ETV Bharat / state

ನಾಳೆಯಿಂದ ಕೊರೊನಾ ಟೆಸ್ಟಿಂಗ್ ಹೆಚ್ಚಳ; ನಿತ್ಯ 5,000 ಟೆಸ್ಟಿಂಗ್ ಗುರಿ : ದಿನೇಶ್ ಗುಂಡೂರಾವ್

author img

By ETV Bharat Karnataka Team

Published : Dec 19, 2023, 9:29 PM IST

ನಾಳೆಯಿಂದ ಕೊರೊನಾ ಟೆಸ್ಟಿಂಗ್ ಹೆಚ್ಚಳ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ನಾಳೆಯಿಂದ ಕೊರೊನಾ ಟೆಸ್ಟಿಂಗ್ ಹೆಚ್ಚು ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು. ಕೇರಳದಲ್ಲಿ ಕೊರೊನಾ ರೂಪಾಂತರಿ ತಳಿ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ಕುರಿತು ವಿಕಾಸಸೌಧ ಕಚೇರಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದರು.

ನಾಳೆ ಕೇಂದ್ರ ಆರೋಗ್ಯ ಸಚಿವರು ರಾಜ್ಯಗಳ‌ ಜೊತೆ ಕೊರೊನಾ ಸ್ಥಿತಿಗತಿ ಸಂಬಂಧ ಸಭೆ ಕರೆದಿದ್ದಾರೆ. ಸಭೆಯಲ್ಲಿ ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಲಿದೆ. ನಮ್ಮಲ್ಲಿನ ವ್ಯವಸ್ಥೆ ಸಜ್ಜುಗೊಳಿಸುತ್ತಿದ್ದೇವೆ.‌ ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.

ವೆಂಟಿಲೇಟರ್ಸ್, ಐಸಿಯು ಬೆಡ್ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ಆರ್​ಟಿಪಿಸಿಆರ್ ಟೆಸ್ಟ್ ಹೆಚ್ಚು ಮಾಡಬೇಕು. ವೈರಲ್ ಟ್ರಾನ್ಸ್​ಪೋರ್ಟ್ ಮಿಡಿಯಾ (ವಿಟಿಎಂ) ಟೆಸ್ಟಿಂಗ್ ಕಿಟ್ ಕೊರತೆ ಇದೆ. ಅದನ್ನು ಖರೀದಿಗೆ ಸೂಚನೆ ನೀಡಲಾಗಿದೆ. ನಾಳೆಯಿಂದ ಟೆಸ್ಟಿಂಗ್ ಹೆಚ್ಚು ಮಾಡುತ್ತೇವೆ. ನಿತ್ಯ 5,000 ಟೆಸ್ಟಿಂಗ್ ಮಾಡಲು ಗುರಿ ನಿಗದಿ ಮಾಡಲಾಗಿದೆ‌ ಎಂದು ಇದೇ ವೇಳೆ ತಿಳಿಸಿದರು.

