ETV Bharat / state

ಗಡಿ ವಿವಾದದ ಬಗ್ಗೆ ಸಂಜೆ ಅಮಿತ್ ಶಾ ಸಭೆ: ರಾಜ್ಯದ ನಿಲುವು ಸ್ಪಷ್ಟಪಡಿಸಲಿದ್ದಾರಾ ಬೊಮ್ಮಾಯಿ ?

author img

By

Published : Dec 14, 2022, 3:49 PM IST

ಉಭಯ ರಾಜ್ಯಗಳ ಸಂಸದರ ನಿಯೋಗದ ಮನವಿ ಆಲಿಸಿದ್ದ ಅಮಿತ್ ಶಾ, ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಸಂಜೆ ಸಭೆ ನಡೆಸಲಿದ್ದಾರೆ. ಅಮಿತ್ ಶಾ ನಿವಾಸದಲ್ಲಿ ಸಂಜೆ 7 ಗಂಟೆಗೆ ಮುಖ್ಯಮಂತ್ರಿಗಳ ಸಭೆ ಕರೆಯಲಾಗಿದೆ.

border dispute between karnataka and maharashtra
ಗಡಿ ವಿವಾದದ ಬಗ್ಗೆ ಸಂಜೆ ಅಮಿತ್ ಶಾ ಸಭೆ

ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬುಧವಾರ ಎರಡು ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಹತ್ವದ ಸಭೆ ನಡೆಯಲಿದೆ. ಉಭಯ ರಾಜ್ಯಗಳ ಸಂಸದರ ನಿಯೋಗದ ಮನವಿ ಆಲಿಸಿದ್ದ ಅಮಿತ್ ಶಾ, ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಸಲಿದ್ದಾರೆ.

ಅಮಿತ್ ಶಾಗೆ ದೂರು: ಸುಪ್ರೀಂಕೋರ್ಟ್ ಮೆಟ್ಟಿಲೇರುವ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದ ಇದೀಗ ಕೋರ್ಟ್​​​ನಲ್ಲಿ ವಿಚಾರಣೆ ವಿಳಂಬವಾಗುತ್ತಿರುವ ಹಿನ್ನೆಲೆ ಕೇಂದ್ರದ ಅಂಗಳಕ್ಕೆ ಕಾಲಿಟ್ಟಿದೆ. ಮಹಾರಾಷ್ಟ್ರ ಸಂಸದರ ನಿಯೋಗ ಕರ್ನಾಟಕದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೂರು ನೀಡಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕದ ಪರ ವಸ್ತುಸ್ಥಿತಿ ವಿವರಗಳೊಂದಿಗೆ ರಾಜ್ಯದ ಸಂಸದರ ನಿಯೋಗ ಅಮಿತ್ ಶಾಗೆ ಸಮಗ್ರ ಮಾಹಿತಿ ಒದಗಿಸಿತ್ತು.

ಉಭಯ ರಾಜ್ಯಗಳ ಸಂಸದರ ನಿಯೋಗದ ಮನವಿ ಆಲಿಸಿದ್ದ ಅಮಿತ್ ಶಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಭೆ ನಡೆಸಲಿದ್ದಾರೆ. ನವದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಸಂಜೆ 7 ಗಂಟೆಗೆ ಮುಖ್ಯಮಂತ್ರಿಗಳ ಸಭೆ ಕರೆಯಲಾಗಿದೆ. ಗಡಿ ವಿವಾದದ ಕುರಿತು ರಾಜ್ಯದ ಪರ ಸವಿಸ್ತಾರವಾದ ಮಾಹಿತಿ ನೀಡಲಿದ್ದಾರೆ. ಕೋರ್ಟ್ ತೀರ್ಪಿನ ದಾಖಲೆ, ಮಹಾಜನ್ ವರದಿಯ ಅಂಶಗಳ ದಾಖಲೆ ಒದಗಿಸಲಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ವಿರುದ್ಧ ದೂರು ಸಾಧ್ಯತೆ: ಕರ್ನಾಟಕದ ಕೆಲ ನಿಲುವುಗಳಿಂದ ಗಡಿ ಜಿಲ್ಲೆಯಲ್ಲಿರುವ ಮರಾಠಿ ಭಾಷೆ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ರಾಜ್ಯಗಳ ಪುನಾರಚನೆ ಬಳಿಕ ಬೆಳಗಾವಿ ಸೇರಿ 865 ಗ್ರಾಮಗಳು ನಮಗೆ ಸೇರಬೇಕು ಎಂದು ಮಹಾರಾಷ್ಟ್ರ ತಕರಾರು ಎತ್ತಿರುವುದಕ್ಕೆ ಆಕ್ಷೇಪ ಸಲ್ಲಿಸಲಿದ್ದಾರೆ. ಗಡಿ ವಿವಾದ ಮುಗಿದ ಅಧ್ಯಾಯ ಎನ್ನುವ ಕರ್ನಾಟಕದ ವಾದವನ್ನು ಮತ್ತೊಮ್ಮೆ ಒತ್ತಿ ಹೇಳಲಿದ್ದಾರೆ. ಇದರ ಜೊತೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಾಂಗ್ರೆಸ್​ನವರಿಗೆ ಮಹದಾಯಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಸಿಎಂ ಬೊಮ್ಮಾಯಿ

