ETV Bharat / state

'ನಾಲ್ಕೇ ನಾಲ್ಕು ಆಂಧ್ರ ಗುತ್ತಿಗೆದಾರರು ಈ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ': ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ

author img

By

Published : Mar 28, 2022, 7:42 PM IST

ನೀರಾವರಿ ಯೋಜನೆಗಳ ವೆಚ್ಚ ಪರಿಷ್ಕರಣೆ ದುಪ್ಪಟ್ಟು ಆಗುತ್ತಿದೆ. ಬಹುತೇಕ ಆಂಧ್ರ ಮೂಲದ ಗುತ್ತಿಗೆದಾರರಿಗೆ ಗುತ್ತಿಗೆ ಸಿಗುತ್ತಿದೆ. ಗುತ್ತಿಗೆದಾರರಿಗೆ ಯಾರಿಗೆ ಎಷ್ಟು ಬಿಲ್ ಆಗಿದೆ ಎಂದು ಅಂಕಿಅಂಶ ನೀಡಿ ಎಂದು ಸಚಿವ ಕಾರಜೋಳಗೆ ಅರವಿಂದ ಬೆಲ್ಲದ್ ಒತ್ತಾಯಿಸಿದರು.

ವಿಧಾನಸಭೆ
ವಿಧಾನಸಭೆ

ಬೆಂಗಳೂರು: ಕಾಮಗಾರಿಗಳ ಯೋಜನಾ ವೆಚ್ಚ ಗಣನೀಯವಾಗಿ ಏರಿಕೆಯಾಗುತ್ತಿರುವ ಬಗ್ಗೆ ಸದನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ವಿಧಾನಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್, ನೀರಾವರಿ ಯೋಜನೆಗಳ ವೆಚ್ಚ ಪರಿಷ್ಕರಣೆ ದುಪ್ಪಟ್ಟಾಗುತ್ತಿದೆ. ಬಹುತೇಕ ಆಂಧ್ರ ಮೂಲದ ಗುತ್ತಿಗೆದಾರರಿಗೆ ಗುತ್ತಿಗೆ ಸಿಗುತ್ತಿದೆ. ಗುತ್ತಿಗೆದಾರರಿಗೆ ಯಾರಿಗೆ ಎಷ್ಟು ಬಿಲ್ ಆಗಿದೆ ಎಂದು ಅಂಕಿಅಂಶ ನೀಡಿ ಎಂದು ಸಚಿವ ಕಾರಜೋಳಗೆ ಒತ್ತಾಯಿಸಿದರು.


ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್, ನಾಲ್ಕೇ ನಾಲ್ಕು ಜನ ಗುತ್ತಿಗೆದಾರರು ಈ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ.‌ ಯೋಜನಾ ವೆಚ್ಚ ಏಕಾಏಕಿ ದುಪ್ಪಟ್ಟು ಆಗುತ್ತದೆ. 2,000 ಕೋಟಿ ರೂ.‌ಯೋಜನಾ ವೆಚ್ಚ 10,000 ಕೋಟಿ ರೂ. ವೆಚ್ಚ ಏರಿಕೆ ಆಗುತ್ತದೆ ಎಂದು ಆರೋಪಿಸಿದರು.

ಇದೇ ವೇಳೆ ಸದನದಲ್ಲಿ ಗುತ್ತಿಗೆದಾರರ ಹೆಸರು ಉಲ್ಲೇಖಿಸಿದರು. ನಂ.1 ಗುತ್ತಿಗೆದಾರ ಡಿವೈವ್ ಊಪರ್, ನಂ.2 ಗುತ್ತಿಗೆದಾರ ಶೆಟ್ಟಿ, ಗುತ್ತಿಗೆದಾರ ಮಹಾಲಿಂಗ ಶಂಕರ್, ಗುತ್ತಿಗೆದಾರ ಮಾನಪ್ಪ ವಜ್ಜಲ್, ಗುತ್ತಿಗೆದಾರ ಮೆಗಾ ಇಂಜಿನಿಯರ್ಸ್. ಅವರಿಗೆ ಹೇಗೆ ಗುತ್ತಿಗೆ ಸಿಗುತ್ತದೆ ಎಂದು ನಾನು ಕೇಳಲು ಹೋಗುವುದಿಲ್ಲ. ಆದರೆ, ಯೋಜನೆ ಪ್ರಾರಂಭವಾದಾಗ ವೆಚ್ಚ 2,000 ಕೋಟಿ ರೂ. ಇದ್ದರೆ, ಯೋಜನೆ ಪೂರ್ಣವಾದಾಗ ಯೋಜನಾ ವೆಚ್ಚ 4,500 ಕೋಟಿ ರೂ. ಏರಿಕೆ ಆಗುತ್ತದೆ ಎಂದು ಆರೋಪಿಸಿದರು.

ಬೇಕಾಬಿಟ್ಟಿ ಯೋಜನಾ ವೆಚ್ಚ ಏರಿಕೆಗೆ ಅನುಮತಿ ಕೊಡುವವರು ಯಾರು ಎಂದು ಜೆಡಿಎಸ್ ಸದಸ್ಯ ಸಾ.ರಾ.ಮಹೇಶ್ ಪ್ರಶ್ನಿಸಿದರು. ಇದಕ್ಕೆ ಜೆಡಿಎಸ್ ಶಾಸಕ ಸುರೇಶ್ ಗೌಡ ಸಾತ್ ನೀಡಿದರು. ಈ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಬೆಲ್ಲದ್ ಮನವಿ ಮಾಡಿದರು.

ಬಳಿಕ ಮಾತನಾಡಿದ ಸಚಿವ ಕಾರಜೋಳ, 4,000 ಸಣ್ಣ ಗುತ್ತಿಗೆದಾರರ ಬಿಲ್ ಪಾವತಿ ಮಾಡಿದ್ದೇವೆ. ದೊಡ್ಡ ಗುತ್ತಿಗೆದಾರರನ್ನು ಸೈಡಿಗಿಟ್ಟು ಸಣ್ಣ ಗುತ್ತಿಗೆದಾರರ ಬಿಲ್‌ಗೆ ಆದ್ಯತೆ ಕೊಡಲಾಗುತ್ತಿದೆ. ಒಂದು ಕೋಟಿ ರೂ.‌ಗಿಂತ ಕಡಿಮೆ ಬಿಲ್ ಇರುವ ಬಾಕಿ ಬಿಲ್ ಅನ್ನು ಪಾವತಿ ಮಾಡಲು ಸೂಚನೆ ನೀಡಲಾಗಿದೆ. ಬಿಲ್ ಪಾವತಿ ಸಂಬಂಧ ಯಾವುದೇ ತಾರತಮ್ಯ ಆಗದಂತೆ ಎಚ್ಚರವಹಿಸುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.