ETV Bharat / state

Fire accident: ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ; ಪೊಲೀಸ್ ತನಿಖೆಗೆ ಸಿಎಂ ಸೂಚನೆ- ಡಿಕೆಶಿ

author img

By

Published : Aug 11, 2023, 5:50 PM IST

Updated : Aug 11, 2023, 10:56 PM IST

Fire accident at BBMP office: ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿರುವ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

Fire Accident at BBMP Office
ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ

ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ಬಿಬಿಎಂಪಿ ಮುಖ್ಯ ಕಚೇರಿಯ ಆವರಣದಲ್ಲಿರುವ ಗುಣ ನಿಯಂತ್ರಣ ವಿಭಾಗದ ಪ್ರಯೋಗಾಲಯ ಹಾಗೂ ಕಚೇರಿ ಕಟ್ಟಡದಲ್ಲಿ ಇಂದು ಬೆಂಕಿ ಅನಾಹುತ ಸಂಭವಿಸಿತು. ಅವಘಡದಲ್ಲಿ 9 ಮಂದಿ ಪಾಲಿಕೆ ಸಿಬ್ಬಂದಿ ಗಾಯಗೊಂಡರು. ಘಟನಾ ಸ್ಥಳಕ್ಕೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ

ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಪ್ರತಿಕ್ರಿಯಿಸಿ, "ಬಿಬಿಎಂಪಿ ಮುಖ್ಯ ಕಚೇರಿಯ ಪ್ರಯೋಗಾಲಯದಲ್ಲಿ ಘಟನೆ ನಡೆದಿದೆ. ಓವನ್ ಬಾಕ್ಸ್ ಲೀಕ್ ಆಗಿ ಅವಘಡ ಉಂಟಾಯಿತು. ಏಳು ಜನರಿಗೆ ಗಾಯವಾಗಿದೆ. ನಾಲ್ವರಿಗೆ ಗಂಭೀರ ಗಾಯಗಳಾಗಿದೆ. ಈಗಾಗಲೇ ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎನ್ನುವುದು ತನಿಖೆಯ ನಂತರ ಗೊತ್ತಾಗಲಿದೆ" ಎಂದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಮಾತನಾಡಿ, "ಸುಮಾರು 5 ರಿಂದ 5:30ರ ಹೊತ್ತಿಗೆ ಕಚೇರಿಯಲ್ಲಿ ಕೂತಿದ್ದಾಗ ವಿದ್ಯುತ್​ ಕಡಿತವಾಯಿತು. ಆಗ ಹಿಂದಿನ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಯಿತು. ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಹೀಗಾಗಿ, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಗಾಯಗೊಂಡರು. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್​ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಮಾಹಿತಿ ನೀಡಿದರು.

ರಸ್ತೆ ಡಾಂಬರು ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆನ್ಜೆಮಿನ್ ಎಂಬ ಕೆಮಿಕಲ್​​ ಅನ್ನು ಬಿಟುಮಿನ್ ಟೆಸ್ಟ್‌ಗೆ ಬಳಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸ್ಪಾರ್ಕ್ ಆಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮೇಲ್ಭಾಗದಲ್ಲಿದ್ದ ಕಚೇರಿಗೂ ಬೆಂಕಿ ಆವರಿಸಿದೆ.

ಗಾಯಾಳುಗಳ ವಿವರ: ಮುಖ್ಯ ಅಭಿಯಂತರ ಶಿವಕುಮಾರ್, ಕಾರ್ಯಪಾಲಕ ಅಭಿಯಂತರರಾದ ಕಿರಣ್, ಸಂತೋಷ್ ಕುಮಾರ್, ವಿಜಯಮಾಲ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್, ಪ್ರಥಮ ದರ್ಜೆ ಸಹಾಯಕ ಕಿರಣ್, ಆಪರೇಟರ್ ಜ್ಯೋತಿ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಶ್ರಿನಿವಾಸ್, ಗಣಕಯಂತ್ರ ನಿರ್ವಾಹಕ ಮನೋಜ್ ಅಗ್ನಿ.

ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 7 ಜನ ಪುರುಷ ಸಿಬ್ಬಂದಿ ಗಾಯಗೊಂಡಿದ್ದಾರೆ. ಮುಖ್ಯ ಅಭಿಯಂತರ ಶಿವಕುಮಾರ್ ಅವರನ್ನು ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ 8 ಮಂದಿಗೆ ಮಾರ್ಥಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ವಿಕ್ಟೋರಿಯಾಗೆ ಕಳುಹಿಸಲಾಗಿದೆ.

