ETV Bharat / state

ನಾವು ಯಾವುದೇ ಮುಖ್ಯಮಂತ್ರಿ ಕಣ್ಣಲ್ಲಿ ನೀರು ಹಾಕಿಸಿಲ್ಲ.. ಅಮಿತ್​ ಶಾ ಕಾಲೆಳೆದ ಡಿಕೆಶಿ

author img

By

Published : Apr 24, 2023, 11:06 PM IST

ಈ ಬಾರಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

dk-shivakumar-reaction-on-amith-shah
ನಾವು ಯಾವುದೇ ಮುಖ್ಯಮಂತ್ರಿ ಕಣ್ಣಲ್ಲಿ ನೀರು ಹಾಕಿಸಿಲ್ಲ.. ಅಮಿತ್​ ಶಾ ಕಾಲೆಳೆದ ಡಿಕೆಶಿ

ಬೆಂಗಳೂರು: ಬಿಜೆಪಿ ಪಕ್ಷದಂತೆ ಕಾಂಗ್ರೆಸ್ ಯಾವುದೇ ಲಿಂಗಾಯತ ನಾಯಕ ಹಾಗೂ ಮುಖ್ಯಮಂತ್ರಿ ಕಣ್ಣಲ್ಲಿ ನೀರು ಹಾಕಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕಾಂಗ್ರೆಸ್ ಪಕ್ಷ ಲಿಂಗಾಯತ ಮುಖ್ಯಮಂತ್ರಿಗಳಿಗೆ ತಮ್ಮ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಿಲ್ಲ ಎಂಬ ಅಮಿತ್ ಶಾ ಅವರ ಹೇಳಿಕೆ ಅಸಮಂಜಸ. ಅಮಿತ್ ಶಾ ಅವರಿಗೆ ರಾಜ್ಯ ರಾಜಕೀಯ ಇತಿಹಾಸದ ಬಗ್ಗೆ ಗೊತ್ತಿಲ್ಲ ಎಂದರು.

ನಾನು ವೀರೇಂದ್ರ ಪಾಟೀಲ್ ಅವರ ಸರ್ಕಾರದ ಭಾಗವಾಗಿದ್ದೆ. ನಾವು ಬಿಜೆಪಿಯವರಂತೆ ಯಾವುದೇ ಮುಖ್ಯಮಂತ್ರಿಯಿಂದ ಕಣ್ಣೀರು ಹಾಕಿಸಿಲ್ಲ. ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗೆ ಇಳಿಯುವಾಗ ಯಾವ ಮಾತು ಆಡಿದ್ದಾರೆ. ಅದಕ್ಕೆ ಕಾರಣವೇನು? ಅವರಿಗೆ ಯಾವ ರೀತಿ ಬೆದರಿಕೆ ಹಾಕಲಾಗಿತ್ತು ಎಂಬ ವಿಷಯ ನನಗೆ ಗೊತ್ತಿದೆ. ಈಗ ಆ ವಿಚಾರವಾಗಿ ಮಾತನಾಡುವುದಿಲ್ಲ. ಬಿಜೆಪಿಗೆ ಯಡಿಯೂರಪ್ಪ ಅವರ ಕಣ್ಣೀರಿನ ಶಾಸ್ತಿ ಆಗಲಿದೆ. ಜಗದೀಶ್ ಶೆಟ್ಟರ್ ಹಾಗೂ ಸವದಿ ಅವರು ಕಣ್ಣೀರು ಹಾಕದಿರಬಹುದು. ಅವರ ಮನಸ್ಸು ಅತ್ತಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಲಿಂಗಾಯತ ಮುಖ್ಯಮಂತ್ರಿ ವಿಚಾರವಾಗಿ ಜೋಶಿ ಅವರು ನಾವು ಆ ಘೋಷಣೆ ಮಾಡಿಲ್ಲ ಎಂದಿದ್ದಾರೆ ಎಂಬುದರ ಬಗ್ಗೆ ಕೇಳಿದಾಗ, ಅದು ಬಿಜೆಪಿ ಪಕ್ಷದ ದ್ವಂದ್ವ ನೀತಿ. ನಮ್ಮದು ಒಂದೇ ನೀತಿ ಅದು ಸಾಮೂಹಿಕ ನಾಯಕತ್ವದ ನೀತಿ. ಇದೇ ನಮ್ಮ ಬದ್ಧತೆ. ಚುನಾವಣಾ ಆಯೋಗದ ಅಧಿಕಾರಿಗಳು ಶಿವಕುಮಾರ್ ಅವರ ಹಿಂದೆ ಬಿದ್ದಿದ್ದಾರಾ ಎಂಬ ಪ್ರಶ್ನೆಗೆ, ರಾಜಕೀಯದಲ್ಲಿ ಇದೆಲ್ಲ ಸಹಜ. ಎಲ್ಲರನ್ನು ನಿಭಾಯಿಸಿಕೊಂಡು ಹೋಗಬೇಕು ಎಂದರು.

