ETV Bharat / state

ರೂಲ್ಸ್​ ರಚಿಸಲು ವಿಫಲ: ಕ್ಯಾಬಿನೆಟ್ ಕಡತದಲ್ಲಿಯೇ ಉಳಿದ ಇಡಬ್ಲ್ಯುಎಸ್ ಶೇ.10 ಮೀಸಲಾತಿ ನಿರ್ಣಯ

author img

By

Published : Oct 22, 2022, 7:57 PM IST

ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿ ನೀಡುವ ಆದೇಶವನ್ನು ಜಾರಿಗೊಳಿಸಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಮೀಸಲಾತಿ
ಮೀಸಲಾತಿ

ಬೆಂಗಳೂರು: ರಾಜ್ಯದಲ್ಲಿ ಎಸ್ಸಿ-ಎಸ್ಟಿ ಮೀಸಲು ಹೆಚ್ಚಳವನ್ನು ತಕ್ಷಣ ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದ (ಇಡಬ್ಯುಎಸ್)ವರಿಗೆ ಶೇ.10 ರಷ್ಟು ಮೀಸಲು ನೀಡುವ ಆದೇಶವನ್ನು ವರ್ಷಗಳೇ ಕಳೆದುಹೋದರೂ ಇನ್ನೂ ಅನುಷ್ಠಾನಕ್ಕೆ ತಂದಿಲ್ಲ.

ಪ್ರಧಾನಿ ನರೇಂದ್ರ ಮೋದಿ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 2019ರ ಜನವರಿ ತಿಂಗಳಲ್ಲಿ ಘೋಷಣೆ ಮಾಡಿದ್ದ ಈ ಮಹತ್ವಾಕಾಂಕ್ಷೆಯ ಮೀಸಲು ಸೌಲಭ್ಯವು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಈವರೆಗೆ ಆದೇಶ ಜಾರಿಯಾಗದಿರುವುದು ವಿಪರ್ಯಾಸವಾಗಿದೆ.

ಕೇಂದ್ರ ಸರ್ಕಾರ ಘೋಷಣೆ ಮಾಡಿದ ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಕೋರ್ಸ್​ಗಳ ಪ್ರವೇಶಾತಿಯಲ್ಲಿ ಶೇಕಡ 10ರಷ್ಟು ಮೀಸಲಾತಿ ನೀಡಬೇಕೆನ್ನುವ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರದ ಸಚಿವ ಸಂಪುಟವು ಕಳೆದ ವರ್ಷವೇ ಕ್ಯಾಬಿನೆಟ್​​ನಲ್ಲಿ ತೀರ್ಮಾನ ತೆಗೆದುಕೊಂಡಿದೆ. ಆದರೆ ಒಂದು ವರ್ಷದ ಮೇಲಾದರೂ ಸಚಿವ ಸಂಪುಟ ತೀರ್ಮಾನ ಆದೇಶವಾಗಿ ಜಾರಿಗೆ ಮಾತ್ರ ಬಂದಿಲ್ಲ.

