ETV Bharat / state

ಉದ್ಘಾಟನೆಗೆ ಸಿದ್ಧವಾಗಿದೆ ಬೆಂಗಳೂರಿನ ಮೊದಲ ಉಕ್ಕಿನ ಮೇಲ್ಸೇತುವೆ, ನೂರೆಂಟು ಟೀಕೆ

author img

By

Published : Aug 25, 2022, 3:55 PM IST

ಮೇಲ್ಸೇತುವೆಯ ಒಂದು ಭಾಗದ ರಸ್ತೆಯಲ್ಲಿ ಶೇಷಾದ್ರಿಪುರದಿಂದ ರೇಸ್ ಕೋರ್ಸ್ ಕಡೆಗೆ ಆ.15 ರಿಂದಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಗಣೇಶೋತ್ಸವದ ಮುನ್ನಾದಿನ ಮೇಲ್ಸೇತುವೆಗೆ ಅಧಿಕೃತ ಚಾಲನೆ ಸಿಗಲಿದೆ.

ivananda Circle Steel Bridge
ಶಿವಾನಂದ ವೃತ್ತ ಸ್ಟೀಲ್ ಬ್ರಿಜ್

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿಶೇಷ ಕಾಳಜಿಯೊಂದಿಗೆ ಸಿದ್ದಗೊಂಡಿರುವ ಶಿವಾನಂದ ವೃತ್ತ ಸ್ಟೀಲ್ ಬ್ರಿಜ್ (ಉಕ್ಕಿನ ಮೇಲುರಸ್ತೆ) ಈ ತಿಂಗಳಾಂತ್ಯದಲ್ಲಿ ಉದ್ಘಾಟನೆಗೆ ರೆಡಿಯಾಗಿದೆ. ಮೇಲ್ಸೇತುವೆಯ ಒಂದು ಭಾಗದ ರಸ್ತೆಯಲ್ಲಿ ಅಂದರೆ ಶೇಷಾದ್ರಿಪುರದಿಂದ ರೇಸ್ ಕೋರ್ಸ್ ಕಡೆಗೆ ಆ.15 ರಿಂದಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಗಣೇಶೋತ್ಸವದ ಮುನ್ನಾದಿನ ಅಧಿಕೃತವಾಗಿ ಚಾಲನೆ ನೀಡಲು ನಿರ್ಧರಿಸಲಾಗಿದೆ.

ಒಂದು ಭಾಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟರೂ ಈ ಮಧ್ಯೆ ರಿಪೇರಿ ಕೆಲಸದ ಹಿನ್ನೆಲೆಯಲ್ಲಿ ಎರಡು ದಿನ ವಾಹನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆದರೆ ಇದನ್ನು ಕೆಲವು ರಾಜಕೀಯ ನಾಯಕರು ಕಳಪೆ ಕಾಮಗಾರಿಯ ಪರಿಣಾಮ ಎಂದು ಟೀಕಿಸಿದ್ದರು. ಆದರೆ ಗುತ್ತಿಗೆದಾರರೇ ಮಾಹಿತಿ ನೀಡಿರುವಂತೆ ಕಾಮಗಾರಿ ವಿಳಂಬವಾಗಿದೆ ನಿಜ, ಆದರೆ ಕಳಪೆಯಾಗಿಲ್ಲ ಎಂದು ಹೇಳಿದ್ದಾರೆ.

