ETV Bharat / state

ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ

author img

By ETV Bharat Karnataka Team

Published : Oct 20, 2023, 4:49 PM IST

ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಇಂದು ಸಿಎಂ ಮತ್ತು ಡಿಸಿಎಂ ಸಮ್ಮುಖದಲ್ಲಿ ಕಾಂಗ್ರೆಸ್​ ಪಕ್ಷ ಸೇರಿದ್ದಾರೆ.

ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್  ಕಾಂಗ್ರೆಸ್ ಸೇರ್ಪಡೆ
ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಪತಿ ಟಿ.ಪಿ.ಶ್ರೀನಿವಾಸ್ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿ ಸಮೀಪದ ಭಾರತ್ ಜೋಡೋ ಭವನದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಬಿಜೆಪಿ ಮಾಜಿ ಕಾರ್ಪೊರೇಟರ್ ನರಸಿಂಹ ನಾಯ್ಕ್ ಕೂಡಾ ಕೈ ಪಕ್ಷ ಸೇರಿದ್ದಾರೆ. ಸಿಎಂ, ಡಿಸಿಎಂ ಇವರಿಗೆ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

"ಎ.ಕೃಷ್ಣಪ್ಪ ಪಕ್ಷ ಬಿಡಲು ನಾನೂ ಕಾರಣ": ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪೂರ್ಣಿಮಾ ಶ್ರೀನಿವಾಸ್ ತಂದೆ ಎ.ಕೃಷ್ಣಪ್ಪ ಕಾಂಗ್ರೆಸ್ ಪಕ್ಷ ಬಿಡಲು ನಾನೂ ಸ್ವಲ್ಪ ಕಾರಣವಾಗಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಮಾಜಿ ಶಾಸಕಿಯಾಗಿದ್ದ ಪೂರ್ಣಿಮಾ ಎ.ಕೃಷ್ಣಪ್ಪರ ಮಗಳು 2013ರಲ್ಲಿ ಕೃಷ್ಣಪ್ಪರಿಗೆ ಟಿಕೆಟ್ ಕೊಡಲು ಸಾಧ್ಯವಾಗಿಲ್ಲ. ಅದಕ್ಕೆ ನಾನು ಸ್ವಲ್ಪ ಕಾರಣ. ನಾನೇ ಟಿಕೆಟ್ ತಪ್ಪಿಸಿದ್ದೇನೆ ಎಂದರೂ ಪೂರ್ಣಿಮಾ ನನ್ನ ಮೇಲೆ ಕೋಪ ಮಾಡಿಲ್ಲ. ಪಕ್ಷದ್ರೋಹ ಮಾಡಿದ ಭೈರತಿ ಬಸವರಾಜ್​ಗೆ ಟಿಕೆಟ್ ಕೊಡಲು ಹೋಗಿ ಎ.ಕೃಷ್ಣಪ್ಪರಿಗೆ ಅನ್ಯಾಯವಾಯಿತು. ಅವರು ಕಾಂಗ್ರೆಸ್ ಕಟ್ಟಿದವರು. ಪೂರ್ಣಿಮಾ ಹಿರಿಯೂರು ಬಿಜೆಪಿಯಲ್ಲಿ ಶಾಸಕಿಯಾದರು. ಆದರೆ ಅವರ ರಕ್ತ ಕಾಂಗ್ರೆಸ್​ನದ್ದಾಗಿತ್ತು. ಕಾಂಗ್ರೆಸ್ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪಕ್ಷ. ಸಮಾಜವನ್ನು ಜಾತಿ, ಧರ್ಮದ ಆಧಾರದ ಮೇಲೆ ಒಡೆಯುವ ಪಕ್ಷವಲ್ಲ ಎಂದರು.

ಬಿಜೆಪಿ ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಅದರಿಂದ ಸಮಾಜದಲ್ಲಿ ಅಸಮಾನತೆ ಕಾಣುತ್ತಿದ್ದೇವೆ. ಪೂರ್ಣಿಮಾರಿಗೆ ಬಿಜೆಪಿಯಲ್ಲಿದ್ದರೂ ಅವರ ಇಂಗಿತ, ಒಲವು ಕಾಂಗ್ರೆಸ್ ಪರ ಇತ್ತು. ಇನ್ನು ಮುಂದೆ ಪೂರ್ಣಿಮಾಗೆ ಅಥವಾ ಶ್ರೀನಿವಾಸ್​ಗೆ ರಾಜಕೀಯ ಅನ್ಯಾಯ ಮಾಡಲು ಬಿಡುವುದಿಲ್ಲ. ಜಾತ್ಯತೀತ ತತ್ವ ಎಂದುಕೊಂಡು, ಜಾತ್ಯತೀತ ಹೆಸರು ಇಟ್ಟುಕೊಂಡ ಪಕ್ಷ ಈಗ ಕೋಮುವಾದಿ ಪಕ್ಷದ ಜತೆ ಸೇರಿದ್ದಾರೆ. ಯಾವತ್ತೂ ಕಾಂಗ್ರೆಸ್ ಪಕ್ಷ ಕೋಮುವಾದ ಪಕ್ಷದ ಜತೆ ಸೇರಲ್ಲ. ಯಾವ ಜನರು ಅವಕಾಶದಿಂದ ವಂಚಿತರಾಗಿದ್ದಾರೆ, ಸಾಮಾಜಿಕ, ಶೈಕ್ಷಣಿಕವಾಗಿ ಶಕ್ತಿ ಇಲ್ಲದವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯವರ ಮನೆ ದೇವರೇ ಸುಳ್ಳು ಎಂದು ಕಿಡಿ ಕಾರಿದರು.

