ETV Bharat / state

'ಕಾರ್ಮಿಕರು ಯಂತ್ರವಲ್ಲ, 12 ಗಂಟೆವರೆಗೂ ದುಡಿಸಿಕೊಳ್ಳುವುದು ಸರಿಯಲ್ಲ': ಆಯನೂರು ಮಂಜುನಾಥ್‌

author img

By

Published : Feb 24, 2023, 7:27 PM IST

ಕಾರ್ಖಾನೆಗಳ (ತಿದ್ದುಪಡಿ) ವಿಧೇಯಕ 2023ಕ್ಕೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ವಿರೋಧ ವ್ಯಕ್ತಪಡಿಸಿದರು.

ಸಚಿವ ಅಶ್ವತ್ಥ್​ ನಾರಾಯಣ್​  ಹಾಗೂ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್
ಸಚಿವ ಅಶ್ವತ್ಥ್​ ನಾರಾಯಣ್​ ಹಾಗೂ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್

ಬಿಜೆಪಿ ಸದಸ್ಯ ಆಯನೂರು ಮಂಜುನಾಥ್

ಬೆಂಗಳೂರು: ಕಾರ್ಖಾನೆಗಳ (ತಿದ್ದುಪಡಿ) ವಿಧೇಯಕ 2023ಕ್ಕೆ ವಿಧಾನ ಪರಿಷತ್ ಇಂದು ಅನುಮೋದನೆ ನೀಡಿದೆ. ಸಚಿವ ಅಶ್ವತ್ಥ್​ ನಾರಾಯಣ್​ ವಿಧೇಯಕ ಮಂಡಿಸಿದರು. ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ವಿರೋಧ ವ್ಯಕ್ತಪಡಿಸಿದರು.

ವಿಧೇಯಕಕ್ಕೆ ಆಡಳಿತ ಪಕ್ಷದ ಸದಸ್ಯನಾಗಿ ನಾನು ವಿರೋಧಿಸುತ್ತೇನೆ. ಅಂತಾರಾಷ್ಟ್ರೀಯ ನಿಯಮದ ಪ್ರಕಾರ 8 ಗಂಟೆ ಕೆಲಸದ ಅವಧಿ ಎಂದು ಹೇಳಿದ್ದಾರೆ. ಕಾರ್ಮಿಕರು ಯಂತ್ರವಲ್ಲ. ಅವರನ್ನು ಹೇಗೆ ಬೇಕೋ ಹಾಗೆ ದುಡಿಸಿಕೊಳ್ಳುವಂತಿಲ್ಲ. ಗುಲಾಮಗಿರಿಯ ರೀತಿ 8 ರಿಂದ 12 ಗಂಟೆಯವರೆಗೂ ದುಡಿಸಿಕೊಳ್ಳುವುದು ಸರಿಯಲ್ಲ. ಕಾರ್ಮಿಕರ ಹಿತಕ್ಕಾಗಿ ಈ ಬಿಲ್ ಅಲ್ಲ. ಕಾರ್ಖಾನೆಯ ಹಿತಕ್ಕಾಗಿ ತರ್ತಿದ್ದೀರಾ. ಇದನ್ನು ನಾಗರಿಕ ಸರ್ಕಾರ ಒಪ್ಪದು. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಸದನದಲ್ಲಿ ಇಲ್ಲ. ಅವರು ಚಾಲಕರಾಗಿದ್ದವರು. 12 ಗಂಟೆ ನಿರಂತರ ವಾಹನ ಚಲಾಯಿಸಿದ್ರೆ ಅಪಘಾತ ಆಗೊದಿಲ್ವೇ? ಎಂದರು.

ಐಟಿ, ಬಿಟಿ ಮಾಲೀಕರಿಗೋಸ್ಕರ ಈ ಕಾನೂನು ತರುವುದು ಸರಿಯಲ್ಲ. ಶಾಸಕರಾದ ನಾವೇ 8 ಗಂಟೆ ಸದನದಲ್ಲಿ ಕುಳಿತುಕೊಳ್ಳಲು ಆಗೋಲ್ಲ. ಕಲಾಪ ಮುಂದೂಡಿ ಎಂದು ಹೇಳಲ್ವಾ? ಈ ಕಾಯ್ದೆ ಜಾರಿಗೆ ತರುವ ಮೊದಲು ಕಾರ್ಮಿಕ ಸಂಘಗಳ ಜೊತೆ ಚರ್ಚೆ ಮಾಡಿದ್ದೀರಾ? ತಜ್ಞರ ಜೊತೆ ಚರ್ಚೆ ಮಾಡಿದ್ದೀರಾ? ಕಾರ್ಖಾನೆಯ ಮಾಲೀಕರು 12 ಗಂಟೆವರೆಗೂ ಮಾಡಲೇಬೇಕು ಎಂದ್ರೆ ಅದನ್ನು ವಿರೋಧಿಸಲು ಆಗುತ್ತಾ? ವಿರೋಧಿಸಿದ್ರೆ ಕೆಲಸದಿಂದ ತೆಗೆಯುವ ಎಚ್ಚರಿಕೆ ನೀಡಲ್ವಾ?. (ರೇಪ್ ಮಾಡ್ತೀನಿ ಎಂದ್ರೆ ಮಾಡಿಸಿಕೊಳ್ಳಲು ಒಪ್ಪಿಗೆ ನೀಡಿದಂತಾಗುತ್ತೆ). ಈ ರೀತಿಯ ಕಾಯ್ದೆ ಸರಿಯಲ್ಲ, ಈ ಬಗ್ಗೆ ಸಾಕಷ್ಟು ಚರ್ಚೆ ಆಗಬೇಕು. ಇದನ್ನು ವಾಪಸ್ ಪಡೆಯಬೇಕು. ಈ ಬಗ್ಗೆ ಸಾಕಷ್ಟು ಚರ್ಚೆ ಆಗಲಿ ಎಂದು ಹೇಳಿದರು.