ಸಾರಿ, ಐಎಲ್‌ಐ ರೋಗ ಲಕ್ಷಣ ಇರುವವರು ಕಡ್ಡಾಯವಾಗಿ ಟೆಸ್ಟ್ ಮಾಡಬೇಕು. ನಾಳೆ ಕೇಂದ್ರ ಆರೋಗ್ಯ ಸಚಿವರ ಜೊತೆ ಬೆಳಗ್ಗೆ 10 ಗಂಟೆಗೆ ವರ್ಚುಯಲ್ ಸಭೆ ನಡೆಸಲಾಗುವುದು‌. ಕೇಂದ್ರದ ಮಾಹಿತಿ ಆಧರಿಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡುತ್ತೇವೆ. ಸಿಎಂ‌ ಜೊತೆಯೂ ಮುಂದೆ ಕೊರೊನಾ ಸಂಬಂಧ ಸಭೆ ನಡೆಸಲಾಗುವುದು. ವಿದೇಶದಿಂದ‌ ಆಗಮಿಸುವವರಿಗೆ ರೋಗಲಕ್ಷಣ ಇದ್ದರೆ ಮಾತ್ರ ಟೆಸ್ಟಿಂಗ್ ಮಾಡಲಾಗುವುದು.‌ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಹೆಚ್ಚಳ ಮಾಡಲಾಗುತ್ತದೆ. ಇನ್ನು ಕೋವಿಡ್ ಜಿನೋಮ್ ಸಿಕ್ವೆನ್ಸಿಂಗ್ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಜೆಎನ್ 1 ಪತ್ತೆ ಆಗಿಲ್ಲ : ಸಭೆಯಲ್ಲಿ ಆರೋಗ್ಯ ಅಧಿಕಾರಿಗಳು ರಾಜ್ಯದಲ್ಲಿ ಇಲ್ಲಿಯವರೆಗೆ ಜೆ.ಎನ್ 1 ಪತ್ತೆ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಸಭೆಯಲ್ಲಿ ಸಿಎಂ ಜೊತೆ ದೂರವಾಣಿ ಮೂಲಕ ಮಾತನಾಡಿದ ಸಚಿವ ಗುಂಡೂರಾವ್, ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿಗಳ ಕುರಿತು ಸಿಎಂಗೆ ಮಾಹಿತಿ ನೀಡಿದರು. ಗುರುವಾರ ಸಿಎಂ ನೇತೃತ್ವದಲ್ಲಿ TAC ಸಮಿತಿ ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಕೋವಿಡ್ ಕುರಿತು ಸಭೆ ನಡೆಸಲಿದ್ದಾರೆ.

ಮಂಗಳವಾರ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್, ಆರೋಗ್ಯ ಇಲಾಖೆ ಆಯುಕ್ತರಾದ ರಂದೀಪ್, ಆರೋಗ್ಯ ಇಲಾಖೆ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಸಲಹೆ ಸೂಚನೆ:

- ಹೃದಯ ಸಂಬಂಧಿ, ಉಸಿರಾಟದ ಸಮಸ್ಯೆ, ಇನ್ಫೆಕ್ಷನ್​ಗಳಿಗೆ ಒಳಗಾದವರನ್ನ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಕೋವಿಡ್ ಟೆಸ್ಟಿಂಗ್​ಗೆ ಒಳಪಡಿಸಲು ಸೂಚನೆ.

- ಆಕ್ಸಿಜನ್, ವೆಂಟಲೇಟರ್, ಐಸಿಯು ಬೆಡ್​ಗಳನ್ನು ಸನ್ನದ್ದ ಸ್ಥಿತಿಯಲ್ಲಿರಿಸಿಕೊಂಡು ಮುಂಜಾಗೃತವಾಗಿ ಸಜ್ಜಾಗಿರಬೇಕು.

- ಹೊರ ರಾಜ್ಯಗಳಿಂದ ಬಂದವರಲ್ಲಿ ಕೋವಿಡ್ ಲಕ್ಷಣಗಳಿದ್ದವರನ್ನ ಕಡ್ಡಾಯವಾಗಿ ಟೆಸ್ಟಿಂಗ್​ಗೆ ಒಳಪಡಿಸಬೇಕು.‌

- ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ. ಸದ್ಯಕ್ಕೆ ಗಡಿ ಬಂದ್ ಮಾಡುವ ಪರಿಸ್ಥಿತಿ ಇಲ್ಲ.

- ರಾಜ್ಯಾದ್ಯಂತ ಅಗತ್ಯ ಆರ್.ಟಿ.ಪಿ.ಸಿ.ಆರ್ ಟೆಸ್ಟಿಂಗ್ ಕಿಟ್ ಸರಬರಾಜಿಗೆ ಸೂಚನೆ.

ಇದನ್ನೂ ಓದಿ: 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ, ಕೊರೊನಾ ರೂಪಾಂತರಿ ಬಗ್ಗೆ ಆತಂಕ ಬೇಡ: ದಿನೇಶ್ ಗುಂಡೂರಾವ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.