ಸಮತಾ ಸೈನಿಕ ದಳದ ಮಹಿಳಾ ಅಧ್ಯಕ್ಷೆ ಕಮಲಾ

ಪ್ರತ್ಯಕ್ಷದರ್ಶಿ ಹೇಳಿದ್ದೇನು?: "ರಸ್ತೆ ಡಾಂಬರು ಗುಣಮಟ್ಟ ಪರಿಶೀಲಿಸುವ ಕೊಠಡಿಯ ಬಾಗಿಲಿನಿಂದಲೇ ಬೆಂಕಿ ಹೊತ್ತಿ ಕೊಂಡಿತು. ತಕ್ಷಣ ಅಲ್ಲಿದ್ದ ಚಾಲಕರು ಮತ್ತು ನಾವೆಲ್ಲ ಬೆಂಕಿ ನಂದಿಸಲು ಯತ್ನಿಸಿದೆವು. ಒಳಗಡೆ ಇದ್ದವರು ಹೊರಗಡೆ ಬರಲು ಸಾಧ್ಯವಾಗಲಿಲ್ಲ. ನಮಗೂ ಒಳಗಡೆ ಹೋಗಲು ಸಾಧ್ಯವಾಗಲಿಲ್ಲ. ಒಳಗಡೆ 9 ಜನ ಇದ್ದರು. ಅದರಲ್ಲಿ ಇಬ್ಬರು ಮಾತ್ರ ಹೊರಗಡೆ ಬಂದರು. 7 ಜನ ಒಳಗಡೆ ಸಿಲುಕಿದ್ದರು. ಬಳಿಕ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತು. ಒಳಗಡೆ ಸಿಲುಕಿದ್ದವರೆಲ್ಲ ಗಾಯಗೊಂಡಿದ್ದಾರೆ. ದಾಖಲಾತಿಗಳ ಸೆಕ್ಷನ್ ಪಕ್ಕದಲ್ಲೇ ಅಗ್ನಿ ಅವಘಡ ಸಂಭವಿಸಿದೆ. ಆದ್ರೆ ಬೆಂಕಿ ದಾಖಲಾತಿಗಳ ವಿಭಾಗದವರೆಗೆ ಹಬ್ಬಿಲ್ಲ" ಎಂದು ಪ್ರತ್ಯಕ್ಷದರ್ಶಿ ಸಮತಾ ಸೈನಿಕ ದಳದ ಮಹಿಳಾ ಅಧ್ಯಕ್ಷೆ ಕಮಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪೊಲೀಸ್ ತನಿಖೆಗೆ ಸಿಎಂ ಸೂಚನೆ- ಡಿಕೆಶಿ: ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಬಿಎಂಪಿ ಕೇಂದ್ರ ಕಚೇರಿಗೆ ತೆರಳಿ, ಪರಿಶೀಲಿಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, "ಪ್ರಕರಣದ ಬಗ್ಗೆ ಪೊಲೀಸ್ ತನಿಖೆಗೆ ಸಿಎಂ ಸೂಚಿಸಿದ್ದಾರೆ. ನಾನು ಯಾರ ಮೇಲೂ ಆರೋಪ ಮಾಡಲ್ಲ. ಇದು ಟೆಕ್ನಿಕಲ್ ವಿಚಾರ. ಪ್ರಯೋಗಾಲಯದ ಲೊಕೇಷನ್ ಸರಿಯಿಲ್ಲ, ಪ್ರತ್ಯೇಕ ಜಾಗದಲ್ಲಿ ಇದನ್ನು ಮಾಡಬೇಕಿತ್ತು. ಲ್ಯಾಬ್ ಶಿಫ್ಟ್ ಮಾಡಿಸುವ ಕೆಲಸ ಮಾಡುತ್ತೇವೆ. ಬೆಂಕಿ ಹೊತ್ತಿಕೊಂಡಾಗ ಅಧಿಕಾರಿಗಳು ರಕ್ಷಣೆಗೆ ಮುಂದಾಗಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಗೆ ಸೂಚಿಸಿದ್ದೇವೆ. 48 ಗಂಟೆಗಳ ನಂತರವೂ ಅವರನ್ನು ನಿಗಾವಹಿಸಲು ಹೇಳಿದ್ದೇವೆ" ಎಂದು ತಿಳಿಸಿದರು.

ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಭೈರತಿ ಸುರೇಶ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಮಾತನಾಡಿದ ಕೆ.ಜೆ.ಜಾರ್ಜ್, "ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಆಸ್ಪತ್ರೆ ಭೇಟಿ ನೀಡಿದ್ದೇವೆ. ಕೆಲವರಿಗೆ ಸುಟ್ಟ ಗಾಯಗಳಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಕಾರವೇ ಎಲ್ಲ ವೆಚ್ಚ ಭರಿಸಲಿದೆ" ಎಂದರು.

"ಪ್ರಯೋಗಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಂತರ ಸಂಪೂರ್ಣ ಮಾಹಿತಿ ತಿಳಿಯಲಿದೆ" ಎಂದು ಮಾಹಿತಿ ನೀಡಿದರು.

ಈ ಹಿಂದೆ ನಡೆದ ಅವಘಡಗಳು: 2011ರ ನವೆಂಬರ್ 19ರಂದು ಪಾಲಿಕೆಯ ಕೇಂದ್ರ ಕಚೇರಿಯ ಅನೆಕ್ಸ್ ಕಟ್ಟಡದಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಸಾವಿರಾರು ಕೋಟಿ ರೂ ಹಗರಣದ ಮಹತ್ವದ ದಾಖಲೆಗಳೆಲ್ಲ ಸುಟ್ಟು ಭಸ್ಮವಾಗಿತ್ತು. ಮಹತ್ವದ ದಾಖಲೆಗಳನ್ನು ಸರ್ವನಾಶ ಮಾಡಲೆಂದೇ ವ್ಯವಸ್ಥಿತ ಸಂಚು ಮಾಡಿದ್ದು, ಮೇಲ್ನೋಟಕ್ಕೆ ಸಾಬೀತಾಗಿತ್ತು. 2022ರ ಏಪ್ರಿಲ್ 5ರಂದು ಯಲಹಂಕ ವಲಯದ ಬ್ಯಾಟರಾಯನಪುರದಲ್ಲಿರುವ ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಪೀಠೋಪಕರಣಗಳು ಸುಟ್ಟು ಭಸ್ಮವಾಗಿತ್ತು. ಆದರೆ, ಅದೃಷ್ಟವಶಾತ್, ಕಡತಗಳಿಗೆ ಯಾವುದೇ ಹಾನಿಯಾಗಿರಲಿಲ್ಲ.

ಇದನ್ನೂ ಓದಿ: ಕಾರವಾರ ನೌಕಾನೆಲೆಯಲ್ಲಿ ಟಗ್​ಗೆ ಬೆಂಕಿ: ಘಟನೆಯ ವಿಡಿಯೋ

Last Updated :Aug 11, 2023, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.