"ಭಿನ್ನಾಭಿಪ್ರಾಯ ಬಿಟ್ಟು ಕೆಲಸ ಮಾಡಿ": ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನನಗೆ ಇಂದು ಬಹಳ ಸಂತೋಷದ ದಿನ. ನಾವೆಲ್ಲ ಸೇರಿ ಒಟ್ಟಿಗೆ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಕಾರಣಾಂತರದಿಂದ‌ ನಮ್ಮದೇ ತಪ್ಪುಗಳಿಂದ ಕೊಂಡಿ ಕಳಚಿತ್ತು. ಇಂದು ಆ ಕೊಂಡಿ ಬೆಸೆದಿದೆ. ಬಹಳ ದಿನಗಳಿಂದ ಪೂರ್ಣಿಮಾರಿಗೆ ಗಾಳ ಹಾಕುತ್ತಾ ಬಂದಿದ್ದೆ. ಶ್ರೀನಿವಾಸ್​ಗೂ ಗಾಳ ಹಾಕುತ್ತಿದ್ದೆ. ಆದರೆ ಇಂದು ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಸ್ಥಳೀಯ ಎಲ್ಲಾ ಕೈ ನಾಯಕರ ಬಳಿ ಚರ್ಚೆ ಮಾಡಿದ್ದೇನೆ. ಬಳಿಕ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುತ್ತಿದ್ದೇವೆ ಎಂದರು.

ಕಾಂಗ್ರೆಸ್​ಗೆ ಬರುವವರ ದೊಡ್ಡ ಪಟ್ಟಿ ಇದೆ. ಈಗ ಅದನ್ನು ಬಹಿರಂಗಪಡಿಸಲ್ಲ. ಮುಂದೆ ಒಬ್ಬೊಬ್ಬರನ್ನಾಗಿ ಪಕ್ಷ ಸೇರ್ಪಡೆಗೊಳಿಸುತ್ತೇವೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಬಹಳಷ್ಟು ಜನ ಕಾಂಗ್ರೆಸ್​ಗೆ ಸೇರಲಿದ್ದಾರೆ. ಹಳಬರು ಹೊಸಬರೆನ್ನದೇ ಭಿನ್ನಾಭಿಪ್ರಾಯ ಇಲ್ಲದೇ, ಎಲ್ಲವನ್ನೂ ಮರೆತು ಕೆಲಸ ಮಾಡಬೇಕು ಎಂದು ತಿಳಿಸಿದರು.

"ಕಾಂಗ್ರೆಸ್ ರಕ್ತ ನನ್ನದು": ಪೂರ್ಣಿಮಾ ಶ್ರೀನಿವಾಸ್ ಪ್ರತಿಕ್ರಿಯಿಸಿ, ನಮ್ಮ ಕುಟುಂಬವನ್ನು ಕೃಷ್ಣಪ್ಪ ಅವರ ಕುಟುಂಬ ಎಂದೇ ಗುರುತಿಸಲಾಗುತ್ತಿದೆ. ಕಾಂಗ್ರೆಸ್​ನ ಕೃಷ್ಣಪ್ಪ ಎಂದೇ ಗುರುತಿಸುತ್ತಿದ್ದರು. ಕಾರಣಾಂತರದಿಂದ ನಮ್ಮ ತಂದೆ ಕಾಂಗ್ರೆಸ್ ಬಿಡಬೇಕಾಯಿತು. ಈಗ ತಂದೆ ಅವರ ಇಚ್ಚೆಯಂತೆ ಕಾಂಗ್ರೆಸ್​ಗೆ ಸೇರ್ಪಡೆಯಾಗುತ್ತಿದ್ದೇನೆ. ಸಿದ್ದಾಂತ ಒಪ್ಪಿ ಬಂದಿದ್ದೇನೆ. ಕಾಂಗ್ರೆಸ್ ರಕ್ತ ನನ್ನಲ್ಲಿದೆ ಎಂದು ಹಲವರು ಹೇಳಿದ್ದರು. ಈಗ ಅದೇ ರಕ್ತ ನನ್ನನ್ನು ಕಾಂಗ್ರೆಸ್​ಗೆ ಸೆಳೆದು ತಂದಿದೆ. ಮತ್ತೊಂದು ಪಯಣ ಕಾಂಗ್ರೆಸ್​ನಲ್ಲಿ ಆರಂಭವಾಗಿದೆ ಎಂದರು.

ಇದನ್ನೂ ಓದಿ: ಸತ್ತರೆ ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ, ಇದು ನೂರಕ್ಕೆ ನೂರು ಸತ್ಯ: ಕಾಂಗ್ರೆಸ್‌ ಶಾಸಕ ರಾಜು ಕಾಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.