ETV Bharat / state

ಚುನಾವಣಾ ರಾಜಕೀಯಕ್ಕೆ ಬಿಎಸ್​ವೈ ಗುಡ್ ಬೈ: ಸಕ್ರೀಯ ರಾಜಕಾರಣದಲ್ಲಿ ಮುಂದುವರಿಯುತ್ತಾರೆ ದಣಿವರಿಯದ ನಾಯಕ

author img

By

Published : Jul 22, 2022, 8:48 PM IST

ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ರಾಜ್ಯ ಬಿಜೆಪಿಯ ಅಗ್ರ ನಾಯಕ ಬಿ. ಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರ ಉಳಿಯುವ ಘೋಷಣೆ ಮಾಡಿದ್ದಾರೆ.

ಬಿ. ಎಸ್ ಯಡಿಯೂರಪ್ಪ
ಬಿ. ಎಸ್ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ವರ್ಷದಲ್ಲೇ ಚುನಾವಣಾ ರಾಜಕೀಯಕ್ಕೆ ಮಾಜಿ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಗುಡ್ ಬೈ ಹೇಳಿದ್ದಾರೆ. ಐದು ದಶಕದ ಸುದೀರ್ಘ ಚುನಾವಣಾ ರಾಜಕೀಯದ ಪರ್ವ ಮುಗಿಸಿ ಪುತ್ರನಿಗೆ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಆದರೆ, ಸಕ್ರೀಯ ರಾಜಕಾರಣದಲ್ಲೇ ಮುಂದುವರೆಯಲಿದ್ದಾರೆ.

ಡಾ . ಕೆ ಸುಧಾಕರ್ ಹಾಗೂ ಅಶ್ವತ್ಥ್​ ನಾರಾಯಣ್ ಜತೆ ಬಿಎಸ್​ವೈ
ಡಾ . ಕೆ ಸುಧಾಕರ್ ಹಾಗೂ ಅಶ್ವತ್ಥ್​ ನಾರಾಯಣ್ ಜತೆ ಬಿಎಸ್​ವೈ

ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ರಾಜ್ಯ ಬಿಜೆಪಿಯ ಅಗ್ರ ನಾಯಕ ಬಿ. ಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರ ಉಳಿಯುವ ಘೋಷಣೆ ಮಾಡಿದ್ದಾರೆ. ಪುರಸಭೆಯಿಂದ ಮುಖ್ಯಮಂತ್ರಿ ಸ್ಥಾನದವರೆಗೆ ಬೆಳೆದು ಬಂದ ನಾಯಕನ ನಡೆದು ಬಂದ ಹಾದಿಯೇ ರೋಚಕವಾಗಿದೆ. ಎರಡು ಸ್ಥಾನ ಪಡೆದ ಪಕ್ಷವನ್ನು ಸತತ ಪರಿಶ್ರಮದ ಮೂಲಕ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸಿದ ಹೆಗ್ಗಳಿಕೆ ಯಡಿಯೂರಪ್ಪ ಅವರದ್ದಾಗಿದೆ‌.

ಸಿಎಂ ಬಸವರಾಜ ಬೊಮ್ಮಾಯಿ ಜತೆ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ
ಸಿಎಂ ಬಸವರಾಜ ಬೊಮ್ಮಾಯಿ ಜತೆ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ

ಸೋಲಿಲ್ಲದ ಸರದಾರ: ಪುರಸಭೆ ಸದಸ್ಯ, ಪುರಸಭೆ ಅಧ್ಯಕ್ಷ, ಶಾಸಕ, ಪರಿಷತ್ ಸದಸ್ಯ, ಸಂಸದ, ಪ್ರತಿಪಕ್ಷ ನಾಯಕ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿದ್ದ ಯಡಿಯೂರಪ್ಪ 1999 ರಲ್ಲಿ ಒಮ್ಮೆ ಸೋಲಿನ ರುಚಿ ನೋಡಿದ್ದು ಬಿಟ್ಟರೆ ಸತತವಾಗಿ ಗೆಲ್ಲುತ್ತಲೇ ಬಂದಿದ್ದು, ಸೋಲಿಲ್ಲದ ಸರದಾರನಾಗಿ ಮೆರೆದಿದ್ದಾರೆ. ಎಂಟು ಬಾರಿ ಶಾಸಕರಾಗಿ, ಒಮ್ಮೆ ಸಂಸತ್ ಸದಸ್ಯ, ಒಮ್ಮೆ ಪರಿಷತ್ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ದಣಿವರಿಯದ ನಾಯಕ ಬಿ. ಎಸ್​ ಯಡಿಯೂರಪ್ಪ
ದಣಿವರಿಯದ ನಾಯಕ ಬಿ. ಎಸ್​ ಯಡಿಯೂರಪ್ಪ

