ETV Bharat / state

ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟ.. ಇಲಾಖೆಗಳ ಅನುದಾನ, ಬಂಡವಾಳ ವೆಚ್ಚಕ್ಕೆ ಭಾರೀ ಕತ್ತರಿ

author img

By

Published : Apr 18, 2021, 9:22 PM IST

ಆದಾಯ ಖೋತಾವಾದ ಕಾರಣ ಬದ್ಧ ವೆಚ್ಚ ಭರಿಸಲು ಸರ್ಕಾರ ಬರೋಬ್ಬರಿ 57,000 ಕೋಟಿ ರೂ.‌ ಹೆಚ್ಚುವರಿ ಸಾಲ ಮಾಡಬೇಕಾಯಿತು. ಈಗ ಮತ್ತೊಂದು ಬಾರಿ ಲಾಕ್‌ಡೌನ್ ಮಾಡಿದರೆ, ನೌಕರರಿಗೆ ವೇತನ, ಪಿಂಚಣಿ ನೀಡಲೂ ಸಾಧ್ಯವಾಗದಂಥ ಪರಿಸ್ಥಿತಿ ಎದುರಾಗಲಿದೆ..

economic slowdown due to corona lockdown
ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟ

ಬೆಂಗಳೂರು : ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮತ್ತೊಂದು ಲಾಕ್‌ಡೌನ್‌ನ ಭೀತಿ ಎದುರಾಗಿದೆ. ಕಳೆದ ಬಾರಿಯ ಲಾಕ್‌ಡೌನ್‌ನಿಂದ ಸರ್ಕಾರದ ಆಯವ್ಯಯ ಅಂದಾಜುಗಳೇ ಬುಡಮೇಲಾಗಿ, ಇಲಾಖೆಗಳ ಅನುದಾನ ಹಾಗೂ ಬಂಡವಾಳ ವೆಚ್ಚಕ್ಕೆ ಭಾರಿ ಪ್ರಮಾಣದ ಕತ್ತರಿ ಹಾಕಬೇಕಾದ ಸ್ಥಿತಿ ಎದುರಾಗಿ ಬಂತು. ಲಾಕ್‌ಡೌನ್‌ನಿಂದ ಸಂಭವಿಸಿದ ಆರ್ಥಿಕ ವಿಪತ್ತಿನ ವರದಿ ಇಲ್ಲಿದೆ.

ಕಳೆದ ಬಾರಿ ಹೇರಿದ ಸುದೀರ್ಘ ಲಾಕ್‌ಡೌನ್ ಹೊಡೆತಕ್ಕೆ ರಾಜ್ಯದ ಆರ್ಥಿಕತೆ ಇನ್ನೂ ಚೇತರಿಸಿಕೊಂಡಿಲ್ಲ. ಈಗಲೂ ರಾಜ್ಯದ ಆರ್ಥಿಕತೆ ಕುಂಟುತ್ತಾ ಸಾಗುತ್ತಿದೆ. ಅದರ ಎಫೆಕ್ಟ್ ಮುಂದಿನ ಐದಾರು ತಿಂಗಳು ಮುಂದುವರಿಯಲಿದೆ ಎಂದು ರಾಜ್ಯದ ಆರ್ಥಿಕ ಸಮೀಕ್ಷೆಯಲ್ಲೇ ತಿಳಿಸಲಾಗಿದೆ.

ಈ ಮಧ್ಯೆ ಇದೀಗ ರಾಜ್ಯದಲ್ಲಿ ಮತ್ತೊಂದು ಲಾಕ್‌ಡೌನ್‌ನ ಕರಾಳ ದಿನ ಮರು ಕಳಿಸುವ ಪ್ರಸಂಗ ನಿಚ್ಚಳವಾಗಿ ಗೋಚರಿಸುತ್ತಿದೆ. ಮೊದಲ‌ ಲಾಕ್‌ಡೌನ್‌ನಿಂದ ನೆಲಕಚ್ಚಿದ ರಾಜ್ಯದ ಆರ್ಥಿಕತೆಗೆ ಮತ್ತೊಂದು ಲಾಕ್‌ಡೌನ್ ಮರಣ ಶಾಸನವೇ ಸರಿ ಎಂದು ಆರ್ಥಿಕ ತಜ್ಞರು, ಆರ್ಥಿಕ ಇಲಾಖೆ ಅಧಿಕಾರಿಗಳೇ ಒಪ್ಪಿದ್ದಾರೆ.