ಇನ್ನೊಂದು ಭಾಗದ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಸರ್ಕಾರ ಗುತ್ತಿಗೆದಾರರಿಗೆ ಸೂಚನೆ ನೀಡಿದೆ. ಕಾಮಗಾರಿಯನ್ನು ಪೂರ್ಣಗೊಳಿಸುವ ಜತೆಗೆ ಕೆಳಭಾಗದ ರಸ್ತೆ ಸಿದ್ಧಪಡಿಸುವ ಕೆಲಸವೂ ಸಾಗಿದೆ. ಒಂದು ಭಾಗದ ಸಂಪೂರ್ಣ ಕಾಮಗಾರಿ ಮುಗಿದಿದೆ. ಇನ್ನೊಂದು ಭಾಗದಲ್ಲಿ ಕಲ್ವರ್ಟ್ ಕೆಲಸ ಬಹುತೇಕ ಮುಗಿದಿದೆ. ಇನ್ನೆರಡು ದಿನದಲ್ಲಿ ಪೂರ್ಣ ಸಿದ್ಧವಾಗಲಿದೆ. ನಿರಂತರ ಮಳೆಯಿಂದ ಮೇಲ್ಸೇತುವೆ ಕಾಮಗಾರಿ ವಿಳಂಬವಾಯಿತು. ಕೆಲವು ಡ್ರೈನ್​ಗಳ ಕೆಲಸ ಬಾಕಿ ಇದ್ದು, ಅದನ್ನೂ ಇನ್ನೊಂದು ವಾರದಲ್ಲಿ ಮುಗಿಸಲಾಗುತ್ತದೆ ಎಂದು ಬಿಬಿಎಂಪಿಯ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ತಿಳಿಸಿದರು.

ಒಳಚರಂಡಿ ಕಾಮಗಾರಿ ಇರುವ ಹಿನ್ನೆಲೆಯಲ್ಲಿ ಮೇಲುರಸ್ತೆಯ ಕೆಳ ಭಾಗದ ರಸ್ತೆಯ ನಿರ್ಮಾಣ ಅತ್ಯಂತ ತ್ವರಿತವಾಗಿ ಆಗುವಂಥದ್ದಲ್ಲ. ಆದರೆ ಮೇಲುರಸ್ತೆಯನ್ನು ಉದ್ಘಾಟನೆಗೆ ಅಣಿಗೊಳಿಸಲಾಗುತ್ತಿದೆ. ಅಂತಿಮ ಹಂತದ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲೇ ಮೇಲುರಸ್ತೆಯ ತೂಕ ಧಾರಣಾ ಶಕ್ತಿ ನಿರ್ಧರಿಸಲು ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಆರಂಭವಾಗಿದ್ದು ಯಾವಾಗ?: ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯು 2017ರ ಅಕ್ಟೋಬರ್​ನಲ್ಲಿ ಆರಂಭವಾಗಿತ್ತು. ಮೊದಲಿನ ಯೋಜನೆಯಂತೆ ಮೂರು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು.

ಕಾಮಗಾರಿ ಸ್ಥಗಿತವಾಗಿದ್ದೇಕೆ?: ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ ಸಾಗಿದ್ದೇ ವಿಳಂಬ. ಈ ಮಧ್ಯೆ ನ್ಯಾಯಾಲಯದಲ್ಲಿ ಪ್ರಕರಣ ಇದ್ದ 10 ತಿಂಗಳು ಕೆಲಸ ಸ್ಥಗಿತಗೊಂಡಿತ್ತು. ಮೇಲುರಸ್ತೆ ಉದ್ದವನ್ನು ಕಡಿತಗೊಳಿಸಿದ್ದ ಬಿಬಿಎಂಪಿಯ ಮಾರ್ಪಡಿಸಿದ ವಿನ್ಯಾಸಕ್ಕೆ ಭಾರತೀಯ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ತಜ್ಞರು ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್​ ಕಾಮಗಾರಿ ಮುಂದುವರಿಸಲು ಜುಲೈ ಮೊದಲ ವಾರ ಬಿಬಿಎಂಪಿಗೆ ಸೂಚನೆ ನೀಡಿತ್ತು.

