾರೆ. ನಾವು ಪರಿಣಾಮಕಾರಿಯಾಗಿ ಎನ್ಇಪಿ ತಂದಿದ್ದೇವೆ. ಎಂಪ್ಲಾಯ್ ಮೆಂಟ್ ಮತ್ತು ಎಂಪವರ್ ಮೆಂಟ್ ಎರಡನ್ನೂ ಎನ್ಇಪಿ ಕೊಡಲಿದೆ. ಸಿಬಿಎಸ್ಸಿ ಇತರ ಕೋರ್ಸ್ ಶ್ರೀಮಂತರ ಪಾಲಾಗಿವೆ. ಬಡವರಿಗೆ ಯಾವಾಗ ಈ ಶಿಕ್ಷಣ ಕೊಡುವುದು, ಇಂದು ಗ್ರಾಮೀಣ ಭಾಗದಲ್ಲಿ ಪಿಯುಸಿ ವಿಜ್ಞಾನ ವಿಭಾಗ ಇಲ್ಲ. ಅವರು ಕಲಿಯಲು ಎಲ್ಲಿ ಹೋಗಬೇಕು? ಇದಕ್ಕೆಲ್ಲಾ ಪರಿಹಾರ ಎನ್ಇಪಿಯಲ್ಲಿದೆ. ಎಲ್ಲರಿಗೂ ಅವಕಾಶ ಸಿಗಲಿದೆ, ಕೈಗೆಟುವ ಶುಲ್ಕದ ಶಿಕ್ಷಣ ಸಿಗಲಿದೆ. ಹಳ್ಳಿಯ ರೈತನ ಮಗನಿಗೂ, ದಲಿತರಿಗೂ ಎನ್ಇಪಿ ಅವಕಾಶ ಮಾಡಿಕೊಡಲಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದು ಇದೆಯಾ? ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಷ್ಠೆ ಬಿಟ್ಟು ಎನ್ಇಪಿ ಅಳವಡಿಸಬೇಕು- ಅಶ್ವತ್ಥನಾರಾಯಣ್ : ಈ ಸರ್ಕಾರಕ್ಕೆ ಮತ್ತು ಸಿದ್ದರಾಮಯ್ಯಗೆ ಎನ್ಇಪಿ ಅಂದರೆ ಏನೆಂದು ಗೊತ್ತಿಲ್ಲ. ಪಠ್ಯಪುಸ್ತಕವನ್ನೇ ಎನ್ಇಪಿ ಎಂದು ಅಂದುಕೊಂಡಿದ್ದಾರೆ. ಎನ್ಇಪಿಯಲ್ಲಿ ಒಂದೇ ಒಂದು ನ್ಯೂನತೆ ಇಲ್ಲ. ಯಾವುದದರೂ ನ್ಯೂನತೆ ಇದ್ದಲ್ಲಿ ತೋರಿಸುವಂತೆ ಸಿದ್ದರಾಮಯ್ಯ ಸರ್ಕಾರಕ್ಕೆ ಮಾಜಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಸವಾಲು ಹಾಕಿದ್ದಾರೆ. ಪ್ರತಿಷ್ಟೆ ಬಿಟ್ಟು ಎನ್ಇಪಿ ಅಳವಡಿಸಬೇಕು. ಇಲ್ಲದೇ ಇದ್ದಲ್ಲಿ ಜನಾಂದೋಲನಕ್ಕೆ ಮುಂದಾಗಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಭಾರತ ಜನಸಂಖ್ಯೆ ಆಧಾರಿತ ದೇಶ. ಯುವ ಸಮೂಹದ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಸಮಾನ ಶಿಕ್ಷಣ ಕೊಡಬೇಕು, ಸಮಾನತೆ ಕೊಡಬೇಕು, ಶಿಕ್ಷಣದಲ್ಲಿನ ನ್ಯೂನತೆ ಸರಿಪಡಿಸಬೇಕು ಎನ್ನುವ ಪ್ರಯತ್ನದ ಭಾಗವಾಗಿ ಎನ್ಇಪಿ ತರಲಾಗಿದೆ. ಇದನ್ನು ಕರ್ನಾಟಕಕ್ಕೆ ಪ್ರತ್ಯೇಕವಾಗಿ ತಂದಿರಲಿಲ್ಲ, ದೇಶದ ಮಟ್ಟದಲ್ಲಿ ತರಲಾಗಿದೆ ಎಂದು ಹೇಳಿದರು.