ಇದರ ಅರಿವು ಸಿಎಂ ಯಡಿಯೂರಪ್ಪರಿಗೆ ಸ್ಪಷ್ಟವಾಗಿದೆ. ಮತ್ತೊಂದು ಲಾಕ್‌ಡೌನ್ ಹೇರಿದರೆ ಆಗುವ ಆರ್ಥಿಕ ಅನಾಹುತ ಏನು ಎಂಬುದನ್ನು ಅವರು ಮನಗಂಡಿದ್ದಾರೆ. ಇದೇ ಹಿನ್ನೆಲೆ ಪೂರ್ಣ ಪ್ರಮಾಣದ ಲಾಕ್‌ಡೌನ್‌ಗೆ ಸಿಎಂ ಹಾಗೂ ಬಹುತೇಕ ಸಚಿವರು ಹಿಂದೇಟು ಹಾಕುತ್ತಿದ್ದಾರೆ.

ಕಳೆದ ಬಾರಿಯ ಲಾಕ್‌ಡೌನ್ನಿಂದ ಬಜೆಟ್ ಅಂದಾಜುಗಳೇ ಬುಡಮೇಲಾಗಿ, ಇಲಾಖೆಗಳಿಗೆ ಭಾರೀ ಪ್ರಮಾಣದಲ್ಲಿ ಅನುದಾನ ಕಡಿತ ಮಾಡುವುದು ಅನಿವಾರ್ಯವಾಯಿತು. ಇದರ ಜೊತೆಗೆ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಂಡವಾಳ ವೆಚ್ಚ ಮಾಡಲು ಹಣವಿಲ್ಲದ ಕರಾಳ ಪರಿಸ್ಥಿತಿ ಎದುರಾಯಿತು.

ಬರೋಬ್ಬರಿ 19,775 ಕೋಟಿ ಅನುದಾನ ಕಡಿತ : ಲಾಕ್‌ಡೌನ್‌ನಿಂದ ತೀವ್ರ ಆದಾಯ ಖೋತಾ ಹಿನ್ನೆಲೆ ಸರ್ಕಾರದ ಖಜಾನೆಯಲ್ಲಿ ಹಣವೇ ಇಲ್ಲದಂತಾಗಿದೆ. ಹೀಗಾಗಿ, ಅನಿವಾರ್ಯವಾಗಿ ಇಲಾಖೆಗಳಿಗೆ ನೀಡುವ ಅನುದಾನಕ್ಕೆ ದೊಡ್ಡ ಮಟ್ಟಿನ ಕತ್ತರಿ ಹಾಕಲಾಯಿತು.

2020-21ರಲ್ಲಿ ಎಲ್ಲಾ ಇಲಾಖೆಗಳಿಗೆ ಹಂಚಿಕೆಯಾದ ಅನುದಾನದಲ್ಲಿ ಆರ್ಥಿಕ ಸಂಕಷ್ಟದ ಪರಿಣಾಮ ಸುಮಾರು 19,775 ಕೋಟಿ ರೂ. ಅನುದಾನವನ್ನು ಕಡಿತಗೊಳಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಅನುದಾನ ಕಡಿತ ಮಾಡುವ ಮೂಲಕ ವೆಚ್ಚಗಳನ್ನು ನಿರ್ವಹಿಸಲಾಗಿದೆ.

ಯಾವ ಪ್ರಮುಖ ಇಲಾಖೆಗಳ ಅನುದಾನ ಕಡಿತ? :

ಕೃಷಿ ಇಲಾಖೆ- 671.95 ಕೋಟಿ ರೂ.

ತೋಟಗಾರಿಕೆ- 19.95 ಕೋಟಿ ರೂ.

ಪಶುಸಂಗೋಪನೆ- 101.14 ಕೋಟಿ ರೂ.