ಮೇಲ್ಸೇತುವೆ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆಗೆ ಒಪ್ಪದ ಆಸ್ತಿ ಮಾಲೀಕರು, ಬಿಬಿಎಂಪಿಯ ಪರಿಹಾರಕ್ಕೆ ಸಮ್ಮತಿಸಿರಲಿಲ್ಲ. ಹೀಗಾಗಿ, ಅವುಗಳನ್ನು ಹೊರತುಪಡಿಸಿ ಮೇಲ್ಸೇತುವೆ ಉದ್ದ ಕಡಿತಗೊಳಿಸಿ ಕಾಮಗಾರಿ ಮುಗಿಸಲು ಬಿಬಿಎಂಪಿ ಎಂಜಿನಿಯರ್​ಗಳು ವಿನ್ಯಾಸ ಬದಲಿಸಿದ್ದರು. ಅದು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕೊನೆಗೂ ಉದ್ಘಾಟನಾ ಭಾಗ್ಯ ಕಾಣುವ ದಿನ ಹತ್ತಿರವಾಗಿದೆ.

ರಾಜಕೀಯ ನಾಯಕರ ಟೀಕೆಗಳೇನು?: ಆಮ್ ಆದ್ಮಿ ಪಕ್ಷದ ನಾಯಕ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದು, ನಾನು ಶಿವಾನಂದ ಸರ್ಕಲ್ ಫ್ಲೈಓವರ್​ನಲ್ಲಿ ಪ್ರಯಾಣಿಸಿದ್ದೇನೆ. ಪ್ರತಿಯೊಂದು ಜಾಯಿಂಟ್​ಗಳು ಸ್ಪೀಡ್ ಬ್ರೇಕರ್​ನಂತೆ ತೋರುತ್ತಿದೆ. ನೀವು ನನ್ನನ್ನು ನಂಬದಿದ್ದರೆ ದಯವಿಟ್ಟು ನೀವೇ ನೋಡಿ. ಫ್ಲೈಓವರ್​ ಕೆಳಗಿನ ರಸ್ತೆಯ ಸಂಚಾರ ಕಷ್ಟ ಸಾಧ್ಯವಾಗಿದೆ. ಕಿರಿದಾಗಿದ್ದು, ಸುಗಮ ಸಂಚಾರ ಲಭಿಸುವುದಿಲ್ಲ. ಇಲ್ಲಿ ತೆರಳುವಾಗ ಬಸ್​ಗಳು ಮತ್ತು ಟ್ರಕ್​ಗಳು ಸಿಲುಕಿಕೊಳ್ಳುತ್ತವೆ. ಯಾರೂ ಜವಾಬ್ದಾರರಾಗಿರುವುದಿಲ್ಲವಾದ್ದರಿಂದ ನಾವು ಅದನ್ನು ಸಹಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿ ಟೀಕಿಸಿದ್ದು, ಬಿಜೆಪಿಯ ಕಳಪೆ ಕಾಮಗಾರಿ & ಕಮಿಷನ್ ಲೂಟಿಯ ನಿದರ್ಶನಗಳು. ಉದ್ಘಾಟನೆಗೊಂಡ 2 ತಿಂಗಳಲ್ಲಿ ಕುಸಿದ ಸ್ಟೇಡಿಯಂನ ಗ್ಯಾಲರಿ, ಉದ್ಘಾಟನೆಗೊಳ್ಳುವ ಮೊದಲೇ ಕುಸಿದ ಬೆಂಗಳೂರು-ಮೈಸೂರು ಹೆದ್ದಾರಿ, ಉದ್ಘಾಟನೆಯಾದ ವಾರಕ್ಕೆ ದುರಸ್ಥಿ ಹಂತ ತಲುಪಿದ ಶಿವಾನಂದ ಸರ್ಕಲ್ ಫ್ಲೈಓವರ್ ಬ್ರಿಡ್ಜ್, ಭ್ರಷ್ಟ ಸರ್ಕಾರದ ಅಮೋಘ 40% ಕಮಿಷನ್ ಪ್ರದರ್ಶನ ಎಂದಿದ್ದಾರೆ.

ಇದನ್ನೂ ಓದಿ : ನಿರ್ಮಾಣ ಮಾಡಿ ಒಂದೇ ತಿಂಗಳಿಗೆ ಹದಗೆಟ್ಟ ಅಥಣಿ ರಸ್ತೆ... ಜನರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.