ಪುತ್ರನಿಗೆ ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ: ಆನೆ ನಡೆದದ್ದೇ ದಾರಿ ಎನ್ನುವಂತೆ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಸಮಾಜವಾದಿ ನಾಯಕ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರಿಗೂ ಸೋಲಿನ ರುಚಿ ತೋರಿಸಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದ ಬಿಜೆಪಿಯ ಅಗ್ರಗಣ್ಯ ನಾಯಕ ಯಡಿಯೂರಪ್ಪ ಇದೀಗ ಪುತ್ರ ವಿಜಯೇಂದ್ರಗೆ ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ ಪ್ರಕಟಿಸಿದ್ದಾರೆ‌.

ಬಿಜೆಪಿ ವಿರುದ್ಧವೇ ಸಿಡಿದೆದ್ದು ಸಾಮರ್ಥ್ಯ ಸಾಬೀತು: 2011 ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯಡಿಯೂರಪ್ಪ ಪಕ್ಷದ ಹೈಕಮಾಂಡ್ ನಾಯಕರು ತಮ್ಮನ್ನು ನಡೆಸಿಕೊಂಡ ರೀತಿಗೆ ಬೇಸತ್ತು ಪಕ್ಷದ ವಿರುದ್ಧವೇ ತಿರುಗುಬಿದ್ದರು. ಅಂದು ಪ್ರಧಾನಿ ಅಭ್ಯರ್ಥಿ ಆಗಿ ಆಯ್ಕೆಯಾದ ಮೋದಿ ಮಾತನ್ನೂ ಲೆಕ್ಕಿಸದೆ ಕೆಜೆಪಿ ಹೆಸರಿನಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ 2013 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ತಾವೂ ಸೇರಿ ಆರು ಶಾಸಕರು ಆಯ್ಕೆಯಾದರು. ಅಷ್ಟು ಮಾತ್ರವಲ್ಲದೇ ಆಡಳಿತದಲ್ಲಿದ್ದ ಬಿಜೆಪಿಗೆ ಕನಿಷ್ಠ ಪ್ರತಿಪಕ್ಷ ಸ್ಥಾನವೂ ದಕ್ಕದಂತೆ ಮಾಡುವಲ್ಲಿ ಸಫಲರಾಗಿದ್ದರು. ನಂತರ ಮರಳಿ ಬಿಜೆಪಿ ಸೇರಿ ರಾಜ್ಯಾಧ್ಯಕ್ಷ ಸ್ಥಾನ ಪಡೆದುಕೊಂಡು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಿಂಹಪಾಲು ಧಕ್ಕಿಸಿಕೊಟ್ಟರು.

ಮಾಜಿ ಸಿಎಂ ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ

ಪಕ್ಷದಿಂದ ಹೊರಹೋಗಿ ಬಂದರೂ ತಪ್ಪದ ಅಗ್ರ ಸ್ಥಾನ: ಬಿಜೆಪಿಗೆ ಗುಡ್ ಬೈ ಹೇಳಿ ಹೊಸ ಪಕ್ಷ ಕಟ್ಟಿ ಮರಳಿ ಪಕ್ಷಕ್ಕೆ ಬಂದ ನಂತರವೂ ಯಡಿಯೂರಪ್ಪಗೆ ಪಕ್ಷದಲ್ಲಿ ಅಗ್ರಸ್ಥಾನ ಸಿಕ್ಕಿತು. ರಾಜ್ಯ ಬಿಜೆಪಿಯ ಅಗ್ರ ನಾಯಕರಾಗಿಯೇ ಉಳಿದುಕೊಂಡರು. ಪಕ್ಷಾಂತರ ಮಾಡಿದರೂ ಪಕ್ಷದಲ್ಲಿನ ಹಿಡಿತ ಕಳೆದುಕೊಳ್ಳದೇ ಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ ಛಲಬಿಡಿದ ತ್ರಿವಿಕ್ರಮನಾಗಿದ್ದಾರೆ.

ಗೊಂದಲಕ್ಕೆ ತೆರೆ ಎಳೆದ ಬಿಎಸ್​ವೈ: ಎರಡು ವರ್ಷ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ನಂತರ ರಾಜೀನಾಮೆ ನೀಡಿ ತಮ್ಮ ಆಪ್ತ ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿ ಸ್ಥಾನ ಹಸ್ತಾಂತರ ಮಾಡಿರುವ ಯಡಿಯೂರಪ್ಪ, ಇದೀಗ ಸ್ವಕ್ಷೇತ್ರ ಶಿಕಾರಿಪುರವನ್ನು ಪುತ್ರನಿಗೆ ಬಿಟ್ಟುಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ಈ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ತೀರಾ ಕಡಿಮೆ. ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ವಿಜಯೇಂದ್ರ ಕ್ಷೇತ್ರ ಹುಡುಕಾಟದಲ್ಲಿದ್ದರು. ಆದರೆ, ಇಂದು ಆ ಗೊಂದಲಕ್ಕೆ ತೆರೆ ಬಿದ್ದಿದೆ‌.

