ETV Bharat / state

ಸಂಘ ಪರಿವಾರದ ಕಟ್ಟಾಳು ಈಶ್ವರಪ್ಪ ರಾಜಕೀಯ ಜೀವನ ಹೇಗಿತ್ತು?.. ಹೀಗಿದೆ ಅವರ ಪಾಲಿಟಿಕ್ಸ್​​​​​​​​​​​ ಪಯಣ!

author img

By

Published : Apr 11, 2023, 5:35 PM IST

Updated : Apr 11, 2023, 5:55 PM IST

ಎಬಿವಿಪಿಯಲ್ಲಿ ತೊಡಗಿಕೊಂಡಿದ್ದ ಕೆ.ಎಸ್​ ಈಶ್ವರಪ್ಪ ರಾಜಕೀಯಕ್ಕೆ ಬಂದಿದ್ದೇ ಒಂದು ಸವಾಲಿನ ಕಥೆಯಾಗಿದೆ. ಇದೀಗ ಚುನಾವಣಾ ರಾಜಕೀಯಕ್ಕೆ ಈಶ್ವರಪ್ಪ ಗುಡ್ ಬೈ ಹೇಳಿದ್ದು, ಅವರ ರಾಜಕೀಯ ಹಾದಿ ಕುರಿತ ಪಕ್ಷಿ ನೋಟ ಇಲ್ಲಿದೆ.

KS Eshwarappa
ಕೆ.ಎಸ್​ ಈಶ್ವರಪ್ಪ

ಬೆಂಗಳೂರು : ಏಳು ಬಾರಿ ವಿಧಾನಸಭಾ ಚುನಾವಣೆ ಎದುರಿಸಿರುವ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಅವದಿಯಲ್ಲಿ ಮೂರು ಸರ್ಕಾರದಲ್ಲಿ ಸಚಿವರಾಗಿ ಒಮ್ಮೆ ಉಪ ಮುಖ್ಯಮಂತ್ರಿಯಾಗಿ ಈಶ್ವರಪ್ಪ ಸೇವೆ ಸಲ್ಲಿಸಿದ್ದಾರೆ. ಒಮ್ಮೆ ಪರಿಷತ್ ಸದಸ್ಯರಾಗಿದ್ದು, ಪರಿಷತ್ ಪ್ರತಿಪಕ್ಷ ನಾಯಕರಾಗಿಯೂ ಕೆಲಸ ಮಾಡಿದ್ದಾರೆ. ಪಕ್ಷದ ಸಂಘಟನೆಯಲ್ಲಿಯೂ ಎರಡು ಬಾರಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

1948ರ ಜೂನ್ 10 ರಂದು ಶಿವಮೊಗ್ಗದಲ್ಲಿ ಜನಿಸಿದ ಈಶ್ವರಪ್ಪ, ಬಿಕಾಂ ಪದವೀಧರರಾಗಿದ್ದಾರೆ. ಜಯಲಕ್ಷ್ಮಿ ಅವರನ್ನು ಮದುವೆಯಾದ ಈಶ್ವರಪ್ಪಗೆ ನಾಲ್ವರು ಪುತ್ರಿಯರು ಓರ್ವ ಪುತ್ರ ಇದ್ದು, ಪುತ್ರ ಕಾಂತೇಶ್ ಜಿಲ್ಲಾ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ಈಶ್ವರಪ್ಪ ವಾಣಿಜ್ಯೋದ್ಯಮಿಯೂ ಆಗಿದ್ದು, ರಾಜಕಾರಣ ಮಾಡಿಕೊಂಡಿದ್ದಾರೆ.

ಸಂಘ ಪರಿವಾದ ಕಟ್ಟಾಳು : ವಿದ್ಯಾರ್ಥಿ ಜೀವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯಲ್ಲಿ ತೊಡಗಿಸಿಕೊಂಡ ಈಶ್ವರಪ್ಪ ನಂತರ ಸಂಘ ಪರಿವಾರದ ಸಖ್ಯಕ್ಕೆ ಬಂದರು. ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಗುರುತಿಸಿಕೊಂಡು ನಂತರ ಪ್ರಚಾರಕರಾಗಿ ತೊಡಗಿಸಿಕೊಂಡರು. ಸಂಘ ಪರಿವಾದ ಹಿನ್ನೆಲೆಯಲ್ಲಿ ಜನ ಸಂಘಕ್ಕೆ ಬಂದು ಅಲ್ಲಿಂದ ಬಿಜೆಪಿ ಪ್ರವೇಶಿಸಿದ ಕೆಎಸ್​ಈ ರಾಜಕೀಯದ ಮುನ್ನಲೆಗೆ ಬಂದರು. ಇಂದಿಗೂ ಈಶ್ವರಪ್ಪ ಆರ್​ಎಸ್​ಎಸ್​​ನ ಕಟ್ಟಾಳು ಆಗಿದ್ದಾರೆ.