ಒಳಾಡಳಿತ ಇಲಾಖೆ- 130 ಕೋಟಿ

ಸಾರಿಗೆ ಇಲಾಖೆ- 333 ಕೋಟಿ

ಮೂಲಸೌಕರ್ಯ- 252 ಕೋಟಿ

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್- 1,486 ಕೋಟಿ

ಅರಣ್ಯ ಇಲಾಖೆ- 114.50 ಕೋಟಿ

ಪ.ಜಾತಿ ಕಲ್ಯಾಣ ಇಲಾಖೆ- 878.76 ಕೋಟಿ

ಪ.ಪಂಗಡ ಕಲ್ಯಾಣ- 165.36 ಕೋಟಿ

ಹಿಂದುಳಿದ ವರ್ಗಗಳ ಕಲ್ಯಾಣ- 651.77 ಕೋಟಿ

ಅಲ್ಪಸಂಖ್ಯಾತ ಕಲ್ಯಾಣ- 454 ಕೋಟಿ

ಉನ್ನತ ಶಿಕ್ಷಣ- 287.74 ಕೋಟಿ

ಪ್ರಾಥಮಿಕ, ಪ್ರೌಢ ಶಿಕ್ಷಣ- 952.68 ಕೋಟಿ

ನಗರಾಭಿವೃದ್ಧಿ- 4816 ಕೋಟಿ

ಲೋಕೋಪಯೋಗಿ- 2318 ಕೋಟಿ

ಜಲಸಂಪನ್ಮೂಲ- 3713 ಕೋಟಿ

ಸಣ್ಣ ನೀರಾವರಿ- 637 ಕೋಟಿ

ವೈದ್ಯಕೀಯ ಶಿಕ್ಷಣ- 354 ಕೋಟಿ

ಆರೋಗ್ಯ ಇಲಾಖೆ- 192.70 ಕೋಟಿ

ವಿಜ್ಞಾನ ಮತ್ತು ತಂತ್ರಜ್ಞಾನ- 419 ಕೋಟಿ

ಬಂಡವಾಳ ವೆಚ್ಚಕ್ಕೂ ಕತ್ತರಿ : ಆಸ್ಪತ್ರೆ, ರಸ್ತೆ, ಸೇತುವೆ, ಶಿಕ್ಷಣ, ನೀರಾವರಿ ಮುಂತಾದ ಮೂಲಸೌಕರ್ಯ ಕಾಮಗಾರಿ ಮೇಲಿನ ಬಂಡವಾಳ ವೆಚ್ಚಕ್ಕೂ ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟ 2020-21ರಲ್ಲಿ ಕೊಕ್ಕೆ ಹಾಕಿದೆ.

2020-21 ಸಾಲಿನಲ್ಲಿ ಆರ್ಥಿಕ ಸಂಕಷ್ಟದಿಂದ ಪರಿಷ್ಕರಿಸಲಾದ ಬಂಡವಾಳ ವೆಚ್ಚ 37,146 ಕೋಟಿ ರೂ. ಆಗಿದೆ. ಅಂದರೆ ಬಜೆಟ್ ಅಂದಾಜಿಗೆ ಹೋಲಿಸಿದರೆ ಸುಮಾರು 14% ಬಂಡವಾಳ ವೆಚ್ಚ ಕಡಿತಗೊಳಿಸಲಾಗಿದೆ. ಪ್ರಮುಖವಾಗಿ ನೀರಾವರಿ, ನೆರೆ ನಿಯಂತ್ರಣ ಯೋಜನೆಗಳ ಮೇಲಿನ ಬಂಡವಾಳ ವೆಚ್ಚದಲ್ಲಿ 2,496 ಕೋಟಿ ರೂ. ಕಡಿತ ಮಾಡಲಾಗಿದೆ.

ಇನ್ನು, ನಗರಾಭಿವೃದ್ಧಿ ಯೋಜನೆಗಳ ಮೇಲಿನ ಬಂಡವಾಳ ವೆಚ್ಚವನ್ನು 1,206 ಕೋಟಿ ರೂ.ರಷ್ಟು ಕಡಿತ ಮಾಡಲಾಗಿದೆ. ರಸ್ತೆ ಹಾಗೂ ಸೇತುವೆ ಕಾಮಗಾರಿಗಳ‌ ಮೇಲಿನ ಬಂಡವಾಳ ವೆಚ್ಚದಲ್ಲಿ 620.75 ಕೋಟಿ ರೂ. ಕಡಿತಗೊಳಿಸಲಾಗಿದೆ.