ಜಿ20 ಅಧ್ಯಕ್ಷತೆ ವಹಿಸುವ ವೇಳೆ ರಿವರ್ಸ್ ಗೇರ್ ಹಾಕೋದು ಬೇಡ. ಇದನ್ನು ದಯಮಾಡಿ ಪಾಸ್ ಮಾಡಬೇಡಿ, ಸದನದಲ್ಲಿ ಕಾರ್ಮಿಕರ ಪರ ಮಾತನಾಡದಿದ್ರೆ, ಇನ್ಯಾವ ಬಡವರ ಬಗ್ಗೆ ಮಾತನಾಡಬೇಕು. ಬಡತನದಿಂದ ಸುನೀಲ್ ಕುಮಾರ್, ಕಂಡವರ ಮನೆಯಲ್ಲಿ ಕೆಲಸ ಮಾಡಿದ ಕೋಟಾ ಶ್ರೀನಿವಾಸ ಪೂಜಾರಿಯವರ ಸಮ್ಮುಖದಲ್ಲಿ ಈ ಬಿಲ್ ತರುವುದು ಬೇಡ. ಇದನ್ನು ನಾನು ಒಪ್ಪೋದಿಲ್ಲ, ಒಂದು ವೇಳೆ ಈ ಬಿಲ್ ಪಾಸ್ ಮಾಡಲು ಮುಂದಾದ್ರೆ ನಾನು ಸದನದಿಂದ ಹೊರ ಹೋಗ್ತೀನಿ. ನನಗೂ ಆತಂಕ ಇದೆ. ನನ್ನ ಸಭಾನಾಯಕರು ನನಗೆ ಎಲ್ಲಿ ನೋಟಿಸ್ ನೀಡ್ತಾರೋ ಎಂದು. ಹೀಗಾಗಿ ನಾನು ಇದನ್ನು ವಿರೋಧಿಸಲ್ಲ. ಆದರೆ ಇದನ್ನು ನಾನು ಒಪ್ಪುವುದಿಲ್ಲ ಎಂದರು.

ಯಾವ ಕಾರ್ಖಾನೆಯ ಮಾಲೀಕರ ಸಂಘವೂ ಮನವಿ ಸಲ್ಲಿಸಿಲ್ಲ. ಯಾವ ಕಾರ್ಮಿಕ ಸಂಘಟನೆಗಳು ಅವಧಿ ಹೆಚ್ಚಿಸಿ ಎಂದು ಮನವಿ ಸಲ್ಲಿಸಿಲ್ಲ. ಹೀಗಾಗಿ ಇದನ್ನು ಒಪ್ಪದೆ ನಾನು ಸಭಾತ್ಯಾಗ ಮಾಡಿ ಹೊರಗೆ ಹೋಗುತ್ತೇನೆ ಎಂದು ಹೊರ ನಡೆದ ಆಯನೂರು ಮಂಜುನಾಥ್ ಜತೆ ಕಾಂಗ್ರೆಸ್‌ನ ಪಿ.ಆರ್.ರಮೇಶ್ ಅವರಿಂದಲೂ ವಿರೋಧ ವ್ಯಕ್ತವಾಯಿತು. ಕಾರ್ಮಿಕ ವಿರೋಧಿ ಕಾಯ್ದೆ, ಇದು ಕಾರ್ಮಿಕರಿಗೆ ಮರಣ ಶಾಸನ ಎಂದು ಸಭಾತ್ಯಾಗ ನಡೆಸಿದ ಕಾಂಗ್ರೆಸ್, ಜೆಡಿಎಸ್‌ ಸದಸ್ಯರು ಬೇಸರ ವ್ಯಕ್ತಪಡಿಸಿದರು. ಆಯನೂರು ಮಂಜುನಾಥ್, ವಿಪಕ್ಷ ನಾಯಕರ ಸಭಾತ್ಯಾಗದ ನಡುವೆ ಕಾರ್ಖಾನೆಗಳ ತಿದ್ದುಪಡಿ ವಿಧೇಯಕ ಅಂಗೀಕಾರವಾಯಿತು.

ಇದನ್ನೂ ಓದಿ: ನಮ್ಮದು ಆರ್ಥಿಕ ಶಿಸ್ತು, ಆರ್ಥಿಕ ಪ್ರಗತಿಯ ಉಳಿತಾಯ ಬಜೆಟ್: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.