ರಾಜಕೀಯ ಪಯಣ : 80ರ ದಶಕದಲ್ಲೇ ರಾಜಕೀಯ ಜೀವನಕ್ಕೆ ಕಾಲಿಟ್ಟ ಈಶ್ವರಪ್ಪ, 1982 ರಲ್ಲಿ ಶಿವಮೊಗ್ಗ ನಗರ ಘಟಕದ ಅಧ್ಯಕ್ಷರಾಗಿ ತಮ್ಮ ಛಾಪು ಮಾಡಿಸಿದರು. ಮರು ವರ್ಷದಲ್ಲೇ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಎಂ.ಆನಂದ್ ಗೆಲುವಿಗೆ ಸಾಕಷ್ಟು ಶ್ರಮಿಸಿ ಹೆಸರು ಮಾಡಿದ್ದರು. ಇದರ ಪ್ರತಿಫಲವಾಗಿ 1989 ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಅಭ್ಯರ್ಥಿಯಾಗಿ ಕಣಕ್ಕಿಳಿದು, ಮೊದಲ ಸ್ಪರ್ಧೆಯಲ್ಲೇ ಗೆಲುವಿನ ನಗೆ ಬೀರಿದರು. 1994 ರಲ್ಲಿ ಮರು ಆಯ್ಕೆಯಾದರು.

1999 ರ ಚುನಾವಣೆಯಲ್ಲಿ ಮೊದಲ ಬಾರಿ ಪರಾಜಿತಗೊಂಡರು. ಆದರೂ ಅವರು ಪಕ್ಷಕ್ಕೆ ನೀಡಿದ್ದ ಸೇವೆ ಪರಿಗಣಿಸಿ 2000 ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎನ್​ಡಿಎ ಸರ್ಕಾರ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನ ನೀಡಿತು. 2004 ರ ಚುನಾವಣೆಯಲ್ಲಿ ಮತ್ತೊಮ್ಮೆ ಶಿವಮೊಗ್ಗದಿಂದ ಗೆದ್ದ ಈಶ್ವರಪ್ಪ 2006 ರಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾದರು. ಬಳಿಕ 2008 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಶಿವಮೊಗ್ಗದಿಂದ ಆಯ್ಕೆಯಾದ ಈಶ್ವರಪ್ಪ, ಯಡಿಯೂರಪ್ಪ ಸರ್ಕಾರದಲ್ಲಿ ಇಂಧನ ಸಚಿವರಾದರು. ನಂತರ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಪಕ್ಷ ನೀಡಿದ ಸೂಚನೆಯಂತೆ ಸಚಿವ ಸ್ಥಾನ ತೊರೆದ ಈಶ್ವರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷರಾದರು.

ಬಳಿಕ 2012ರಲ್ಲಿ ಸದಾನಂದಗೌಡ ರಾಜೀನಾಮೆ ನಂತರ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಪ್ರಮಾಣ ವಚನ ಸ್ವೀಕಾರ ಮಾಡಿದ ವೇಳೆ, ಮೊದಲ ಬಾರಿ ಉಪ ಮುಖ್ಯಮಂತ್ರಿಯಾಗಿ ಈಶ್ವರಪ್ಪ ಸರ್ಕಾರಕ್ಕೆ ಮರಳಿದರು. ಆದರೆ, 2013 ರಲ್ಲಿ ನಡೆದ ಚುನಾವಣೆಯಲ್ಲಿ ಎರಡನೇ ಬಾರಿ ಸೋಲಿನ ರುಚಿ ನೋಡಬೇಕಾಯಿತು. ಇದಕ್ಕೆ ಕಾರಣ ಅಂದು ಬಿ.ಎಸ್​ ಯಡಿಯೂರಪ್ಪ ಕಟ್ಟಿದ್ದ ಕೆಜೆಪಿ ಪಕ್ಷವಾಗಿತ್ತು. ಆದರೆ, ಬಿಎಸ್​ವೈ​ ಬಿಜೆಪಿಗೆ ಮರಳಿದ ನಂತರ ಪರಿಸ್ಥಿತಿ ಬದಲಾಯಿತು. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಈಶ್ವರಪ್ಪಗೆ ಪರಿಷತ್ ಸದಸ್ಯ ಸ್ಥಾನ ನೀಡಲಾಯಿತು. 2014 ರಿಂದ 2018ರವರೆಗೂ ಪರಿಷತ್ ಪ್ರತಿಪಕ್ಷ ನಾಯಕರಾಗಿ ಈಶ್ವರಪ್ಪ ಕೆಲಸ ಮಾಡಿದರು. ನಂತರ ಮತ್ತೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪರಿಷತ್ ಸದಸ್ಯ ಸ್ಥಾನಕ್ಕೆ ಅವಧಿಗೆ ಮೊದಲೇ ರಾಜೀನಾಮೆ ನೀಡಿದರು. ನಿರೀಕ್ಷೆಯಂತೆಯೇ 2018 ರಲ್ಲಿ ಮತ್ತೆ ಶಿವಮೊಗ್ಗದಿಂದ ಐದನೇ ಬಾರಿಗೆ ಆಯ್ಕೆಯಾದರು.

