ETV Bharat / state

ಬೆಂಗಳೂರು ಡ್ರಗ್ಸ್​​ ಬಲೆಯಲ್ಲಿ ಸಿಕ್ಕಿ ಟೆಕ್ಕಿಗಳು, ವಿದ್ಯಾರ್ಥಿಗಳು ವಿಲವಿಲ.. ಎರಡು ತಿಂಗಳಲ್ಲಿ 27 ಆರೋಪಿಗಳ ಬಂಧನ

author img

By

Published : Dec 3, 2022, 7:17 AM IST

Updated : Dec 3, 2022, 7:44 AM IST

ಹೈಡ್ರೋಗಾಂಜಾ, ಹ್ಯಾಶಿಷ್ ಸೇರಿ ವಿವಿಧ ಮಾದರಿ ಡ್ರಗ್ಸ್ ಡೀಲ್‌. ಕಳೆದ 2 ತಿಂಗಳಲ್ಲಿ ಎನ್​ಸಿಬಿಯಿಂದ 27 ಮಂದಿ ಬಂಧನ.

Drug deal
ಬೆಂಗಳೂರು ಡ್ರಗ್ಸ್​​ ಬಲೆ

ಬೆಂಗಳೂರು: ಎಲ್‌ಎಸ್‌ಡಿ, ಹೈಡ್ರೋಗಾಂಜಾ, ಹ್ಯಾಶಿಷ್, ಕೊಕೇನ್ ಸೇರಿದಂತೆ ವಿವಿಧ ಮಾದರಿಯ ಮಾದಕ ವಸ್ತು ಮಾರಾಟ, ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಭಾಗದ ನಾರ್ಕೊಟಿಕ್‌ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಕಳೆದ 2 ತಿಂಗಳಿನಲ್ಲಿ 27 ಮಂದಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಎನ್‌ಸಿಬಿ, ಹೈಡ್ರೋ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ 9 ಪ್ರಕರಣ ದಾಖಲಿಸಿಕೊಂಡು 15 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಎಲ್‌ಎಸ್‌ಡಿ, ಹೈಡ್ರೋಗಾಂಜಾ, ಹ್ಯಾಶಿಷ್, ಕೊಕೇನ್ ಸೇರಿದಂತೆ ಬೇರೆ ಮಾದರಿಯ ಡ್ರಗ್ಸ್ ಡೀಲ್‌ನಲ್ಲಿ 27 ಮಂದಿಯನ್ನು ಸೆರೆಹಿಡಿಯಲಾಗಿದೆ. ಎನ್‌ಸಿಬಿ ಡ್ರಗ್ಸ್ ಪೂರೈಕೆ ಹಾಗೂ ಮಾರಾಟ ಮಾಡುವವರನ್ನು ಮಾತ್ರವಲ್ಲದೇ, ಇದನ್ನು ಪೂರೈಸಲು ಸಹಾಯ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ರವಾನಿಸಿದೆ.

ಬಂಧಿತರ ಪೈಕಿ ಬಹುತೇಕ ಮಂದಿ ವೆಬ್‌ಸೈಟ್, ಟೆಲಿಗ್ರಾಂ, ವಾಟ್ಸ್​​ಆ್ಯಪ್ ಗ್ರೂಪ್‌ಗಳಲ್ಲೇ ಡೀಲ್ ಕುದುರಿಸುತ್ತಿದ್ದ ಸಂಗತಿ ಬಯಲಾಗಿದೆ. ಬಂಧಿತರ ಪೈಕಿ ಬಹುತೇಕ ಮಂದಿ 20 ರಿಂದ 25 ವರ್ಷದ ಸಾಫ್ಟ್​​ವೇರ್, ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಾಗಿದ್ದು, ಕೋಲ್ಕತ್ತಾ, ಚೆನ್ನೈ, ದೆಹಲಿ ಸೇರಿ ದೇಶದ ಪ್ರಮುಖ ನಗರದ ಮೂಲದವರಾಗಿದ್ದಾರೆ. ಶಿಕ್ಷಣ, ಕೆಲಸಕ್ಕಾಗಿ ತಮ್ಮ ಊರಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ ಎಂದು ಎನ್‌ಸಿಬಿ ಮಾಹಿತಿ ನೀಡಿದೆ.

ಕೊರಿಯರ್ ಮೂಲಕ ಡ್ರಗ್​​ ಪೂರೈಕೆ: ಒಂದು ಪ್ರತ್ಯೇಕ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿ ಮೂಲದ ಓರ್ವ ಪೆಡ್ಲರ್ ಸ್ಥಳೀಯ ಕೊರಿಯರ್ ಸಂಸ್ಥೆಯೊಂದರ ಸಹಕಾರದಿಂದ ದೇಶಾದ್ಯಂತ ಇರುವ ತನ್ನ ಗ್ರಾಹಕರಿಗೆ ಡ್ರಗ್ಸ್ ಪೂರೈಸುತ್ತಿದ್ದ ಎನ್ನಲಾಗ್ತಿದೆ. ವಾಟ್ಸ್​ ಆ್ಯಪ್​​ನಲ್ಲಿ ಡೀಲ್ ಕುದುರಿಸಿ, ಆನ್‌ಲೈನ್‌ ಮೂಲಕ ತನ್ನ ಬ್ಯಾಂಕ್ ಖಾತೆಗೆ ಗ್ರಾಹಕರಿಂದ ಹಣ ಹಾಕಿಸುತ್ತಿದ್ದ ಎಂದು ಎನ್‌ಸಿಬಿ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್​​ಮೆಂಟ್​ ಮೇಲೆ ಎನ್​​ಸಿಬಿ ದಾಳಿ, ಮೂವರು ಯುವತಿಯರು ವಶಕ್ಕೆ

Last Updated : Dec 3, 2022, 7:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.