ಲಿಂಗಾಯತ ಸಮುದಾಯ ಬಿಜೆಪಿ ಜತೆಗಿದ್ದು, ಶೆಟ್ಟರ್ ಅವರಿಂದ ಕಾಂಗ್ರೆಸ್ ಗೆ ಲಾಭವಿಲ್ಲ ಎಂಬ ಅಮಿತ್ ಶಾ ಅವರ ಹೇಳಿಕೆ ಬಗ್ಗೆ ಮಾತನಾಡಿ, ಲಿಂಗಾಯತರು ಕೇವಲ ಬಿಜೆಪಿ ಜತೆಗಿಲ್ಲ, ಕಾಂಗ್ರೆಸ್ ಜತೆಗೂ ಇದ್ದಾರೆ. ಇದುವರೆಗೂ ಹೆಚ್ಚಿನ ಜನ ಬಿಜೆಪಿ ಜತೆ ಗುರುತಿಸಿಕೊಂಡಿದ್ದರು. ಈಗ ಕಾಲ ಬದಲಾಗಿದೆ. ಲಿಂಗಾಯತ ಸಮುದಾಯದವರು ಈಗ ಕಾಂಗ್ರೆಸ್ ಪಕ್ಷ ಬಸವಣ್ಣನವರ ತತ್ವ ಸಿದ್ಧಾಂತ ಪಾಲಿಸಲಿದೆ. ಕಾಂಗ್ರೆಸ್ ಜಾತ್ಯಾತೀತವಾಗಿ ಕೆಲಸ ಮಾಡಲಿದೆ, ತಮ್ಮ ಸಮುದಾಯವನ್ನು ಕಾಂಗ್ರೆಸ್ ಪ್ರತಿನಿಧಿಸಲಿದೆ ಎಂದು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಬಿಜೆಪಿ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯನ್ನು ಹೊಂದಲು ಸಿದ್ಧವಿದೆ ಕಾಂಗ್ರೆಸ್ ಲಿಂಗಾಯತ ಸಿಎಂ ಮಾಡುವುದೇ ಎಂಬ ಬಗ್ಗೆ ಪ್ರತಿಕ್ರಿಯಿಸಿ, ನಾವು ಕಾಂಗ್ರೆಸ್ ಪಕ್ಷ ನಡೆಸುತ್ತಿದ್ದು, ಬಿಜೆಪಿ ಪಕ್ಷ ನಡೆಸುತ್ತಿಲ್ಲ. ಬೇರೆ ಪಕ್ಷದವರು ಕಾಂಗ್ರೆಸ್ ಏನು ಮಾಡಬೇಕು ಎಂದು ಹೇಳುವ ಅಗತ್ಯವಿಲ್ಲ. ರಾಜ್ಯದ ಜನರ ಹಿತಾಸಕ್ತಿ, ಪಕ್ಷದ ಅಭಿಪ್ರಾಯದಂತೆ ಹೈಕಮಾಂಡ್ ನಾಯಕರು ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಕಮಲ ತೊರೆದು ಕೈಹಿಡಿದ ದೊಡ್ಡಬಳ್ಳಾಪುರ 8 ಮಂದಿ ನಗರಸಭೆ ಸದಸ್ಯರು: ದೊಡ್ಡಬಳ್ಳಾಪುರ ವ್ಯಾಪ್ತಿಯ ಹಲವು ಬಿಜೆಪಿ ನಾಯಕರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ಮುಖಂಡರು ಹಾಗೂ ದೊಡ್ಡಬಳ್ಳಾಪುರದ ನಗರಸಭೆ ಸದಸ್ಯರಾದ ಶಿವಶಂಕರ್, ನಾಗರಾಜ್, ಶಂಕರ್, ಶಿವರಾಜು ಸೇರಿದಂತೆ ಪ್ರಮುಖರು ಬಿಜೆಪಿ ತೊರೆದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಹೆಚ್ ಎಂ ರೇವಣ್ಣ ಅವರ ಸಮ್ಮುಖದಲ್ಲಿ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಡಿಕೆ ಶಿವಕುಮಾರ್ ಇದೇ ಸಂದರ್ಭ ಮಾತನಾಡಿ, ದೊಡ್ಡಬಳ್ಳಾಪುರದ 8 ಮಂದಿ ಹಾಲಿ ನಗರಸಭೆ ಸದಸ್ಯರು ಪಕ್ಷ ಸೇರ್ಪಡೆ ‌ಆಗ್ತಿದ್ದಾರೆ. ನಾನು ಸ್ಥಳದಲ್ಲೇ ಮಾಡ್ಕೋಳಿ ಅಂತ ಹೇಳಿದ್ದೆ. ಆದರೆ ಪಕ್ಷದ ಕಚೇರಿಯೇ ಸೂಕ್ತ ಎಂದು ಅವರು ಪರಿಗಣಿಸಿದ್ದಾರೆ. ದೊಡ್ಡ ಅವಕಾಶ, ಇದು ಭಾಗ್ಯ ಇದು ಭಾಗ್ಯ ಎಂದು ಪುರಂದರದಾಸರ ಕೀರ್ತನೆ ಹೇಳಿದರು. ಬೈಂದೂರಿನಲ್ಲಿ ಒಂದೂವರೆ ಸಾವಿರ ಜನ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಶೆಟ್ಟರ್, ಸವದಿಯಂತವರು ಪಕ್ಷ ಸೇರ್ಪಡೆ ಆಗಿದ್ದಾರೆ. ಸ್ವಾತಂತ್ರ್ಯ ತಂದು ಕೊಟ್ಟ ಬಾವುಟವನ್ನ ಹಾಕಿಕೊಳ್ಳೋದೆ ಭಾಗ್ಯ ಎಂದು ಹೇಳಿದರು.