ಮಾಧ್ಯಮ ಮಿತ್ರರೊಂದಿಗೆ ಮಾತುಕತೆ
ಮಾಧ್ಯಮ ಮಿತ್ರರೊಂದಿಗೆ ಮಾತುಕತೆ

ಮೈತ್ರಿ ಮೂಲಕ ಕಮಲ ಅರಳಿಸಿದ್ದ ಬಿಎಸ್​​​​​ವೈ: 2004 ರಲ್ಲಿ ರಾಜ್ಯದ ಮೊದಲ ಮೈತ್ರಿ ಸರ್ಕಾರ ಕಾಂಗ್ರೆಸ್, ಜೆಡಿಎಸ್ ಮೂಲಕ ರಚನೆಯಾಗಿತ್ತು. ಕಾಂಗ್ರೆಸ್ ನ ಧರಂ ಸಿಂಗ್ ಮುಖ್ಯಮಂತ್ರಿ, ಜೆಡಿಎಸ್ ನ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು. ಆದರೆ, ಬದಲಾದ ರಾಜಕೀಯ ವಿದ್ಯಮಾನಗಳಿಂದ ಸಿದ್ದರಾಮಯ್ಯ ಜೆಡಿಎಸ್ ನಿಂದ ಉಚ್ಚಾಟನೆಗೊಂಡು ಎಂ ಪಿ ಪ್ರಕಾಶ್ ಉಪ ಮುಖ್ಯಮಂತ್ರಿ ಆದರು.

ಅದಾದ ಕೆಲ ಸಮಯದಲ್ಲೇ ಯಡಿಯೂರಪ್ಪ ಕುಮಾರಸ್ವಾಮಿ ನೇತೃತ್ವದ ಹೊಸ ದೋಸ್ತಿ ಸರ್ಕಾರ ರಚನೆಯಾಯಿತು. ಕುಮಾರಸ್ವಾಮಿ ಸಿಎಂ, ಯಡಿಯೂರಪ್ಪ ಡಿಸಿಎಂ ಆದರು. 20-20 ತಿಂಗಳ ಅಧಿಕಾರ ಹಂಚಿಕೆ ಒಪ್ಪಂದದ ಮೇಲೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಯಿತು. ಆ ಮೂಲಕ ಮೊದಲ ಬಾರಿ ರಾಜ್ಯದಲ್ಲಿ ಸರ್ಕಾರದ ಭಾಗವಾಗಿ ಬಿಜೆಪಿ ಅಧಿಕಾರಕ್ಕೆ ಬಂತು.

ಆಪರೇಷನ್ ಕಮಲದ ರುವಾರಿ: ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡದ ಹಿನ್ನೆಲೆ ಮೈತ್ರಿ ತೊರೆದ ಯಡಿಯೂರಪ್ಪ ನೇತೃತ್ವದ ಬಿಜೆಪಿ 2008ರಲ್ಲಿ ಚುನಾವಣೆಗೆ ಹೋಯಿತು. ವಚನಭ್ರಷ್ಟತೆಯ ಅಸ್ತ್ರ ಪ್ರಯೋಗಿಸಿ ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಅಭ್ಯರ್ಥಿ ಆಗಿ ಘೋಷಿಸಿ ಚುನಾವಣೆ ಎದುರಿಸಲಾಯಿತು.

ಅಂದು 110 ಸ್ಥಾನ ಗೆದ್ದ ಯಡಿಯೂರಪ್ಪ ಪಕ್ಷದ ಶಾಸಕರ ಬೆಂಬಲ ಪಡೆದ ಸರ್ಕಾರ ರಚನೆ ಮಾಡಿದರು. ನಂತರ ಸರ್ಕಾರವನ್ನು ಬಲಪಡಿಸಿಕೊಳ್ಳಲು ಆಪರೇಷನ್ ಕಮಲ ಮಾಡಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆತಂದು ಬಿಜೆಪಿಗೆ ಪೂರ್ಣ ಬಹುಮತ ಇರುವಂತೆ ನೋಡಿಕೊಂಡರು.