ಎನ್ಇಪಿ ಪ್ರಕ್ರಿಯೆ ಆರಂಭವಾದಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಅಂದಿನ ಸಚಿವರು, ಅಧಿಕಾರಿಗಳು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಆರು ವರ್ಷದ ತಯಾರಿ ನಂತರ 2020ರಲ್ಲಿ ಮೂರನೇ ಎನ್ಇಪಿ ಘೋಷಿಸಲಾಯಿತು. ಎನ್ಇಪಿ ಘೋಷಣೆ ದಿನವೇ ಅಂದಿನ ಸಿಎಂ ಯಡಿಯೂರಪ್ಪ ಕಸ್ತೂರಿ ರಂಗನ್ ನಿವಾಸಕ್ಕೆ ತೆರಳಿ ಅಭಿನಂದಿಸಿ ಎನ್ಇಪಿ ಅಳವಡಿಕೆ ಬಗ್ಗೆ ಘೋಷಿಸಿದ್ದರು. ಎಲ್ಲ ಹಂತದ ಸಭೆ ನಡೆಸಿ ಎನ್ಇಪಿ ಜಾರಿಗೆ ತರಲಾಗಿದೆ, ಖಾಸಗಿ ವಿವಿ, ಅಲ್ಪಸಂಖ್ಯಾತರ ವಿವಿಗಳು ಎನ್ಇಪಿನ ಸ್ವಾಗತ ಮಾಡಿದ್ದಾರೆ. ಆದರೆ ಈ ಸರ್ಕಾರಕ್ಕೆ ಎನ್ಇಪಿ ಅಂದರೆ ಏನು ಎಂದು ಗೊತ್ತಿಲ್ಲ, ಸಿದ್ದರಾಮಯ್ಯಗೆ ಎನ್ಇಪಿ ಅಂದರೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನೀವು ರಾಜಕಾರಣದ ಸಂಧ್ಯಾಕಾಲದಲ್ಲಿದ್ದೀರಾ. ರಾಜ್ಯದ ಯುವಜನರ ಭವಿಷ್ಯಕ್ಕೆ ತೊಂದರೆ ಕೊಡಬೇಡಿ, ಜನ ಅಧಿಕಾರ ಕೊಟ್ಟಿದ್ದಾರೆ. ಜವಾಬ್ದಾರಿಯಿಂದ ನಡೆದುಕೊಳ್ಳಿ. ಪ್ರತಿಷ್ಠೆ ಬಿಟ್ಟು ಎನ್ಇಪಿ ಅಳವಡಿಸಿ. ಇಲ್ಲದೇ ಹೋದಲ್ಲಿ ಜನಾಂದೋಲನಕ್ಕೆ ಮುಂದಾಗಲಿದ್ದೇವೆ ಎಂದು ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು.

ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್ ಮಾತನಾಡಿ, ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಈ ರೀತಿ ಎಲ್ಲ ಆಯ್ಕೆಯ ಅವಕಾಶ ಕಲ್ಪಿಸುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ತಿರಸ್ಕಾರವು ಫ್ಯಾಸಿಸ್ಟ್ ಮನೋಭಾವವಾಗಿದೆ. ವಿಸಿಗಳ ಕರೆದು ಏನೂ ಅಭಿಪ್ರಾಯ ಕೇಳದೆ ಎನ್ಇಪಿ ತಿರಸ್ಕಾರ ಮಾಡುವ ಪ್ರವೃತ್ತಿಯೇ ಫ್ಯಾಸಿಸಂ. ಈ ಸರ್ಕಾರದ ಎನ್ಇಪಿ ರದ್ದು ವಿರೋಧಿ ನೀತಿ ವಿರುದ್ಧ ನಾವು ಬೀದಿಗೆ ಹೋಗಬೇಕು,ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸವಿವರವಾಗಿ ಮಾತಾಡಿದ ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ, ಸಿದ್ದರಾಮಯ್ಯ ಇಂದಿರಾ ಕಾಲದ ಕಾಂಗ್ರೆಸ್ಸಿಗ ಅಲ್ಲ, ಅವರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಏನು ಎಂದು ಗೊತ್ತಾ?. ಈಗಿನ ಕಾಂಗ್ರೆಸ್ಸಿಗರನ್ನು ನೋಡಿದರೆ ಭಯ ಆಗುತ್ತದೆ. ಈಗಿನ ಶಿಕ್ಷಣ ಸಚಿವರು ಇದು ಉತ್ತರಭಾರತದ ಪದ್ದತಿ, ಅದನ್ನು ಹೇರುವ ಪ್ರಯತ್ನ ಮಾಡ್ತಾ ಇದ್ದಾರೆ ಎನ್ನುತ್ತಾರೆ, ಇದನ್ನು ನೋಡಿದರೆ ನಗು ಬರುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ನೆಹರು ಕಾಲದಲ್ಲೇ ಇತ್ತು ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್​ ಪಕ್ಷಕ್ಕೆ ಬಿಜೆಪಿ, ಜೆಡಿಎಸ್​ ಶಾಸಕರ ಅವಶ್ಯಕತೆ ಇಲ್ಲ: ಬಾಲಚಂದ್ರ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.