ಕಳೆದ ವರ್ಷ 2021 ರ ಜುಲೈನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಪ್ರತಿ ಶತ 10ರಷ್ಟು ಮೀಸಲಾತಿ ನೀಡುವ ತೀರ್ಮಾನ ತೆಗೆದುಕೊಳ್ಳಲಾಯಿತು. ಅದಕ್ಕೆ ನಿಯಮಗಳನ್ನು ರೂಪಿಸಲು ಸಾಧ್ಯವಾಗದ್ದರಿಂದ ಕ್ಯಾಬಿನೆಟ್ ತೀರ್ಮಾನ ಹಾಗೆಯೇ ಕಡತದಲ್ಲಿಯೇ ಉಳಿದಿದೆ. ಹೆಚ್​​ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ 2019ರ ಮೇ 14ರಂದು ಆದೇಶ ಹೊರಡಿಸಿ ಬ್ರಾಹ್ಮಣ, ಆರ್ಯವೈಶ್ಯ, ನಾಯರ್, ಜೈನ್ ಮತ್ತು ಮೊದಲಿಯಾರ್​​ಗಳನ್ನು ಇಡಬ್ಯುಎಸ್ ಕೆಟಗರಿಗೆ ಸೇರಿಸಿ ಮೇಲ್ಜಾತಿಯ ಬಡವರಿಗೆ ಶೇ.10 ರಷ್ಟು ಮೀಸಲು ಸೌಲಭ್ಯವನ್ನು ಜಾರಿಗೆ ತರುವ ನಿರ್ಧಾರ ಪ್ರಕಟಿಸಿದರು. ಇಡಬ್ಯುಎಸ್ ಕೋಟಾಕ್ಕೆ ಒಬಿಸಿಯಲ್ಲಿನ 139 ಜಾತಿಗಳನ್ನು ಸಹ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸೇರಿಸಿತ್ತು.

ಈ ಬಗ್ಗೆ ಬಹಳ ಆಕ್ಷೇಪಣೆ ವ್ಯಕ್ತವಾಗಿದ್ದರಿಂದ 2021ರ ಜುಲೈ 23 ರಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಕುಮಾರಸ್ವಾಮಿ ಸರ್ಕಾರದಲ್ಲಿ ತೆಗೆದುಕೊಂಡಿದ್ದ ನಿರ್ಣಯವನ್ನು ಬದಲಾಯಿಸಿದರು. ಒಬಿಸಿಯ 139 ಜಾತಿಗಳನ್ನು ಮೇಲ್ಜಾತಿಯ ಬಡವರು ಮೀಸಲು ಕೋಟಾದಿಂದ ಹೊರಗಿಟ್ಟರು. ಕೇಂದ್ರ ಸರ್ಕಾರವು ಮೇಲ್ಜಾತಿಯಲ್ಲಿನ ಬಡವರಿಗೆ ಅಂದರೆ ವಾರ್ಷಿಕ ವರಮಾನ 8 ಲಕ್ಷಕ್ಕಿಂತ ಕಡಿಮೆಯಿದ್ದರೆ ಅವರು ಕೇಂದ್ರ ಸರ್ಕಾರದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡ 10 ರಷ್ಟು ಮೀಸಲಿಗೆ ಅರ್ಹರು ಎಂದು ನಿಯಮಾವಳಿಗಳನ್ನು ರೂಪಿಸಿದೆ.

ಆದರೆ ಈ ಬಗ್ಗೆ ರಾಜ್ಯದಲ್ಲಿ ಮೇಲ್ಬರ್ಗದ ಬಡವರಿಗೆ ಮತ್ತು ಯಾವ ಮೇಲ್ಜಾತಿಯವರು ಹಾಗೂ ಎಷ್ಟು ವರಮಾನ ಇರುವವರು ಇಡಬ್ಯುಎಸ್ ಮೀಸಲಾತಿಗೆ ಅರ್ಹರು ಎನ್ನುವ ನಿಯಮಾವಳಿಗಳನ್ನು ರೂಪಿಸಲು ವಿಳಂಬ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಮೇಲ್ವರ್ಗದ ಬಡವರ ಶೇ.10ರಷ್ಟು ಮೀಸಲಾತಿ ಕಾರ್ಯಗತಗೊಳ್ಳದೆ ಕಡತದಲ್ಲಿಯೇ ಉಳಿದಿದೆ.

(ಓದಿ: ಎಸ್ಸಿ - ಎಸ್ಟಿ ಮೀಸಲು ಹೆಚ್ಚಳದಿಂದ ಜನರಲ್ ಕೆಟಗರಿ ಕೋಟಾಕ್ಕೆ ಕತ್ತರಿ! )

ETV Bharat Logo

Copyright © 2024 Ushodaya Enterprises Pvt. Ltd., All Rights Reserved.