2018ರ ಚುನಾವಣೆಯಲ್ಲಿಯೂ 2008ರ ಫಲಿತಾಂಶ ಮತ್ತು ರಾಜಕೀಯ ಚಿತ್ರಣವೇ ಮರುಕಳಿಸಿತು. 104 ಸ್ಥಾನ ಗೆದ್ದ ಯಡಿಯೂರಪ್ಪ ಸಿಎಂ ಆದರೂ ಬಹುಮತ ಸಾಬೀತುಪಡಿಸಲಾಗದೇ ರಾಜೀನಾಮೆ ನೀಡಿದರು. ನಂತರ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು.‌ ಆದರೆ ಒಂದೇ ವರ್ಷದಲ್ಲಿ ಕಾಂಗ್ರೆಸ್, ಜೆಡಿಎಸ್ ನ 17 ಶಾಸಕರನ್ನು ರಾಜೀನಾಮೆ ಕೊಡಿಸಿ ಮೈತ್ರಿ ಸರ್ಕಾರವನ್ನು ಅಲ್ಪಮತಕ್ಕೆ ಕುಸಿತವಾಗುವಂತೆ ಮಾಡಿ ಮತ್ತೊಮ್ಮೆ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ರಾಜೀನಾಮೆ ಕೊಟ್ಟು ಬಂದಿದ್ದ ಶಾಸಕರಿಗೆ ಟಿಕೆಟ್ ನೀಡಿ ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಸರ್ಕಾರವನ್ನು ಭದ್ರಪಡಿಸಿಕೊಂಡರು.

ಅಲಂಕರಿಸಿದ ಹುದ್ದೆಗಳು:

1972: ಶಿಕಾರಿಪುರ ತಾಲೂಕು ಜನ ಸಂಘದ ಅಧ್ಯಕ್ಷ
1975:ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆ
1977: ಪುರಸಭೆ ಅಧ್ಯಕ್ಷರಾಗಿ ಆಯ್ಕೆ
1980: ಶಿಕಾರಿಪುರ ತಾಲೂಕು ಬಿಜೆಪಿ ಆಧ್ಯಕ್ಷರಾಗಿ ಆಯ್ಕೆ
1983: ಶಿಕಾರಿಪುರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆ
1983: ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ
1988: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ
1992: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕ
1994: ವಿಧಾನಸಭೆ ಪ್ರತಿಪಕ್ಷ ನಾಯಕನಾಗಿ ಆಯ್ಕೆ
1999: ಶಿಕಾರಿಪುರದಲ್ಲಿ ಮೊದಲ ಸೋಲು. ರಾಜ್ಯಾಧ್ಯಕ್ಷರಾಗಿ ಎರಡನೇ ಬಾರಿ ನೇಮಕ
2000: ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ
2004: ಐದನೇ ಬಾರಿ ಶಿಕಾರಿಪುರದಿಂದ ಗೆಲುವು. ಎರಡನೇ ಬಾರಿ ಪ್ರತಿಪಕ್ಷ ನಾಯಕನಾಗಿ ನೇಮಕ
2006: ಡಿಸಿಎಂ ಆಗಿ ಪ್ರಮಾಣ ವಚನ. ಹಣಕಾಸು, ಅಬಕಾರಿ ಖಾತೆ ನಿರ್ವಹಣೆ
2007: ಏಳು ದಿನ ಮುಖ್ಯಮಂತ್ರಿಯಾಗಿ ಕಾರ್ಯಭಾರ
2008: ಶಿಕಾರಿಪುರದಲ್ಲಿ ಆರನೇ ಬಾರಿ ಗೆಲುವು. ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
2011: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ
2012: ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಬಿಎಸ್​ವೈ
2013: ಶಿಕಾರಿಪುರದಿಂದ ಕೆಜೆಪಿ ಅಭ್ಯರ್ಥಿಯಾಗಿ ಗೆಲುವು. ಏಳನೇ ಬಾರಿ ಶಾಸನ ಸಭೆ ಪ್ರವೇಶ
2014: ಶಾಸಕ ಸ್ಥಾನಕ್ಕೆ ರಾಜೀನಾಮೆ. ಬಿಜೆಪಿ ಸೇರ್ಪಡೆ, ಶಿವಮೊಗ್ಗ ಸಂಸತ್ ಸದಸ್ಯರಾಗಿ ಆಯ್ಕೆ
2014: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆ
2018: ಶಿಕಾರಿಪುರದಿಂದ ಎಂಟನೇ ಬಾರಿ ಆಯ್ಕೆ. 2 ದಿನ ಮುಖ್ಯಮಂತ್ರಿ ಸ್ಥಾನ ಅಲಂಕಾರ
2019: ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
2021: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಓದಿ: ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ಖಂಡಿಸಿದ ರವಿಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.