2018ರಲ್ಲಿ ರಚನೆಯಾಗಿದ್ದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ 2019 ರಲ್ಲಿ ಬಿಜೆಪಿ ಸರ್ಕಾರ ರಚನೆಯಾದಾದಾಗ ಬಿಎಸ್​ವೈ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದರು. ಬೊಮ್ಮಾಯಿ ಸಂಪುಟದಲ್ಲಿಯೂ ಅವರು ಮುಂದುವರೆದರು. ಕಮೀಷನ್ ಬೇಡಿಕೆ ಆರೋಪ ಮಾಡಿ ಪತ್ರ ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಈಶ್ವರಪ್ಪ 2022ರ ಏಪ್ರಿಲ್ 14 ರಾಜೀನಾಮೆ ನೀಡಿದರು.

ಇನ್ನು ಈ ಪ್ರಕರಣದ ತನಿಖೆ ನಡೆಸಿದ ಉಡುಪಿ ಪೊಲೀಸರು 2022 ರ ಜುಲೈ 20 ರಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ನಂತರ ಮತ್ತೆ ಸರ್ಕಾರದಲ್ಲಿ ಭಾಗಿಯಾಗಿ ತಮ್ಮ ಮೇಲಿನ ಕಳಂಕ ತೊಡೆದುಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನ ನಡೆಸಿದ್ದರು. ಬೆಳಗಾವಿ ಅಧಿವೇಶನದಲ್ಲಿ ಗೈರಾಗಿ ಹೈಕಮಾಂಡ್ ಗಮನ ಸೆಳೆದಿದ್ದರು. ಆದರೂ ಬೊಮ್ಮಾಯಿ ಸಂಪುಟಕ್ಕೆ ರಿಎಂಟ್ರಿ ಮಾಡುವ ಅವಕಾಶ ಲಭಿಸಲೇ ಇಲ್ಲ. ಇದೀಗ ಮತ್ತೊಮ್ಮೆ ಸರ್ಕಾರದ ಭಾಗವಾಗಬೇಕು ಎಂದುಕೊಂಡಿದ್ದ ಈಶ್ವರಪ್ಪ 2023ರ ಚುನಾವಣೆಗೆ ಸ್ಪರ್ಧೆ ಮಾಡದಿರುವ ನಿರ್ಧಾರ ತೆಗೆದುಕೊಂಡು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಪಕ್ಷದಲ್ಲಿ ಈಶ್ವರಪ್ಪ ಜವಾಬ್ದಾರಿ : 1982 ರಲ್ಲಿ ನಗರ ಅಧ್ಯಕ್ಷ ಸ್ಥಾನದಿಂದ ರಾಜಕೀಯ ಸ್ಥಾನಮಾನದ ಜವಾಬ್ದಾರಿ ನಿರ್ವಹಿಸಿದ ಈಶ್ವರಪ್ಪಗೆ 1993 ರಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಒಲಿದು ಬಂದಿತು. ಬಿ ಎಸ್​ ಯಡಿಯೂರಪ್ಪ ನಂತರ ಈಶ್ವರಪ್ಪ 1993 ರಿಂದ 1998ರವರೆಗೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಂತರ 2010 ರಿಂದ 2013ರವರೆಗೆ ಎರಡನೇ ಬಾರಿಗೆ ಮೂರು ವರ್ಷಗಳ ಕಾಲ ಆಡಳಿತಾರೂಢ ಪಕ್ಷದ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ರಾಜ್ಯ ಕೋರ್ ಕಮಿಟಿ ಸದಸ್ಯರಾಗಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ..! ನಡ್ಡಾಗೆ ಪತ್ರ

Last Updated : Apr 11, 2023, 5:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.