ನಾನು 3-4 ದಿನಗಳಿಂದ ಪ್ರವಾಸ ಮಾಡುತ್ತಿದ್ದೇನೆ. ಹಳ್ಳಿಗಳಲ್ಲಿ ಸಾಕಷ್ಟು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ಚಿಕ್ಕಮಗಳೂರುನಲ್ಲಿ 5ಕ್ಕೆ 5 ಸೀಟು ಗೆಲ್ಲುತ್ತೇವೆ. ಮಂಗಳೂರಿನಲ್ಲಿ ಸಹ ಈ ಬಾರಿ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು. ಪಂಚಮಸಾಲಿ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಬಂದರೆ 2 ಎ ಮೀಸಲಾತಿ ಕೊಡ್ತಿರಾ ಎಂಬ ಪ್ರಶ್ನೆಗೆ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡ್ತೇವೆ. ಯಾರಿಗೂ ತೊಂದರೆ ಕೊಡಲ್ಲ. ಆರ್ಥಿಕ ಹಿಂದುಳಿದ ವರ್ಗಗಳಿಗೆ ತೊಂದರೆ ಆಗಿದೆ ಆ ರೀತಿ ನಾವು ಮಾಡಲ್ಲ. ಒಬ್ಬರಿಗೆ ಕೊಟ್ಟು ಮತ್ತೊಬ್ಬರಿಂದ ಕಿತ್ತುಕೊಳ್ಳುವುದು ಮಾಡುವುದಿಲ್ಲ ಎಂದರು. ಈ ವೇ ಶಾಸಕ ವೆಂಕಟರಮಣಯ್ಯ, ಲಗ್ಗೆರೆ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ವೀರಶೈವ ಮತಗಳು ಕೈಬಿಡುತ್ತವೆ ಎಂಬ ಆತಂಕ ಇಲ್ಲ : ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.