2020-21ನೇ ಸಾಲಿನಲ್ಲಿ ಆರೋಗ್ಯ ಕ್ಷೇತ್ರದ ಮೇಲಿನ ಬಂಡವಾಳ ವೆಚ್ಚವನ್ನು ತೀವ್ರ ಕಡಿತಗೊಳಿಸಲಾಗಿದೆ. 2020-21ನೇ ಸಾಲಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಲಿ, ಸಮುದಾಯ ಆರೋಗ್ಯ ಕೇಂದ್ರವಾಗಲಿ, ತಾಲೂಕು ಮಟ್ಟದ ಆಸ್ಪತ್ರೆಯಾಗಲಿ, ಜಿಲ್ಲಾ ಆಸ್ಪತ್ರೆಗಳಲ್ಲಾಗಲಿ ಹೊಸ ಕಟ್ಟಡಗಳನ್ನು ಸೇರ್ಪಡೆಗೊಳಿಸಿಲ್ಲ. ಜೊತೆಗೆ ಹೊಸ ಕಾಮಗಾರಿಗಳನ್ನು ಕೈಗೊಂಡಿಲ್ಲ. 2019-20ನೇ ಸಾಲಿನಿಂದ ಮುಂದುವರಿದ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗಿದೆ.

ಬದ್ಧ ವೆಚ್ಚ ಭರಿಸಲು ಸಾಲದ ಹೊರೆ : ಮೊದಲ ಲಾಕ್‌ಡೌನ್​ನಿಂದ ರಾಜ್ಯದ ಬೊಕ್ಕಸ ಯಾವ ಮಟ್ಟಿಗೆ ಖಾಲಿಯಾಗಿತ್ತು. ಅಂದರೆ ನೌಕರರ ವೇತನ, ಪಿಂಚಣಿ, ಸಾಲದ‌ ಮೇಲಿನ ಬಡ್ಡಿಗಳನ್ನೊಳಗೊಂಡ ಬದ್ಧ ವೆಚ್ಚವನ್ನು ಪಾವತಿಸಲೂ ಸರ್ಕಾರಕ್ಕೆ ಆದಾಯದ ಕೊರತೆ ಎದುರಾಯಿತು.

2020-21ನೇ ಸಾಲಿನಲ್ಲಿ ಕೋವಿಡ್ ಹೇರಿದ ಲಾಕ್‌ಡೌನ್​ನಿಂದ ರಾಜ್ಯದ ರಾಜಸ್ವ ಸಂಗ್ರಹ ಗಣನೀಯವಾಗಿ ಕಡಿಮೆ ಮಾಡಿದೆ. ಹೀಗಾಗಿ, ಬದ್ಧ ವೆಚ್ಚವನ್ನು ಭರಿಸಲು ರಾಜಸ್ವ ಸಂಗ್ರಹದ ಮೊತ್ತವೇ ಸಾಕಾಗಿಲ್ಲ. 2020-21ರಲ್ಲಿ ರಾಜಸ್ವ ಸಂಗ್ರಹ 1,59,709 ಕೋಟಿ ರೂ. ಆಗಿದ್ದರೆ, ಬದ್ಧ ವೆಚ್ಚ 1,62,359 ಕೋಟಿ ರೂ. ಆಗಿದೆ. ಅಂದರೆ ಬರೋಬ್ಬರಿ 2,650 ಕೋಟಿ ರೂ. ಬದ್ಧ ವೆಚ್ಚ ಹೆಚ್ಚಿದೆ.

ಆದಾಯ ಖೋತಾವಾದ ಕಾರಣ ಬದ್ಧ ವೆಚ್ಚ ಭರಿಸಲು ಸರ್ಕಾರ ಬರೋಬ್ಬರಿ 57,000 ಕೋಟಿ ರೂ.‌ ಹೆಚ್ಚುವರಿ ಸಾಲ ಮಾಡಬೇಕಾಯಿತು. ಈಗ ಮತ್ತೊಂದು ಬಾರಿ ಲಾಕ್‌ಡೌನ್ ಮಾಡಿದರೆ, ನೌಕರರಿಗೆ ವೇತನ, ಪಿಂಚಣಿ ನೀಡಲೂ ಸಾಧ್ಯವಾಗದಂಥ ಪರಿಸ್ಥಿತಿ ಎದುರಾಗಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳೇ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.