ಇತ್ತೀಚಿನ ಕೆಲ ದಿನಗಳಿಂದ ಮಹಾರಾಷ್ಟ್ರ ಸರ್ಕಾರವೇ ಅನಗತ್ಯವಾಗಿ ಗಡಿ ವಿವಾದದ ಕಿಚ್ಚು ಹೊತ್ತಿಸಿದೆ. ಪರಿಣಾಮ ಗಡಿ ಭಾಗದಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ಬಸ್​ಗಳ ಮೇಲೆ ಕಲ್ಲು ತೂರಾಟದಂತಹ ಚಟುವಟಿಕೆ ನಡೆದಿವೆ. ಇದರಿಂದ ಉಭಯ ರಾಜ್ಯಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆಯಾಗಲಿದೆ. ಕಾನೂನು ಮೊರೆ ಹೋದ ನಂತರ ವಿವಾದವನ್ನು ಅಲ್ಲಿಯೇ ಪರಿಹರಿಸಿಕೊಳ್ಳಲು ಎಲ್ಲ ಅವಕಾಶ ಇದ್ದರೂ ಬಹಿರಂಗ ಹೇಳಿಕೆ ಮೂಲಕ ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ ಎನ್ನುವುದನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ದಾಖಲೆಗಳ ಮೂಲಕ ತರಲಿದ್ದಾರೆ ಎನ್ನಲಾಗಿದೆ.

ಕೆಲವು ಗ್ರಾಮಗಳಿಗೆ ಕರ್ನಾಟಕದಿಂದ ನೆರವು: ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ 42 ಗ್ರಾಮಗಳ ಜನರು ಕರ್ನಾಟಕ ಸೇರಲು ಮುಂದಾಗಿದ್ದಾರೆ. ಸಾಕಷ್ಟು ಗ್ರಾಮ ಪಂಚಾಯಿತಿಗಳು ಈ ಸಂಬಂಧ ಠರಾವು ಹೊರಡಿಸಿವೆ. ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸ್ಥಳೀಯ ಸಮಸ್ಯೆಗಳಿಗೆ ಕರ್ನಾಟಕ ನೆರವು ನೀಡುತ್ತಿದೆ.

ಮಹಾರಾಷ್ಟ್ರದಂತೆ ನಾವೂ ಈ ಭಾಗಗಳನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಕೇಳಿದರೆ ಹೇಗಾಗಲಿದೆ ಸಮಸ್ಯೆ ಕೊನೆಗೊಳ್ಳಲಿದೆಯಾ?. ಈಗಾಗಲೇ ಗಡಿ ವಿವಾದ ಮುಕ್ತಾಯಗೊಂಡಿದೆ. ಉಭಯ ರಾಜ್ಯಗಳೂ ಸಹಬಾಳ್ವೆಯಿಂದ ಮುಂದುವರೆಯಬೇಕು ಎನ್ನುವ ರಾಜ್ಯದ ಅಪೇಕ್ಷೆಯನ್ನು ಕೇಂದ್ರ ಗೃಹ ಸಚಿವರ ಮುಂದೆ ಬೊಮ್ಮಾಯಿ ವ್ಯಕ್ತಪಡಿಸಲಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.